Wednesday, May 6, 2020

ಪುಲ್ವಾಮ ಘರ್ಷಣೆ: ಹಿಜ್ಬುಲ್ ಕಮಾಂಡರ್ ರಿಯಾಜ್ ನೈಕೂ ಹತ್ಯೆ

ಪುಲ್ವಾಮ ಘರ್ಷಣೆ: ಹಿಜ್ಬುಲ್  ಕಮಾಂಡರ್
 
ರಿಯಾಜ್ ನೈಕೂ ಹತ್ಯೆ
ಶ್ರೀನಗರ: ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆಗೆ  2020 ಮೇ  06ರ ಬುಧವಾರ ನಡೆದ ಗುಂಡಿನ ಘರ್ಷಣೆಯಲ್ಲಿ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಭಯೋತ್ಪಾದಕ ರಿಯಾಜ್ ನೈಕೂ ಇತರ ಇಬ್ಬರ ಜೊತೆಗೆ ಹತನಾದ..

ಎಂಟು ವರ್ಷಗಳಿಂದ ಭೂಗತ ಕಾರ್ಯಾಚರಣೆ ನಿರತನಾಗಿದ್ದ ನೈಕೂ ತನ್ನ ಹುಟ್ಟೂರಿನಲ್ಲಿಯೇ ಭದ್ರತಾ ಪಡೆ ಗುಂಡಿಗೆ ಬಲಿಯಾಗಿದ್ದಾನೆ. ಈತನ ಸಾವಿನ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಕಣಿವೆಯಾದ್ಯಂತ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ನೈಕೂ ಹತ್ಯೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಉದ್ಭವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕಣಿವೆಯಾದ್ಯಂತ ಎಚ್ಚರಿಕೆಯ ಕ್ರಮ ವಹಿಸಲಾಗಿದೆ. ಜನರ ಚಲನವಲನಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಅವರು ಹೇಳಿದರು.

ನಿಷೇಧಿತ ಹಿಜ್ಬುಲ್  ಮುಜಾಹಿದೀನ್ ಸಂಘಟನೆಯ ಕಾರ್ಯಾಚರಣಾ ಕಮಾಂಡರ್ ಆಗಿದ್ದ ನೈಕೂನನ್ನು ಪುಲ್ವಾಮ ಜಿಲ್ಲೆಯ ಬೀಗ್ಪೋರಾ ಗ್ರಾಮದಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಖೆಡ್ಡಾಕ್ಕೆ ಬೀಳಿಸಲಾಯಿತು ಎಂದು ಅಧಿಕಾರಿಗಳು ನುಡಿದರು.

ಇದಕ್ಕೂ ಮುನ್ನ ಪೊಲೀಸ್ ವಕ್ತಾರರು ಘರ್ಷಣೆಯೊಂದರಲ್ಲಿ ಒಬ್ಬ ಉನ್ನತ ಭಯೋತ್ಪಾದಕ ಮತ್ತು ಆತನ ಸಹಚರ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ಹೇಳಿದ್ದರು. ಆದರೆ ಆತನ ಗುರುತು ಪರಿಚಯದ ವಿವರ ನೀಡಿರಲಿಲ್ಲ.

ಬಳಿಕ ಸಿಕ್ಕಿಹಾಕಿಕೊಂಡಿರುವ ಭಯೋತ್ಪಾದಕ ನೈಕೂ ಆಗಿದ್ದು, ಈತನ ತಲೆಗೆ ೧೦ ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು. ಪೊಲೀಸರು ಈತನಿಗಾಗಿ ವರ್ಷಗಳಿಂದ ಹುಡುಕಾಟ ನಡೆಸಿದ್ದರು.

ನೈಕೂ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಗುಂಪಿನ ನಾಯಕ ಬುರ್ಹಾನ್ ವಾನಿ ೨೦೧೬ರಲ್ಲಿ ಕಣಿವೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ ಬಳಿಕ ನೈಕೂ ಹಿಜ್ಬುಲ್ ಗುಂಪಿನ ಸ್ವಯಂಘೋಷಿತ ನಾಯಕನಾಗಿದ್ದ.

ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ದಿಲ್ಬಾಗ್ ಸಿಂಗ್ ಅವರು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

ನೈಕೂ ಹತ್ಯೆಯು ದೊಡ್ಡ ಯಶಸ್ಸು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನುಡಿದರು.
ನೈಕೂ ಪಾಕಿಸ್ತಾನ ಮೂಲಕ ಹಿಜ್ಬುಲ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ನಿಕಟವರ್ತಿಯಾಗಿದ್ದಾನೆ. ಸೈದ್ ಸಲಾಹುದ್ದೀನನನ್ನು ಅಮೆರಿಕವು ೨೦೧೭ರಲ್ಲಿ ಜಾಗತಿಕ ಭಯೋತ್ಪಾದಕ ಎಂಬುದಾಗಿ ಘೋಷಿಸಿತ್ತು.

ತಂತ್ರಜ್ಞಾನ ನಿಪುಣ ನೈಕೂ, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರುವ ಮುನ್ನ ಶಾಲಾ ಮಕ್ಕಳಿಗೆ ಖಾಸಗಿ ಪಾಠ ಮಾಡುತ್ತಿದ್ದ. ೨೦೧೭ರಲ್ಲಿ ಝಾಕೀರ್ ಮುಸಾ, ಸಂಘಟನೆಯನ್ನು ಒಡೆದ ಬಳಿಕ ಕಣಿವೆಯಲ್ಲಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯು ತನ್ನ ಕಪಿಮುಷ್ಠಿಯನ್ನು ಭದ್ರವಾಗಿ ಇರಿಸುವಂತೆ ಮಾಡುವಲ್ಲಿ ನೈಕೂ ನಿರ್ಣಾಯಕ ಪಾತ್ರ ವಹಿಸಿದ್ದ. ೨೦೧೭ರಲ್ಲಿ ಸಂಘಟನೆಯನ್ನು ಒಡೆದ ಬಳಿಕ ಝಾಕೀರ್ ಮುಸಾ ತನ್ನದೇ ಆದ ಅನ್ಸುರ್ ಘಜ್ವಾತುಲ್ ಹಿಂದ್ ಗುಂಪನ್ನು  ರಚಿಸಿದ್ದ. ಮುಸಾನ ಹೊಸ ಸಂಘಟನೆ ಅಲ್ ಖೈದಾ ಜೊತೆಗೆ ಸಂಪರ್ಕ ಹೊಂದಿತ್ತು ಕಳೆದ ವರ್ಷ ಮೇ ತಿಂಗಳಲ್ಲಿ ಟ್ರಾಲ್ನಲ್ಲಿ ಸಂಭವಿಸಿದ್ದ ಗುಂಡಿನ ಘರ್ಷಣೆಯಲ್ಲಿ ಮುಸಾ ಹತನಾಗಿದ್ದ.

ಬುರ್ಹಾನ್ ವಾನಿ ನಂತರ ಹಿಜ್ಬುಲ್ ಸಂಘಟನೆಯ ನಾಯಕತ್ವ ವಹಿಸಿದ್ದ ನೈಕೂ ಕಳೆದ ವರ್ಷದಿಂದ ತನ್ನ ಸಂಘಟನೆಗೆ ಯುವಕರನ್ನು ಸೇರಿಸಲು ಹಲವಾರು ಅಪಹರಣ ಕೃತ್ಯಗಳನ್ನು ನಡೆಸಿದ್ದ. ಭದ್ರತಾ ಪಡೆ ನಡೆಸಿದ ಘರ್ಷಣೆಯಲ್ಲಿ ಹತನಾಗಿರುವ ಇನ್ನೊಬ್ಬ ಭಯೋತ್ಪಾದಕನನ್ನು ಜುನೈದ್ ಸೆಹರೈ  ಎಂಬುದಾಗಿ ಗುರುತಿಸಲಾಗಿದೆ.

