Tuesday, April 28, 2020

ಪ್ಲಾಸ್ಮಾ ಥೆರೆಪಿ ಕೊರೋನಾ ಸೋಂಕಿಗೆ ಅಂಗೀಕೃತ ಚಿಕಿತ್ಸೆ ಅಲ್ಲ:ಕೇಂದ್ರ ಎಚ್ಚರಿಕೆ

ಪ್ಲಾಸ್ಮಾ ಥೆರೆಪಿ ಕೊರೋನಾ ಸೋಂಕಿಗೆ ಅಂಗೀಕೃತ  ಚಿಕಿತ್ಸೆ ಅಲ್ಲ, ಅಪಾಯಕಾರಿ ಆಗಲೂ ಬಹುದು: ಕೇಂದ್ರ ಎಚ್ಚರಿಕೆ
ನವದೆಹಲಿ: ಕೊರೋನಾವೈರಸ್ ವಿರುದ್ಧ ಪ್ಲಾಸ್ಮಾ ಥೆರೆಪಿಯನ್ನು ನಿಯಮಿತ ಬಳಕೆ ಮಾಡುವುದರ ವಿರುದ್ಧ ಕೇಂದ್ರ ಆರೋಗ್ಯ ಸಚಿವಾಲಯ 2020 ಏಪ್ರಿಲ್ 28ರ ಮಂಗಳವಾರ ಎಚ್ಚರಿಕೆ ನೀಡಿತು ಮತ್ತು ಇದರ ಪರಿಣಾಮಕಾರಿತ್ವ ಬಗ್ಗೆ ವೈಜ್ಞಾನಿಕ ಸಾಕ್ಷ್ಯಾಧಾರ ಲಭಿಸುವವರೆಗೆ ಇದನ್ನು ಸಂಶೋಧನೆ ಮತ್ತು ಪ್ರಾಯೋಗಿಕ ಉದ್ದೇಶಗಳಿಗಾಗಿ ಮಾತ್ರ ಬಳಸಬಹುದು ಎಂದು ಸಲಹೆ ಮಾಡಿತು.

ಸಮರ್ಪಕವಾಗಿ ನೀಡದೇ ಇದ್ದಲ್ಲಿ ಪ್ಲಾಸ್ಮಾ ಥೆರೆಪಿಯು ಜೀವಕ್ಕೆ ಅಪಾಯವಾಗುವಂತಹ ಸಮಸ್ಯೆಗಳನ್ನು ತಂದೊಡ್ಡಬಹುದು ಎಂದೂ ಸರ್ಕಾರ ಎಚ್ಚರಿಸಿತು..

ಪ್ಲಾಸ್ಮಾ ಥೆರೆಪಿ ಸೇರಿದಂತೆ ಕೋವಿಡ್ -೧೯ಕ್ಕೆ ದೇಶದಲ್ಲಿ ಯಾವುದೇ ಅನುಮೋದಿತ ಥೆರೆಪಿ ಇಲ್ಲ. ಪ್ಲಾಸ್ಮಾ ಥೆರೆಪಿಯನ್ನು ಪ್ರಯೋಗ ಮಾಡಲಾಗುತ್ತಿದೆ ಮತ್ತು ಅದನ್ನು ಚಿಕಿತ್ಸೆ ಎಂಬುದಾಗಿ ದೃಢಪಡಿಸುವ ಯಾವುದೇ ಸಾಕ್ಷ್ಯಾಧಾರ ಇಲ್ಲ. ಅದು ಇನ್ನೂ ಪ್ರಾಯೋಗಿಕ ಹಂತದಲ್ಲಿ ಮಾತ್ರವೇ ಇದೆ. ಸಮರ್ಪಕವಾಗಿ ಬಳಸದೇ ಇದ್ದಲ್ಲಿ ಅದು ಜೀವಕ್ಕೆ ಬೆದರಿಕೆ ಒಡ್ಡುವಂತಹ ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಹೇಳಿದರು.

ಉನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಯು ಪ್ಲಾಸ್ಮಾ ಥೆರೆಪಿಯ ಪರಿಣಾಮಕಾರಿತ್ವದ ಪತ್ತೆಗಾಗಿ ಅಧ್ಯಯನ ನಡೆಸುತ್ತಿದೆ. ಅಲ್ಲಿಯವರೆಗೂ, ಪ್ರಾಯೋಗಿಕ ಉದ್ದೇಶಗಳಿಗಾಗಿ ಮಾತ್ರವೇ ಅದನ್ನು ಬಳಸುವಂತೆ ವೈದ್ಯರಿಗೆ ಸಲಹೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿ ನುಡಿದರು.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಥೆರೆಪಿಯ ಪರಿಣಾಮಕಾರಿತ್ವ ಕುರಿತ ಅಧ್ಯಯನವನ್ನು ಪೂರ್ಣಗೊಳಿಸುವವರೆಗೆ ಪ್ಲಾಸ್ಮಾ ಥೆರೆಪಿಯನ್ನು ಕೇವಲ ಸಂಶೋಧನೆ ಮತ್ತು ಪ್ರಾಯೋಗಿಕ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು. ಐಸಿಎಂಆರ್ ಪ್ಲಾಸ್ಮಾ ಥೆರೆಪಿಯ ಪರಿಣಾಮಕಾರಿತ್ವದ ಬಗ್ಗೆ ರಾಷ್ಟ್ರವ್ಯಾಪಿ ಸಂಶೋಧನೆ ನಡೆಸುತ್ತಿದೆ ಎಂದು ಅವರು ನುಡಿದರು.

ವೈರಸ್ ಸೋಂಕು ತಗುಲಿದ ಹಲವಾರು ಪ್ರಕರಣಗಳಲ್ಲಿ ರೋಗಿಗಳು ಚೇತರಿಸಿಕೊಂಡಿರುವ ಹಲವಾರು ಉದಾಹರಣೆಗಳ ಬಗ್ಗೆ ವರದಿಗಳು ಬಂದಿರುವ ವೇಳೆಯಲ್ಲೇ ಸರ್ಕಾರದಿಂದ ಪ್ಲಾಸ್ಮಾ ಥೆರೆಪಿಯ ಬಗ್ಗೆ ಎಚ್ಚರಿಕೆಯ ಮಾತು ಬಂದಿದೆ. ಈವರೆಗೆ ಪ್ಲಾಸ್ಮಾ ಥೆರೆಪಿಯನ್ನು ಆಯ್ದ ಪ್ರಕರಣಗಳಲ್ಲಿ ಮಾತ್ರ ಬಳಸಲಾಗುತ್ತಿದೆ, ಅದೂ ಮುಖ್ಯವಾಗಿ ವೆಂಟಿಲೇಟರ್ ಬೆಂಬಲದಲ್ಲಿ ಇರುವ ಗಂಭೀರ ಸ್ಥಿತಿಯ ರೋಗಿಗಳ ಪ್ರಕರಣಗಳಲ್ಲಿ ಮಾತ್ರ ಬಳಸಲಾಗುತ್ತಿದೆ.

ಗುಣಮುಖರಾದ ಕೋವಿಡ್-೧೯ ರೋಗಿಗಳ ಪ್ಲಾಸ್ಮಾವನ್ನು ಕೊರೋನಾ ಸೋಂಕು ತಗುಲಿದ ರೋಗಿಗಳಿಗೆ ನೀಡುವ ಪ್ರಕ್ರಿಯೆಯನ್ನು ಪ್ಲಾಸ್ಮಾ ಥೆರೆಪಿ ಎಂಬುದಾಗಿ ವಿವರಿಸಲಾಗಿದೆ. ಗುಣಮುಖರಾದ ರೋಗಿಗಳ ಪ್ಲಾಸ್ಮಾ ವನ್ನು ರೋಗಿಗಳಲ್ಲಿ ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಅವರ ದೇಹಕ್ಕೆ ಸೇರ್ಪಡೆ ಮಾಡುವುದರಿಂದ ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯಗಳ ಸಂಖ್ಯೆ ರೋಗಿಗಳ ದೇಹದಲ್ಲಿ ಹೆಚ್ಚುವುದು ಎಂದು ಭಾವಿಸಲಾಗಿದೆ.

ಭಾರತದಲ್ಲಿ ಕೋವಿಡ್-೧೯ ವಿರುದ್ಧ ಹೋರಾಟ ನಡೆಸುತ್ತಿರುವ ಹಲವಾರು ಕೇಂದ್ರಗಳು ಥೆರೆಪಿಯಿಂದ ಧನಾತ್ಮಕ ಫಲಿತಾಂಶಗಳು ಬಂದ ಹಿನ್ನೆಲೆಯಲ್ಲಿ ಈಗಾಗಲೇ ಗುಣಮುಖರಾದ ರೋಗಿಗಳ ಪ್ಲಾಸ್ಮಾವನ್ನು ನೆಚ್ಚಿಕೊಳ್ಳಲು ಆರಂಭಿಸಿವೆ.

No comments:

Advertisement