Monday, April 13, 2020

ಮಂಗಳವಾರ ಬೆಳಗ್ಗೆ ೧೦ ಗಂಟೆಗೆ ಪ್ರಧಾನಿ ಮೋದಿ ಭಾಷಣ

ಮಂಗಳವಾರ ಬೆಳಗ್ಗೆ ೧೦ ಗಂಟೆಗೆ ಪ್ರಧಾನಿ ಮೋದಿ ಭಾಷಣ
ಲಾಕ್‌ಡೌನ್ ಏಪ್ರಿಲ್ ಅಂತ್ಯದವರೆಗೆ ವಿಸ್ತರಣೆ ಸಾಧ್ಯತೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2020 ಏಪ್ರಿಲ್ 14ರ ಮಂಗಳವಾರ ಬೆಳಗ್ಗೆ ೧೦ ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಕೊರೋನಾವೈರಸ್ ಸೋಂಕು ಹರಡುವಿಕೆಯನ್ನು ತಡೆಯಲು ರಾಷ್ಟ್ರವ್ಯಾಪಿ ದಿಗ್ಬಂಧನದ ವಿಸ್ತರಣೆಯನ್ನು ಪ್ರಕಟಿಸುವ ಸಾಧ್ಯತೆ ಇದೆ. ಮಾರ್ಚ್ ೨೪ರಲ್ಲಿ ವಿಧಿಸಲಾಗಿದ್ದ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನವು ಮಂಗಳವಾರ ಮಧ್ಯರಾತ್ರಿಗೆ ಮುಕ್ತಾಯವಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ೨೦೨೦ ಏಪ್ರಿಲ್ ೧೪ರಂದು ಬೆಳಗ್ಗೆ ೧೦ ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯವು 2020 ಏಪ್ರಿಲ್ 13ರ ಸೋಮವಾರ ಟ್ವೀಟ್ ಮಾಡಿತು.

ಮಂಗಳವಾರದ ಭಾಷಣಕ್ಕೆ ಮುನ್ನ ಈದಿನ ಪ್ರಧಾನಿಯವರು ವಿವಿಧ ಇಲಾಖಾ ಮುಖ್ಯಸ್ಥರ ಜೊತೆಗೆ ಅಂತಿಮ ಹಂತದ ಸಮಾಲೋಚನೆಗಳನ್ನು ನಡೆಸಿದ್ದರು.

ಕಳೆದ ತಿಂಗಳಲ್ಲಿ ಪ್ರಧಾನಿ ಮೋದಿಯವರು ಮಾರ್ಚ್ ೧೯ ಮತ್ತು ಮಾರ್ಚ್ ೨೪ - ಹೀಗೆ ಎರಡು ಬಾರಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದರು.

ಮಾರ್ಚ್ ೧೯ರಂದು ಪ್ರಧಾನಿಯವರು ಕೊರೋನಾವೈರಸ್ ವಿರುದ್ಧ ಹೋರಾಟಕ್ಕಾಗಿ ನಿರ್ಧಾರ ಮತ್ತು ಸಂಯಮ ವಹಿಸಲು ಕರೆ ನೀಡಿದ್ದರೆ. ಮಾರ್ಚ್ ೨೨ರ ಭಾನುವಾರಜನತಾ ಕರ್ಫ್ಯೂ ಆಚರಿಸುವಂತೆಯೂ ಅವರು ಕರೆ ಕೊಟ್ಟಿದ್ದರು. ಮಾರ್ಚ್ ೨೪ರಂದು ಮೋದಿಯವರು ಮಾರಕ ವೈರಸ್ ಹರಡದಂತೆ ತಡೆಯುವ ಸಲುವಾಗಿ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಘೋಷಿಸಿದ್ದರು. ಅದಕ್ಕೂ ಮುನ್ನಜನತಾ ಕರ್ಫ್ಯೂ ದಿನದಂತೆ ಸಂಜೆ ಚಪ್ಪಾಳೆ, ಶಂಖನಾದಗಳ ಮೂಲಕ ಕೋರೋನಾವೈರಸ್ ವಿರುದ್ಧ ಹೋರಾಡುತ್ತಿರುವ ಮುಂಚೂಣಿ ಹೋರಾಟಗಾರರಾದ ವೈದ್ಯಕೀಯ ಸಿಬ್ಬಂದಿ ಮತ್ತಿತರರಿಗೆ ರಾಷ್ಟ್ರದ ಕೃತಜ್ಞತೆ ಅರ್ಪಿಸುವಂತೆ ಸೂಚಿಸಿದ್ದರು.

