Sunday, March 15, 2020

ಮಧ್ಯಪ್ರದೇಶ: ಇಂದು ಕಮಲನಾಥ್ ಸರ್ಕಾರಕ್ಕೆ ಅಗ್ನಿಪರೀಕ್ಷೆ

ಮಧ್ಯಪ್ರದೇಶ: ಇಂದು ಕಮಲನಾಥ್ ಸರ್ಕಾರಕ್ಕೆ ಅಗ್ನಿಪರೀಕ್ಷೆ
ವಿಶ್ವಾಸಮತ ಯಾಚನೆಗೆ ರಾಜ್ಯಪಾಲರ ಸೂಚನೆ
ಭೋಪಾಲ್: ಮಧ್ಯಪ್ರದೇಶದಲ್ಲಿ ರಾಜಕೀಯ ಹೈಡ್ರಾಮಾ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದ್ದು, ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿ ಕಮಲನಾಥ್ 2020 ಮಾರ್ಚ್ 16ರ  ಸೋಮವಾರ ಅವಕಾಶ ಕಲ್ಪಿಸುವಂತೆ ವಿಧಾನಸಭಾಧ್ಯಕ್ಷರಿಗೆ ರಾಜ್ಯಪಾಲ ಲಾಲಜಿ ಟಂಡನ್ 2020 ಮಾರ್ಚ್ 15ರ ಭಾನುವಾರ ಸೂಚನೆ ನೀಡಿದರು. ಇದರೊಂದಿಗೆ ಕಮಲನಾಥ್ ಸರ್ಕಾರದಅಗ್ನಿಪರೀಕ್ಷೆಗೆ ಕ್ಷಣಗಣನೆ ಆರಂಭವಾಯಿತು.

ಬಿಜೆಪಿಗೆ ಸೇರ್ಪಡೆಯಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಬೆಂಬಲಿಗ ಕಾಂಗ್ರೆಸ್ ಶಾಸಕರ ಬಂಡಾಯದಿಂದ ಬಿಕ್ಕಟ್ಟಿಗೆ ಸಿಲುಕಿರುವ ಕಮಲನಾಥ್ ಸರ್ಕಾರವು ವಿಶ್ವಾಸಮತ ಗೆಲ್ಲಲಿದೆ ಎಂದು ಜೈಪುರದ ರೆಸಾರ್ಟ್ನಿಂದ ಭಾನುವಾರ ಭೋಪಾಲ್ಗೆ ಆಗಮಿಸಿದ ಕಾಂಗ್ರೆಸ್ ಶಾಸಕರುವಿಜಯ (ವಿ) ಸಂಕೇತ ತೋರಿಸುತ್ತಾ ಆತ್ಮ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ’ವಿಶ್ವಾಸಮತ ಕಲಾಪದ ಸಂಭವನೀಯತೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಶನಿವಾರ ಮಧ್ಯಪ್ರದೇಶದ ರಾಜ್ಯಪಾಲರನ್ನು ಭೇಟಿ ಮಾಡಿದ್ದ ಬಿಜೆಪಿ ನಾಯಕರು, ಮುಖ್ಯಮಂತ್ರಿ ಕಮಲನಾಥ್ ಅವರಿಗೆ ಮಾರ್ಚ್ ೧೬ರ ಸೋಮವಾರ ಸದನದಲ್ಲಿ ವಿಶ್ವಾಸಮತ ಯಾಚಿಸಿ ಬಹುಮತ ಸಾಬೀತು ಪಡಿಸಲು ನಿರ್ದೇಶನ ನೀಡುವಂತೆ ಒತ್ತಾಯಿಸಿದ್ದರು. ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ನಿಯೋಗ ರಾಜ್ಯಪಾಲ ಲಾಲಜಿ ಟಂಡನ್ ಅವರ ಬಳಿಗೆ ತೆರಳಿ ಮನವಿ ಮಾಡಿತ್ತು.

