ಗ್ರಾಹಕರ ಸುಖ-ದುಃಖ

My Blog List

Tuesday, April 7, 2020

೧೪ ಔಷಧಗಳ ಸರಬರಾಜು: ವಿಶ್ವಕ್ಕೆ ಭಾರತದ ಸ್ಪಷ್ಟ ಸಂದೇಶ

೧೪ ಔಷಧಗಳ ಸರಬರಾಜು: ವಿಶ್ವಕ್ಕೆ ಭಾರತದ ಸ್ಪಷ್ಟ ಸಂದೇಶ
ನವದೆಹಲಿ: ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಪಾರ್ಸೆಟಮೋಲ್ ಸೇರಿದಂತೆ ೧೪ ಔಷಧಗಳ ಮೇಲಿನ ರಫ್ತು ನಿರ್ಬಂಧವನ್ನು ತೆರವುಗೊಳಿಸುವ ಮೂಲಕ ಭಾರತವು ಸಂಕಟದ ಸಮಯದಲ್ಲಿ ವಿಶ್ವದ ಅಗತ್ಯಗಳಿಗೆ ಸ್ಪಂದಿಸುವಲ್ಲಿ ಹಿಂದೆ ಬೀಳುವುದಿಲ್ಲ ಎಂಬ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು 2020 ಏಪ್ರಿಲ್ 07ರ ಮಂಗಳವಾರ ವಿಶ್ವಕ್ಕೆ ರವಾನಿಸಿತು.
ಕೋವಿಡ್-೧೯ ಸೋಂಕು ನಿಯಂತ್ರಣದಲ್ಲಿ ಉಪಯುಕ್ತವಾಗಿರುವ ಮಲೇರಿಯಾ ನಿರೋಧಿ ಹೈಡ್ರಾಕ್ಸಿಕ್ಲೊರೋಕ್ವಿನ್ ಮೇಲಿನ ರಫ್ತು ನಿಷೇಧವನ್ನು ತೆರವುಗೊಳಿಸದಿದ್ದರೆ ಪ್ರತೀಕಾರದ ಕ್ರಮ ಸಾಧ್ಯತೆ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಎಚ್ಚರಿಕೆ ನೀಡುವುದಕ್ಕೆ ಮುನ್ನವೇ ಸಾಂಸ್ಥಿಕ ಮಾರ್ಗಗಳ ಮೂಲಕ ನಿರ್ಣಾಯಕ ಔಷಧಗಳ ಸರಬರಾಜು ಮಾಡಲು ಅನುಕೂಲವಾಗುವಂತೆ ತನ್ನ ನೀತಿಯಲ್ಲಿ ಮಾಡಲಾಗಿರುವ ಬದಲಾವಣೆಯನ್ನು ಅಮೆರಿಕ ಸೇರಿದಂತೆ ಎಲ್ಲ ರಾಷ್ಟ್ರಗಳಿಗೆ ತಿಳಿಸಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಕಾರ್‍ಯದರ್ಶಿ ಪಿಕೆ ಮಿಶ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತಾಧಿಕಾರ ಸಮಿತಿಯು 2020 ಏಪ್ರಿಲ್ 07ರ ಮಂಗಳವಾರ ೧೪ ಔಷಧಗಳ ಮೇಲಿನ ರಫ್ತು ನಿರ್ಬಂಧಗಳನ್ನು  ತೆರವುಗೊಳಿಸಲು ಮತ್ತು ದೇಶದಲ್ಲಿನ ಹಾಲಿ ಬೇಡಿಕೆ ಮತ್ತು ಸರಬರಾಜು ಸಾಮರ್ಥ್ಯದ ಅಂದಾಜಿನ ಬಳಿಕ ಹೈಡ್ರಾಕ್ಸಿಕ್ಲೊರೋಕ್ವಿನ್ ಮತ್ತು ಪಾರ್ಸೆಟಮೋಲ್ ರಫ್ತಿಗೆ ಅವಕಾಶ ನೀಡುವ ನಿರ್ಣಯವನ್ನು ಕೈಗೊಂಡಿತು.

