My Blog List

Wednesday, April 1, 2020

ತಬ್ಲಿಘಿ ಜಮಾತ್ : ಸಹಸ್ರಾರು ಪ್ರಯಾಣಿಕರ ಮಾಹಿತಿಗಾಗಿ ರೈಲ್ವೇ ಹರಸಾಹಸ

ತಬ್ಲಿಘಿ ಜಮಾತ್ : ಸಹಸ್ರಾರು ಪ್ರಯಾಣಿಕರ ಮಾಹಿತಿಗಾಗಿ ರೈಲ್ವೇ  ಹರಸಾಹಸ
ನವದೆಹಲಿ: ಬಹುತೇಕ ಕೊರೋನಾವೈರಸ್ ಸೋಂಕು ತಗುಲಿದ ತಬ್ಲಿಘಿ ಜಮಾತ್ ಸಮಾವೇಶ ಪ್ರತಿನಿಧಿಗಳ ಜೊತೆ ಐದು ರೈಲುಗಳಲ್ಲಿ ಪಯಣಿಸಿದ್ದ ಸಹಸ್ರಾರು ಮಂದಿ ಪ್ರಯಾಣಿಕರ ಬಗೆಗಿನ ವಿವರಗಳನ್ನು ಒದಗಿಸಲು ಇದೀಗ ರೈಲ್ವೇ ಇಲಾಖೆ ಹರಸಾಹಸ ನಡೆಸುತ್ತಿದೆ.

ಎಲ್ಲ ರೈಲುಗಳು ಮಾರ್ಚ್ ೧೩-೧೯ರ ನಡುವಣ ಅವಧಿಯಲ್ಲಿ ದೆಹಲಿಯಿಂದ ಹೊರಟಿದ್ದವು. ಪೈಕಿ ದುರೊಂತೋ ಎಕ್ಸ್ ಪ್ರೆಸ್ ಆಂಧ್ರಪ್ರದೇಶದ ಗುಂಟೂರಿಗೆ, ಗ್ರ್ಯಾಂಡ್ ಟ್ರಂಕ್ ಎಕ್ಸ್ ಪ್ರೆಸ್ ಚೆನ್ನೈಗೆ, ತಮಿಳುನಾಡು ಎಕ್ಸ್ ಪ್ರೆಸ್ ಚೆನ್ನೈಗೆ ಸಂಚರಿಸಿದ್ದವು. ಇದಲ್ಲದೆ ನವದೆಹಲಿ-ರಾಂಚಿ ರಾಜಧಾನಿ ಎಕ್ಸ್ ಪ್ರೆಸ್ ರಾಂಚಿಗೆ ಮತ್ತು ಎಪಿ ಸಂಪರ್ಕ ಕ್ರಾಂತ್ರಿ ಎಕ್ಸ್ಪ್ರೆಸ್ ತೆಲಂಗಾಣ/ಆಂಧ್ರಪ್ರದೇಶಕ್ಕೆ ಸಂಚರಿಸಿದ್ದವು.

ತಬ್ಲಿಘಿ ಸಮಾವೇಶದ ಪ್ರತಿನಿಧಿಗಳ ಜೊತೆ ಸಂಪರ್ಕಕ್ಕೆ ಬಂದಿರಬಹುದಾದ ಪ್ರಯಾಣಿಕರ ನೈಜ ಸಂಖ್ಯೆಯ ಬಗ್ಗೆ ರೈಲ್ವೇ ಬಳಿ ಯಾವುದೇ ಖಚಿತ ಮಾಹಿತಿ ಇಲ್ಲವಾದರೂ ಪ್ರತಿಯೊಂದು ರೈಲು ಕೂಡಾ ೧೦೦೦-೧೨೦೦ ಪ್ರಯಾಣಿಕರನ್ನು ಮತ್ತು ಇತರ ಸಿಬ್ಬಂದಿಯನ್ನು ಒಯ್ದಿದ್ದು ಅವರೆಲ್ಲರೂ ಸೋಂಕು ತಗುಲು/ ತಗುಲಿರುವ ಅಪಾಯವಿದೆ ಎಂದು ರೈಲ್ವೇ ಮೂಲಗಳು  2020 ಏಪ್ರಿಲ್ 01ರ ಬುಧವಾರ ಹೇಳಿವೆ.

