My Blog List

Sunday, May 31, 2020

ನೇಪಾಳ ಸಂಸತ್ತಿನಲ್ಲಿ ವಿವಾದಾತ್ಮಕ ನಕಾಶೆ ಮಸೂದೆ ಮಂಡನೆ

ನೇಪಾಳ ಸಂಸತ್ತಿನಲ್ಲಿ ವಿವಾದಾತ್ಮಕ ನಕಾಶೆ ಮಸೂದೆ ಮಂಡನೆ

ಕಠ್ಮಂಡು: ಚೀನಾ ಒತ್ತಡಕ್ಕೆ ಮಣಿದು ಭಾರತದ ಪ್ರದೇಶಗಳನ್ನು ತನ್ನ ನಕಾಶೆಗೆ ಸೇರಿಸಿಕೊಂಡಿರುವ ನೇಪಾಳ ಸರ್ಕಾರವು ಇದಕ್ಕೆ ಸಂಸತ್ತಿನ  ಒಪ್ಪಿಗೆ ಪಡೆಯಲು 2020  ಮೇ 31ರ ಭಾನುವಾರ ವಿಧೇಯಕ ಮಂಡಿಸಿತು.

ರಾಜಕೀಯ ಮತ್ತು ಆಡಳಿತಾತ್ಮಕ ಬಳಕೆಯ ನಕಾಶೆ ಬದಲಾವಣೆಗೆ ಸಂಬಂಧಿತ ಸಂವಿಧಾನ ತಿದ್ದುಪಡಿ ವಿಧೇಯಕ ಮಂಡನೆಗೆ ಕೆ.ಪಿ. ಶರ್ಮಾ ಓಲಿ ನೇತೃತ್ವದ ಸರ್ಕಾರ ಕೆಲ ದಿನಗಳ ಹಿಂದೆಯೇ ಯತ್ನಿಸಿತ್ತಾದರೂ ಪ್ರತಿಪಕ್ಷಗಳ ತೀವ್ರ ವಿರೋಧದ ಕಾರಣ ಸಾಧ್ಯವಾಗಿರಲಿಲ್ಲ. ಈಗ ಪ್ರತಿಪಕ್ಷಗಳ ನಾಯಕರ ಮನವೊಲಿಸಿ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಪ್ರಮುಖ ಪ್ರತಿಪಕ್ಷವಾದ ನೇಪಾಳಿ ಕಾಂಗ್ರೆಸ್ ವಿಧೇಯಕದ ಪರವಾಗಿ ನಿಲ್ಲುವ ಭರವಸೆ ನೀಡಿದೆ.

ಭಾರತ ತನ್ನ ಗಡಿಯಲ್ಲಿ ಹೊಂದಿರುವ ಲಿಪುಲೇಖ, ಕಾಲಾಪಾನಿ ಮತ್ತು ಲಿಂಪಿಯಾಧುರ ಪ್ರದೇಶಗಳನ್ನು ನೇಪಾಳ ಈಗ ತನ್ನ ನಕಾಶೆಗೆ ಸೇರಿಸಿಕೊಂಡಿದೆ. ನಡೆಯು ಭಾರತ-ನೇಪಾಳದ ರಾಜತಾಂತ್ರಿಕ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ನಿಚ್ಚಳವಾಗಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ. ಆದರೂ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಸರ್ಕಾರವು ಸಂವಿಧಾನ ತಿದ್ದುಪಡಿಗೆ ಮುಂದಾಯಿತು.

ಮೇ ೮ರಿಂದಲೇ ಶುರು

ಉತ್ತರಾಖಂಡದ ಧಾರ್ಚುಲಾ ಮತ್ತು ಲಿಪುಲೇಖ ಕಣಿವೆ ಮಧ್ಯೆ ಸಂಪರ್ಕ ಕಲ್ಪಿಸುವ ೮೦ ಕಿ.ಮೀ. ಉದ್ದದ ರಸ್ತೆಯನ್ನು ಮೇ ೮ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ್ದರು. ಇದರಿಂದ ಚೀನಾದ ಕಣ್ಣು ಕೆಂಪಾಗಿತ್ತು. ಗಡಿಯಲ್ಲಿ ಭಾರತ ಮೂಲಸೌಕರ್ಯ ಅಭಿವೃದ್ಧಿಯಿಂದ ತನ್ನ ಮೇಲೆ ಆಕ್ರಮಣಕ್ಕೆ ಸಿದ್ಧಮಾಡಿಕೊಳ್ಳುತ್ತಿದೆ ಎಂಬ ಆತಂಕಕ್ಕೆ ಬಿದ್ದ ಚೀನಾ ಸರ್ಕಾರ ಭಾರತದೊಂದಿಗೆ ಕಿರಿಕಿರಿ ಮಾಡಲು ನೇಪಾಳಕ್ಕೆ ಕುಮ್ಮಕ್ಕು ನೀಡಿತು.

ಅದರಂತೆ , ಹೊಸ ರಸ್ತೆ ನೇಪಾಳದ ಪ್ರಾಂತ್ಯದಲ್ಲಿದೆ ಎಂದು ಆರೋಪಿಸಿ ನೇಪಾಳ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಾಲಿ ಅವರು ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾಗೆ ಸಮನ್ಸ್ ನೀಡಿದರು. ನಂತರ ಓಲಿ ಅವರು, ‘ನೇಪಾಳದಲ್ಲಿ ಕೊರೊನಾ ಹೆಚ್ಚಲು ಭಾರತ ಕಾರಣ. ಗಡಿಯಲ್ಲಿ ಸೂಕ್ತ ತಪಾಸಣೆ ಇಲ್ಲದೆ ದೇಶದಿಂದ ಜನ ನಮ್ಮ ದೇಶಕ್ಕೆ ಸಲೀಸಾಗಿ ಪ್ರವೇಶಿಸುವುದರಿಂದ ನಮಗೆ ತೊಂದರೆಯಾಗುತ್ತಿದೆ’ ಎಂದು ಆರೋಪಿಸಿದ್ದರು.

ಹೊಸ ನಕಾಶೆಗೆ ಭಾರತದ ಪ್ರದೇಶಗಳ ಸೇರ್ಪಡೆ ಯತ್ನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಡೆಯನ್ನು ಈಗಾಗಲೇ ಖಂಡಿಸಿದ್ದೇವೆ. ನೆರೆ ರಾಷ್ಟ್ರಗಳಿಗೆ ಗೌರವ ನೀಡುವ ನಮ್ಮ ನೀತಿಗೆ ಅನುಗುಣವಾಗಿ ನೇಪಾಳ ಸರ್ಕಾರದೊಂದಿಗೆ ಕುರಿತು ಶಾಂತಿಯುತ ಮಾತುಕತೆಗೆ ಮುಕ್ತ ಮನಸ್ಸು ಹೊಂದಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದರು.

ಏನಾಗಬಹುದು?

* ಸಂಸತ್ತಿನಲ್ಲಿ  ಚರ್ಚೆ ಬಳಿಕ ವಿಧೇಯಕವನ್ನು ಮತಕ್ಕೆ ಹಾಕಲಾಗುತ್ತದೆ.

* ವಿಧೇಯಕಕ್ಕೆ ಅನುಮೋದನೆ ಸಿಕ್ಕಿದರೆ ಅಧ್ಯಕ್ಷೆ ಬಿಧ್ಯಾ ದೇವಿ ಭಂಡಾರಿ ಅವರ ಅಂಕಿತಕ್ಕೆ ಕಳುಹಿಸಲಾಗುತ್ತದೆ.

No comments:

Advertisement