My Blog List

Monday, May 25, 2020

ಬದುಕಿನ ಹೋರಾಟ….!

ಬದುಕಿನ  ಹೋರಾಟ….!
(ಇದು ಸುವರ್ಣ ನೋಟ)
ಮರದ ಪೊಟರೆಯೊಳಗೆ ಗೂಡು ಕಟ್ಟಿ ಮೊಟ್ಟೆ ಇಟ್ಟು ಸಂಸಾರ ಬೆಳೆಸುವ ಆಸೆಯಲ್ಲಿದ್ದ ಗಿಳಿ ಜೋಡಿಗೆ ಆಘಾತ. ಹೊರಕ್ಕೆ ಹೋಗಿ ಬರುವಷ್ಟರಲ್ಲಿ ಮರದ ಪೊಟರೆಯೊಳಗೆ ಸೇರಿದ  ಹಾವು ಮೊಟ್ಟೆಗಳನ್ನೇ ಗುಳುಂಕರಿಸಿದೆ
ಪೊಟರೆ ಬಳಿಗೆ ಬರುತ್ತಿದ್ದಂತೆಯೇ ಒಳಗೇನೋ ನುಗ್ಗಿದೆ ಎಂಬ ಗುಮಾನಿಯಿಂದ ಗಿಳಿಯೊಂದು ಇಣುಕಿ ನೋಡಿದರೆ
ದಸಕ್ಕನೆ ಹಾವು ತಲೆ ಎತ್ತಿ ಹೊರಕ್ಕೆ ನೋಡಿದೆ.
ರಪ್ಪನೆ ಹಿಂದಕ್ಕೆ ಹಾರಿದ ಗಿಳಿಗಳು ನೋಡ ನೋಡುತ್ತಿದ್ದಂತೆಯೇ  ಮೊಟ್ಟೆ ಗುಳುಂಕರಿಸಿದ ಹಾವು ಪೊಟರೆಯಿಂದ ಹೊರಕ್ಕೆ ಬಂದು ಪರಾರಿಯಾಯಿತು.
 ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ  ಕೆಲ ಸಮಯದ ಹಿಂದೆ ಬೆಂಗಳೂರಿನ ವಿಧಾನಸೌಧ ಸಮೀಪ ಕಂಡ ದೃಶ್ಯ  ಅವರ ಕ್ಯಾಮರಾದಲ್ಲಿ ಸೆರೆಯಾದದ್ದು ಹೀಗೆ.

ಆದರೆ, ಎಲ್ಲ ಹಕ್ಕಿಗಳೂ ಹೀಗೆಯೇ ಅಸಹಾಯಕವಾಗುತ್ತವೆ ಎಂದೇನೂ ಭಾವಿಸಬೇಡಿ. 

ತನ್ನ ಮರಿಗಳನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ಹಕ್ಕಿಗಳೂ ಇವೆ.

ಕೋಳಿಯೊಂದು
  ತನ್ನ ಮರಿಗಳನ್ನು ಹಾವಿನ ಬಾಯಿಯಿಂದ ರಕ್ಷಿಸಲು ಹೋರಾಡಿದ  ಬಗೆಯನ್ನು ನೋಡಬೇಕೆ?  ಹಾಗಿದ್ದರೆ  ಕೆಳಗಿನ ವಿಡಿಯೋ ಕ್ಲಿಕ್  ಮಾಡಿ.
ಜಗತ್ತು ದುರ್ಬಲರಿಗಾಗಿ ಅಲ್ಲ ಸಬಲರಿಗಾಗಿ ಇದೆ ಎಂಬುದನ್ನು ಇದು ಮತ್ತೆ ಮತ್ತೆ ತೋರಿಸುತ್ತಿದೆಯೇ?

ಸಮೀಪ ದೃಶ್ಯಕ್ಕಾಗಿ ಫೋಟೋಗಳನ್ನು ಕ್ಲಿಕ್ ಮಾಡಿರಿ.

