My Blog List

Tuesday, May 26, 2020

ಚೀನಾ ಗಡಿ ಬಿಕ್ಕಟ್ಟು: ಪ್ರಧಾನಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ

ಚೀನಾ ಗಡಿ ಬಿಕ್ಕಟ್ಟು: ಪ್ರಧಾನಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ
ನವದೆಹಲಿ: ಲಡಾಖ್ನಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲಿ  2020 ಮೇ 26ರ ಮಂಗಳವಾರ ರಾಷ್ಟ್ರೀಯ ಭದ್ರತಾ ಕಾರ್ಯದರ್ಶಿ (ಎನ್ ಎಸ್ ) ಅಜಿತ್ ದೋವಲ್, ಮುಖ್ಯ ರಕ್ಷಣಾ ಸಿಬ್ಬಂದಿ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಮೂರೂ ಪಡೆಗಳ ಮುಖ್ಯಸ್ಥರ ಸಭೆ ನಡೆಯಿತು.

ಇದಲ್ಲದೆ ಪ್ರಧಾನಿ ಮೋದಿಯವರು ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶೃಂಗ್ಲಾ ಅವರ ಜೊತೆಗೂ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು ಎಂದು ಸುದ್ದಿ ಮೂಲಗಳು ತಿಳಿಸಿದವು.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು  ಸಿಡಿಎಸ್ ಜನರಲ್ ರಾವತ್ ಮತ್ತು ಮೂರೂ ಪಡೆಗಳ ಮುಖ್ಯಸ್ಥರ ಜೊತೆಗೆ ಚೀನಾ ವಿಷಯಕ್ಕೆ ಸಂಬಂಧಿಸಿದಂತೆ ಸುದೀರ್ಘ ಭದ್ರತಾ ಪರಿಶೀಲನಾ ಸಭೆ ನಡೆಸಿದ ಸ್ವಲ್ಪವೇ ಹೊತ್ತಿನಲ್ಲಿ ಬೆಳವಣಿಗೆ ನಡೆಯಿತು.
ಪ್ರಧಾನಿ ಸಭೆಗೆ ಮುನ್ನ ಲಡಾಖ್ನಲ್ಲಿ ಚೀನಾ ಜೊತೆಗಿನ ಗಡಿ ಬಿಕ್ಕಟ್ಟು ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಮೂರೂ ಪಡೆಗಳು ಮುಖ್ಯಸ್ಥರ ಜೊತೆಗೆ ಸುದೀರ್ಘವಾದ ಭದ್ರತಾ ಪರಿಶೀಲನಾ ಸಭೆ ನಡೆಸಿದರು.

ಗಡಿಯಲ್ಲಿ ಚೀನಾದ ಇತ್ತೀಚಿನ ಪ್ರಚೋದನೆಗೆ ಪ್ರತಿಕ್ರಿಯಿಸಲು ಇರುವ ಆಯ್ಕೆಗಳನ್ನು ಭಾರತವು ತೂಗಿ ನೋಡುತ್ತಿರುವುದರ ಮಧ್ಯೆ ನಡೆದಿರುವ ಸರಣಿ ಸಮಾಲೋಚನೆಗಳ ಮಧ್ಯೆ ಸಭೆಯು ಇತ್ತೀಚಿನದಾಗಿದೆ.

ಸೇನಾ ದಂಡನಾಯಕ ಎಂಎಂ ನರವಾಣೆ ಅವರು ಗೃಹ ಸಚಿವರಿಗೆ ಉಭಯ ರಾಷ್ಟ್ರಗಳ ನಡುವಣ ವಾಸ್ತವಿಕ ಗಡಿಯಾಗಿರುವ ನೈಜ ನಿಯಂತ್ರಣ ರೇಖೆಯಲ್ಲಿನ (ಎಲ್ಎಸಿ) ಎರಡು ದಿನಗಳ ಹಿಂದಿನ ಸ್ಥಿತಿಗತಿಯನ್ನು ವಿವರಿಸಿದರು. ಸೇನಾ ಮುಖ್ಯಸ್ಥರು ಪರಿಸ್ಥಿತಿ ಅಧ್ಯಯನಕ್ಕಾಗಿ ಲೇಹ್ಗೆ ಎರಡು ದಿನಗಳ ಹಿಂದೆ ಭೇಟಿ ನೀಡಿ ವಾಪಸಾಗಿದ್ದರು.

