My Blog List

Wednesday, May 20, 2020

ಕಲ್ಲಿದ್ದಲು ಗಣಿಗಾರಿಕೆ: ಕೋಲ್ ಇಂಡಿಯಾ ಏಕಸ್ವಾಮ್ಯಕ್ಕೆ ತೆರೆ

ಕಲ್ಲಿದ್ದಲು ಗಣಿಗಾರಿಕೆ:  ಕೋಲ್ ಇಂಡಿಯಾ ಏಕಸ್ವಾಮ್ಯಕ್ಕೆ ತೆರೆ
ನವದೆಹಲಿ: ಕಲ್ಲಿದ್ದಲು ನಿಕ್ಷೇಪಗಳ ವಾಣಿಜ್ಯ ಗಣಿಗಾರಿಕೆಯನ್ನು ಭಾರತ ಶೀಘ್ರದಲ್ಲೇ ಆರಂಭಿಸಲಿದೆ. ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಏಕಸ್ವಾಮ್ಯಕ್ಕೆ ಕೊನೆ ಹಾಡುವ ವಿಧಿ ವಿಧಾನಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2020 ಮೇ 20ರ ಬುಧವಾರ ತನ್ನ ಒಪ್ಪಿಗೆ ನೀಡಿತು.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಕಲ್ಲಿದ್ದಲು ಮತ್ತು ಕಂದು ಕಲ್ಲಿದ್ದಲು (ಲಿಗ್ನೈಟ್) ಗಣಿಗಳನ್ನು ಆದಾಯ ಹಂಚಿಕೆ ಆಧಾರದಲ್ಲಿ ಹರಾಜು ಹಾಕುವ ವಿಧಿವಿಧಾನಕ್ಕೆ ಒಪ್ಪಿಗೆ ನೀಡಿತು. ಆದಾಯ ಹಂಚಿಕೆಯ ಮಾನದಂಡವನ್ನು ವಿಧಿ ವಿಧಾನವು ಒದಗಿಸಿದೆ.

ಬಿಡ್ಡರುಗಳು ಅಥವಾ ಬೆಲೆ ಕೂಗುವವರು ಸರ್ಕಾರಕ್ಕೆ ಪಾವತಿ ಮಾಡುವ ಕಂದಾಯದ ಶೇಕಡಾವಾರು ಪಾಲನ್ನು ಬಿಡ್ ಮಾಡಬೇಕಾಗುತ್ತದೆ. ಆರಂಭಿಕ ದರವು ಕಂದಾಯ ಪಾಲಿನ ಶೇಕಡಾ ೪ರಷ್ಟು ಆಗಿರುತ್ತದೆ. ಕಂದಾಯ ಪಾಲಿನ ಶೇಕಡಾ . ಗುಣಕಗಳಲ್ಲಿ ಬಿಡ್ಗಳನ್ನ ಅಂಗೀಕರಿಸಲಾಗುವುದು ಎಂದು ಕೇಂದ್ರ ಸರ್ಕಾರದ ಹೇಳಿಕೆಯೊಂದು ತಿಳಿಸಿತು.

ಕಲ್ಲಿದ್ದಲು ವಲಯವನ್ನು ಖಾಸಗಿ ಪಾಲ್ಗೊಳ್ಳುವಿಕೆಗಾಗಿ ತೆರೆಯಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ಶನಿವಾರ ಪ್ರಕಟಿಸಿದ್ದರು.

ಕಲ್ಲಿದ್ದಲು ವಾಣಿಜ್ಯ ಹರಾಜಿಗೆ ಸುಲಭ ಪ್ರವೇಶ ಮತ್ತು ನಿರ್ಗಮನ ನಿಯಮಗಳನ್ನು ರೂಪಿಸಲಾಗಿದ್ದು, ಹಿಂಡಾಲ್ಕೋ, ಜಿಂದಾಲ್ ಸ್ಟೀಲ್ ಅಂಡ್ ಪವರ್, ಜೆ ಎಸ್ ಡಬ್ಲ್ಯೂ ಎನರ್ಜಿ, ಅದನಿ ಸಮೂಹ, ವೇದಾಂತ ಸಮೂಹವಲ್ಲದೆ ಪಿಯಾಬೋಡಿ, ಬಿಎಚ್ಪಿ ಬಿಲ್ಲಿಟನ್ ಮತ್ತು ರಿಯೋ ಟಿಂಟೋದಂತಹ ಜಾಗತಿಕ ಗಣಿಗಾರಿಕಾ ಸಂಸ್ಥೆಗಳು ಹರಾಜಿನಲ್ಲಿ ಪಾಲ್ಗೊಳ್ಳಬಹುದು ಎಂದು ಸರ್ಕಾರ ನಿರೀಕ್ಷಿಸಿದೆ.