ಇದು ಹೈಡ್ರಾಕ್ಸಿಕ್ಲೊರೋಕ್ವಿನ್ ಗೆ ಮಾತ್ರವೇ ಸಂಬಂಧಿಸಿದ್ದಲ್ಲ ಅಥವಾ ಅಮೆರಿಕಕ್ಕೆ ಮಾತ್ರವೇ ಸಂಬಂಧಿಸಿದ್ದೂ ಅಲ್ಲ. ಭಾರತದ ಫಾರ್ಮಾ ಉದ್ಯಮವು ಎಚ್ ಐವಿ ಔಷಧಗಳನ್ನು ದಕ್ಷಿಣ ಆಫ್ರಿಕಾದ ೮೦ ಲಕ್ಷ ರೋಗಿಗಳಿಗೆ, ಪಾರ್ಸೆಟಮೋಲ್‌ನ್ನು ಇಂಗ್ಲೆಂಡಿಗೆ ಸರಬರಾಜು ಮಾಡುತ್ತಿದ್ದು, ಎಲ್ಲ ಔಷಧಗಳ ಶೇಕಡಾ ೮೦ಷ್ಟು ಮಾಲ್ದೀವ್ಸ್ ಮತ್ತು ಮಾರಿಷಸ್ ಸೇರಿದಂತೆ ನೆರೆಯ ರಾಷ್ಟ್ರಗಳಿಗೆ ಸರಬರಾಜು ಆಗುತ್ತಿದೆ ಅಧಿಕೃತ ಮೂಲಗಳು ತಿಳಿಸಿದವು.
ಹೈಡ್ರಾಕ್ಸಿಕ್ಲೋರೋಕ್ವಿನ್‌ನ್ನು ಅಮೆರಿಕ, ಸ್ಪೇನ್, ಜರ್ಮನಿ ಮತ್ತು ಬ್ರೆಜಿಲ್‌ನಂತಹ ಕೊರೋನಾವೈರಸ್ ಅತಿಯಾಗಿ ಬಾಧಿಸಿರುವ ದೇಶಗಳಿಗೆ ಒದಗಿಸಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಡಿಜಿಎಫ್‌ಟಿ ಏಪ್ರಿಲ್ ೪ರಂದು ವಿಧಿಸಿರುವ ನಿಷೇಧದ ಕಾರಣ ಹೈಡ್ರಾಕ್ಸಿಕ್ಲೊರೋಕ್ವಿನ್ ಸರಬರಾಜು ಆಗಿಲ್ಲ. ಆರೋಗ್ಯ ಸಚಿವಾಲಯದ ಬೇಡಿಕೆ ಮತ್ತು ಫಾರ್ಮಾಸ್ಯುಟಿಕಲ್ ಉದ್ಯಮದ ಸಮನ್ವಯಕ್ಕಾಗಿ ಉನ್ನತಾಧಿಕಾರ ಸಮಿತಿಯ ಸಭೆ ನಡೆಯಬೇಕಾಗಿತ್ತು. ನೀತಿಯಲ್ಲಿ ಆಗಿರುವ ಬದಲಾವಣೆ ಬಗ್ಗೆ ನಾವು ಎಲ್ಲ ರಾಷ್ಟ್ರಗಳಗೂ ತಿಳಿಸಿದ್ದೇವೆ. ಇದು ದಾಖಲೆಯ ವಿಷಯ ಎಂದು ಹಿರಿಯ ಅಧಿಕಾರಿಯೊಬ್ಬರು ನುಡಿದರು.

ನಿರ್ಣಾಯಕ ಔಷಧಗಳಿಗೆ ಸಂಬಂಧಿಸಿದಂತೆ ನೀತಿಯಲ್ಲಿ ಆಗಿರುವ ಬದಲಾವಣೆಯ ವಿಷಯವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಸೋಮವಾರ ನಸುಕಿನಲ್ಲೇ ಸಂಬಂಧಪಟ್ಟ ದೇಶಗಳಿಗೆ ತಿಳಿಸಲಾಗಿತ್ತು. ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸುವಂತೆ ಡಿಜಿಎಫ್ ಟಿಗೆ ಸೂಚಿಸಲಾಗಿತ್ತು ಎಂದು ಮೂಲಗಳು ಹೇಳಿವೆ.

ವಿದೇಶಾಂಗ ಸಚಿವಾಲಯವು ಬಗ್ಗೆ ಮಂಗಳವಾರ ಪ್ರಕಟಣೆ ನೀಡಿದೆ.
ರಫ್ತು ಮೇಲಿನ ನಿಷೇಧ ತೆರವುಗೊಳಿಸುವ ಮೋದಿ ಸರ್ಕಾರದ ನಿರ್ಣಯದ ಹಿಂದೆ ಭಾರತವು ನಿರ್ಣಾಯಕ ಔಷಧಗಳಿಗೆ ಸಂಬಂಧಿಸಿದಂತೆ ಅದರಲ್ಲೂ ನಿರ್ದಿಷ್ಟವಾಗಿ ವಿಶ್ವವು ಕೊರೋನಾವೈರಸ್ ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿರುವಾಗ, ತನ್ನ ಯಾವುದೇ ಬದ್ಧತೆಯಿಂದ ಹಿಂದೆ ಸರಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶವಿದೆ ಎಂದು ಬೆಳವಣಿಗೆ ಬಗೆಗಿನ ಅರಿವು ಹೊಂದಿರುವ ವ್ಯಕ್ತಿ ತಿಳಿಸಿದರು.

ಭಾರತವು ೫೦ ಬಿಲಿಯನ್ (ಶತಕೋಟಿ) ಡಾಲರ್ ಮೌಲ್ಯದ ಫಾರ್ಮಾ ಕೈಗಾರಿಕೆಯನ್ನು ಹೊಂದಿದ್ದು, ಉದ್ಯಮಗಳ ನೌಕರರು ವಿಶ್ವದ ಬಹುಭಾಗಕ್ಕೆ ನಿರ್ಣಾಯಕ ಔಷಧಗಳನ್ನು ಉತ್ಪಾದಿಸಿಕೊಡುತ್ತಾರೆ. ಮಾಲ್ದೀವ್ಸ್, ಸಿಚೆಲ್ಲಸ್ ಮತ್ತು ಮಾರಿಷಸ್‌ನಂತಹ ಕೆಲವು ದೇಶಗಳು ನಿರ್ಣಾಯಕ ಔಷಧಗಳಿಗಾಗಿ ಭಾರತೀಯ ಉದ್ಯಮವನ್ನೇ ಅವಲಂಬಿಸಿದ್ದಾರೆ.

No comments:

Advertisement