ಏಪ್ರಿಲ್ ೩ರಂದು ನೀಡಿದ ವಿಡಿಯೋ ಸಂದೇಶದಲ್ಲಿ ಪ್ರಧಾನಿ ಮೋದಿಯವರು ಏಪ್ರಿಲ್ ೫ರಂದು ರಾತ್ರಿ ೯ಗಂಟೆಗೆ ಸರಿಯಾಗಿ ನಿಮಿಷಗಳ ಕಾಲ ಮನೆಗಳಲ್ಲಿನ ಎಲ್ಲ ವಿದ್ಯುತ್ ದೀಪಗಳನ್ನು ಆರಿಸಿ ದೀಪ, ಹಣತೆ, ಮೋಂಬತ್ತಿ, ಟಾರ್ಚ್ ಅಥವಾ ಮೊಬೈಲ್ ಫೋನ್ ಫ್ಲಾಶ್ ಲೈಟುಗಳನ್ನು ಬೆಳಗುವ ಮೂಲಕ ಕೊರೋನಾವೈರಸ್ಸನ್ನು ಪರಾಭವಗೊಳಿಸುವಲ್ಲಿನ ರಾಷ್ಟ್ರದ ಒಗ್ಗಟ್ಟಿನ ಸಂಕಲ್ಪವನ್ನು ಪ್ರದರ್ಶಿಸುವಂತೆ ಕರೆ ನೀಡಿದ್ದರು.

ಕೊರೋನಾವೈರಸ್ ಸೋಂಕು ಪ್ರಸಾರದ ತೀವ್ರತೆಗೆ ಅನುಗುಣವಾಗಿ ರಾಷ್ಟ್ರವನ್ನು ಕೆಂಪು, ಹಳದಿ ಮತ್ತು ಹಸಿರು ವಲಯಗಳಾಗಿ ಗುರುತಿಸಿ ಅದಕ್ಕೆ ಅನುಗುಣವಾಗಿ ದಿಗ್ಬಂಧನ ತೆರವುಗೊಳಿಸುವ ಬಗ್ಗೆ ಪ್ರಧಾನ ಮಂತ್ರಿಗಳ ಕಾರ್‍ಯಾಲಯ ಪರಿಶೀಲಿಸುತ್ತಿದೆ ಎಂಬ ಸುಳಿವು ಇದೀಗ ಲಭಿಸಿದೆ.

ಹಳದಿ ಮತ್ತು ಹಸಿರು ವಲಯಗಳ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಕೆಲವು ವಿನಾಯ್ತಿಗಳು ಲಭಿಸಬಹುದು ಎಂಬ ನಿರೀಕ್ಷೆಗಳಿವೆ. ಇದಕ್ಕೂ ಹೆಚ್ಚಾಗಿ, ಹಾಲಿ ದಿಗ್ಬಂಧನ ಮುಂದುವರೆಯಬೇಕಾಗಿ ಬಂದರೆ ಕೃಷಿ ವಲಯಕ್ಕೆ ಹೆಚ್ಚಿನ ನಿರಾಳತೆ ಒದಗಿಸುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಕನಿಷ್ಠ ೧೦ ಮುಖ್ಯಮಂತ್ರಿಗಳು ಹಾಲಿ ದಿಗ್ಬಂಧನವನ್ನು ವಿಸ್ತರಣೆ ಮಾಡುವಂತೆ ಪ್ರಧಾನಿಯವರ ಜೊತೆಗೆ ಶನಿವಾರ ನಡೆದ ವಿಡಿಯೋ ಸಂವಹನ ಕಾಲದಲ್ಲಿಪ್ರಬಲ ಸಲಹೆ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ. ’ಕೋವಿಡ್-೧೯ ದಿಗ್ಬಂಧನದ ಬಳಿಕ ಆರ್ಥಿಕ ಚೇತರಿಕೆಯ ಖಾತರಿಗಾಗಿ ಭಾರತದ ಸಮಗ್ರ ದೇಶೀಯ ಉತ್ಪಾದನೆಯ (ಜಿಡಿಪಿ) ಕನಿಷ್ಠ ಶೇಕಡಾ ೫ರಿಂದ ೬ರಷ್ಟು ವಿತ್ತೀಯ ಪ್ಯಾಕೇಜ್ ಪ್ರಕಟಿಸುವ ದಿಟ್ಟ ನಿರ್ಧಾರ ಕೈಗೊಳ್ಳುವಂತೆ ವಿರೋಧಿ ಕಾಂಗ್ರೆಸ್ ಪಕ್ಷವು ಮೋದಿಯವರನ್ನು ಒತ್ತಾಯಿಸಿತ್ತು.

