Wednesday, March 4, 2020

ಇಟಲಿ ಪ್ರವಾಸಿ ದಂಪತಿಗೆ ಕೊರೋನಾವೈರಸ್ ಖಚಿತ

ಇಟಲಿ ಪ್ರವಾಸಿ ದಂಪತಿಗೆ ಕೊರೋನಾವೈರಸ್ ಖಚಿತ
ನವದೆಹಲಿ: ರಾಜಸ್ಥಾನದ ಜೈಪುರ ಆಸ್ಪತ್ರೆಗೆ ದಾಖಲಾಗಿರುವ ಇಟಲಿ ಪ್ರವಾಸಿಗೆ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ ಎಂದು ಆರೋಗ್ಯ ಸಚಿವಾಲಯ ಮೂಲಗಳು 2020 ಮಾರ್ಚ್ 03ರ ಮಂಗಳವಾರ ತಿಳಿಸಿದವು.ಇದರೊಂದಿಗೆ ಭಾರತದಲ್ಲಿ ಕೊರೋನಾವೈರಸ್ ದೃಢ ಪಟ್ಟ ಪ್ರಕರಣಗಳ ಸಂಖ್ಯೆ ೬ಕ್ಕೆ ಏರಿತು.

೬೯ರ ಹರೆಯದ ವ್ಯಕ್ತಿಯನ್ನು ಜೈಪುರದ ಸರ್ಕಾರಿ ಸ್ವಾಮ್ಯದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಏಕಾಂಗಿ ವಾರ್ಡಿಗೆ ದಾಖಲಿಸಲಾಯಿತು. 

ಮಧ್ಯೆ, ಜೈಪುರದಿಂದ ಬಂದಿರುವ ಇನ್ನೊಂದು ವರದಿಯ ಪ್ರಕಾರ, ಇಟಲಿ ಪ್ರವಾಸಿಯ ಪತ್ನಿಗೆ ಕೂಡಾ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ ಎನ್ನಲಾಗಿದೆ. ಈಕೆಯನ್ನು ಜೈಪುರ ಆಸ್ಪತ್ರೆಗೆ ದಾಖಲಿಸಲಾಯಿತು.

ಮಹಿಳೆಯ ರಕ್ತದ ಮಾದರಿಯನ್ನು ಪುಣೆಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ರಾಜಸ್ಥಾನ ಆರೋಗ್ಯ ಇಲಾಖೆ ತಿಳಿಸಿತು.

ನೌಕಾ ಕವಾಯತು ರದ್ದು: ಏತನ್ಮದ್ಯೆ, ಕೊರೋನಾವೈರಸ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ವಿಶಾಖಪಟ್ಟಣದಲ್ಲಿ ಮಾರ್ಚ್ ೧೮ರಂದು ನಡೆಯಬೇಕಾಗಿದ್ದ ಭಾರತೀಯ ನೌಕಾಪಡೆಯ ಮಿಲನ್ ಬಹುರಾಷ್ಟೀಯ ನೌಕಾಪಡೆ ಕವಾಯತನ್ನು ರದ್ದು ಪಡಿಸಲಾಯಿತು.

ಮುಂಬರುವ ದಿನಗಳಲ್ಲಿ ಸುಮಾರು ೨೫೦೦ಕ್ಕೂ ಹೆಚ್ಚು ಶಂಕಿತ ಕೊರೋನಾವೈರಸ್ ರೋಗಿಗಳನ್ನು ಏಕಾಂಗಿ ವಾರ್ಡುಗಳಲ್ಲಿ ಚಿಕಿತ್ಸೆ ನೀಡಲು ಬೇಕಾದ ಸವಲತ್ತು ರೂಪಿಸುವಂತೆ ಸರ್ಕಾರವು ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಸೂಚನೆ ನೀಡಿದೆ.

೪೦ ರಾಷ್ಟ್ರಗಳು ಪಾಲ್ಗೊಳ್ಳುವ ಮಿಲನ್ ನೌಕಾ ಕವಾಯತಿಗೆ ಹೊಸ ದಿನಾಂಕವನ್ನು ಮುಂದಕ್ಕೆ ನಿಗದಿ ಪಡಿಸಲಾಗುವುದು ಎಂದು ಸರ್ಕಾರಿ ಮೂಲಗಳು ಹೇಳಿವೆ.

ಮಂಗಳೂರು ಬಂದರಿನಲ್ಲಿ ಕಟ್ಟೆಚ್ಚರ: ದೇಶದಲ್ಲಿ ಕೊರೋನಾವೈರಸ್ ಸೋಂಕು ತಗುಲಿದವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಮುದ್ರ ತಡಿಯ ಬಂದರುಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಕೇರಳದಲ್ಲಿ ಮೂರು ಪ್ರಕರಣಗಳಲ್ಲಿ ವೈರಸ್ ಸೋಂಕು ತಗುಲಿದ್ದು ದೃಢ ಪಟ್ಟಿದ್ದ ಹಿನ್ನೆಲೆಯಲ್ಲಿ ನಿರ್ದಿಷ್ಟವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿ ನಿಗಾ ವಹಿಸಲಾಗಿದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

No comments:

Advertisement