Friday, April 24, 2020

ಗುಜರಾತ್, ತೆಲಂಗಾಣ, ತಮಿಳುನಾಡಿಗೂ ಕೇಂದ್ರದ ಕೊರೋನಾ ತಂಡ

ಗುಜರಾತ್, ತೆಲಂಗಾಣ, ತಮಿಳುನಾಡಿಗೂ  ಕೇಂದ್ರದ  ಕೊರೋನಾ ತಂಡ
ನವದೆಹಲಿ: ಪಶ್ಚಿಮ ಬಂಗಾಳದ ಜೊತೆಗಿನ ತೀವ್ರ ವಿವಾದದ ನಡುವೆಯೇ, ಕೋವಿಡ್-೧೯ ಸೋಂಕು ಪ್ರಸಾರದ ತಡೆಗಾಗಿ ಜಾರಿಗೊಳಿಸಲಾಗಿರುವ ರಾಷ್ಟ್ರವ್ಯಾಪಿ ದಿಗ್ಬಂಧನ ಉಲ್ಲಂಘನೆ ಆರೋಪಗಳ ಬಗ್ಗೆ ತಪಾಸಣೆ ನಡೆಸುವ ಸಲುವಾಗಿ ಇನ್ನೂ ಮೂರು ರಾಜ್ಯಗಳಿಗೆ ಕೇಂದ್ರೀಯ ತಂಡಗಳನ್ನು ಕಳುಹಿಸಲು ಕೇಂದ್ರ ಸರ್ಕಾರ  2020 ಏಪ್ರಿಲ್ 24ರ ಶುಕ್ರವಾರ ನಿರ್ಧರಿಸಿತು.

ಗುಜರಾತ್, ತೆಲಂಗಾಣ ಮತ್ತು ತಮಿಳುನಾಡು ಮೂರು ರಾಜ್ಯಗಳಿಗೆ ಅಂತರ ಸಚಿವಾಲಯ ಕೇಂದ್ರೀಯ ತಂಡಗಳು (ಐಎಂಸಿಟಿ) ಭೇಟಿ ನೀಡಲಿವೆ.

ಗುಜರಾತಿನ ಅಹ್ಮದಾಬಾದ್ ಮತ್ತು ಸೂರತ್, ಮಹಾರಾಷ್ಟ್ರದ ಥಾಣೆ, ತೆಲಂಗಾಣದ ಹೈದರಾಬಾದ್ ಮತ್ತು ತಮಿಳುನಾಡಿದ ಚೆನ್ನೈಯಂತಹ ಪ್ರಮುಖ ಹಾಟ್ಸ್ಪಾಟ್ ಸ್ಥಳಗಳು ಅಥವಾ ಜಿಲ್ಲೆಗಳಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿತು.
ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ಲಾಕ್ ಡೌನ್ ಕ್ರಮಗಳ ಅನುಸರಣೆ ಮತ್ತು ಅನುಷ್ಠಾನ, ಆರೋಗ್ಯ ಮೂಲಸವಲತ್ತು ಸಿದ್ಧತೆ, ವೃತ್ತಿ ನಿರತರ ಸುರಕ್ಷತೆ ಮತ್ತು ಕಾರ್ಮಿಕರು ಹಾಗೂ ಬಡ ಜನರ ಪರಿಹಾರ ಶಿಬಿರಗಳ ಪರಿಸ್ಥಿತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತಂಡಗಳು ಗಮನ ಹರಿಸಲಿವೆ ಎಂದು ಸರ್ಕಾರ ಹೇಳಿದೆ.

ಹೆಚ್ಚುವರಿ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳ ನೇತೃತ್ವದ ಐಎಂಸಿಟಿಗಳು ಸಾರ್ವಜನಿಕ ಆರೋಗ್ಯ ಮತ್ತು ವಿಪತ್ತು ನಿರ್ವಹಣಾ ತಜ್ಞರನ್ನು ಹೊಂದಿರುತ್ತವೆ.

ಇದಕ್ಕೆ ಮುನ್ನ ವಾರಾರಂಭದಲ್ಲಿ ಆರು ಐಎಂಸಿಟಿಗಳನ್ನು ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳಕ್ಕೆ ತಲಾ ಎರಡರಂತೆ ಮತ್ತು ರಾಜಸ್ಥಾನ ಮತ್ತು ಮಧ್ಯಪ್ರದೇಶಕ್ಕೆ ತಲಾ ಒಂದರಂತೆ ಕೇಂದ್ರ ಸರ್ಕಾರವು ಕಳುಹಿಸಿತ್ತು.

ಮುಂಬೈ-ಪುಣೆ ಕೇಂದ್ರೀಯ ತಂಡಕ್ಕೆ ಅದರ ತಪಾಸಣಾ ವ್ಯಾಪ್ತಿಯನ್ನು ಮಹಾರಾಷ್ಟ್ರದ ಥಾಣೆ ಜಿಲ್ಲೆಗೂ ವಿಸ್ತರಿಸಲು ಸೂಚಿಸಲಾಗಿತ್ತು.