ರಾಜ್ಯಗಳಿಗೆ ಪಾವತಿ ಮಾಡಬೇಕಾದ ಎಲ್ಲ ಬಾಕಿಗಳನ್ನೂ ಪಾವತಿ ಮಾಡುವ ಮೂಲಕ ರಾಜ್ಯಗಳಿಗೆ ಕೊರೋನಾವೈರಸ್ ಸೋಂಕಿನ ವಿರುದ್ಧ ದೃಢವಾಗಿ ಹೋರಾಟ ಮಾಡಲು ನೆರವಾಗಬೇಕು ಎಂದೂ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಪ್ರತಿ ರಾಜ್ಯಕ್ಕೂ ವಿಶೇಷ ಆರ್ಥಿಕ ಪ್ಯಾಕೇಜ್‌ಗಳನ್ನು ಪ್ರಕಟಿಸುವಂತೆಯೂ ಕಾಂಗ್ರೆಸ್ ಆಗ್ರಹಿಸಿತ್ತು.

ಸರ್ಕಾರವು ಪಿಎಂ ಕೇರ್‍ಸ್ ನಿಧಿಗೆ ದೇಣಿಗೆ ನೀಡಲು ಅನುಮತಿ ನೀಡಿರುವಂತೆಯೇ ವಿವಿಧ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಲು ಸಿಎಸ್ ಆರ್ ಮತ್ತು ಕೈಗಾರಿಕೆಗಳಿಗೆ ಅನುಮತಿ ನೀಡಬೇಕು. ಹೀಗೆ ಮಾಡದೇ ಇದ್ದಲ್ಲಿ ಅದು ಅನ್ಯಾಯ ಹಾಗೂ ರಾಜ್ಯಗಳ ಬಗೆಗಿನ ತಾರತಮ್ಯವಾಗುತ್ತದೆ ಎಂದು ಹಿರಿಯ ಕಾಂಗ್ರೆಸ್ ವಕ್ತಾರ ಆನಂದ ಶರ್ಮ ಹೇಳಿದ್ದರು.

ಈಗಿನದ್ದು ಅಸಾಧಾರಣ ಸಮಯ ಮತ್ತು ಸಮಯದಲ್ಲಿ ಅಸಾಧಾರಣ ಕ್ರಮಗಳು ಬೇಕಾಗುತ್ತವೆ. ಆದ್ದರಿಂದ ಪ್ರಧಾನಿಯವರು ದಿಗ್ಬಂಧನ ಬಳಿಕದ ಆರ್ಥಿಕತೆಯ ವಿವಿಧ ವಲಯಗಳ ಚೇತರಿಕೆ ಸಾಧ್ಯವಾಗುವಂತೆ ಆರ್ಥಿಕ ಪ್ಯಾಕೇಜುಗಳನ್ನು ಘೋಷಿಸುವ ದಿಟ್ಟತನವನ್ನು ತೋರಬೇಕು ಎಂದು ಶರ್ಮ ಅವರು ವಿಡಿಯೋ ಮೂಲಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಆರ್ಥಿಕ ಪ್ಯಾಕೇಜುಗಳು ಬಾರತದ ಜಿಡಿಪಿಯು ಕನಿಷ್ಠ ಶೇಕಡಾ ೫ರಿಂದ ೬ರಷ್ಟು ಇರುತ್ತದೆ ಎಂಬುದು ನಮ್ಮ ನಿರೀಕ್ಷೆ ಎಂದು ಅವರು ಹೇಳಿದರು. ಇಂಗ್ಲೆಂಡ್, ಫ್ರಾನ್ಸ್ ಮತ್ತು ಜರ್ಮನಿಗಳಂತಹ ರಾಷ್ಟ್ರಗಳು ತಮ್ಮ ಜಿಡಿಪಿಯ ಶೇಕಡಾ ೧೫ರಷ್ಟು ಆರ್ಥಿಕ ಪ್ಯಾಕೇಜ್ ಘೋಷಿಸಿವೆ. ಅಮೆರಿಕ ತನ್ನ ಜಿಡಿಪಿಯ ಶೇಕಡಾ ೧೦ರಷ್ಟು ಆರ್ಥಿಕ ಪ್ಯಾಕೇಜನ್ನು ಘೋಷಿಸಿದೆ ಎಂದು ಅವರು ಉಲ್ಲೇಖಿಸಿದ್ದರು.

No comments:

Advertisement