ಗ್ರಾಹಕರ ಸುಖ-ದುಃಖ

My Blog List

Tuesday, February 4, 2020

ಕಾಸರಗೋಡಿನಲ್ಲೂ ಕೊರೊನಾ ವೈರಸ್ : ಮೂರನೇ ಪ್ರಕರಣ ಪತ್ತೆ

ಕಾಸರಗೋಡಿನಲ್ಲೂ ಕೊರೊನಾ ವೈರಸ್ : 3ನೇ ಪ್ರಕರಣ ಪತ್ತೆ
ವ್ಯಾಧಿಯನ್ನು  ‘ರಾಜ್ಯ ವಿಪತ್ತು’ ಎಂಬುದಾಗಿ ಘೋಷಿಸಿದ ಸರ್ಕಾರ
ಮಂಗಳೂರು/ ತಿರುವನಂತಪುರಂ: ಕೇರಳದಲ್ಲಿ ಕೊರೊನಾ ವೈರಸ್ ಎರಡನೇ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕಾಸರಗೋಡಿನ ಕಾಂಞಗಾಡಿ ನಲ್ಲಿ ಮೂರನೇ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ 2020 ಫೆಬ್ರುವರಿ 03ರ ಸೋಮವಾರ ಖಚಿತಪಡಿಸಿದರು. ಇದರ ಬೆನ್ನಲ್ಲೇ ಕೇರಳ ಸರ್ಕಾರವು ‘ಕೊರೋನಾವೈರಸ್’ನ್ನು ‘ರಾಜ್ಯ ವಿಪತ್ತು’ ಎಂಬುದಾಗಿ ಘೋಷಿಸಿತು.

ಮೂರನೇ ವ್ಯಕ್ತಿ ಕೂಡಾ ಇತ್ತೀಚೆಗೆ ಕೊರೊನಾ ವೈರಸ್ ತವರಾದ ಚೀನಾದಿಂದ ತಾಯ್ನಾಡಿಗೆ ಮರಳಿದ್ದು, ಈಗಾಗಲೇ ಚೀನಾದಿಂದ ಕೇರಳಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿತ್ತು.

ಪ್ರಸ್ತುತ ರೋಗಿಯನ್ನು  ಕಾಸರಗೋಡಿನ ಕಾಂಞಗಾಡ್ ಜಿಲ್ಲಾಸ್ಪತ್ರೆಗೆ ದಾಖಲಿಸಿ,  ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಈತ ಇತ್ತೀಚೆಗಷ್ಟೇ ಚೀನಾದ ವುಹಾನ್ ನಿಂದ ಕಾಸರಗೋಡಿಗೆ ಬಂದಿರುವುದಾಗಿ ವರದಿ ವಿವರಿಸಿತು.

ಕೇರಳದಲ್ಲಿ ಈವರೆಗೆ ಮೂರು ಕೊರೊನಾ ವೈರಸ್ ಸೋಂಕು ಪತ್ತೆ ಹಚ್ಚಲಾಗಿದೆ. ಅಲ್ಲದೇ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು ಎರಡು ಸಾವಿರ ಜನರ ಮೇಲೆ ನಿಗಾ ಇರಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕಳೆದ ಗುರುವಾರವಷ್ಟೇ ಕೇರಳದ ತ್ರಿಶ್ಯೂರ್ ನಲ್ಲಿ ಮೊದಲ ಕೊರೊನಾ ವೈರಸ್ ರೋಗವನ್ನು ಪತ್ತೆ ಹಚ್ಚಲಾಗಿತ್ತು. ಈಕೆ ಚೀನಾದ ವುಹಾನ್ ನಿಂದ ಊರಿಗೆ ಮರಳಿದ್ದು, ಪರೀಕ್ಷೆ ನಡೆಸಿದ ವೇಳೆ ಪಾಸಿಟಿವ್ ಲಕ್ಷಣ ಪತ್ತೆಯಾಗಿತ್ತು ಎಂದು ವರದಿ ವಿವರಿಸಿದೆ.

No comments:

Advertisement