ಗೃಹ ಸಚಿವಾಲಯವು ರಾಜ್ಯಗಳಿಗೆ ಕಳುಹಿಸುವ ಸಲುವಾಗಿ ಅಂತರ ಸಚಿವಾಲಯ ಕೇಂದ್ರೀಯ ತಂಡಗಳನ್ನು (ಐಎಂಸಿಟಿ) ರಚಿಸಿದ್ದು ಅವುಗಳನ್ನು ಅಹ್ಮದಾಬಾದ್, ಸೂರತ್, ಹೈದರಾಬಾದ್ ಮತ್ತು ಚೆನ್ನೈಗಳಿಗೂ ಕಳುಹಿಸಲಾಗುವುದು ಎಂದು ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಶ್ರೀವಾಸ್ತವ ಅವರು ಮುಂಬೈ ಮತ್ತು ಇಂದೋರಿಗೆ ಭೇಟಿ ನೀಡಿದ್ದ ತಂಡಗಳು ಕಳುಹಿಸಿದ ಹಿಮ್ಮಾಹಿತಿಯನ್ನು  ಪ್ರಸ್ತಾಪಿಸುತ್ತಾ ಹೇಳಿದರು.

ಇಂದೋರಿನ ೧೭೧ ಕಂಟೈನ್ಮೆಂಟ್ ವಲಯಗಳ ಪೈಕಿ ೨೦ ವಲಯಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಂತರ್ ಸಚಿವಾಲಯ ಕೇಂದ್ರೀಯ ತಂಡ (ಐಎಂಸಿಟಿ) ವರದಿ ಕೊಟ್ಟಿದ್ದರೆ, ಮುಂಬೈಯ ಧಾರಾವಿಯಲ್ಲಿ ಸಂಚಾರಿ ಶೌಚಾಲಯಗಳ ಸಂಖ್ಯೆ ಹೆಚ್ಚಿಸುವಂತೆ ಐಎಂಸಿಟಿ ಸಲಹೆ ಮಾಡಿದೆ.

ಮುಂಬೈಯಲ್ಲಿ
ಪರೀಕ್ಷಾ ಸಾಮರ್ಥ್ಯ ಹೆಚ್ಚಿಸುವಂತೆಯೂ ತಂಡ ಸೂಚಿಸಿದೆ ಎಂದು ಅವರು ಹೇಳಿದರು.

ಹಾಟ್ ಸ್ಪಾಟ್ಗಳಿಗೆ ಭೇಟಿ ನೀಡಿದ ತಂಡಗಳು ರೋಗಿಗಳ ಸಂಪರ್ಕ ಪತ್ತೆ ವಿಚಾರದಲ್ಲಿ ಪರಿಶೀಸಲಿಸುತ್ತಿರುವವರ ಜೊತೆಗೆ ವಿಸ್ತೃತ ಸಮಾಲೋಚನೆ ನಡೆಸಿವೆ ಎಂದು ಅವರು ನುಡಿದರು.

ಪರೀಕ್ಷಾ
ಕಿಟ್ಗಳು, ಪಿಪಿಇಗಳು, ಮುಖಗವುಸುಗಳು ಸುರಕ್ಷತಾ ಉಪಕರಣಗಳು ಸಾಕಷ್ಟು ಪ್ರಮಾಣದಲ್ಲಿವೆ ಎಂಬುದನ್ನು ತಂಡವು ಗಮನಿಸಿದೆ. ಲಾಕ್ ಡೌನ್ನ್ನು ಸಮರ್ಪಕವಾಗಿ ಅನುಸರಿಸಲಾಗುತ್ತಿದೆ ಮತ್ತು ಆರೋಗ್ಯ ಕಾರ್ಯಕರ್ತರ ಸುರಕ್ಷತೆ ಮತ್ತು ಆರೋಗ್ಯ ಮೂಲ ಸವಲತ್ತಿನ ಖಾತರಿ ನೀಡಲಾಗಿದೆ ಎಂದು ಶ್ರೀವಾಸ್ತವ ನುಡಿದರು.