ಜೈಪುರದ ರೆಸಾರ್ಟಿನಿಂದ ಭೋಪಾಲ್ಗೆ ವಾಪಸಾಗಿರುವ ಕಾಂಗ್ರೆಸ್ ಶಾಸಕರು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ.

೩೦ ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಪ್ರಸ್ತುತ ೨೨೮ ಶಾಸಕರಿದ್ದಾರೆ. ಬಹುಮತಕ್ಕೆ ೧೧೫ ಸ್ಥಾನಗಳ ಅವಶ್ಯಕತೆ ಇದೆ. ಬಿಎಸ್ಪಿಯ ಇಬ್ಬರು ಶಾಸಕರು, ಸಮಾಜವಾದಿ ಪಕ್ಷದ ಓರ್ವ ಶಾಸಕ ಹಾಗೂ ನಾಲ್ವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ೧೨೧ ಸದಸ್ಯರ ಬಲ ಪಡೆದು ಕಾಂಗ್ರೆಸ್ ಸರ್ಕಾರ ರಚನೆ ಮಾಡಿತ್ತು.

ಆದರೆ, ಇದೀಗ ಪಕ್ಷೇತರರು ಸೇರಿದಂತೆ ಕಾಂಗ್ರೆಸ್ ಪಕ್ಷದ ೨೨ ಶಾಸಕರು ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಪ್ರಸ್ತುತ ಕಾಂಗ್ರೆಸ್ಸಿನಲ್ಲಿ ಕೇವಲ ೯೨ ಶಾಸಕರಿದ್ದಾರೆ. ಒಂದುವೇಳೆ ಸೋಮವಾರ ಮುಖ್ಯಮಂತ್ರಿ ಕಮಲನಾಥ್ ವಿಶ್ವಾಸಮತ ಯಾಚನೆಗೆ ಮಾಡಿದರೆ ಸರ್ಕಾರ ಪತನವಾಗುವ ಸಾಧ್ಯತೆ ಹೆಚ್ಚಾಗಿದೆ.

ಸೋಮವಾರದಿಂದ ಮಧ್ಯಪ್ರದೇಶ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಹಿನ್ನೆಲೆಯಲ್ಲಿ ಈಗಾಗಲೇ ರೆಸಾರ್ಟ್ ಸೇರಿಕೊಂಡಿದ್ದ ಕಾಂಗ್ರೆಸ್ ಶಾಸಕರು ಮತ್ತೆ ಭೋಪಾಲ್ನತ್ತ ಹೆಜ್ಜೆ ಹಾಕಿದ್ದಾರೆ.

ಈಮಧ್ಯೆ, ಬೆಂಗಳೂರಿನ ಪ್ರೆಸ್ಟೀಜ್ ಗಾಲ್ಫ್ಶೈರ್ ಹೋಟೆಲಿನಲ್ಲಿ ಬೀಡುಬಿಟ್ಟ ಕಾಂಗ್ರೆಸ್ಸಿನ ಬಂಡಾಯ ಶಾಸಕರನ್ನು ರಾಜ್ಯದ ಬಿಜೆಪಿ ನಾಯಕರು ರಮಾಡ ಹೋmಲಿಗೆ ಸ್ಥಳಾಂತರಿಸಿದ್ದಾರೆ. ಕಳೆದ ಬಾರಿ ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಪತನದ ವೇಳೆ ಬಿಜೆಪಿ ನಾಯಕರು ತಮ್ಮ ಶಾಸಕರನ್ನು ಇದೇ ರಮಾಡ ಹೋಟೆಲಿನಲ್ಲಿ ಇರಿಸಿದ್ದರು.

ವಿಧಾನಸಭಾಧ್ಯಕ್ಷರು ವಿಶ್ವಾಸಮತ ಯಾಚನೆಗೆ ಆದೇಶ ನೀಡಿದರೆ ನಾವು ಬಹುಮತ ಸಾಬೀತುಪಡಿಸಲು ಸಿದ್ಧರಿದ್ದೇವೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅತೃಪ್ತ ಶಾಸಕರು ಮತ್ತೆ ಕಾಂಗ್ರೆಸ್ಸಿಗೆ ಬೆಂಬಲ ನೀಡುವುದು ಅಸಾಧ್ಯ ಎನ್ನಲಾಗುತ್ತಿದೆ.