ರೈಲ್ವೇಯು ಜಿಲ್ಲಾಧಿಕಾರಿಗಳಿಗೆ ಪ್ರಯಾಣಿಕರ ಪಟ್ಟಿಗಳನ್ನು ಒದಗಿಸಲಿದೆ. ಅವುಗಳನ್ನು ಸಮಾವೇಶದಲ್ಲಿ ಪಾಲ್ಗೊಂಡಿದ್ದವರ ಪಟ್ಟಿಗಳ ಜೊತೆ ತಾಳೆ ನೋಡಲಾಗುವುದು. ಇದರಿಂದ ಅವರ ಸಂಪರ್ಕದ ಮಾಹಿತಿಗಳನ್ನು ಪತ್ತೆ ಹಚ್ಚಬಹುದು ಎಂದು ರಾಜ್ಯ ಅಧಿಕಾರಿಗಳು ಭಾವಿಸಿದ್ದಾರೆ.

ಸಂಪರ್ಕ ಪತ್ತೆಗೆ ಯತ್ನಿಸಲಾಗುತ್ತಿರುವ ಪ್ರಕರಣಗಳ ಪೈಕಿ ಒಂದು ಪ್ರಕರಣವು ಮಾರ್ಚ್ ೧೩ರಂದು ಸಮಾವೇಶ ಮುಗಿದ ಬಳಿಕ ಕರೀಂನಗರಕ್ಕೆ ವಾಪಸಾದ ಎಪಿ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಣಿಸಿದ್ದ ೧೦ ಇಂಡೋನೇಷಿಯಾ ಪ್ರಜೆಗಳ ಪ್ರಕರಣವಾಗಿದೆ. ೧೦ ಮಂದಿಗೆ ಬಳಿಕ ಕೊರೋನಾವೈರಸ್ ಸೋಂಕು ತಗುಲಿದ್ದು ಖಚಿತವಾಗಿದೆ.

ನವದೆಹಲಿ-ರಾಂಚಿ ರಾಜಧಾನಿ ಎಕ್ಸ್ಪ್ರೆಸ್ ರೈಲಿನ ಬಿ೧ ಬೋಗಿಯಲ್ಲಿ ಪಯಣಿಸಿದ್ದ ಮಲೇಶ್ಯಾದ ಮಹಿಳೆಗೆ ಕೊರೋನಾವೈರಸ್ ಸೋಂಕು ತಗುಲಿದ್ದು ಖಚಿತವಾಗಿದ್ದು, ಈಕೆ ನಿಜಾಮುದ್ದೀನ್ ತಬ್ಲಿಘಿ ಸಮೂಹದ ಭಾಗವಾಗಿದ್ದಳು ಎಂದು ನಂಬಲಾಗಿದೆ. ಬೋಗಿಯಲ್ಲಿ ಸುಮಾರು ೬೦ ಪ್ರಯಾಣಿಕರಿದ್ದರು. ಈಗ ಅವರೆಲ್ಲರ ಮೇಲೂ ನಿಗಾ ಇಡಲಾಗಿದ್ದು ಜಿಲ್ಲಾಧಿಕಾರಿಗಳು ಅವರ ಚಲನವಲನಗಳ ವಿವರ ಪತ್ತೆಗಾಗಿ ತೀವ್ರ ಯತ್ನ ನಡೆಸುತ್ತಿದ್ದಾರೆ.

ಮಾರ್ಚ್ ೧೬ರಂದು ಇತರ ೨೩ ಮಂದಿಯೊಂದಿಗೆ ರೈಲಿನಲ್ಲಿ ಪಯಣಿಸಿದ್ದ ಮಹಿಳೆಗೆ ಕೊರೋನಾವೈರಸ್ ಸೋಂಕು ತಗುಲಿದ್ದು ಪರೀಕ್ಷೆಯಿಂದ ಖಚಿತವಾಗಿದೆ. ಈಕೆಯದ್ದು ಜಾರ್ಖಂಡಿನಲ್ಲಿ ಕೋವಿಡ್-೧೯ ದೃಢಪಟ್ಟ ಮೊದಲ ಪ್ರಕರಣವಾಗಿದೆ.