ಇಂದೋರಿಗೆ ಭೇಟಿ ನೀಡಿದ ತಂಡವು ರೈತರು, ಅಂಗವಿಕಲರು, ವರ್ತಕರು, ಎನ್ ಜಿಒಗಲು, ವೈದ್ಯಕೀಯ ಕಾಲೇಜುಗಳು, ಶಿಬಿರಗಳಲ್ಲಿನ ವಲಸೆ ಕಾರ್ಮಿಕರು ಮತ್ತಿತರರ ಜೊತೆಗೂ ಸಂವಹನ ನಡೆಸಿದೆ. ರೈತರಿಗೆ ತಮ್ಮ ಉತ್ಪನ್ನಗಳನ್ನು ಎಂಎಸ್ಪಿಗಳಲ್ಲಿ ಮಾರಾಟ ಮಾಡಲು ಸಾಧ್ಯವಾಗುವಂತಹ ವ್ಯವಸ್ಥೆಗಳನ್ನು ಸರ್ಕಾರವು ಕಲ್ಪಿಸಿದೆ ಎಂಬುದನ್ನು ಇಂದೋರಿಗೆ ಭೇಟಿ ನೀಡಿದ್ದ ತಂಡ ಗಮನಿಸಿತು. ಅಲಿ ರೈತರಿಗೆ ಮಂಡಿಗಳಿಗೆ ಹೋಗಬೇಕಾಗುವಂತಹ ಅಗತ್ಯವೇ ಉಂಟಾಗಿಲ್ಲ, ಹೀಗಾಗಿ ಸಂದಣಿ ತಪ್ಪಿದೆ ಎಂದು ಶ್ರೀವಾಸ್ತವ ಹೇಳಿದರು.

ಮುಂಬೈ ಐಎಂಸಿಟಿಯು ಧಾರಾವಿ ಕೊಳಚೆಗೇರಿಗೆ ಭೇಟಿ ನೀಡಿದ್ದು ಸಂಚಾರಿ ಶೌಚಾಲಯಗಳನ್ನು ಸ್ಥಾಪಿಸಲು ಸಲಹೆ ನೀಡಿದೆ. ಕೊಳಚೆ ನಿವಾಸಿಗಳ ಬಳಿ ಬಳಕೆಗೆ ಅತ್ಯಂತ ಕಡಿಮೆ ಸಂಖ್ಯೆ ಶೌಚಾಲಯಗಳಿವೆ ಎಂದು ಅವರು ನುಡಿದರು.

೨೦೦೦-೩೦೦೦ ಮಂದಿಗೆ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆ ಮಾಡುವಂತೆ, ಸ್ವಯಂಸೇವಕರನ್ನು ಬಳಸಿಕೊಂಡು ನಿಗಾಸಾಮರ್ಥ್ಯವನ್ನು ಹೆಚ್ಚಿಸುವಂತೆ  ಮತ್ತು ಪರೀಕ್ಷಾ ಸಾಮರ್ಥ್ಯ ಹೆಚ್ಚಿಸುವಂತೆಯೂ ಮುಂಬೈ ತಂಡ ಸಲಹೆ ಮಾಡಿದೆ. ಕೋವಿಡ್ ಬಾಧಿರಲ್ಲದವರಿಗೂ ವೈದ್ಯಕೀಯ ಸವಲತ್ತುಗಳನ್ನು ಒದಗಿಸುವ ಬಗ್ಗೆ ತಂಡ ಗಮನ ಹರಿಸಿತು ಎಂದು ಅವರು ನುಡಿದರು.

ಪಶ್ಚಿಮ ಬಂಗಾಳದಲ್ಲಿ ಕೇಂದ್ರೀಯ ತಂಡಗಳಿಗೆ ಕಂಟೈನ್ ಮೆಂಟ್ ವಲಯಗಳಿಗೆ ಭೇಟಿ ನೀಡಲು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಎಚ್ಚರಿಕೆ ನೀಡಿದ ಬಳಿಕ ಅನುಮತಿ ನೀಡಲಾಯಿತು. ತಂಡಗಳು ಸ್ಥಳೀಯ ಆಡಳಿತ ಸಹಕರಿಸದ ಬಗ್ಗೆ ದೂರು ನೀಡಿದ್ದವು.

ಕೇಂದ್ರ ಸರ್ಕಾರವು ವಿರೋಧ ಪಕ್ಷಗಳ ಆಡಳಿತ ಇರುವ ರಾಜ್ಯಗಳನ್ನು ಗುರಿಮಾಡಿದೆ ಎಂದು ಆಪಾದಿಸಿದ ತೃಣಮೂಲ ಕಾಂಗ್ರೆಸ್ ಉತ್ತರ ಪ್ರದೇಶ ಅಥವಾ ಗುಜರಾತಿಗೆ ಏಕೆ ತಂಡಗಳನ್ನು ಕಳುಹಿಸಿಲ್ಲ ಎಂದು ಪ್ರಶ್ನಿಸಿತ್ತು.

ಆಯ್ದ ರಾಜ್ಯಗಳಷ್ಟೇ ಅಲ್ಲ ಗುಜರಾತಿಗೂ ಕೇಂದ್ರ ತಂಡವನ್ನು ಕಳುಹಿಸಿ ಎಂದು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರೂ ಆಗ್ರಹಿಸಿದ್ದರು.

No comments:

Advertisement