Friday, March 13, 2020

ಶೇಕಡಾ ೪ ತುಟ್ಟಿ ಭತ್ಯೆ ಹೆಚ್ಚಳ, ಯುಗಾದಿಗೆ ಕೇಂದ್ರದ ಕೊಡುಗೆ


ಶೇಕಡಾ ೪ ತುಟ್ಟಿ ಭತ್ಯೆ ಹೆಚ್ಚಳ, ಯುಗಾದಿಗೆ ಕೇಂದ್ರದ ಕೊಡುಗೆ
ಯೆಸ್ ಬ್ಯಾಂಕ್ ಪುನಾರಚನೆ ಯೋಜನೆಗೂ ಅಸ್ತು
ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇಕಡಾ ೪ ರಷ್ಟು ಹೆಚ್ಚಿಸಿ ಶೇಕಡಾ ೨೧ಕ್ಕೇ ತಲುಪಿಸುವ ಮೂಲಕ ಹೊಸ ವರ್ಷದ ಯುಗಾದಿ ಕೊಡುಗೆಯನ್ನು ನೀಡಲು ಕೇಂದ್ರ ಸಚಿವ ಸಂಪುಟವು 2020 ಮಾರ್ಚ್  13ರ ಶುಕ್ರವಾರ ಅನುಮೋದನೆ ನೀಡಿತು. ಇದರಿಂದ ೪೮ ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು ೬೫ ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಪ್ರಕಟಿಸಿದರು.
ಇದೇ ವೇಳೆಗೆ ಸಂಪುಟವು ಯೆಸ್ ಬ್ಯಾಂಕ್ ಪುನಾರಚನೆ ಯೋಜನೆಗೂ ಸಂಪುಟವು ಒಪ್ಪಿಗೆ ನೀಡಿತು.
ಶೇಕಡಾ ೪ರಷ್ಟು ತುಟ್ಟಿಭತ್ಯೆ ಹೆಚ್ಚಳದಿಂದ ಕೇಂದ್ರ ಬೊಕ್ಕಸಕ್ಕೆ ೧೪,೫೯೫ ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಹೊರೆ ಬೀಳಲಿದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಜಾವಡೇಕರ್ ಹೇಳಿದರು.
೨೦೨೦ರ ಜನವರಿ ೧ರಿಂದ ಪೂರ್ವಾನ್ವಯವಾಗಿ ಕೇಂದ್ರ ಸರ್ಕಾರಿ ನೌಕರರ ತುಟಿಭತ್ಯೆಯನ್ನು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಪರಿಹಾರವನ್ನ ಜಾರಿಗೊಳಿಸಲು ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಮೂಲವೇತನ ಅಥವಾ ಪಿಂಚಣಿಯ ಶೇಕಡಾ ೧೭ರಷ್ಟಕ್ಕೆ ಇದು ಸೇರ್ಪಡೆಯಾಗಲಿದೆ.
ಸಂಪುಟವು ಅನುಮೋದನೆ ನೀಡಿದ ಇತರ ವಿಷಯಗಳ ಬಗ್ಗೆ ಮಾತನಾಡಿದ ಜಾವಡೇಕರ್, ’ಕೇಂದ್ರ ಸಂಪುಟವು ೭೮೦ಕಿಮೀ ಉದ್ದದ ’ಹಸಿರು ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ೭,೬೬೦ ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು  ಒಪ್ಪಿಗೆ ನೀಡಿದೆ ಎಂದು ಹೇಳಿದರು.