ರಾಜ್ಯಗಳಿಂದ ಲಭಿಸಿರುವ ಮಾಹಿತಿಗಳ ಪ್ರಕಾರ, ಸಮಾವೇಶದಲ್ಲಿ ಪಾಲ್ಗೊಂಡು ಬಳಿಕ ಸೋಂಕು ದೃಢಪಟ್ಟಿದ್ದ ಇಬ್ಬರು ಮಾರ್ಚ್ ೧೮ರಂದು ದುರೊಂತೋ ಎಕ್ಸ್ ಪ್ರೆಸ್ ರೈಲಿನ ಎಸ್೮ ಬೋಗಿಯಲ್ಲಿ ಇತರ ಇಬ್ಬರು ಸಂಗಡಿಗರೊಂದಿಗೆ ಪಯಣಿಸಿದ್ದರು. ಅವರ ಪೈಕಿ ಇಬ್ಬರು ಗ್ರ್ಯಾಂಡ್ ಟ್ರಂಕ್ ಎಕ್ಸ್ ಪ್ರೆಸ್ ರೈಲಿನ ಎಸ್ ಬೋಗಿಯಲ್ಲಿ ಇಬ್ಬರು ಅಪ್ರಾಪ್ತರ ಜೊತೆಗೆ ಪಯಣಿಸಿದ್ದರು. ಬೋಗಿಯಲ್ಲಿ ಇವರೊಂದಿಗಿದ್ದ ಇತರ ಕೆಲವರು ತಮಿಳುನಾಡು ಎಕ್ಸ್ ಪ್ರೆಸ್ ರೈಲನ್ನು ಏರಿದ್ದರು.

ಹೀಗೆ ವ್ಯಕ್ತಿಗಳ ಜೊತೆಗೆ ಯಾರು ಯಾರು ಸಂಪರ್ಕದಲ್ಲಿದ್ದರು ಎಂಬುದನ್ನು ಪತ್ತೆ ಹಚ್ಚುವುದು ರೈಲ್ವೇ ಮತ್ತು ಜಿಲ್ಲಾ ಅಧಿಕಾರಿಗಳ ಪಾಲಿಗೆಭಗೀರಥಸಾಹಸವಾಗಿದೆ. ಏಕೆಂದರೆ ನಿರ್ಬಂಧಗಳ ಹೇರಿಕೆಗಿಂತ ಮೊದಲಿನ ಸಮಯದಲ್ಲಿ ಅರೆಲ್ಲರೂ ಅತ್ಯಂತ ಮುಕ್ತವಾಗಿ ಸಂಚರಿಸಿದ್ದರು.
ನವದೆಹಲಿಯ ಹಜರತ್ ನಿಜಾಮುದ್ದೀನ್ ನಿಲ್ದಾಣ ಮತ್ತು ನವದೆಹಲಿ ರೈಲ್ವೇ ನಿಲ್ದಾಣಗಳು ದೇಶದಲ್ಲಿನ ಅತ್ಯಂತ ಜನ ನಿಬಿಡ ರೈಲ್ವೇ ನಿಲ್ದಾಣಗಳ ಸಾಲಿಗೆ ಸೇರಿವೆ.

ದೆಹಲಿಯ ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಪ್ರತಿದಿನ ೫೬ ದೂರಗಾಮೀ ರೈಲುಗಳು ಹೊರಡುತ್ತವೆ ಮತ್ತು ಇತರ ಕಡೆಗಳಿಂದ ಬರುವ ೧೩೦ ರೈಲುಗಳು ಇಲ್ಲಿ ನಿಲ್ಲುತ್ತವೆ. ೬೨ ರೈಲುಗಳು ಇಲ್ಲಿಂದಲೇ ಹೊರಟರೆ ೭೬ ರೈಲುಗಳು ನವದೆಹಲಿ ರೈಲ್ವೇ ನಿಲ್ದಾಣದಲ್ಲಿ ಪ್ರತಿದಿನ ತಂಗುತ್ತವೆ.
ಹಜರತ್ ನಿಜಾಮುದ್ದೀನ್ ನಿಲ್ದಾಣಕ್ಕೆ ಪ್ರತಿದಿನ ಎರಡು ಲಕ್ಷ ಮಂದಿ ಬಂದರೆ ನವದೆಹಲಿ ರೈಲ್ವೇ ನಿಲ್ದಾಣಕ್ಕೆ ಪ್ರತಿದಿನ ಅಂದಾಜು ಲಕ್ಷ ಮಂದಿ ಆಗಮಿಸುತ್ತಾರೆ.

No comments:

Advertisement