-ಉದಯನೆ

ವಾಟ್ಸಪ್ ನಲ್ಲಿ  ಈ ಚಿತ್ರಗಳನ್ನು ನೋಡಿ  ಮೈಸೂರಿನ ಕೌಟಿಲ್ಯರ ಪ್ರತಿಕ್ರಿಯೆ ಹೇಗಿದೆ ನೋಡಿ…

·         * ಕುತೂಹಲ ಮೂಡಿಸಿದ ಇತ್ತೀಚಿನ  ಚಿತ್ರಗಳು, *
ಅದು ವಿಧಾನಸೌಧದ  ಆವರಣದಲ್ಲಿನ ಮರ ,ಅದರ ಮೇಲಿಂದ ಹಸಿರು ಗಿಳಿಗಳು ಗುಂಪು ಗೂಡಿ ಅಹಸಜವಾಗಿ ಶಬ್ದ ಮಾಡಿತ್ತಿದ್ದ ದೃಶ್ಯ , ಪ್ರಜಾವಾಣಿ ಪತ್ರಿಕೆಯ ಹಿರಿಯ ಛಾಯ ಗ್ರಾಹಕ  ವಿಶ್ವನಾಥ ಸುವರ್ಣರ  ಗಮನ  ಸೆಳೆಯುತ್ತದೆ.  ಮರದ ಪೊಟರೆಯೊಂದನ್ನು ಸುತ್ತು ವರೆದಿದ್ದ ಗಿಳಿಗಳ ಆಕ್ರಂದನವನ್ನು ಆಲಿಸುತ್ತಾ ಅಲ್ಲೇ  ನಿಂತ ಸುವರ್ಣರಿಗೆ ಪೊಟರೆ ಯೊಳಗಿಂದ ಮೆಲ್ಲನೆ  ತಲೆ ಇಣುಕಿದ ಹಾವೊಂದು ಗೋಚರಿಸುತ್ತದೆ.   ಮರುಕ್ಷಣ ದಲ್ಲೇ  ಹಾವಿನ  ಮೇಲೆ  ಎರಗುವ  ಗಿಳಿಯೊಂದರ ಆಕ್ರೋಶಕ್ಕೆ  ಸರ್ರನೆ ಪೊಟರೆಯೊಳಗೆ  ಮತ್ತೆ  ನುಸುಳಿಕೊಂಡು  ಅವಿತು ಕೊಳ್ಳವ ಹಾವನ್ನು  ಕುಕ್ಕಲು ಗಿಳಿ ಪೊಟರೆಯೊಳಗೇ ದಾಳಿಯಿಡಲು ಹವಣಿಸುತ್ತದೆ.

  ಹಾವು -ಗಿಳಿಗಳ ಕದನ  ಎಲ್ಲಿಗೆ  ಮುಟ್ಟ ಬಹುದು  ಎಂಬುದನ್ನು ಸುಮಾರು  ನಾಲ್ಕೈದು  ಗಂಟೆಗಳವರೆಗೂ......   ತದೇಕ ಚಿತ್ತತೆ ಯಿಂದ ಕ್ಯಾಮರಾವನ್ನು ಸಜ್ಜು ಗೊಳಿಸಿ ಅಲ್ಲೇ ಸುವರ್ಣ ರವರು ಕ್ಷಣ,ಕ್ಷಣದ ರೋಚಕ  ದೃಶ್ಯಗಳನ್ನು ಕ್ಲಿಕ್ಕಿಸಿ ಕೊಳ್ಳುತ್ತಾರೆ, ಕೊನೆಗೂ ಹಾವು   ಪೊಟರೆಯಿಂದ ಹೊರಬಂದು ತಪ್ಪಿಸಿಕೊಂಡು ಹೋಗಿ ಬಿಡುತ್ತದೆ.  ಅದರೆ    ಗಿಳಿಗಳ  ಆತಂಕ ನಿಲ್ಲುವುದೇ ಇಲ್ಲ ಏಕೆಂದರೆ ಗಿಳಿಯೊಂದು ತನ್ನ  ಸಂತತಿಯ ಕನಸು ಕಂಡು ಜತನ ದಿಂದ ಕಾಪಾಡಿಕೊಂಡು  ಬಂದಿದ್ದ ಮೊಟ್ಟೆಗಳನ್ನೆಲ್ಲ  ಹಾವು ತನ್ನ ಉದರದೊಳಗಿಳಿಸಿಕೊಂಡು  ತೆರೆಳಿದರೆ,  ತನ್ನೊಡಲ ಬಳ್ಳಿಯಾಗಿ ಬೆಚ್ಚಗಿನ ಸ್ಪರ್ಶದಾಶ್ರಯ ಪಡೆದು ಪೊರೆಕಳಚಿ ಹೊರಬಂದು ಹೊರಗಿನ ಪ್ರಪಂಚ ಕಾಣುವ ಮೊದಲೇ ಹಾವಿನ ಹೊಟ್ಟೆ ಸೇರಿ ಕೊಂಡ ತನ್ನ ಮುದ್ದು ಮರಿಗಳಾಗ ಬಹುದಾಗಿದ್ದ ಸಂತಾನ ಭಾಗ್ಯದ ಮೊಟ್ಟೆಗಳು ಇಲ್ಲದಾದ ಶೋಕದಿಂದ  ಗಿಳಿಗಳು ಮರುಗುವ ದೃಶ್ಯ ಕರಳು ಹಿಂಡುತ್ತದೆ.

