My Blog List

Monday, April 20, 2020

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಪಿತೃ ವಿಯೋಗ

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಪಿತೃ ವಿಯೋಗ
ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ ಸಿಂಗ್ ಬಿಶ್ತ್ ಅವರು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಂಸ್ಥೆಯಲ್ಲಿ (ಏಮ್ಸ್) 2020 ಏಪ್ರಿಲ್ 20ರ ಸೋಮವಾರ ನಿಧನರಾಗಿದ್ದು, ರಾಷ್ಟ್ರವ್ಯಾಪಿ ಕೊರೋನಾ ದಿಗ್ಬಂಧನದ (ಲಾಕ್ ಡೌನ್) ಕಾರಣ ಆದಿತ್ಯನಾಥ್ ಅವರು ಮಂಗಳವಾರ ನಡೆಯುವ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪ್ರಕಟಿಸಿದರು.

ಕೊರೋನಾವೈರಸ್ ಲಾಕ್ಡೌನ್ ಕಾರಣ ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಜನರು ಪಾಲ್ಗೊಳ್ಳಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಂದೆ ಬೆಳಗ್ಗೆ ೧೦.೪೪ಕ್ಕೆ ಸ್ವರ್ಗಸ್ಥರಾದರು. ನಾವು ಗಾಢವಾದ ಶೋಕ ವ್ಯಕ್ತ ಪಡಿಸುತ್ತೇವೆ ಎಂದು ರಾಜ್ಯದ ಹೆಚ್ಚುವರಿ ಮುಖ್ಯಕಾರ್ಯದರ್ಶಿ (ಗೃಹ) ಅವನೀಶ್ ಕೆ ಅವಸ್ಥಿ ಹೇಳಿದರು.

೮೯ರ ಹರೆಯದ ಬಿಶ್ತ್ ಅವರು ಅರಣ್ಯ ರೇಂಜರ್ ಆಗಿದ್ದು ೧೯೯೧ರಲ್ಲಿ ನಿವೃತ್ತರಾಗಿದ್ದರು. ದೆಹಲಿಯ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹುಅಂಗಾಂಗ ವೈಫಲ್ಯದ ಕಾರಣ ಕೊನೆಯುಸಿರು ಎಳೆದರು ಎಂದು ವೈದ್ಯರೊಬ್ಬರು ಹೇಳಿದರು. ಬಿಶ್ತ್ ಅವರನ್ನು ಮಾರ್ಚ್ ೧೩ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ತೀವ್ರ ನಿಗಾಘಟಕದಲ್ಲಿ ಅವರಿಗೆ ಜೀವ ರಕ್ಷಕ ಬೆಂಬಲ ಒದಗಿಸಲಾಗಿತ್ತು.

ಅವರಿಗೆ ಬಹು ಸಮಸ್ಯೆಗಳಿದದವು. ಯಕೃತ್ತು ಮತ್ತು ಮೂತ್ರಕೋಶಗಳು ತೃಪ್ತಿಕರವಾಗಿ ಕಾರ್ ನಿರ್ವಹಿಸುತ್ತಿರಲಿಲ್ಲ. ಅವರು ಡಯಾಲಿಸಿಸ್ ಮತ್ತು ಜೀವರಕ್ಷಕ ಕ್ರಮಗಳಿಗೆ ಒಳಪಟ್ಟಿದ್ದರು. ತಜ್ಞರ ತಂಡ ಅವರನ್ನ ನೋಡಿಕೊಳ್ಳುತ್ತಿತ್ತು ಎಂದು ಹಿರಿಯ ವೈದ್ಯರೊಬ್ಬರು ಹೇಳಿದರು.

ಉತ್ತರಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್, ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗಾಂಧಿ ವಾದ್ರ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಸೇರಿದಂತೆ ಹಲವಾರು ಮಂದಿ ರಾಜಕೀಯ ನಾಯಕರು ಮತ್ತು ರಾಜತಾಂತ್ರಿಕರು ಬಿಶ್ತ್ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ ಅವರ ತಂದೆ ಆನಂದ ಸಿಂಗ್ ಬಿಶ್ತ್ ಜಿ ಅವರ ನಿಧನಕ್ಕೆ ನನ್ನ ಅತೀವ ಸಂತಾಪಗಳು.ಅವರ ಆತ್ಮಕ್ಕೆ ಶಾಂತಿ ಸಿಗಲಿ. ಯೋಗಿ ಜಿ ಮತ್ತು ಅವರ ಕುಟುಂಬ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಪರಮಾತ್ಮನು ದಯಪಾಲಿಸಲಿ ಎಂದು ಕಮಲನಾಥ್ ಟ್ವೀಟ್ ಮಾಡಿದರು.

"ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀ ಅವರ ತಂದೆ ಆನಂದ್ ಬಿಶ್ತ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಲು ಇಷ್ಟಪಡುತ್ತೇನೆ ಹಾಗೂ ಆನಂದ್ ಸಿಂಗ್ ಅವರ ಸಾವಿನ ದುಃಖ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಲಿ," ಎಂದು ಪ್ರಿಯಾಂಕ ಗಾಂಧಿ ವಾದ್ರ ಟ್ವೀಟ್ ಮಾಡಿದರು.

ತಮ್ಮ ತಂದೆ ಕೊನೆಯುಸಿರೆಳದ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಅವರು ಕೊರೊನಾ ನಿಯಂತ್ರಣ ಕುರಿತು ಅಧಿಕಾರಿಗಳ ಜತೆ ತುರ್ತು ಸಭೆ ನಡೆಸುತ್ತಿದ್ದರು. ಕೊರೊನಾ ಅಟ್ಟಹಾಸದ ಸಂದರ್ಭದಲ್ಲಿ ನಿಯಮ ಪಾಲನೆ ಮಹತ್ವದ್ದಾಗಿದೆ. ಅಂತ್ಯ ಸಂಸ್ಕಾರದ ವಿಧಿಯಲ್ಲಿ ನಾನು ಪಾಲ್ಗೊಂಡರೆ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇದೆ. ಕಾರಣಕ್ಕೆ ಪಾಲ್ಗೊಳ್ಳುವುದು ಸೂಕ್ತವಲ್ಲ ಎಂದು ಯೋಗಿ ಆದಿತ್ಯನಾಥ್ ತಿಳಿಸಿದರು.

No comments:

Advertisement