My Blog List

Thursday, March 19, 2020

ಶುಕ್ರವಾರವೇ ಸದನದಲ್ಲಿ ಬಲಾಬಲ ಪರೀಕ್ಷೆ: ಕಮಲನಾಥ್‌ಗೆ ಸುಪ್ರೀಂ ಆದೇಶ

ಶುಕ್ರವಾರವೇ ಸದನದಲ್ಲಿ ಬಲಾಬಲ ಪರೀಕ್ಷೆ: ಕಮಲನಾಥ್ಗೆ ಸುಪ್ರೀಂ ಆದೇಶ
ವಿಶ್ವಾಸಮತ ಕಲಾಪದ ವಿಡಿಯೋ ಚಿತ್ರೀಕರಣಕ್ಕೂ ತಾಕೀತು
ನವದೆಹಲಿ:  2020 ಮಾರ್ಚ್ ೨೦ರ ಶುಕ್ರವಾರ ಸಂಜೆಯ ಒಳಗಾಗಿ ಸದನದಲ್ಲಿ ಬಲಾಬಲ ಪರೀಕ್ಷೆ ಎದುರಿಸಿ ಬಹುಮತ ಸಾಬೀತು ಪಡಿಸುವಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಅವರಿಗೆ ಸುಪ್ರೀಂಕೋರ್ಟ್ 2020 ಮಾರ್ಚ್  19ರ ಗುರುವಾರ ಆಜ್ಞಾಪಿಸಿತು.

ಕೈಗಳನ್ನು  ಎತ್ತುವ ಮೂಲಕ ಮತದಾನ ನಡೆಯಬೇಕು ಮತ್ತು ಸಂಜೆ ಗಂಟೆಯ ಒಳಗಾಗಿ ವಿಶ್ವಾಸ ಮತ ಯಾಚನೆಯ ಪ್ರಕ್ರಿಯೆ ಮುಗಿಯಬೇಕು. ವಿಧಾನಸಭೆಯ ಇಡೀ ದಿನದ ಕಲಾಪದ ವಿಡಿಯೋ ಚಿತ್ರೀಕರಣ ಮಾಡಬೇಕು ಎಂದೂ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು.

ಕಮಲನಾಥ್ ಸರ್ಕಾರವು ಬಹುಮತ ಕಳೆದುಕೊಂಡಿದ್ದು ಸದನದಲ್ಲಿ ಬಲಾಬಲ ಪರೀಕ್ಷೆಯನ್ನು ಉದ್ದೇಶಪೂರ್ವಕವಾಗಿಯೇ ವಿಳಂಬಿಸುತ್ತಿದೆ ಎಂದು ಆಪಾದಿಸಿ, ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ನಡೆಸಲು ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕು ಎಂಬುದಾಗಿ ಕೋರಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬಳಿಕ ನ್ಯಾಯಮೂರ್ತಿ ವೈವಿ ಚಂದ್ರಚೂಡ್ ನೇತೃತ್ವದ ಪೀಠ ಆದೇಶವನ್ನು ನೀಡಿತು.

ಬಂಡಾಯ ಎದ್ದಿರುವ ೧೬ ಮಂದಿ ಶಾಸಕರು ಬಯಸಿದರೆ ಸದನ ಬಲಾಬಲ ಪರೀಕ್ಷೆಗೆ ಹಾಜರಾಗಬಹುದು, ಅಂತಹ ಸಂದರ್ಭದಲ್ಲಿ ಅವರಿಗೆ ಕರ್ನಾಟಕ ಮತ್ತು ಮಧ್ಯಪ್ರದೇಶ ಪೊಲೀಸರು ಸಾಕಷ್ಟು ಭದ್ರತೆ ಒದಗಿಸಬೇಕು ಎಂದೂ ಪೀಠ ಹೇಳಿತು.

ವಿಶ್ವಾಸ ಮತ ಕಲಾಪವನ್ನು ವಿರೋಧಿಸಿದ ಕಾಂಗ್ರೆಸ್, ರಾಜೀನಾಮೆ ನೀಡಿರುವ ಆಡಳಿತ ಪಕ್ಷದ ೨೨ ಮಂದಿ ಶಾಸಕರನ್ನು ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲಿ ದಿಗ್ಬಂಧನದಲ್ಲಿ ಇರಿಸಲಾಗಿದೆ. ಆದ್ದರಿಂದ ಅವರು ಭಯಭೀತಿ ಇಲ್ಲದೆ ತಮ್ಮ ಮತ ಚಲಾಯಿಸುವ ಸ್ಥಿತಿಯಲ್ಲಿ ಇಲ್ಲ ಎಂದು ಪ್ರತಿಪಾದಿಸಿತ್ತು. ರಾಜೀನಾಮೆಗಳು ಬಲವಂತದ್ದಾಗಿದ್ದು, ಶಾಸಕರು ತಮ್ಮ ಮುಕ್ತ ಇಚ್ಛೆಯಿಂದ ವರ್ತಿಸಿಲ್ಲ ಎಂದೂ ಕಾಂಗ್ರೆಸ್ ವಾದಿಸಿತ್ತು.

