ಗ್ರಾಹಕರ ಸುಖ-ದುಃಖ

My Blog List

Thursday, April 30, 2020

ಹೈದರಾಬಾದ್: ವೇತನಕ್ಕಾಗಿ ವಲಸೆ ಕಾರ್ಮಿಕರ ಪ್ರತಿಭಟನೆ

ಹೈದರಾಬಾದ್:  ವೇತನಕ್ಕಾಗಿ ವಲಸೆ ಕಾರ್ಮಿಕರ ಪ್ರತಿಭಟನೆ
ಹೈದರಾಬಾದ್: ಪದೇ ಪದೇ ವಿನಂತಿಸಿದರೂ ವೇತನ ಪಾವತಿದಿದ್ದುದನ್ನು ಪ್ರತಿಭಟಿಸಿ, ಸುಮಾರು ೧೬೦೦ ವಲಸೆ ಕಾರ್ಮಿಕರು ದಾಂಧಲೆ ನಡೆಸಿದ್ದಲ್ಲದೆ ಪೊಲೀಸರ ಮೇಲೆ ಲಾಠಿ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ ಘಟನೆ ಹೈದರಾಬಾದ್ ಹೊರವಲಯದ ಸಂಗರೆಡ್ಡಿ ಜಿಲ್ಲೆಯ ಕಂಡಿಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್‌ನಲ್ಲಿ  2020  ಏಪ್ರಿಲ್ 29ರ ಬುಧವಾರ ಮಧ್ಯಾಹ್ನ ಘಟಿಸಿತು.
ಹಲ್ಲೆಯಲ್ಲಿ ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಸಂಗಪ್ಪ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪೊಲೀಸ್ ವಾಹನ ಭಾಗಶಃ ಹಾನಿಯಾಯಿತು.

ಘಟನೆಯ ಮಾಹಿತಿ ದೊರೆತ ಸಂಗರೆಡ್ಡಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್ ಚಂದ್ರಶೇಖರ್ ರೆಡ್ಡಿ ಮತ್ತು ಡಿಎಸ್ಪಿ ಶ್ರೀಧರ್ ರೆಡ್ಡಿ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸ್ ಪಡೆಯು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿತು.

ಪೊಲೀಸ್ ವರಿಷ್ಟಾಧಿಕಾರಿಯವರು ಪ್ರತಿಭಟನಕಾರರನ್ನು ಸಮಾಧಾನಪಡಿಸಿ, ಅವರ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವ ಭರವಸೆ ನೀಡಿ, ಕಾರ್ಮಿಕರ ನಿಯೋಗವನ್ನು ಜಿಲ್ಲಾಧಿಕಾರಿ ಎಂ ಹನುಮಂತ ರಾವ್ ಅವರ ಬಳಿ ಮಾತುಕತೆಗಾಗಿ ಕರೆದೊಯ್ದರು.

ಕಳೆದ ಎರಡು ತಿಂಗಳಿನಿಂದ ತಮ್ಮ ಕಂಪನಿ ತಮಗೆ ವೇತನ ನೀಡುತ್ತಿಲ್ಲ ಎಂದು ಕಾರ್ಮಿಕರು ದೂರಿದರು. ಬಾಕಿ ಇರುವ ವೇತನವನ್ನು ಗುರುವಾರ ಸಂಜೆಯೊಳಗೆ ಕಾರ್ಮಿಕರ ಖಾತೆಗಳಿಗೆ ಪಾವತಿ ಮಾಡುವಂತೆ ಜಿಲ್ಲಾಧಿಕಾರಿ  ಕಂಪೆನಿಯ ಪ್ರತಿನಿಧಿಗಳಿಗೆ ನಿರ್ದೇಶನ ನೀಡಿದರು.

ಲಭ್ಯವಿರುವ ಸಾಮಗ್ರಿಗಳೊಂದಿಗೆ ಕೆಲಸವನ್ನು ಪ್ರಾರಂಬಿಸುವಂತೆ, ಭೌತಿಕ ದೂರ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಗಮನಿಸುವಂತೆ ಮತ್ತು ಕಾರ್ಮಿPರಿಗೆ ಮುಖಗವಸು, ಸ್ಯಾನಿಟೈಸರ್ಗಳನ್ನು ಪೂರೈಸುವಂತೆಯೂ ಅವರು ಕಂಪೆನಿಗೆ ಸಲಹೆ ನೀಡಿದರು.