ಜ್ಯೊತಿರಾದಿತ್ಯ ಸಿಂಧಿಯಾ ಮತ್ತು ೨೨ ಶಾಸಕರ ನಿರ್ಗಮನದೊಂದಿಗೆ ಬಿಕ್ಕಟ್ಟು ಎದುರಿಸುತ್ತಿರುವ ಕಾಂಗ್ರೆಸ್ ಸರ್ಕಾರವು ಸದನ ಬಲಾಬಲ ಪರೀಕ್ಷೆಯಲ್ಲಿ ಬಹುಮತ ಸಾಬೀತು ಪಡಿಸಲಿದೆ ಎಂದು ಕಾಂಗ್ರೆಸ್ ಶಾಸಕರು ಭಾನುವಾರ ವಿಜಯದ ಸಂಕೇತ ಪ್ರದರ್ಶಿಸುತ್ತಾ ಆತ್ಮವಿಶ್ವಾಸ ವ್ಯಕ್ತ ಪಡಿಸಿದರು.

ಶಾಸಕರ ಜೊತೆಗಿದ್ದ ಕಾಂಗ್ರೆಸ್ ನಾಯಕ ಹರೀಶ ರಾವತ್ ಅವರು ಪಕ್ಷವು ಬಂಡಾಯ ಶಾಸಕರ ಜೊತೆಗೂ ಸಂಪರ್ಕದಲ್ಲಿದೆ ಎಂದು ಹೇಳಿದರು.

ನಾವು ಸದನದಲ್ಲಿ ಬಲಾಬಲ ಪರೀಕ್ಷೆಗೆ ಸಿದ್ಧರಿದ್ದೇವೆ ಮತ್ತ ಗೆಲ್ಲುವ ವಿಶ್ವಾಸ ಹೊಂದಿದ್ದೇವೆ. ನಾವು ಎದೆಗುಂದಿಲ್ಲ, ಬಿಜೆಪಿ ಎದೆಗುಂದಿದೆ. (ಬಂಡಾಯ) ಶಾಸಕರು ಕೂಡಾ ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಅವರು ನುಡಿದರು.

ಶನಿವಾರ ತಡರಾತ್ರಿಯ ಕ್ರಮದಲ್ಲಿ ಲಾಲಜಿ ಟಂಡನ್ ಅವರು ವಿಧಾನಸಭಾಧ್ಯಕ್ಷ ನರ್ಮದ ಪ್ರಸಾದ್ ಪ್ರಜಾಪತಿ ಅವರಿಗೆ ಸೋಮವಾರ ಬಲಾಬಲ ಪರೀಕ್ಷೆಗೆ ಅವಕಾಶ ಕಲ್ಪಿಸುವಂತೆ ಸೂಚಿಸಿದ್ದಾರೆ.

೨೨ ಕಾಂಗ್ರೆಸ್ ಶಾಸಕರು ಬಂಡಾಯವೆದ್ದು ರಾಜೀನಾಮೆ ನೀಡಿದ ಬಳಿಕ ಕಮಲನಾಥ್ ಅವರ ೧೫ ತಿಂಗಳ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ.

ಮಧ್ಯಪ್ರದೇಶ ವಿಧಾನಸಭಾ ಅಧಿವೇಶನವು ೨೦೨೦ರ ಮಾರ್ಚ್ ೧೬ರಂದು ಬೆಳಗ್ಗೆ ೧೧ ಗಂಟೆಗೆ ಆರಂಭವಾಗುವುದು. ವಿಧಾನಸಭೆಯಲ್ಲಿ ನನ್ನ ಭಾಷಣದ ಬಳಿಕ ಮೊದಲ ಕಲಾಪವಾಗಿ ವಿಶ್ವಾಸ ಮತ ಯಾಚನೆ ನಡೆಯುವುದು ಎಂದು ತಮ್ಮ ಆದೇಶದಲ್ಲಿ ರಾಜ್ಯಪಾಲರು ತಿಳಿಸಿದ್ದಾರೆ.