ಕಲ್ಲಿದ್ದಲು ವಲಯದಲ್ಲಿ ವಾಣಿಜ್ಯ ಗಣಿಗಾರಿಕೆಯನ್ನು ತರಲಾಗುವುದು ಮತ್ತು ಸರ್ಕಾರಿ ಏಕಸ್ವಾಮ್ಯವನ್ನು ನಿವಾರಿಸಲಾಗುವುದು. ಟನ್ನಿಗೆ ನಿಗದಿತ ರೂಪಾಯಿ ದರದ ಬದಲಿಗೆ ಸರ್ಕಾರವು ಸ್ಪರ್ಧಾತ್ಮಕತೆ, ಪಾರದರ್ಶಕತೆ ಮತ್ತು ಕಲ್ಲಿದ್ದಲು ವಲಯದಲ್ಲಿ ಖಾಸಗಿ ಪಾಲ್ಗೊಳ್ಳುವಿಕೆಯನ್ನು ವ್ಯವಸ್ಥಿತ ರೂಪದಲ್ಲ್ಲಿ ಅನುಷ್ಠಾನಕ್ಕೆ ತರಲಿದೆ. ೫೦ ಹೊಸ ಕಲ್ಲಿದ್ದಲು ಬ್ಲಾಕುಗಳನ್ನು ವಾಣಿಜ್ಯ ಗಣಿಗಾರಿಕೆಗಾಗಿ ತತ್ಕ್ಷಣವೇ ಒದಗಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದರು.

ಗಣಿಗಾರಿಕೆ ಮಾಡಿದ ಕಲ್ಲಿದ್ದಲು ತೆರವಿಗಾಗಿ ಕೇಂದ್ರ ಸರ್ಕಾರವು ೫೦,೦೦೦ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತದೆ. ೫೦,೦೦೦ ಕೋಟಿ ರೂಪಾಯಿಗಳ ಹೂಡಿಕೆಯನ್ನು ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ವಿಸ್ತರಣೆಗಾಗಿ ವ್ಯಯಿಸುವ ಗುರಿ ಇಟ್ಟುಕೊಳ್ಳಲಾಗಿದೆ ತನ್ಮೂಲಕ ೨೦೨೩-೨೪ರ ಹೊತ್ತಿಗೆ ಬಿಲಿಯನ್ (೧೦೦ ಕೋಟಿ) ಟನ್ ಕಲ್ಲಿದ್ದಲು ಉತ್ಪಾದಿಸುವ ಹಾಗೂ ಅದೇ ವೇಳೆಗೆ ಖಾಸಗಿ ಬ್ಲಾಕುಗಳಲ್ಲೂ ಕಲ್ಲಿದ್ದಲು ಉತ್ಪಾದನೆ ಮಾಡುವ ಗುರಿ ಇದೆ ಎಂದು ಕೇಂದ್ರ ಸಚಿವರು ತಿಳಿಸಿದ್ದರು.

ಗರಿಷ್ಠ ಮಟ್ಟದಲ್ಲಿ ಆದಷೂ ಬೇಗ ಗರಿಷ್ಠ ಪ್ರಮಾಣದ ಕಲ್ಲಿದ್ದಲು ಲಭಿಸುವಂತೆ ಮಾಡುವುದು ಹೊಸ ಕಾರ್ಯ ವಿಧಾನದ ಗುರಿಯಾಗಿದೆ. ಇದು ಕಲ್ಲಿದ್ದಲು ಬ್ಲಾಕುಗಳಿಗೆ ಗರಿಷ್ಠ ಪ್ರಮಾಣದಲ್ಲಿ ಹೊಸ ಮಾರುಕಟ್ಟೆ ಒದಗಿಸುವ ಹಾಗೂ ಕಲ್ಲಿದ್ದಲು ಬ್ಲಾಕುಗಳನ್ನು ತ್ವರಿತವಾಗಿ ಅಭಿವೃದ್ಧಿ ಪಡಿಸುವ ಗುರಿಯನ್ನೂ ಹೊಂದಿದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಕೇಂದ್ರವು ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿತು.

ಹಾಲಿ ಗಣಿಗಾರಿಕಾ ಗುತ್ತಿಗೆ ಪ್ರದೇಶದಲ್ಲಿರುವ ಕಲ್ಲಿದ್ದಲು ತಳದ ಮಿಥೇನನ್ನು ವಾಣಿಜ್ಯ ಮಟ್ಟದಲ್ಲಿ ಬಳಸಲು ಕೂಡಾ ಸಂಪುಟ ಒಪ್ಪಿಗೆ ನೀಡಿದೆ.

 " ವಿಧಾನವು ಯಶಸ್ವಿ ಬಿಡ್ಡರುಗಳಿಗೆ ಕಲ್ಲಿದ್ದಲು ಗಣಿಯಿಂದ ಕಲ್ಲಿದ್ದಲಿನ ಆರಂಭಿಕ ಉತ್ಪಾದನೆ ಮತ್ತು ಕಲ್ಲಿದ್ದಲಿನಿಂದ ವಾರ್ಷಿಕ ಆಧಾರದ ಮೇಲೆ ಅನಿಲೀಕರಣ ಅಥವಾ ದ್ರವೀಕರಣಕ್ಕಾಗಿ ಬಳಸಿದ ಅಥವಾ ಮಾರಾಟ ಮಾಡಿದ ಕಲ್ಲಿದ್ದಲಿನ ಒಟ್ಟು ಪ್ರಮಾಣಗ ಆದಾಯದ ಪಾಲಿನಲ್ಲಿ ರಿಯಾಯಿತಿಗಳನ್ನು ನೀಡುವ ಮೂಲಕ ಪ್ರೋತ್ಸಾಹ ನೀಡುತ್ತದೆ ಎಂದು ಹೇಳಿಕೆ ತಿಳಿಸಿತು.

No comments:

Advertisement