ದೀರ್ಘಕಾಲದವರೆಗೆ ಕೆಲಸವಿಲ್ಲದೆ ಕ್ಯಾಂಪಸ್‌ನಲ್ಲಿ ಹಿಡಿದಿಟ್ಟುಕೊಂಡಿದ್ದರಿಂದ ಕಾರ್ಮಿಕರು ನಿರುತ್ಸಾಹಗೊಂಡಿದ್ದಾರೆ ಎಂದು ಕಂಪೆನಿ ಪ್ರತಿನಿಧಿ ಹೇಳಿದರು. ಅವರನ್ನು ತೊಡಗಿಸಿಕೊಳ್ಳಲು ಕೆಲಸಗಳು ಸಣ್ಣ ರೀತಿಯಲ್ಲಿ ಪ್ರಾರಂಭವಾಗಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಸುಮಾರು ಆರು ತಿಂಗಳ ಹಿಂದೆ ಐಐಟಿ ಕ್ಯಾಂಪಸ್‌ನಲ್ಲಿ ಕಟ್ಟಡಗಳ ನಿರ್ಮಾಣದ ಕೆಲಸಕ್ಕಾಗಿ ಬಿಹಾರ ಮತ್ತು ಜಾರ್ಖಂಡ್‌ನ ಹೆಚ್ಚಿನ ಕಾರ್ಮಿಕರನ್ನು ನಿರ್ಮಾಣ ಸಂಸ್ಥೆ ಲಾರ್ಸೆನ್ ಮತ್ತು ಟೂಬ್ರೋ ಕಂಪೆನಿಯವರು ಸ್ಥಳಕ್ಕೆ ಕರೆತಂದಿದ್ದರು.

ರಾಷ್ಟ್ರವ್ಯಾಪಿ ದಿಗ್ಬಂಧನದ ಬಳಿಕ, ಕಾರ್ಮಿಕರನ್ನು ನಿರ್ಮಾಣ ಸ್ಥಳದಲ್ಲಿಯೇ ಇರಿಸಲಾಗಿತ್ತು. ಕಳೆದ ಎರಡು ತಿಂಗಳಿನಿಂದ ಕಂಪನಿಯು ಅವರಿಗೆ ವೇತನ ನೀಡುತ್ತಿಲ್ಲ ಎಂದು ಕಾರ್ಮಿಕರು ಅಸಮಾಧಾನಗೊಂಡಿದ್ದರು.

ತಮ್ಮ ಮಕ್ಕಳಿಗೆ ಆಹಾರ ನೀಡಲು ಕೂಡಾ ಅಗತ್ಯ ವಸ್ತುಗಳು ಇಲ್ಲದ್ದರಿಂದ ಮತ್ತು ವೇತನವೂ ಇಲ್ಲದ್ದರಿಂದ ಕೆಲವು ಕಾರ್ಮಿಕರು, ಬುಧವಾರ ತಮ್ಮ ಹುಟ್ಟೂರುಗಳಿಗೆ ತೆರಳಲು ಕ್ಯಾಂಪಸ್ಸಿನಿಂದ ಹೊರಟರು. ಆದರೆ, ಲಾಕ್‌ಡೌನ್ ಜಾರಿಯಲ್ಲಿದೆ ಎಂದು ಹೇಳಿ ಸಂಗರೆಡ್ಡಿ ಪೊಲೀಸರು ಕ್ಯಾಂಪಸ್‌ನಿಂದ ಹೊರಗೆ ಬರದಂತೆ ಅವರನ್ನು ತಡೆದರು.

ಆಕ್ರೋಶಗೊಂಡ ಕಾರ್ಮಿಕರು ಪೊಲೀಸರೊಂದಿಗೆ ವಾದಕ್ಕಿಳಿದರು ಮತ್ತು ಎಷ್ಟು ಸಮಯದವರೆಗೆ ಅನಿಶ್ಚಿತ ಪರಿಸ್ಥಿತಿಗಳನ್ನು ಸಹಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿ ತಮಗೆ ಹುಟ್ಟೂರಿಗೆ ಹಿಂತಿರುಗಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು. ವಾಗ್ವಾದ ತೀವ್ರಗೊಂಡು ಸಿಟ್ಟಿಗೆದ್ದ ಕಾರ್ಮಿಕರು ಪೊಲೀಸರ ಮೇಲೆ ಹಲ್ಲೆಗಿಳಿದರು ಎಂದು ವರದಿ ತಿಳಿಸಿತು.

No comments:

Advertisement