ಭಾರತ: ಸೋಂಕು ೫೨,೯೫೨, ಸಾವು ೧೭೮೩, ಚೇತರಿಕೆ ೧೫,೨೬೬
ನವದೆಹಲಿ: ಕೋವಿಡ್ ೧೯ ವೈರಸ್ಗೆ ಇಬ್ಬರು ಗಡಿ ಭದ್ರತಾಪಡೆಯ (ಬಿಎಸ್ಎಫ್) ಯೋಧರು ಸಾವನ್ನಪ್ಪಿರುವ ಘಟನೆ 2020 ಮೇ 07ರ ಗುರುವಾರ ಘಟಿಸಿತು. ಇದೇ ವೇಳೆಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ೫೨,೯೫೨ಕ್ಕೆ ಏರಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ ೧೭೮೩ಕ್ಕೆ ಏರಿದೆ. ಒಟ್ಟು ಸೋಂಕಿತರಲ್ಲಿ ೧೫,೨೬೬ ಮಂದಿ ಚೇತರಿಸಿದ್ದು ಚೇತರಿಕೆ ಪ್ರಮಾಣ ಶೇಕಡಾ ೨೮.೮೩ಕ್ಕೆ ಏರಿತು.
ಗಡಿ ಭದ್ರತಾ ಪಡೆಯ ಒಬ್ಬ ಯೋಧ ಗುರುವಾರ ವಿಧಿವಶರಾಗಿದ್ದು, ಮತ್ತೊಬ್ಬರು ಸೋಮವಾರ ದಿಲ್ಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು ಎಂದು ವರದಿ ಹೇಳಿತು.
ಕಳೆದ ತಿಂಗಳು ಸಿಆರ್ಪಿಎಫ್ ನ ೫೫ ವರ್ಷದ ಸಬ್ಇನ್ಸ್ಪೆಕ್ಟರ್ ವಿಧಿವಶರಾಗಿದ್ದರು. ಕೋವಿಡ್ ೧೯ ವೈರಸ್ ನಿಂದ ಸಾವನ್ನಪ್ಪಿರುವ ಬಿಎಸ್ಎಫ್ ಯೋಧರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ ಬಿಎಸ್ ಎಫ್ ಪ್ರಕಟಣೆ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಬರಲಿ ಎಂದು ಹಾರೈಸಿದೆ.
ಬುಧವಾರ ನಡೆಸಿದ ಪರೀಕ್ಷೆಯಲ್ಲಿ ೮೫ ಬಿಎಸ್ಎಫ್ ಸಿಬ್ಬಂದಿಗೆ ಕೋವಿಡ್ ೧೯ ವೈರಸ್ ಪಾಸಿಟಿವ್ ವರದಿ ಬಂದಿತ್ತು. ಒಂದೇ ದಿನದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪ್ರಕರಣ ಪತ್ತೆಯಾಗಿದೆ. ಕೋವಿಡ್ ೧೯ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು..
ದೇಶದಲ್ಲಿ ಹೊಸ ೩೫೬೧ ಪ್ರಕರಣಗಳೊಂದಿಗೆ ದೇಶದಲ್ಲಿ ಕೋವಿಡ್-೧೯ ಸೋಂಕು ತಗುಲಿದವರ ಸಂಖ್ಯೆ ಗುರುವಾರ ೫೨,೯೫೨ಕ್ಕೆ ಏರಿತು ಮತ್ತು ೮೯ ಹೊಸ ಸಾವುಗಳೊಂದಿಗೆ ಒಟ್ಟು ಸಾವನ್ನಪ್ಪಿದವರ ಸಂಖ್ಯೆ ೧,೭೮೩ಕ್ಕೆ ಏರಿತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತು.
ಒಟ್ಟು ಸೋಂಕಿತರಲ್ಲಿ ೧೫,೨೬೬ ಮಂದಿ ಗುಣಮುಖರಾಗಿದ್ದು ದೇಶದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ ೩೫,೯೦೨ ಆಗಿದೆ. ಹೀಗಾಗಿ ಚೇತರಿಕೆ ಪ್ರಮಾಣ ಶೇಕಡಾ ೨೮.೮೩ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿ ನುಡಿದರು.
