Thursday, May 14, 2020

ಕೇಂದ್ರ ಸರ್ಕಾರಕ್ಕೆ ಮಲ್ಯ ಮರುಮನವಿ: ಸಾಲ ಹಣ ಪಡೆದುಕೊಳ್ಳಿ

ಕೇಂದ್ರ ಸರ್ಕಾರಕ್ಕೆ ಮಲ್ಯ ಮರುಮನವಿ: ಸಾಲ ಹಣ ಪಡೆದುಕೊಳ್ಳಿ
ನವದೆಹಲಿ: ಉದ್ದೇಶಪೂರ್ವಕ ಸುಸ್ತಿದಾರ, ಒಂದು ಕಾಲದ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರು ತಮ್ಮ ಸಾಲದ ಹಣವನ್ನು ಪೂರ್ಣ ಪ್ರಮಾಣದಲ್ಲಿ ತೆಗೆದುಕೊಂಡು ಪ್ರಕರಣ ಮುಕ್ತಾಯಗೊಳಿಸುವಂತೆ ಭಾರತ ಸರ್ಕಾರಕ್ಕೆ 2020 ಮೇ 14ರ ಗುರುವಾರ ಮರುಮನವಿ ಮಾಡಿದ್ದಾರೆ.

ಇಂಗ್ಲೆಂಡಿನಲ್ಲಿ ಹಸ್ತಾಂತರ ಪ್ರಕ್ರಿಯೆಯನ್ನು ಎದುರಿಸುತ್ತಿರುವ ಮಲ್ಯ ಅವರು ಹೊಸ ಮನವಿಯನ್ನು ಭಾರತ ಸರ್ಕಾರದ ಮುಂದಿಟ್ಟಿದ್ದಾರೆ.

ಕೊರೋನಾವೈರಸ್ ಹರಡುವಿಕೆಯನ್ನು ತಡೆಯುವ ಸಲುವಾಗಿ ಜಾರಿಗೊಳಿಸಲಾದ ರಾಷ್ಟ್ರವಾಪಿ ದಿಗ್ಬಂಧನದಿಂದ ಕಂಗೆಟ್ಟಿರುವ ಆರ್ಥಿಕತೆಗೆ ಪುನಶ್ಚೇತನ ನೀಡಲು ಭಾರತ ಸರ್ಕಾರ ಘೋಷಿಸಿರುವ ೨೦ ಲಕ್ಷ ಕೋಟಿ ರೂಪಾಯಿ ಮೊತ್ತದ ವಿಶೇಷ ಆರ್ಥಿಕ ಕೊಡುಗೆಯನ್ನು ಸ್ವಾಗತಿಸಿದ ಮಲ್ಯ ಅವರು, ತಮ್ಮ ಬಾಕಿ ಸಾಲವನ್ನು ಮರು ಪಾವತಿಗಾಗಿ ಪದೇ ಪದೇ ಮುಂದಿಟ್ಟ ಕೊಡುಗೆಗಳನ್ನು ಕಡೆಗಣಿಸಲಾಗಿದೆ ಎಂದು ದೂರಿದರು.

"ಕೋವಿಡ್-೧೯ ಪರಿಹಾರ ಕೊಡುಗೆಗಾಗಿ ಸರ್ಕಾರಕ್ಕೆ ಅಭಿನಂದನೆಗಳು. ಅವರು ಬಯಸಿದಷ್ಟು ನಗದನ್ನು ಮುದ್ರಿಸಬಹುದು. ಆದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸಾಲದ ಶೇ. ೧೦೦ ಮರುಪಾವತಿಯನ್ನು ನೀಡುವ ನನ್ನಂತಹ ಸಣ್ಣ ಕೊಡುಗೆದಾರರನ್ನು ನಿರಂತರವಾಗಿ ನಿರ್ಲಕ್ಷಿಸಬೇಕೇ?" ಎಂದು ಮಲ್ಯ ಪ್ರಶ್ನಿಸಿದರು.

ಕಿಂಗ್ ಫಿಶರ್ ಏರ್ ಲೈನ್ಸ್ ಮಾಲೀಕರಾಗಿದ್ದ  ವಿಜಯ್ ಮಲ್ಯ ಅವರನ್ನು ತಮ್ಮ ವಶಕ್ಕೆ ನೀಡುವಂತೆ ಭಾರತ ಸರ್ಕಾರ ಬ್ರಿಟನ್ ನ್ಯಾಯಾಲಯದ ಮೊರೆ ಹೊಕ್ಕಿದೆ.

ಒಟ್ಟು ,೦೦೦ ಕೋಟಿ ರೂಪಾಯಿ ಮೊತ್ತದ ವಂಚನೆ ಮತ್ತು ಅಕ್ರಮ ಹಣಕಾಸು ವರ್ಗಾವಣೆ ಆರೋಪದ ಪ್ರಕರಣಗಳು ಮಲ್ಯ ಅವರ ಮೇಲೆ ಇವೆ.

ಭಾರತಕ್ಕೆ ಹಸ್ತಾಂತರ ಪ್ರಕ್ರಿಯೆ ಪ್ರಕರಣದ ವಿಚಾರಣೆ ಇದೀಗ ಬ್ರಿಟನ್ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿದೆ. ಲಂಡನ್  ಹೈಕೋರ್ಟಿನಲ್ಲಿ ಹಸ್ತಾಂತರ ಪ್ರಕರಣದಲ್ಲಿ ತಮಗೆ ಸೋಲು ಆದ ಬಳಿಕ ತೀರ್ಪನ್ನು ಪ್ರಶ್ನಿಸಿ ಮಲ್ಯ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಹಿಂದೆಯೂ ತಮ್ಮ ಸಾಲದ ಶೇ. ೧೦೦ರಷ್ಟು ಮೊತ್ತವನ್ನು ಪಾವತಿಸಲು ತಾವು ಸಿದ್ದರಿರುವುದಾಗಿ ವಿಜಯ್ ಮಲ್ಯ ಹೇಳಿದ್ದರು. ಇದೀಗ ತಮ್ಮ ಹೇಳಿಕೆಯನ್ನು ಅವರು ಪುನರುಚ್ಚರಿಸಿದ್ದಾರೆ.

No comments:

Advertisement