ಈ ಯೋಜನೆಯು ಹಿಮಾಚಲ ಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ ಮತ್ತು ಆಂಧ್ರಪ್ರದೇಶ ಈ ನಾಲ್ಕು ರಾಜ್ಯಗಳಲ್ಲಿ ೭೮೦ ಕಿಮೀಗೆ ಹೆಚ್ಚಿನ ಉದ್ದದ ವಿವಿಧ ರಾಷ್ಟ್ರೀಯ ಹೆದ್ದಾರಿಗಳ ಪುನರ್ ವಸತಿ ಮತ್ತು ಮೇಲ್ದರ್ಜೆಗೆ ಏರಿಸುವ ಯೋಜನೆಯಾಗಿದೆ.
ಯೆಸ್ ಬ್ಯಾಂಕ್ ಪುನಾರಚನೆ: ಯೆಸ್ ಬ್ಯಾಂಕ್ ಪುನಾರಚನೆಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಸ್ತಾಪಿಸಿರುವ ’ಪುನಾರಚನೆ ಯೋಜನೆಗೂ ಕೇಂದ್ರ ಸಚಿವ ಸಂಫುಟ ಒಪ್ಪಿಗೆ ನೀಡಿತು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಆರ್ ಬಿಐ ಮುಂದಿಟ್ಟಿರುವ ಯೆಸ್ ಬ್ಯಾಂಕ್ ಪುನಾರಚನೆ ಯೋಜನೆಯು ಭಾರತೀಯ ಸ್ಟೇಟ್ ಬ್ಯಾಂಕಿಗೆ (ಎಸ್ ಬಿಐ) ತನ್ನ ಬಂಡವಾಳವನ್ನು ವಿನಿಯೋಗಿಸಿ ಯೆಸ್ ಬ್ಯಾಂಕಿನ ಶೇಕಡಾ ೪೦ರಷ್ಟು ಇಕ್ವಿಟಿ ಖರೀದಿಗೆ ಅವಕಾಶ ನೀಡುತ್ತದೆ. ಇತರ ಹೂಡಿಕೆದಾರರನ್ನೂ ಯೋಜನೆಗೆ ಆಹ್ವಾನಿಸಲಾಗುತ್ತದೆ ಎಂದು ವಿತ್ತ ಸಚಿವರು ಹೇಳಿದರು.
ಠೇವಣಿದಾರರ ರಕ್ಷಣೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಯೆಸ್ ಬ್ಯಾಂಕನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಹಣ ಹಿಂಪಡೆಯುವುದರ ಮೇಲೆ ಏಪ್ರಿಲ್ ೩೦ರವರೆಗೆ ತಲಾ ಖಾತೆಗೆ ೫೦,೦೦೦ ರೂಪಾಯಿಗಳ ಮಿತಿ ವಿಧಿಸಿದ ಹಿನ್ನೆಲೆಯಲ್ಲಿ ಸಚಿವರು ಈ ವಿಷಯವನ್ನು ತಿಳಿಸಿದರು.
ಆರ್ ಬಿಐ ಬೆಂಬಲಿತ ಯೆಸ್ ಬ್ಯಾಂಕ್ ರಕ್ಷಣಾ ಯೋಜನೆಯ ಭಾಗವಾಗಿ ಎಸ್‌ಬಿಐ ತತ್ ಕ್ಷಣವೇ ೨,೪೫೦ ಕೋಟಿ ರೂಪಾಯಿಗಳನ್ನು ವಿನಿಯೋಗಿಸಿ ಶೇಕಡಾ ೪೯ರಷ್ಟು ಷೇರುಗಳನ್ನು ಖರೀದಿಸಲು ಒಪ್ಪಿದೆ.
ಆರ್‌ಬಿಐ ಪ್ರಸ್ತಾಪದ ಪ್ರಕಾರ ಬಂಡವಾಳ ಹೂಡಿದ ದಿನದಿಂದ ಮೂರು ವರ್ಷಗಳ ಅವಧಿಯವರೆಗೆ ತನ್ನ ಹೂಡಿಕೆಯಲ್ಲಿನ ಶೇಕಡಾ ೨೬ನ್ನು ಹಾಗೆಯೇ ಎಸ್‌ಬಿಐ ಉಳಿಸಿಕೊಂಡು ಹೋಗಬೇಕಾಗಿದೆ.

No comments:

Advertisement