ಭಾರತದ ಒಟ್ಟು ಕೊರೋನಾ ಪ್ರಕರಣಗಳಲ್ಲಿ ೧೧೧ ಪ್ರಕರಣಗಳು ವಿದೇಶೀ ರಾಷ್ಟ್ರೀಯರ ಪ್ರಕರಣಗಳು. ಬುಧವಾರ ಬೆಳಗ್ಗಿನಿಂದ ಗುರುವಾರದವರೆಗೆ ಒಟ್ಟು ೮೯ ಸಾವಿನ ಪ್ರಕರಣಗಳು ವರದಿಯಾgiವೆ. ಈ ಪೈಕಿ ೩೪ ಮಂದಿ ಮಹಾರಾಷ್ಟ್ರದಲ್ಲಿ, ೨೮ ಮಂದಿ ಗುಜರಾತಿನಲ್ಲಿ, ೯ ಮಂದಿ ಮಧ್ಯಪ್ರದೇಶದಲ್ಲಿ ತಲಾ ನಾಲ್ವರು ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ, ಮೂವರು ರಾಜಸ್ಥಾನದಲ್ಲಿ, ತಲಾ ಇಬ್ಬರು ಪಂಜಾಬ್ ಮತ್ತು ತಮಿಳುನಾಡಿನಲ್ಲಿ, ತಲಾ ಒಬ್ಬರು ದೆಹಲಿ, ಹರಿಯಾಣ ಮತ್ತು ಒಡಿಶಾದಲ್ಲಿ ಸಾವನ್ನಪ್ಪಿದ್ದಾರೆ.
ಒಟ್ಟು ೧,೭೮೩ ಸಾವುಗಳಲ್ಲಿ ಮಹಾರಾಷ್ಟ್ರದಲ್ಲಿ ಅತ್ಯಧಿಕ ಸಾವುಗಳು ಸಂಭವಿಸಿದ್ದು ೬೫೧ ಮಂದಿ ಮೃತರಾಗಿದ್ದಾರೆ. ಎರಡನೇ ಸ್ಥಾನದಲ್ಲಿರುವ ಗುಜರಾತಿನಲ್ಲಿ ೩೯೬ ಸಾವುಗಳು ಸಂಭವಿಸಿವೆ. ಮಧ್ಯಪ್ರದೇಶದಲ್ಲಿ ೧೮೫, ಪಶ್ಚಿಮ ಬಂಗಾಳದಲ್ಲಿ ೧೪೪, ರಾಜಸ್ಥಾನದಲ್ಲಿ ೯೨, ದೆಹಲಿಯಲ್ಲಿ ೬೫, ಉತ್ತರ ಪ್ರದೇಶದಲ್ಲಿ ೬೦ ಮತ್ತು ಆಂಧ್ರಪ್ರದೇಶದಲ್ಲಿ ೩೬ ಸಾವು ಸಂಭವಿಸಿದೆ.
ತಮಿಳುನಾಡಿನಲ್ಲಿ ಕೋವಿಡ್ ಸಾವಿನ ಸಂಖ್ಯೆ ೩೫ಕ್ಕೆ ಏರಿದ್ದರೆ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ತಲಾ ೨೯ ಸಾವುಗಳು ಸಂಭವಿಸಿವೆ.ಪಂಜಾಬಿನಲ್ಲಿ ೨೭, ಜಮ್ಮು ಮತ್ತು ಕಾಶ್ಮೀರದಲ್ಲಿ ೮, ಹರಿಯಾಣದಲ್ಲಿ ೭, ಕೇರಳ ಮತ್ತು ಬಿಹಾರದಲ್ಲಿ ತಲಾ ನಾಲ್ಕು ಸಾವುಗಳು ವರದಿಯಾಗಿವೆ.
ತಮಿಳುನಾಡಿನಲ್ಲಿ ೫೮೦ ಹೊಸ ಪ್ರಕರಣ
ಈ ಮಧ್ಯೆ ತಮಿಳುನಾಡಿನಲ್ಲಿ ಗುರುವಾರ ೫೮೦ ಹೊಸ ಕೋವಿಡ್-೧೯ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ೫,೪೦೯ಕ್ಕೇ ಏರಿತು. ರಾಜ್ಯದಲ್ಲಿ ಒಟ್ಟು ೩೭ ಸಾವುಗಳು ಸಂಭವಿಸಿವೆ. ಗುರುವಾರ ವರದಿಯಾಗಿರುವ ಬಹುತೇಕ ಹೊಸ ಪ್ರಕರಣಗಳು ಚೆನ್ನೈಯ ಕೊಯಂಬೇಡು ಮಾರುಕಟ್ಟೆಗೆ ಸಂಬಂಧಿಸಿವೆ. ಈ ಮಾರುಕಟ್ಟೆ ಇದೀಗ ಕೊರೋನಾವೈರಸ್ಸಿನ ಹಾಟ್ ಸ್ಪಾಟ್ ಆಗಿ ಬದಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖಾ ಅಧಿಕಾರಿಯೊಬ್ಬರು ತಿಳಿಸಿದರು.