ಸರ್ಕಾರವು ಬಹುಮತ ಹೊಂದಿದೆಯೇ ಎಂಬುದನ್ನು ನಿರ್ಧರಿಸುವ ಏಕೈಕ ಕಾರ್ಯಸೂಚಿಯನ್ನು ಶುಕ್ರವಾರದ ವಿಧಾನಸಭಾ ಸಮಾವೇಶವು ಹೊಂದಿರಬೇಕು ಎಂದು ಸುಪ್ರೀಂಕೋರ್ಟ್ ಹೇಳಿತು.

ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿಷ್ಠರಾದ ೨೨ ಮಂದಿ ಶಾಸಕರ ಪೈಕಿ ಶಾಸಕರ ರಾಜೀನಾಮೆಗಳನ್ನು ಮಧ್ಯಪ್ರದೇಶ ವಿಧಾನಸಭಾಧ್ಯಕ್ಷರು ಈಗಾಗಲೇ ಅಂಗೀಕರಿಸಿದ್ದಾರೆ.

ಉಳಿದ ೧೬ ಮಂದಿ ಬಂಡಾಯ ಕಾಂಗ್ರೆಸ್ ಶಾಸಕರ ರಾಜೀನಾಮೆಗಳನ್ನು ಅಂಗೀಕರಿಸಬೇಕೇ ಅಥವಾ ಅನರ್ಹಗೊಳಿಸಬೇಕೇ ಎಂಬ ಬಗ್ಗೆ ವಿಧಾನಸಭಾಧ್ಯಕ್ಷರು ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಇರುವುದರ ಹೊರತಾಗಿಯೂ ಸುಪ್ರೀಂಕೋರ್ಟ್ ಬಲಾಬಲ ಪರೀಕ್ಷೆಗೆ ಆದೇಶ ನೀಡಿದೆ.

ಯಾರು ವಿಶ್ವಾಸಮತ ಹೊಂದಿದ್ದಾರೆ ಎಂಬುದಾಗಿ ಶಾಸಕರು ನಿರ್ಧರಿಸಬೇಕು ಎಂಬುದಾಗಿ ತಾನು ಬಯಸುವುದಾಗಿ ಸುಪ್ರೀಂಕೋರ್ಟ್ ಬುಧವಾರ ಹೇಳಿತ್ತು.

ಇದಕ್ಕೆ ಮುನ್ನ ಮಧ್ಯಪ್ರದೇಶದ ವಿಧಾನಸಭಾಧ್ಯಕ್ಷ ಎನ್ಪಿ ಪ್ರಜಾಪತಿ ಅವರು ವಿಡಿಯೋ ಸಂಪರ್ಕದ ಮೂಲಕ ಬಂಡಾಯ ಶಾಸಕರ ಜೊತೆ ಮಾತನಾಡಿ ಅವರು ದಿಗ್ಬಂಧನದಲ್ಲಿ ಇದ್ದಾರೆಯೇ ಅಥವಾ ತಮ್ಮ ಸ್ವ ಇಚ್ಛೆಯಂತೆಯೇ ಬೆಂಗಳೂರಿನಲ್ಲಿ ಇದ್ದಾರೆಯೇ ಎಂಬುದಾಗಿ ತಿಳಿದುಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಸಲಹೆ ಮಾಡಿತ್ತು. ವೀಕ್ಷಕನನ್ನು ನೇಮಿಸುವ ಇಂಗಿತವನ್ನೂ ನ್ಯಾಯಾಲಯ ವ್ಯಕ್ತ ಪಡಿಸಿತು. ಆದರೆ ವಿಧಾನಸಭಾಧ್ಯಕ್ಷರು ಅದನ್ನು ತಿರಸ್ಕರಿಸಿದ್ದರು.