ಮೇ ೫ರಂದು ಭಾರತ ಮತ್ತು ಚೀನೀ ಸೇನೆಯ ಮಧ್ಯೆ ಮೊದಲ ಗಡಿ ಘರ್ಷಣೆ ನಡೆದ ಬಳಿಕ ಉಭಯ ರಾಷ್ಟ್ರಗಳ ಮಧ್ಯೆ ನಡೆದಿರುವ ಸುತ್ತಿನ ಮಾತುಕತೆಗಳು ವಿಫಲವಾಗಿವೆ. ಉಭಯ ಕಡೆಗಳೂ ವಿವಾದಿತ ಗಡಿ ಪ್ರದೇಶದಲ್ಲಿ ತಮ್ಮ ತಮ್ಮ ನಿಲುವನ್ನೇ ಪ್ರತಿಪಾದಿಸಿದ್ದಾರೆ.

ಭಾರತವು ಎಲ್ಎಸಿಯ ತನ್ನ ಭಾಗದಲ್ಲಿ ಮೂಲಸವಲತ್ತು ನಿರ್ಮಿಸುವುದನ್ನು ನಿಲ್ಲಿಸಬೇಕು ಎಂಬುದಾಗಿ ಚೀನಾ ಷರತ್ತು ಹಾಕಿದೆ ಎಂದು ಮೂಲಗಳು ಹೇಳಿವೆ. ಆದರೆ ಷರತ್ತು ಭಾರತಕ್ಕೆ ಸ್ವೀಕಾರಾರ್ಹವಾಗಿಲ್ಲ. ಪ್ರತಿಯಾಗಿ ಚೀನಾವು ಗಡಿಯಲ್ಲಿ ಯಥಾಸ್ಥಿತಿ ಪಾಲಿಸಬೇಕು ಎಂದು ಭಾರತವು ಚೀನಾಕ್ಕೆ ಸೂಚಿಸಿದೆ ಎಂದು ಮೂಲಗಳು ಹೇಳಿವೆ.

ಭಾರತವು ಗಡಿಯಲ್ಲಿನ ತನ್ನ ಭಾಗದಲ್ಲಿ ಕಳೆದ ವರ್ಷ ನಿರ್ಮಿಸಿದ ೨೫೫ ಕಿಮೀ ಉದ್ದದ ದಾರ್ಬುಕ್ -ಶ್ಯೋಕ್-ಡಿಬಿಒ ರಸ್ತೆಯೇ ಪೀಪಲ್ಸ್ ಲಿಬರೇಷನ್ ಆರ್ಮಿಗೆ (ಜನತಾ ವಿಮೋಚನಾ ಸೇನೆ) ವಿವಾದದ ಕೇಂದ್ರವಾಗಿದೆ. ರಸ್ತೆಯು ಡೆಪ್ಸಂಗ್ ಪ್ರದೇಶ ಮತ್ತು ಗಲ್ವಾನ್ ಕಣಿವೆಗೆ ಸಂಪರ್ಕ ಕಲ್ಪಿಸುವುದರ ಜೊತೆಗೆ ಕಾರಾಕೋರಂ ಕಣಿವೆ ಮಾರ್ಗದ ಸಮೀಪದವರೆಗೂ ಬಂದು ಕೊನೆಗೊಳ್ಳುತ್ತದೆ. ಮೂಲಸವಲತ್ತು ನಿರ್ಮಾಣದಿಂದ ಭಾರತೀಯ ಪಡೆಗೆ ಪಹರೆ ಸುಲಭವಾಗಿದೆ ಮತ್ತು ಪಹರೆಯ ಮಧ್ಯದ ಅಂತರವನ್ನು ಹೆಚ್ಚಿಸಲು ಅನುಕೂಲವಾಗಿದೆ.

ಸೇನಾ ಕಮಾಂಡರ್ಗಳು ದೆಹಲಿಯಲ್ಲಿ ಮೂರು ದಿನಗಳ ದ್ವೈವಾರ್ಷಿಕ ಸೇನಾ ಕಮಾಂಡರುಗಳ ಸಮ್ಮೇಳನದಲ್ಲಿ ಪಾಲ್ಗೊಳ್ಳುವುದಕ್ಕೆ ಒಂದು ದಿನ ಮುಂಚಿತವಾಗಿ ಮಂಗಳವಾರ ರಕ್ಷಣಾ ಸಚಿವರ ಜೊತೆಗಿನ ಸಮಾಲೋಚನೆ ನಡೆದಿದೆ.