ಕರ್ನಾಟಕ ಸರ್ಕಾರವು, ತಮ್ಮ ರಾಜ್ಯಗಳಿಗೆ ಹಿಂತಿರುಗಬಯಸಿರುವ ವಲಸೆ ಕಾರ್ಮಿಕರನ್ನು ಒಯ್ಯುವ ವ್ಯವಸ್ಥೇ ಶೀಘ್ರ ಪುನಾರಂಭವಾಗಲಿದೆ ಎಂದು ಗುರುವಾರ ಪ್ರಕಟಿಸಿದ. ಹೊರರಾಜ್ಯಗಳ ವಲಸೆ ಕಾರ್ಮಿಕರಿಗೆ ತಮ್ಮ ರಾಜ್ಯಗಳಿಗೆ ಹಿಂದಿರುಗಲು ಅವಕಾಶ ನೀಡದ ರಾಜ್ಯ ಸರ್ಕಾರದ ಕ್ರಮವನ್ನು ವಿಪಕ್ಷಗಳು ಟೀಕಿಸಿದ ಬಳಿಕ ಬಿಜೆಪಿ ನೇತೃತ್ವದ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ.
ಈ ನಿಟ್ಟಿಲ್ಲಿ ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ಮಣಿಪುರ, ತ್ರಿಪುರ, ಪಶ್ಚಿಮಬಂಗಾಳ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಒಡಿಶಾ ರಾಜ್ಯ ಸರ್ಕಾರಗಳಿಗೆ ಕರ್ನಾಟಕ ಸರ್ಕಾರವು ಪತ್ರಗಳನ್ನು ಕಳುಹಿಸಿದೆ. ಬಿಹಾರವು ಮೇ ೮ರಿಂದ ಮೇ ೧೫ರವರೆಗೆ ಪ್ರತಿದಿನ ಒಂದು ರೈಲುಗಾಡಿಯಷ್ಟು ಕಾರ್ಮಿಕರನ್ನು ಕರೆದುಕೊಳ್ಳುವುದಾಗಿ ಬಿಹಾರ ಉತ್ತರಿಸಿದೆ. ಉಳಿದ ರಾಜ್ಯಗಳಿಂದ ಇನ್ನೂ ಯಾವುದೇ ಉತ್ತರ ಬಂದಿಲ್ಲ.
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೩೮,೫೨,೬೬೮ ಸಾವು ೨,೬೬,೦೭೭
ಚೇತರಿಸಿಕೊಂಡವರು- ೧೩,೧೭,೧೩೩
ಅಮೆರಿಕ ಸೋಂಕಿತರು ೧೨,೬೬,೪೪೨, ಸಾವು ೭೪,೯೪೮
ಸ್ಪೇನ್ ಸೋಂಕಿತರು ೨,೫೬,೮೫೫, ಸಾವು ೨೬,೦೭೦
ಇಟಲಿ ಸೋಂಕಿತರು ೨,೧೪,೪೫೭, ಸಾವು ೨೯,೬೮೪
ಜರ್ಮನಿ ಸೋಂಕಿತರು ೧,೬೮,೨೭೬, ಸಾವು ೭,೨೭೨
ಚೀನಾ ಸೋಂಕಿತರು ೮೨,೮೮೫, ಸಾವು ೪,೬೩೩
ಇಂಗ್ಲೆಂಡ್ ಸೋಂಕಿತರು ೨,೦೧,೧೦೧, ಸಾವು ೩೦,೦೭೬
ಅಮೆರಿಕದಲ್ಲಿ ೧೪೯, ಇರಾನಿನಲ್ಲಿ ೬೮, ಬೆಲ್ಜಿಯಂನಲ್ಲಿ ೭೬, ಸ್ಪೇನಿನಲ್ಲಿ ೨೧೩, ನೆದರ್ ಲ್ಯಾಂಡ್ಸ್ನಲ್ಲಿ ೮೪, ರಶ್ಯಾದಲ್ಲಿ ೮೮, ಸ್ವೀಡನ್ನಲ್ಲಿ ೯೯, ಮೆಕ್ಸಿಕೋದಲ್ಲಿ ೧೯೭, ಒಟ್ಟಾರೆ ವಿಶ್ವಾದ್ಯಂತ ೧,೨೪೦ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.
No comments:
Post a Comment