Monday, April 13, 2020

ಎನ್ಎಫ್ಎಸ್ಎ ಫಲಾನುಭವಿಗಳಿಗೆ ಉಚಿತ ರೇಷನ್: ಸೋನಿಯಾ ಸ್ವಾಗತ


ಎನ್ಎಫ್ಎಸ್ಎ ಫಲಾನುಭವಿಗಳಿಗೆ ಉಚಿತ ರೇಷನ್
ಪ್ರಧಾನಿ ಕ್ರಮಕ್ಕೆ ಸೋನಿಯಾ ಸ್ವಾಗತ
ನವದೆಹಲಿ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಫಲಾನುಭವಿಗಳಿಗೆ ಐದು ಕಿಲೋಗ್ರಾಂನಷ್ಟು ಉಚಿತ ರೇಷನ್ ಒದಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ 2020 ಏಪ್ರಿಲ್ 13ರ ಸೋಮವಾರ ಸ್ವಾಗತಿಸಿದರು ಮತ್ತು ಕೋವಿಡ್-೧೯ ದಿಗ್ಬಂಧನದ ಪರಿಣಾಮ ತಗ್ಗಿಸಲು ಇನ್ನಷ್ಟು ಕ್ರಮಗಳನ್ನು ಸಲಹೆ ಮಾಡಿದರು.

ಪ್ರಧಾನಿ ಮೋದಿ ಅವರಿಗೆ ಬರೆದ ಹೊಸ ಪತ್ರದಲ್ಲಿ ಏಪ್ರಿಲ್-ಜೂನ್ ಅವಧಿಯಲ್ಲಿ ಎನ್‌ಎಫ್‌ಎಸ್‌ಎ ಅಡಿಯಲ್ಲಿ ಉಚಿತವಾಗಿ ಹೆಚ್ಚವರಿ ರೇಷನ್ ಒದಗಿಸಲು ನಿರ್ಧರಿಸಿದ ಕ್ರಮವನ್ನು ಸ್ವಾಗತಿಸಿದ ಸೋನಿಯಾ, ಕೋವಿಡ್-೧೯ ಬಿಕ್ಕಟ್ಟು ಹಲವಾರು ಕುಟುಂಬಗಳಲ್ಲಿ ಆಹಾರದ ಅಭದ್ರತೆ ಮತ್ತು ದಾರಿದ್ರ್ಯವನ್ನು ಹುಟ್ಟು ಹಾಕಿದೆ ಎಂದು ತಿಳಿಸಿದರು.  ದಿಗ್ಬಂಧನವು ಬದುಕಿನ ಮೇಲೆ ಉಂಟು ಮಾಡಿರುವ ಪರಿಣಾಮಗಳಿಂದ ಹೊರಬರಲು ತಮ್ಮ ಸಲಹೆಗಳನ್ನು ಅವರು ಪತ್ರದಲ್ಲಿ ಪಟ್ಟಿ ಮಾಡಿದರು.

ದೇಶಾದ್ಯಂತ ಲಕ್ಷಾಂತರ ಮಂದಿ ಲಾಕ್‌ಡೌನ್ ಪರಿಣಾಮವಾಗಿ ಆಹಾರದ ತೀವ್ರ ಅಭದ್ರತೆ ಎದುರಿಸುತ್ತಿದ್ದಾರೆ. ಭಾರತವು ಈಗಿನ ಸಾಂಕ್ರಾಮಿಕದಂತಹ ಪರಿಸ್ಥಿತಿಗಳನ್ನು ಎದುರಿಸುವ ಸಲುವಾಗಿಯೇ ದೊಡ್ಡ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುವುದರ ಹೊರತಾಗಿಯೂ ಇಂತಹ ಸ್ಥಿತಿ ಎದುರಾಗಿರುವುದು ದಾರುಣ ಎಂದು ಸೋನಿಯಾಗಾಂಧಿ ಹೇಳಿದರು.

ಕಾಂಗ್ರೆಸ್ ಮುಖ್ಯಸ್ಥೆ ಮಾರ್ಚ್ ೨೩ರಿಂದ ಪ್ರಧಾನಿಯವರಿಗೆ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಬರೆದ ಆರನೇ ಪತ್ರ ಇದು.

ನಾನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ (ಎನ್ ಎಫ್ ಎಸ್ ) ಅಡಿಯಲ್ಲಿ ೨೦೨೦ರ ಏಪ್ರಿಲ್-ಜೂನ್ ಅವಧಿಯಲ್ಲಿ ಹೆಚ್ಚುವರಿಯಾಗಿ ವ್ಯಕ್ತಿಯೊಬ್ಬರಿಗೆ ಕಿ.ಗ್ರಾಂ.ಹೆಚ್ವುವರಿ ಆಹಾರ ಧಾನ್ಯವನ್ನು ಉಚಿತವಾಗಿ ನೀಡಲು ಕೈಗೊಂಡಿರುವ ನಿಮ್ಮ ನಿರ್ಧಾರವನ್ನು ಸ್ವಾಗತಿಸುವೆ. ಆದಾಗ್ಯೂ, ದಿಗ್ಬಂಧನದ ಪ್ರತಿಕೂಲ ಪರಿಣಾಮದ ಹಿನ್ನೆಲೆಯಲ್ಲಿ ಜನರ ಬದುಕಿನ ಮೇಲೆ ದೂರಗಾಮೀ ಪರಿಣಾಮಗಳಾಗುವುದರಿಂದ ಕೆಲವು ಸಲಹೆಗಳನ್ನು ಪರಿಶೀಲಿಸುವಂತೆ ಕೋರಿ ನಾನು ಪತ್ರ ಬರೆದಿದ್ದೇನೆ ಎಂದು ಸೋನಿಯಾ ಬರೆದಿದ್ದಾರೆ.

ಮೊದಲನೆಯದಾಗಿ, ಸೆಪ್ಟೆಂಬರ್‌ವರೆಗಿನ ಇನ್ನೂ ಮೂರು ತಿಂಗಳುಗಳಿಗೆ ಎನ್‌ಎಫ್‌ಎಸ್‌ಎ ಫಲಾನುಭವಿಗಳಿಗೆ ವ್ಯಕ್ತಿಯೊಬ್ಬರಿಗೆ ತಲಾ ೧೦ ಕಿಗ್ರಾಂ ಆಹಾರ ಧಾನ್ಯ ನೀಡುವ ಅವಕಾಶವನ್ನು ವಿಸ್ತರಿಸಬೇಕು. ಫಲಾನುಭವಿ ಎದುರಿಸುತ್ತಿರುವ ತೀವ್ರ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಇನ್ನೂ ಮೂರು ತಿಂಗಳ ಕಾಲ ಉಚಿತ ಆಹಾರಧಾನ್ಯ ವಿತರಣೆ ಅಗತ್ಯವಾಗಿದೆ.

ಪಡಿತರ ಚೀಟಿ (ರೇಷನ್ ಕಾರ್ಡ್) ಇಲ್ಲದವರು ಹಾಗೂ ಸಂಕಷ್ಟ ಎದುರಿಸುತ್ತಿರುವವರಿಗೆ ತಿಂಗಳ ಅವಧಿಗೆ ಉಚಿತವಾಗಿ ವ್ಯಕ್ತಿಯೊಬ್ಬರಿಗೆ ತಲಾ ೧೦ ಕಿಗ್ರಾಂ ಆಹಾರ ಧಾನ್ಯಗಳನ್ನು ವಿತರಿಸಬೇಕು. ತೀವ್ರ ಸಂಕಷ್ಟ ಎದುರಿಸುತ್ತಿರುವ ಎಲ್ಲ ವಲಸೆ ಕಾರ್ಮಿಕರು ಎನ್‌ಎಫ್‌ಎಸ್‌ಎ ಕಾರ್ಡುಗಳನ್ನು ಹೊಂದಿರುವ ಸಾಧ್ಯತೆಗಳಿಲ್ಲ ಎಂಬುದನ್ನು ನಾನು ತಮ್ಮ ಗಮನಕ್ಕೆ ತರಬಯಸುತ್ತೇನೆ. ಇದಲ್ಲದೆ ಎನ್‌ಎಫ್‌ಎಸ್‌ಎ ವ್ಯಾಪ್ತಿಯಿಂದ ಹೊರಗಿರುವ ಅನೇಕ ವ್ಯಕ್ತಿಗಳಿಗೂ ಇಂತಹ ನೆರವಿನ ಅಗತ್ಯವಿದೆ ಎಂದು ಅವರು ಬರೆದಿದ್ದಾರೆ.

