Friday, April 24, 2020

ಬುಲೆಟ್ ಟ್ರೈನ್‌ ಬಿಟ್ಟುಬಿಡಿ, ಕೊರೋನಾ ಕಡೆ ನೋಡಿ: ಕೇಂದ್ರಕ್ಕೆ ಕಾಂಗ್ರೆಸ್ ಆಗ್ರಹ

ಬುಲೆಟ್  ಟ್ರೈನ್ ಬಿಟ್ಟುಬಿಡಿ, ಕೊರೋನಾ ಕಡೆ ನೋಡಿ: ಕೇಂದ್ರಕ್ಕೆ  ಕಾಂಗ್ರೆಸ್ ಆಗ್ರಹ
ನವದೆಹಲಿ: ಜನರ ಕೈಗಳಿಗೆ ಹಣ ಕೊಡುವ ಬದಲಿಗೆ ಕೇಂದ್ರೀಯ ಸೌಂದರ್ಯೀಕರಣಗಳಂತಹ ಯೋಜನೆಗಳಿಗೆ ವ್ಯರ್ಥ ವೆಚ್ಚ ಮಾಡುವುದನ್ನು ಕೇಂದ್ರ ಸರ್ಕಾರವು ಮುಂದುವರೆಸಿದೆ ಎಂದು ಕಾಂಗ್ರೆಸ್ ಪಕ್ಷವು  2020 ಏಪ್ರಿಲ್ 24ರ ಶುಕ್ರವಾರ  ಟೀಕಿಸಿತು.

ಕೊರೋನಾವೈರಸ್ ಬಿಕ್ಕಟಿನ ಹೊರತಾಗಿಯೂ ಮೋದಿ ಸರ್ಕಾರವು ೨೩,೦೦೦ ಕೋಟಿ ರೂಪಾಯಿಗಳ ಕೇಂದ್ರೀಯ ಸೌಂದರ್ಯೀಕರಣ ಯೋಜನೆ ಮತ್ತು ,೧೦,೦೦೦ ಕೋಟಿ ರೂಪಾಯಿ ವೆಚ್ಚದ  ಬುಲೆಟ್ ಟ್ರೈನ್ ಯೋಜನೆಯಂತಹ ವ್ಯರ್ಥ ವೆಚ್ಚದ ಯೋಜನೆಗಳನ್ನು ಮುಂದುವರೆಸುತ್ತಿದೆ. ಸರ್ಕಾರಿ ವೆಚ್ಚದಲ್ಲಿ ಶೇಕಡಾ ೩೦ರಷ್ಟು ಇಳಿಕೆಯನ್ನು ಕೂಡಾ ಅದು ಪ್ರಕಟಿಸಿಲ್ಲ ಎಂದೂ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ ಅವರು ಡಿಜಿಟಲ್ ಪತ್ರಿಕಾಗೋಷ್ಟಿಯಲ್ಲಿ ಶುಕ್ರವಾರ ಆಪಾದಿಸಿದರು.

ಸೈನಿಕರು, ಪಿಂಚಣಿದಾರರು, ಸರ್ಕಾರಿ ನೌಕರರ ವೇತನ/ ಭತ್ಯೆಗಳನ್ನು ಕಡಿತಗೊಳಿಸುವ ಬದಲಿಗೆ ಕೇಂದ್ರೀಯ ಸೌಂದರ್ಯೀಕರಣ ಯೋಜನೆ ಅಥವಾ ಬುಲೆಟ್ ಟ್ರೈನ್ ಯೋಜನೆಗಳಂತಹ ಅನಗತ್ಯ ವೆಚ್ಚಗಳ ಯೋಜನೆಗಳನ್ನು ಸ್ಥಗಿತಗೊಳಿಸಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ ಎಂದು ಅವರು ನುಡಿದರು.

ದಾರಿತಪ್ಪಿದ ನೀತಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ನಾವು ಬಿಜೆಪಿ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಮೋದಿ ಸರ್ಕಾರವು ಕೊರೋನಾವೈರಸ್ ಸಾಂಕ್ರಾಮಿಕದ ಪರಿಣಾಮವಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಜನರ ಕೈಗಳಿಗೆ ಹಣ ನೀಡಬೇಕು ಎಂದು ಸುರ್ಜೆವಾಲ ಹೇಳಿದರು.

ಕೋವಿಡ್ -೧೯ ಬಿಕ್ಕಟ್ಟನ್ನು ನಿಭಾಯಿಸುವ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ತಮ್ಮ ಸಲಹೆಗಳನ್ನು ನೀಡಿದ ಒಂದು ದಿನದ ಬಳಿಕ ಕಾಂಗ್ರೆಸ್ ಪಕ್ಷದಿಂದ ಆಗ್ರಹ ಬಂದಿದೆ.

ಸರ್ಕಾರವು
ತಮ್ಮ ಸಲಹೆಗಳನ್ನು ಭಾಗಶಃ ಅನುಸರಿಸಿದೆ. ಹೃದಯ ವೈಶಾಲ್ಯವಾಗಲೀ, ಪ್ರಸನ್ನತೆಯಾಗಲೀ ಕೇಂದ್ರ ಸರ್ಕಾರದಿಂದ ಕಂಡು ಬರಲಿಲ್ಲ ಎಂದು ಸೋನಿಯಾಗಾಂಧಿಯವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೇಳಿದ್ದರು.

ಇಡೀ ದೇಶ ಕೋವಿಡ್-೧೯ರ ವಿರುದ್ಧ ಹೋರಾಡುತ್ತಿರುವಾಗ ಆಡಳಿತಾರೂಢ ಬಿಜೆಪಿಯು ಕೋಮು ಪೂರ್ವಾಗ್ರಹ ಮತ್ತು ದ್ವೇಷದ ವೈರಸ್ಸನ್ನು ಹರಡುತ್ತಿದೆ ಎಂದೂ ಸೋನಿಯಾಗಾಂಧಿ ಆಪಾದಿಸಿದ್ದರು.

ಇಡೀ ದೇಶ ಕೋವಿಡ್-೧೯ ಸಾಂಕ್ರಾಮಿಕದ  ವಿರುದ್ಧ ಹೋರಡುತ್ತಿರುವಾಗ ಬಿಜೆಪಿಯು ಕೋಮುವಿಭಜನೆಯ ಬೆಂಕಿ ಹಚ್ಚಲು ಯತ್ನಿಸಿದೆ ಎಂದು ಅಪಾದಿಸಿ ನಿರ್ಣಯವನ್ನೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಂಗೀಕರಿಸಿತ್ತು.

No comments:

Advertisement