ಹತನಾಗಿರುವ ಜುನೈದ್ ತೆಹರೀಕ್ ಹುರಿಯತ್ ಸಂಘಟನೆಯ ಮುಖ್ಯಸ್ಥ ಅಶ್ರಫ್ ಸೆಹ್ರಾನ ಮಗ ಮತ್ತು ಹುರಿಯತ್ ಮುಖ್ಯಸ್ಥ ಸಯೀದ್ ಅಲಿ ಗಿಲಾನಿಯ ಆಪ್ತ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ನೈಕೂ ಪುಲ್ವಾಮದ ಬೈಗ್ಪೊರ ಗ್ರಾಮದಲ್ಲಿರುವ ತನ್ನ ತಾಯಿಯನ್ನು ಭೇಟಿ ಮಾಡಲು ಬಂದಿದ್ದ. ಮಂಗಳವಾರ ಸಂಜೆಯೇ ಭದ್ರತಾಪಡೆ ಅಲ್ಲಿ ಉಗ್ರರಿಗಾಗಿ ಹುಡುಕಾಟ ಕಾರ್ಯಾಚರಣೆ ಆರಂಭಿಸಿತ್ತು.

೨೦೧೬ ಜುಲೈ ೮ರಂದು ಅನಂತನಾಗ್ ಜಿಲ್ಲೆಯ ಕೊಕರ್ನಾಗ್ ಪ್ರದೇಶದಲ್ಲಿ ಭದ್ರತಾ ಪಡೆಯ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಬುರ್ಹಾನ್ ವಾನಿ ಹತ್ಯೆಯಾಗಿತ್ತು.

ಉಗ್ರ ಸಂಘಟನೆ ಸೇರುವ ಮುನ್ನ ನೈಕೂ ಸ್ಥಳೀಯ ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕನಾಗಿ ಕೆಲಸ ಮಾಡಿದ್ದ. ಗುಲಾಬಿ ಹೂಗಳ ಚಿತ್ರ ಬಿಡಿಸುವ ಹವ್ಯಾಸವಿದ್ದ ನೈಕೂ ೩೩ನೇ ವಯಸ್ಸಿನಲ್ಲಿ ಉಗ್ರ ಸಂಘಟನೆ ಸೇರಿದ್ದ.

ಕಾಶ್ಮೀರದಲ್ಲಿ ಮುಂಜಾಗ್ರತಾ ಕ್ರಮವಾಗಿ ೨ಜಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ೨೦೧೯ ಆಗಸ್ಟ್ ರಿಂದ ಇಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದು ಜನವರಿಯಲ್ಲಿ ೨ಜಿ ಇಂಟರ್ನೆಟ್ ಸೇವೆ ಮಾತ್ರ ನೀಡಲಾಗಿತ್ತು.

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಡೆದ ಸೇನಾ ಕಾರ್ಯಾಚರಣೆ ವೇಳೆ ಕರ್ನಲ್ ಅಶುತೋಷ್ ಶರ್ಮಾ, ಮೇಜರ್ ಅನುಜ್ ಸೂದ್, ನಾಯಕ್ ರಾಜೇಶ್ ಕುಮಾರ್, ಲಾನ್ಸ್ ನಾಯಕ್ ದಿನೇಶ್ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಗೀರ್ ಪಠಾಣ್ ಅಲಿಯಾಸ್ ಖಾಜಿ ಹುತಾತ್ಮರಾದ ಬೆನ್ನಲ್ಲೇ ಉಗ್ರ ನೈಕೂನ್ನು ಹತ್ಯೆ ಮಾಡಲಾಗಿದೆ.

ಪುಲ್ವಾಮ ಜಿಲ್ಲೆಯ ಪಂಪೋರ್ನ ಶಾರ್ ಪ್ರದೇಶದಲ್ಲಿ ಇನ್ನೊಂದು ಕಾರ್ಯಾಚರಣೆ ನಡೆದಿದೆ. ಮಂಗಳವಾರ ಸಂಜೆ ಮತ್ತು ಬುಧವಾರ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿದೆ. ಶಾರ್ ಘರ್ಷಣೆಯಲ್ಲಿ ಇಲ್ಲಿಯವರೆಗೆ ಇಬ್ಬರು ಉಗ್ರರು ಹತರಾಗಿದ್ದಾರೆ. ಅಲ್ಲಿ ಇನ್ನೂ ಕಾರ್ಯಾಚರಣೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಂಗಳವಾರ ಸ್ಥಗಿತಗೊಂಡಿದ್ದ ಕಾರ್ಯಾಚರಣೆ ಬುಧವಾರ ಪುನಾರಂಭವಾಗಿದ್ದು ಅಲ್ಲಿರುವ ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

No comments:

Advertisement