ಬಿಕ್ಕಟ್ಟು ಆಹಾರ ಭದ್ರತೆ ಇದ್ದ ಅನೇಕ ಕುಟುಂಬಗಳನ್ನು ಕೂಡಾ ಆಹಾರ ಅಭದ್ರತೆ ಮತ್ತು ದಾರಿದ್ರ್ಯಕ್ಕೆ ತಳ್ಳಿದೆ. ೨೦೧೧ರಿಂದೀಚೆಗೆ ಹೆಚ್ಚಿದ ಜನಸಂಖ್ಯೆಯನ್ನು ಪ್ರತಿ ರಾಜ್ಯದ ಎನ್‌ಎಫ್‌ಎಸ್‌ಎ ಅಡಿ ಫಲಾನುಭವಿಗಳಾಗಿ ಗುರುತಿಸುವಾಗ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದೂ ಸೋನಿಯಾ ಗಾಂಧಿ ಗಮನ ಸೆಳೆದಿದ್ದಾರೆ.

ಸರಬರಾಜು ಸರಪಣಿ ಅಸ್ತವ್ಯಸ್ತಗೊಂಡು ಬೆಲೆ ಏರಿಕೆಗೆ ಕಾರಣವಾಗಿರುವ ಹೊತ್ತಿನಲ್ಲಿ ಆಹಾರ ಹಣದುಬ್ಬರ ವಿರುದ್ಧ ಜನರಿಗೆ ಭದ್ರತೆ ಒದಗಿಸಲು ಕ್ರಮಗಳು ನಿರ್ಣಾಯಕವಾಗಿವೆ  ಎಂದು ಕಾಂಗ್ರೆಸ್ ಅಧ್ಯಕ್ಷೆ ತಿಳಿಸಿದ್ದಾರೆ.

ರಾಜ್ಯಗಳಿಗೆ ಆಹಾರ ಧಾನ್ಯ ಬಿಡುಗಡೆ ಮಾಡುವುದರಿಂದ ಭಾರತೀಯ ಆಹಾರ ನಿಗಮಕ್ಕೆ ಹಿಂಗಾರು ಋತುವಿನಲ್ಲಿ ಗೋಧಿ ಮತ್ತು ಅಕ್ಕಿಯನ್ನು ಸಂಗ್ರಹಿಸಲು ಸ್ಥಳಾವಕಾಶವೂ ಲಭಿಸುತ್ತದೆ ಎಂದು ಸೋನಿಯಾ ಹೇಳಿದ್ದಾರೆ.

ಸಾಂಕ್ರಾಮಿಕ ವಿರುದ್ಧದ ನಮ್ಮ ಹೋರಾಟದಲ್ಲಿ ಯಾರು ಕೂಡಾ ಹಸಿವಿನಿಂದ ಬಳಲದಂತೆ ನಾವು ಖಾತರಿ ನೀಡಬೇಕು ಎಂದೂ ಅವರು ತಿಳಿಸಿದ್ದಾರೆ.

ತಮ್ಮ ಹಿಂದಿನ ಐದು ಪತ್ರಗಳಲ್ಲಿ ಸೋನಿಯಾಗಾಂಧಿಯವರು ನಿರ್ಮಾಣ ಮತ್ತು ಗ್ರಾಮೀಣ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿ ಅವರಿಗೆ ಹಣಕಾಸು ಪ್ಯಾಕೇಜ್ ಒದಗಿಸುವಂತೆ ಕೋರಿದ್ದರು. ೨೦,೦೦೦ ಕೋಟಿ ರೂಪಾಯಿ ವೆಚ್ಚದ ಕೇಂದ್ರ ಸೌಂದರ್‍ಯೀಕರಣ ಯೋಜನೆಯನ್ನು ಅಮಾನತುಗೊಳಿಸುವಂತೆ ಮತ್ತು ಎಲ್ಲ ಪಿಎಂ ಕೇರ್‍ಸ್ ನಿಧಿಯ ಹಣವನ್ನು ಸಾಂಕ್ರಾಮಿಕ ವಿರುದ್ಧದ ಸಮರಕ್ಕಾಗಿ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ (ಪಿಎಂ-ಎನ್‌ಆರ್‌ಎಫ್) ವರ್ಗಾಯಿಸುವಂತೆ ಸೋನಿಯಾ ಗಾಂಧಿ ಸಲಹೆ ಮಾಡಿದ್ದರು.

No comments:

Advertisement