ನಾವು ವೀಕ್ಷಕರೊಬ್ಬರನ್ನು ಬೆಂಗಳೂರು ಅಥವಾ ಬೇರೆ ಯಾವುದಾದರೂ ಸ್ಥಳಕ್ಕೆ ನೇಮಿಸಬಹುದು. ಅಲ್ಲಿ ಬಂಡಾಯ ಶಾಸಕರು ವಿಧಾನಸಭಾಧ್ಯಕ್ಷರ ಜೊತೆಗೆ ವಿಡಿಯೋ ಸಂವಹನ ನಡೆಸಬಹುದು ಮತ್ತು ಬಳಿಕ ವಿಧಾನಸಭಾಧ್ಯಕ್ಷರು ನಿರ್ಧಾರ ಕೈಗೊಳ್ಳಬಹುದು ಎಂದು ಪೀಠ ಸೂಚಿಸಿತು.
ವಿಧಾನಸಭಾಧ್ಯಕ್ಷರನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಿದ ಕಾಂಗ್ರೆಸ್ ನಾಯಕ ಮತ್ತು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ವಿಧಾನಸಭಾಧ್ಯಕ್ಷರಿಗೆ ಕಾಲಮಿತಿಯ ನಿರ್ದೇಶನ ನೀಡುವುದು ಕಾನೂನಿನ ತೊಡಕು ಉಂಟುಮಾಡಬಹುದು ಎಂದು ಪೀಠಕ್ಕೆ ತಿಳಿಸಿದ್ದರು.

ಶಾಸಕರ ರಾಜೀನಾಮೆ ಆಥವಾ ಅನರ್ಹತೆ ವಿಚಾರ ವಿಧಾನಸಭಾಧ್ಯಕ್ಷರ ಬಳಿಯೇ ಬಾಕಿ ಉಳಿದಿರುವುದರಿಂದ ವಿಶ್ವಾಸಮತ ಕಲಾಪ ನಡೆಸಲು ಯಾವುದೇ ಅಡೆತಡೆ ಇಲ್ಲ ಎಂದು ನ್ಯಾಯಾಲಯ ಹೇಳಿತು.

ಕಳೆದ ವಾರ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿಷ್ಠರಾದ ೨೨ ಮಂದಿ ಶಾಸಕರು ರಾಜೀನಾಮೆ ನೀಡುವುದರೊಂದಿಗೆ ಮುಖ್ಯಮಂತ್ರಿ ಕಮಲನಾಥ್ ಸರ್ಕಾರವು ಪತನದ ಅಂಚಿಗೆ ಬಂದು ನಿಂತಿದೆ.
ಅತ್ಯಂತ ಅಲ್ಪ ಬಹುಮತವನ್ನು ಹೊಂದಿದ್ದರೂ ತಮ್ಮ ಸರ್ಕಾರವು ಬಹುಮತದ ಸಂಖ್ಯೆಯನ್ನು ಹೊಂದಿದೆ ಎಂದು ಕಮಲನಾಥ್ ಪ್ರತಿಪಾದಿಸಿದ್ದರು.

ಆದರೆ ಸೋಮವಾರ ಸಮಾವೇಶಗೊಂಡಿದ್ದ ಮುಂಗಡಪತ್ರ ಅಧಿವೇಶನವನ್ನು ೧೦ ದಿನಗಳ ಅವಧಿಗೆ ಮುಂದೂಡಲಾಗಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ ಸುಪ್ರೀಂಕೋರ್ಟಿನ ಕದ ತಟ್ಟಿತ್ತು. ಸರ್ಕಾರವು ಕೊರೋನಾವೈರಸ್ ಹೆಸರಿನಲ್ಲಿ ವಿಶ್ವಾಸ ಮತ ಯಾಚನೆಯನ್ನು ವಿಳಂಬಿಸುತ್ತಿದೆ ಎಂದು ಬಿಜೆಪಿ ಪ್ರತಿಪಾದಿಸಿತ್ತು.

ಬಲಾಬಲ ಪರೀಕ್ಷೆಗೆ ದೀರ್ಘ ಕಾಲ ನೀಡುವುದುಕುದುರೆ ವ್ಯಾಪಾರಕ್ಕೆಆಸ್ಪದ ನೀಡುತ್ತದೆ ಎಂದು ಸುಪ್ರೀಂಕೋರ್ಟ್ ಬುಧವಾರ ಅಭಿಪ್ರಾಯ ಪಟ್ಟಿತ್ತು. ಶಾಸಕರನ್ನು ದಿಗ್ಬಂಧನದಲ್ಲಿ ಇರಿಸುವಂತಿಲ್ಲ ಎಂದೂ ಅದು ಹೇಳಿತ್ತು.

No comments:

Advertisement