ಪ್ರಧಾನಿ ಕಚೇರಿಯಿಂದ ೧೦ ಉನ್ನತ ಸಮಿತಿಗಳ ರಚನೆ
ಭಾರತದಲ್ಲಿ ಸೋಂಕಿತರ ಸಂಖ್ಯೆ 1000, ಸಾವು 27, ಎಲ್ಲ ಸರಕುಗಳ ಸಾಗಣೆಗೆ ಅನುಮತಿ
ನವದೆಹಲಿ: ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಘೋಷಣೆಯಾದ ಬಳಿಕ ಜನರು ಎದುರಿಸಬೇಕಾಗಿ ಬಂದಿರುವ ಕಷ್ಟ-ನಷ್ಟ, ನೋವುಗಳನ್ನು ತ್ವರಿತವಾಗಿ ಶಮನಿಸುವುದು, ಆರ್ಥಿಕತೆಯನ್ನು ಮರಳಿ ಸರಿದಾರಿಗೆ ತರುವುದು ಮತ್ತು ಆರೋಗ್ಯ ಕಾಳಜಿ ಕ್ರಮಗಳನ್ನು ತ್ವರಿತಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲು ಪ್ರಧಾನ ಮಂತ್ರಿಗಳ ಕಾರ್ಯಾಲಯವು ೧೦ ವಿಭಿನ್ನ ಉನ್ನತ ಮಟ್ಟದ ಸಮಿತಿಗಳನ್ನು 2020 ಮಾರ್ಚ್ 29ರ ಭಾನುವಾರ ರಚಿಸಿತು.
ಈ ಸಮಿತಿಗಳು ಪ್ರಧಾನ ಮಂತ್ರಿಯವರ ಮುಖ್ಯ ಕಾರ್ಯದರ್ಶಿ ಪಿ.ಕೆ. ಮಿಶ್ರ ಅವರ ಒಟ್ಟಾರೆ ಮಾರ್ಗದರ್ಶನದಲ್ಲಿ ವಿವಿಧ ಅಂಶಗಳ ಬಗ್ಗೆ ಪರಿಶೀಲಿಸುವ ಕೆಲಸ ಮಾಡಲಿವೆ ಎಂದು ಮೂಲಗಳು ಹೇಳಿವೆ. ಇದೇ ವೇಳೆಗೆ ದೇಶಾದ್ಯಂತ ಅಗತ್ಯ ಹಾಗೂ ಅಗತ್ಯೇತರ ಸರಕುಗಳ ಸಾಗಣೆಗೆ ಕೇಂದ್ರವು ಅನುಮತಿ ನೀಡಿದ್ದು, ವಲಸೆ ಕಾರ್ಮಿಕರು ಸೇರಿದಂತೆ ವಸತಿ ರಹಿತರಿಗಾಗಿ ಪರಿಹಾರ ಶಿಬಿರಗಳನ್ನು ರಚಿಸಲು ಎಸ್ ಡಿ ಆರ್ ಎಫ್ ಸವಲತ್ತುಗಳನ್ನು ಬಳಸಿಕೊಳ್ಳಲು ಒಪ್ಪಿಗೆ ನೀಡಿತು.
ಈ ಮಧ್ಯೆ, ವಿಶ್ವಾದ್ಯಂತ ೬ ಲಕ್ಷಕ್ಕೂ ಹೆಚ್ಚು ಮಂದಿಯನ್ನು ಬಾಧಿಸಿರುವ ಮಾರಕ ಕೊರೋನಾವೈರಸ್ ಸೋಂಕಿಗೆ ಬಲಿಯಾಗಿರುವವರ ಸಂಖ್ಯೆ ಭಾನುವಾರ ೩೧,೪೧೨ಕ್ಕೆ ಏರಿದ್ದು, ಇವರಲ್ಲಿ ಹೆಚ್ಚಿನ ಮಂದಿ ಯುರೋಪಿನವರು ಎಂದು ವರದಿಗಳು ಹೇಳಿವೆ. ಇಂಗ್ಲೆಂಡಿನಲ್ಲಿ ಸಾವಿನ ಸಂಖ್ಯೆ ೧೨೨೮ಕ್ಕೆ ಏರಿದೆ. ಇದೇ ವೇಳೆಗೆ ಭಾರತದಲ್ಲಿ ಕಳೆದ ೨೪ ಗಂಟೆಗಳಲ್ಲಿ ೬ ರಾಜ್ಯUಳಿಂದ ಸೋಂಕಿನ ೧೦೬ ಹೊಸ ಪ್ರಕರಣಗಳು ಮತ್ತು ಸಾವಿನ ೬ ಪ್ರಕರಣಗಳು ವರದಿಯಾಗಿವೆ.ಕೊರೋನಾವೈರಸ್ ಖಚಿತಪಟ್ಟಿರುವ ಪ್ರಕರಣಗಳ ಸಂಖ್ಯೆ 1000 ದಾಟಿದ್ದು, ಅವುಗಳಲ್ಲಿ 27 ಸಾವಿನ ಪ್ರಕರಣಗಳೂ ಸೇರಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದಶಿ ಲವ ಅಗರ್ ವಾಲ್ ಹೇಳಿದರು. ಮಹಾರಾಷ್ಟ್ರದಲ್ಲಿ ಹೊಸ ೨೨ ಪ್ರಕರಣಗಳೊಂದಿಗೆ ಸೋಂಕು ಖಚಿತ ಪಟ್ಟ ಪ್ರಕರಣಗಳ ಸಂಖ್ಯೆ ೨೦೩ಕ್ಕೆ ಏರಿದೆ. ಎರಡು ಸಾವುಗಳು ಭಾನುವಾರ ಮಹಾರಾಷ್ಟ್ರದಿಂದ ವರದಿಯಾಗಿದ್ದು ಸಾವಿನ ಸಂಖ್ಯೆ ೮ಕ್ಕೆ ಏರಿದೆ. ಕರ್ನಾಟಕದಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ ೮೩ಕ್ಕೆ ಏರಿದೆ.