ಇದಕ್ಕೆ ಮುನ್ನ ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬರೆದ ಪತ್ರದಲ್ಲಿ ಕಮಲನಾಥ್ ಅವರುಬೆಂಗಳೂರಿನಲ್ಲಿದಿಗ್ಬಂಧನದಲ್ಲಿ ಇರುವ ೨೨ ಮಂದಿ ಕಾಂಗ್ರೆಸ್ ಶಾಸಕರಬಿಡುಗಡೆಯ ಖಾತರಿ ನೀಡುವಂತೆ ಒತ್ತಾಯಿಸಿದ್ದರು.

ದಯಮಾಡಿ ಕೇಂದ್ರ ಗೃಹ ಸಚಿವರಾಗಿ ನಿಮ್ಮ ಶಕ್ತಿಯನ್ನು ಚಲಾಯಿಸಿ, ’ದಿಗ್ಬಂಧನದಲ್ಲಿ ಇರುವ ೨೨ ಕಾಂಗ್ರೆಸ್ ಶಾಸಕರು ಸುರಕ್ಷಿತವಾಗಿ ಮಧ್ಯಪ್ರದೇಶ ತಲುಪುವಂತೆ ಮತ್ತು  ಮಾರ್ಚ್ ೧೬ರಂದು ಆರಂಭವಾಗುವ ವಿಧಾನಸಭಾ ಅಧಿವೇಶನ ಕಲಾಪದಲ್ಲಿ ಯಾವುದೇ ಭಯ ಅಥವಾ ಆಮಿಷಕ್ಕೆ ಒಳಗಾಗದೆ ಹಾಜರಾಗಲು ಸಾಧ್ಯವಾಗುವಂತೆ ಮಾಡಿ ಎಂದು ತಮ್ಮ ನಾಲ್ಕು ಪುಟಗಳ ಪತ್ರದಲ್ಲಿ ಕಮಲನಾಥ್ ಅವರು ಅಮಿತ್ ಶಾ ಅವರಿಗೆ ಮನವಿ ಮಾಡಿದ್ದರು. ಕಾಂಗ್ರೆಸ್ ಪಕ್ಷವು ಪತ್ರವನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿತ್ತು.

ಕಾಂಗ್ರೆಸ್ ಸರ್ಕಾರವು ೨೨ ಮಂದಿ ಶಾಸಕರುಬಿಡುಗಡೆಯಾದರೆ ಅವರಿಗೆ ರಾಜ್ಯದಲ್ಲಿ ಅಮೋಘ ಭದ್ರತೆಯನ್ನು ಒದಗಿಸುವುದು ಎಂದು ಬಂಡಾಯ ಶಾಸಕರು ತಮಗೆ ಸಿಆರ್ಪಿಎಫ್ ಭದ್ರತೆ ಬೇಕು ಎಂದು ಹೇಳಿದ್ದನ್ನು ಉಲ್ಲೇಖಿಸಿ ಕಮಲನಾಥ್ ತಿಳಿಸಿದ್ದರು.

