Monday, March 2, 2020

ಕ್ರಿಮಿನಲ್‌ಗಳಿಗೇ ನಮ್ಮ ವ್ಯವಸ್ಥೆಯ ಬೆಂಬಲ: ನಿರ್ಭಯಾ ತಾಯಿ

ಕ್ರಿಮಿನಲ್‌ಗಳಿಗೇ ನಮ್ಮ ವ್ಯವಸ್ಥೆಯ ಬೆಂಬಲ: 
ಅಸಮಾಧಾನ ವ್ಯಕ್ತ ಪಡಿಸಿದ ನಿರ್ಭಯಾ ತಾಯಿ
ನವದೆಹಲಿ: ೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕ್ರೂರ ಸಾವಿಗೆ ಬಲಿಯಾದ ನತದೃಷ್ಟ ಯುವತಿಯ ತಾಯಿ ಆಶಾದೇವಿ ಅವರು ಕ್ರಿಮಿನಲ್‌ಗಳಿಗೇ ನಮ್ಮ ವ್ಯವಸ್ಥೆಯ ಬೆಂಬಲ ಎಂಬುದಾಗಿ ತಮ್ಮ ಹತಾಶ ಪ್ರತಿಕ್ರಿಯೆಯನ್ನು 2020 ಮಾರ್ಚ್ 02ರ ಸೋಮವಾರ ವ್ಯಕ್ತ ಪಡಿಸಿದರು.

ದೆಹಲಿ ನ್ಯಾಯಾಲಯದ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು ಪ್ರಕರಣದ ನಾಲ್ವರು ಅಪರಾಧಿಗಳ ಗಲ್ಲು ಜಾರಿಯನ್ನು ತಡೆ ಹಿಡಿದು ಪ್ರಕರಣದ ವಿಚಾರಣೆಯನ್ನು ಮುಂದೂಡಿರುವುದಾಗಿ ಪ್ರಕಟಿಸಿದ ಬಳಿಕ ಮಾಧ್ಯಮಗಳ ಜೊತೆ ಆಶಾದೇವಿ ಮಾತನಾಡಿದರು.

ಪ್ರಕರಣದ ನಾಲ್ವರು ಅಪರಾಧಿಗಳ ಗಲ್ಲು ಶಿಕ್ಷೆ ಜಾರಿಯು ಪದೇ ಪದೇ ಮುಂದೂಡಿಕೆಯಾಗುತ್ತಿರುವುದು ನಮ್ಮ ವ್ಯವಸ್ಥೆ ಮತ್ತು ಸರ್ಕಾರದ ವೈಫಲ್ಯ. ಶಿಕ್ಷಿತರನ್ನು ಗಲ್ಲಿಗೇರಿಸುವಂತೆ ತಾನೇ ನೀಡಿದ ಆದೇಶವನ್ನು ಜಾರಿಗೊಳಿಸಲು ನ್ಯಾಯಾಲಯ ಹೀಗೇಕೆ ಇಷ್ಟೊಂದು ಸಮಯ ತೆಗೆದುಕೊಳ್ಳುತ್ತಿದೆ? ಗಲ್ಲು ಜಾರಿಯನ್ನು ಪದೇ ಪದೇ ಮುಂದೂಡುತ್ತಿರುವುದು ನಮ್ಮ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ. ನಮ್ಮ ಇಡೀ ವ್ಯವಸ್ಥೆ ಕ್ರಿಮಿನಲ್‌ಗಳನ್ನು ಬೆಂಬಲಿಸುತ್ತದೆ ಎಂದು ಅವರು ಹೇಳಿದರು.

ಘಟನೆಯಲ್ಲಿ ಸಾವನ್ನಪ್ಪಿದ ೨೩ರ ಹರೆಯದ ಯುವತಿಯ ತಾಯಿ ಪ್ರಕರಣದ ಎಲ್ಲ ವಿಚಾರಣೆಗಳ ವೇಳೆಯಲ್ಲೂ ನ್ಯಾಯಾಲಯದಲ್ಲಿ ಹಾಜರಾಗುತ್ತಿದ್ದು, ತಮ್ಮ ಪುತ್ರಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕೊಂದ ವ್ಯಕ್ತಿಗಳು ಗಲ್ಲುಗಂಬ ಏರುವವರೆಗೂ ತನಗೆ ನಿರಾಳತೆ ಲಭಿಸುವುದಿಲ್ಲ ಎಂದು ನುಡಿದರು.

ಶಿಕ್ಷಿತ ಅಪರಾಧಿಗಳ ಗಲ್ಲು ಜಾರಿಯಲ್ಲಿ ವಿಳಂಬ ಏಕಾಗುತ್ತಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ಉತ್ತರ ನೀಡಬೇಕು ಎಂದು ಅವರು ನುಡಿದರು.

ಮಾರ್ಚ್ ೩ರ ಮಂಗಳವಾರ ಬೆಳಗ್ಗೆ ಗಂಟೆಗೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಗಲ್ಲಿಗೆ ಏರಿಸಬೇಕಾಗಿತ್ತು. ಹಿಂದೆ ಜನವರಿ ೨೨ ಮತ್ತು ಫೆಬ್ರುವರಿ ೧ಕ್ಕೆ ನಿಗದಿಯಾಗಿದ್ದ ಗಲ್ಲು ಜಾರಿ ಕೂಡಾ ಮುಂದೂಡಲ್ಪಟ್ಟಿತ್ತು.

ಅಪರಾಧಿಗಳಾದ ಮುಕೇಶ್ ಸಿಂಗ್ (೩೨), ಪವನ್ ಕುಮಾರ್ ಗುಪ್ತ (೨೫), ಅಕ್ಷಯ್ ಠಾಕೂರ್ (೩೧) ಮತ್ತು ವಿನಯ್ ಶರ್ಮ (೨೬) ಅವರು ಇನ್ನಿಬ್ಬರ ಜೊತೆ ಸೇರಿ ದೆಹಲಿಯ ಚಲಿಸುವ ಬಸ್ಸಿನಲ್ಲಿ ೨೦೧೨ರ ಡಿಸೆಂಬರ್ ೧೬ರಂದು ನಡೆಸಿದ್ದ ಕುಕೃತ್ಯದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಿಂಗಾಪುರದ ಆಸ್ಪತ್ರೆಯಲ್ಲಿ ಡಿಸೆಂಬರ್ ೨೯ರಂದು ಸಾವನ್ನಪ್ಪಿದ್ದರು.

No comments:

Advertisement