ಭಾರತದಲ್ಲಿ ಭಾನುವಾರದವರೆಗೆ ೩೪,೯೩೧ ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ರಮಣ್ ಗಂಗಾಖೇಡ್ಕರ್ ಹೇಳಿದರು.
ಅರವಿಂದ ಕೇಜ್ರಿವಾಲ್ ಮನವಿ
ಈ ಮಧ್ಯೆ ದೆಹಲಿಯಿಂದ ಹಳ್ಳಿಗಳಿಗೆ ಅಥವಾ ಪಟ್ಟಣಗಳಿಗೆ ಸಾಮೂಹಿಕವಾಗಿ ವಲಸೆ ಹೋಗಬೇಡಿ ಎಂದು ವಲಸೆ ಕಾರ್ಮಿಕರಿಗೆ ಭಾನುವಾರ ಮನವಿ ಮಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ವಾಸ್ತವ್ಯಕ್ಕಾಗಿ ಬಾಡಿಗೆ ಪಾವತಿ ಮಾಡಲು ಸಾಧ್ಯವಿಲ್ಲದ ಕಾರ್ಮಿಕರ ಬಾಡಿಗೆಯನ್ನು ದೆಹಲಿ ಸರ್ಕಾರವೇ ಪಾವತಿ ಮಾಡುವುದು ಎಂದು ಪ್ರಕಟಿಸಿದರು.
ಮಾರಕ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವ ಸಲುವಾಗಿ ಎಲ್ಲಿದ್ದೀರೋ ಅಲ್ಲಿಯೇ ವಾಸ್ತವ್ಯ ಹೂಡಿ ಎಂದು ಜನರಿಗೆ ಮನವಿ ಮಾಡಿದ ಅವರು, ಬಾಡಿಗೆ ಪಾವತಿ ಮಾಡುವಂತೆ ಬಾಡಿಗೆದಾರರಿಗೆ ಒತ್ತಡ ಹಾಕಬೇಡಿ ಎಂದು ಭೂಮಾಲೀಕರನ್ನು ಕೋರಿದರು. ಬಾಡಿಗೆದಾರರು ಒಂದೆಡರು ತಿಂಗಳುಗಳಿಗಿಂತ ಹೆಚ್ಚಿನ ಬಾಡಿಗೆ ಪಾವತಿ ಮಾಡಲು ಅಸಮರ್ಥರಾಗಿದ್ದರೆ ಸರ್ಕಾರವೇ ಅವರ ಪರವಾಗಿ ಬಾಡಿಗೆ ಪಾವತಿ ಮಾಡಿದೆ ಎಂದು ಹೇಳಿದರು. ಬಾಡಿಗೆದಾರರ ಮೇಲೆ ಒತ್ತಡ ಹಾಕುವ ಮಾಲೀಕರ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಅವರು ನುಡಿದರು.
ನಿಮ್ಹಾನ್ಸ್ ನ ನೂತನ ಹೆಲ್ಪ್ ಲೈನ್
ಈ ಮಧ್ಯೆ, ಸರ್ಕಾರವು ರಾಷ್ಟ್ರವ್ಯಾಪಿ ದಿಗ್ಬಂಧನದ ಹಿನ್ನೆಲೆಯಲ್ಲಿ ಯಾವುದೇ ಮಾನಸಿಕ ಸಮಸ್ಯೆಗಳನ್ನು ಎದುರಿಸುವ ಜನರಿಗಾಗಿ ಹೊಸ ಹೆಲ್ಪ್ ಲೈನ್ ಸಂಖ್ಯೆಯನ್ನು ಆರಂಭಿಸಿದೆ. ಅಂತಹ ಸಮಸ್ಯೆ ಎದುರಿಸುವವರು -೦೮೦೪೬೧೧೦೦೦೭- ಸಂಖ್ಯೆಗೆ ಕರೆ ಮಾಡಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಬೆಂಗಳೂರಿನ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ರಾಷ್ಟ್ರೀಯ ಸಂಸ್ಥೆಯು (ನಿಮ್ಹಾನ್ಸ್) ಈ ಸಂಖ್ಯೆಯನ್ನು ಆರಂಭಿಸಿದೆ ಎಂದು ಸಚಿವಾಲಯ ಹೇಳಿತು.
No comments:
Post a Comment