ರಾಜ್ಯ ಕಂಡ ಅಪರೂಪದ ಪ್ರತಿ ಭಾವಂತ ಛಾಯ ಗ್ರಾಹಕ ವಿಶ್ವನಾಥ್  ಸುವರ್ಣರದು  ಸಮಾಜಮುಖಿ ಮನಸ್ಸು,ಸದಾ ಹೊಸತನವನ್ನು ಹುಡುಕುವ ತವಕದ ಜೀವ, ಐತಿಹಾಸಿಕ ತಾಣಗಳು,  ನೈಸರ್ಗಿಕ ದೃಶ್ಯಗಳು ,ಮಾನವೀಯತೆ ಸಾಕ್ಷೀಕರಿಸುವ ಸಂದರ್ಭಗಳನ್ನು  ತಮ್ಮ ಕ್ಯಾಮರದಲ್ಲಿ ಸೆರೆಯಿಡಿಯುವ ಹವ್ಯಾಸವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿಸಿ  ಕೊಂಡಿದ್ದಾರೆ.

ಕನ್ನಡನಾಡಿನ  ಇತಿಹಾಸವನ್ನು ಸಾರುವ ಕೋಟೆ-ಕೊತ್ತಲಗಳ ಸಮಗ್ರ ದೃಶ್ಯ ಗಳನ್ನು ಬೀದರದ ಭಾಲ್ಕಿ ಯಿಂದಿಡಿದು ಕೇರಳಕ್ಕೆ ಸೇರಿಹೋಗಿರುವ ಕಾಸರಗೋಡಿನವರೆಗೆ ಸುಮಾರು ೩೧ಜಿಲ್ಲೆಗಳನ್ನು ಸುತ್ತಾಡಿ ಅತ್ಯಂತ ಪರಿಶ್ರಮದಿಂದ ದಿಂದ ಸೆರೆಹಿಡಿದಿರುವ ಸಮಗ್ರ ಚಿತ್ರಾವಳಿಯ "ಕರುನಾಡ ಕೋಟೆಗಳ ಸುವರ್ಣ ನೋಟ" ಪುಸ್ತಕ ಹೊರ ತಂದಿದ್ದಾರೆ.  ಇದು  ಕರ್ನಾಟಕದ ಹಲ ಶತಮಾನಗಳ  ಐತಿಹಾಸಿಕ ಘಟನೆಗಳನ್ನು ಸಾಕ್ಷೀಕರಿಸುವ ಅತ್ಯಾಕರ್ಷಕ ಪುಸ್ತಕ ವಾಗಿದೆ. 

ಇತಿಹಾಸದ
  ವಿದ್ಯಾರ್ಥಿಗಳು ಹಾಗೂ ಆಸಕ್ತರಿಗೆ ಅದ್ಭುತ  ಮಾಹಿತಿಯ ಕೋಶವಾಗಿದೆ.  ವಿಶ್ವನಾಥ್  ಸುವರ್ಣರವರು  ನಮ್ಮ  ನಡುವಿನ ಒಬ್ಬ ಅಪರೂಪದ ಕಾಯಕ ಶ್ರೇಷ್ಠ ಪ್ರತಿಭೆ ಹಾಗೂ ಸಮಾಜಮುಖಿ ಮಿಡಿತದ ಸ್ನೇಹಜೀವಿ.ಇಂಥವರನ್ನು ಗೌರವಿಸುವ ಸಂಸ್ಕಾರ ಹೆಚ್ಚಬೇಕಿದೆ.

- ಆರ್
.ರಘು ( ಕೌಟಿಲ್ಯ)
ಮೈಸೂರು.

No comments:

Advertisement