ಸಮ್ಮೇಳನವು ಸಾಗಣೆ ಮತ್ತು ಮಾನವ ಸಂಪನ್ಮೂಲಗಳ ಬಗ್ಗೆ ಗಮನ ಹರಿಸಲಿದೆ ಎಂದು ಸೇನಾ ಮೂಲಗಳು ಹೇಳಿವೆ. ಆದರೆ ಗಡಿಯಲ್ಲಿ ಅನಾವರಣಗೊಳ್ಳುತ್ತಿರುವ ಚೀನಾದ ತಕರಾರು ವಿಷಯವೇ ಸಮ್ಮೇಳನದ ಚರ್ಚೆಗಳಲ್ಲಿ ಪ್ರಮುಖ ವಿಷಯವಾಗಬಹುದು ಎಂದು ಹೇಳಲಾಗುತ್ತಿದೆ.

ತಿಂಗಳ ಆದಿಯಲ್ಲಿ ಲಡಾಖ್ ಪ್ಯಾಂಗೋಂಗ್ ತ್ಸೊ ಲೇಕ್ ಪ್ರದೇಶದಲ್ಲಿ ಭಾರತ ಮತ್ತು ಚೀನಾದ ಸುಮಾರು ೨೫೦ ಸೇನಾ ಸಿಬ್ಬಂದಿ ಕಬ್ಬಿಣದ ಸಲಾಕೆಗಳು ಮತ್ತು ಬಡಿಗೆಗಳೊಂದಿಗೆ ಘರ್ಷಿಸಿದ್ದಲ್ಲದೆ, ಪರಸ್ಪರ ಕಲ್ಲು ತೂರಾಟಕ್ಕೂ ಇಳಿದಿದ್ದರು.   ಘಟನೆಯ ಬಳಿಕ ಗಡಿ ಪ್ರಕ್ಷುಬ್ಧತೆ ಹೆಚ್ಚಿದೆ. ಘಟನೆಯಲ್ಲಿ ಉಭಯ ಕಡೆಗಳ ಸೈನಿಕರೂ ಗಾಯಗೊಂಡಿದ್ದರು.

ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಭಾರತ ಮತ್ತು ಚೀನಾ ಪಡೆಗಳ ಸುಮಾರು ೧೫೦ ಮಂದಿ ಸಿಬ್ಬಂದಿ ಸಿಕ್ಕಿಂ ವಿಭಾಗದ ನಕು ಲಾ ಕಣಿವೆಯ ಸಮೀಪ ಮೇ ೯ರಂದು ಮುಖಾಮುಖಿ ಘರ್ಷಣೆಗೆ ಇಳಿದಿದ್ದರು. ಘಟನೆಯಲ್ಲಿ ಉಭಯ ಕಡೆಗಳ ಕನಿಷ್ಠ ೧೦ ಸೈನಿಕರು ಗಾಯಗೊಂಡಿದ್ದರು.

ಹಿಂಸಾತ್ಮಕ ಘರ್ಷಣೆಗಳ ಬಳಿಕ ಭಾರತ ಮತ್ತು ಚೀನಾ ಎರಡೂ ಹೆಚ್ಚುವರಿ ತುಕಡಿಗಳನ್ನು ರವಾನಿಸಿದ್ದಲ್ಲದೆ ಪೂರ್ವ ಲಡಾಖ್ನಲ್ಲಿ ಎಲ್ಎಸಿಯಿಂದ ಸ್ವಲ್ಪ ದೂರದಲ್ಲಿ ಕನಿಷ್ಠ ಮೂರು ಪ್ರದೇಶಗಳಲ್ಲಿ ರಕ್ಷಣಾ ಕೋಟೆ ಮತ್ತು ಟೆಂಟ್ಗಳನ್ನು ನಿರ್ಮಿಸಿದ್ದವು. ಎಲ್ಎಸಿಯ ಆಚೆಯ ಬದಿಯಲ್ಲಿ ಚೀನಾವು ತನ್ನ ಸೈನಿಕರನ್ನು ಹೆಚ್ಚಿಸಿಕೊಳ್ಳುತ್ತಿರುವ ವರದಿಗಳನ್ನು ಅನುಸರಿಸಿ ಉತ್ತರಾಖಂಡದಲ್ಲೂ ಭಾರತೀಯ ಸೇನೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.  

No comments:

Advertisement