ಮಾರ್ಚ್ ೩ರಂದು ಬಿಎಸ್ಪಿ ಶಾಸಕ ರಾಮಬಾಯಿ ಮತ್ತು ಅವರ ಕುಟುಂಬ ಸದಸ್ಯರನ್ನು ಹರಿಯಾಣದ ಗುರುಗ್ರಾಮದ ಬಿಜೆಪಿ ನಾಯಕರದಿಗ್ಬಂಧನದಿಂದ ಬಿಡುಗಡೆ ಮಾಡಲಾಗಿತ್ತು. ಬಳಿಕ, ಮೂವರು ಕಾಂಗ್ರೆಸ್ ಶಾಸಕರು ಮತ್ತು ಒಬ್ಬ ಪಕ್ಷೇತರ ಶಾಸಕರನ್ನು ಬಿಜೆಪಿ ಶಾಸಕ ಅರವಿಂದ ಸಿಂಗ್ ಭಡೋರಿಯಾ ಅವರು ಬೆಂಗಳೂರಿಗೆ ಕರೆದೊಯ್ದರು. ಇದು ವಿಮಾನ ಪ್ರಯಾಣಿಕರ ಪಟ್ಟಿಯಿಂದ ಖಚಿತವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಮಾರ್ಚ್ ೯ರಂದು ೧೯ಶಾಸಕರನ್ನು ಬೆಂಗಳೂರಿಗೆ ಬಿಜೆಪಿ ನಾಯಕರು ಮೂರು ವಿಮಾನಗಳಲ್ಲಿ ಕರೆದೊಯ್ದರು ಎಂದು ಕಮಲನಾಥ್ ಪ್ರತಿಪಾದಿಸಿದ್ದಾರೆ. ಅವರ ಮೊಬೈಲ್ ಫೋನುಗಳನ್ನು ತೆಗೆದಿರಿಸಲಾಗಿದೆ ಮತ್ತು ಅವರನ್ನು ಕರ್ನಾಟಕ ಬಿಜೆಪಿಯು ದಿಗ್ಬಂಧನದಲ್ಲಿ ಇರಿಸಿದೆ. ಕರ್ನಾಟಕ ಬಿಜೆಪಿಯೇ ಅವರ ವಾಸ್ತವ್ಯದ ವೆಚ್ಚಗಳನ್ನು ಭರಿಸುತ್ತಿದೆ ಎಂದೂ ಅವರು ಆಪಾದಿಸಿದರು.

ಇದು ಹಿಂದೆಂದೂ ಘಟಿಸದಂತಹ ಪರಿಸ್ಥಿತಿ. ಏಕೆಂದರೆ ಒಂದೆಡೆಯಲ್ಲಿ ಬಿಜೆಪಿಯು ಶಾಸಕರನ್ನು ದಿಗ್ಬಂಧನದಲ್ಲಿ ಇರಿಸಿದೆ. ಇನ್ನೊಂದಡೆಯಲ್ಲಿ ಅದು ಸದನ ಬಲಾಬಲ ಪರೀಕ್ಷೆಗೆ ಒತ್ತಾಯಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವಿಶ್ವಾಸ ಮತಕ್ಕೆ ಯಾವ ಅರ್ಥವೂ ಇಲ್ಲ ಎಂದು ಕಮಲನಾಥ್ ಹೇಳಿದರು.

ನನಗೆ ಶಾಸಕರ ಸುರಕ್ಷತೆ ಬಗ್ಗೆ ಚಿಂತೆಯಾಗಿದೆ. ನನ್ನ ಅಭಿಪ್ರಾಯದಲ್ಲಿ ೨೨ ಮಂದಿ ಶಾಸಕರು ದಿಗ್ಬಂಧನಲ್ಲಿ ಇರುವಾಗ ಸದನ ಬಲಾಬಲ ಪರೀಕ್ಷೆಗೆ ಯಾವ ಅರ್ಥವೂ ಇಲ್ಲ ಎಂದು ಕಮಲನಾಥ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿಗರಾದ ೨೨ ಮಂದಿ ಮಧ್ಯಪ್ರದೇಶ ಶಾಸಕರು ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರುವ ಸಲುವಾಗಿ ರಾಜೀನಾಮೆ ನೀಡಿದ್ದಾರೆ. ಪರಿಣಾಮವಾಗಿ ಕಮಲನಾಥ್ ಸರ್ಕಾರ ವಿಧಾನಸಭೆಯಲ್ಲಿ ಅಲ್ಪಮತಕ್ಕೆ ಇಳಿದಿದೆ.

No comments:

Advertisement