My Blog List

Sunday, June 14, 2020

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನ

ಮುಂಬೈ: ಬಾಲಿವುಡ್ಡಿನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈಯ ತಮ್ಮ ಮನೆಯಲ್ಲಿ 2020 ಜೂನ್ 14ರ ಭಾನುವಾರ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಹಲವಾರು ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದ ಸುಶಾಂತ್ ಸಿಂಗ್ ಸಾವು ಅಭಿಮಾನಿಗಳಿಗೆ ಆಘಾತ ಉಂಟುಮಾಡಿತು. ಆತ್ಮಹತ್ಯೆಗೆ ಖಿನ್ನತೆಯೇ ಕಾರಣ ಎಂದು ಹೇಳಲಾಗುತ್ತಿದೆ. ಬಾಲಿವುಡ್ ನಟ ಇರ್ಫಾನ್ ಖಾನ್ ಸಾವಿನ ಬೆನ್ನಲ್ಲೇ ಮತ್ತೋರ್ವ ನಟ ಸಾವನ್ನಪ್ಪಿರುವುದು ಬಾಲಿವುಡ್ ಮಂದಿಗೆ ಆಘಾತ ಉಂಟುಮಾಡಿದೆ.

೩೪ರ ಹರೆಯದ ಸುಶಾಂತ್ ಸಿಂಗ್ ಮುಂಬೈಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಗ್ಗೆ ಮನೆ ಕೆಲಸದವರು ಬಂದು ನೋಡಿದಾಗ ಈ ವಿಷಯ ಬೆಳಕಿಗೆ ಬಂತು.

ಮಲಗುವ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸುಶಾಂತ್ ಸಿಂಗ್ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಕಳೆದ ೬ ತಿಂಗಳಿನಿಂದ ಸುಶಾಂತ್ ಸಿಂಗ್ ಖಿನ್ನತೆಯಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸುಶಾಂತ್ ಸ್ನೇಹಿತರು ಪೊಲೀಸರಿಗೆ ತಿಳಿಸಿದರು.

ಧಾರಾವಾಹಿ ನಟನಾಗಿ ಅಭಿನಯವನ್ನು ಶುರು ಮಾಡಿದ್ದ ಸುಶಾಂತ್ ಸಿಂಗ್ ಬಳಿಕ ಸಾಲು ಸಾಲು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದರು. ಕಾಯ್ ಪೋ ಚೆ, ಶುದ್ಧ ದೇಸಿ ರೊಮ್ಯಾನ್ಸ್, ಪಿಕೆ, ಎಂ.ಎಸ್. ಧೋಣಿ, ರಾಬ್ಟಾ, ಕೇದಾರನಾಥ್ ಮುಂತಾದ ಹಿಟ್ ಸಿನಿಮಾಗಳಲ್ಲಿ ಸುಶಾಂತ್ ಸಿಂಗ್ ನಾಯಕನಾಗಿ ಅಭಿನಯಿಸಿದ್ದರು.

ದಿಗ್ಬಂಧನ (ಲಾಕ್ ಡೌನ್) ವೇಳೆಯಲ್ಲಿ ಸುಶಾಂತ್ ಅವರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ನಾಲ್ಕು ದಿನಗಳ ಹಿಂದಷ್ಟೇ ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಸುಶಾಂತ್ ಬಹಳ ಬೇಸರಗೊಂಡಿದ್ದರು ಎನ್ನಲಾಗಿದೆ.

ಪವಿತ್ರ ರಿಷ್ತಾದಿಂದ ಆರಂಭವಾದ ಪಯಣ

ಕಿರುತೆರೆಯಿಂದ ಬಾಲಿವುಡ್ಡಿಗೆ ಬಂದು ಮಿಂಚಿದ ನಟ ಸುಶಾಂತ್ ಸಿಂಗ್ ರಜಪೂತ್. ಸ್ಟಾರ್ ಪ್ಲಸ್ ನಲ್ಲಿ  ಕಿಸ್ ದೇಶ್ ಮೇ ಹೈ ಮೇರಾ  ದಿಲ್  (೨೦೦೮) ಚಿತ್ರದ ಮೂಲಕ ಕಿರುತರೆಗೆ ಕಾಲಿಟ್ಟಿದ್ದರೂ ಜೀ ಟಿವಿಯಲ್ಲಿ ಪ್ರಸಾರವಾಗಿದ್ದ  ಪವಿತ್ರ ರಿಷ್ತಾ ಎಂಬ ಧಾರವಾಹಿಯಲ್ಲಿ ಮಾನವ್ ದೇಶ್ಮುಖ್ ಎಂಬ ಪಾತ್ರ ಗಮನ ಸೆಳೆದಿತ್ತು. ಅಂಕಿತಾ ಲೋಖಂಡೆ ಮತ್ತು ಸುಶಾಂತ್ ಸಿಂಗ್ ಜೋಡಿ ಧಾರವಾಹಿಯಲ್ಲಿ ಮಾತ್ರವಲ್ಲ ನಿಜಜೀವನದಲ್ಲೂ ಹತ್ತಿರವಾಗಿದ್ದ ಕಾಲವದು. ಸಿನಿಮಾ ನಿರ್ಮಾಣದ ಬಗ್ಗೆ ವಿದೇಶದಲ್ಲಿ ಕಲಿಯಲು ಸುಶಾಂತ್ ಪವಿತ್ರ ರಿಷ್ತಾದಿಂದ ಹೊರಗೆ ಹೋಗಿದ್ದರು.

ಕಿರುತರೆ ನಟನೆ ಜತೆ ಝರಾ ನಚ್ಕೇ ದಿಖಾ -೨, ಝಲಕ್ ದಿಖ್ಲಾಜಾ -೪ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು.

ಆನಂತರ ’ಕೈ ಪೋ ಚೇ’ ಸಿನಿಮಾದಲ್ಲಿ ಕಾಣಿಸಿಕೊಂಡ ಸುಶಾಂತ್, ಪರಿಣಿತಿ ಚೋಪ್ರಾ ಜತೆ ’ಶುದ್ಧ್ ದೇಸಿ ರೊಮ್ಯಾನ್ಸ್’ , ಅಮಿರ್ ಖಾನ್ ಅಭಿನಯದ ಪಿಕೆ ಚಿತ್ರದಲ್ಲಿ ಅನುಷ್ಕಾ ಶರ್ಮಾಳ ಪ್ರಿಯಕರನಾಗಿ ಕಾಣಿಸಿಕೊಂಡಿದ್ದರು. ಅವರು ನಟಿಸಿದ ’ಡಿಟೆಕ್ಟಿವ್ ಬ್ಯೋಮ್ಕೇಶ್ ಭಕ್ಷಿ’ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಇದಾದ ನಂತರ ಎಸ್  ಧೋನಿ ಚಿತ್ರದಲ್ಲಿ ನಾಯಕ ನಟನಾಗಿ ಮಿಂಚಿದ್ದರು. ಪಟನಾದ ಈ ಯುವಕ ವಾಯುಪಡೆಯಲ್ಲಿ ಪೈಲೆಟ್ ಆಗುವ ಕನಸು ಹೊಂದಿದ್ದರು. ಎಂಜಿನಿಯರ್, ವಕೀಲರ ಕುಟುಂಬದಿಂದ ಬಂದ ಈತ ಎಂಜಿನಿಯರ್ ಆಗಬೇಕೆಂದು ಹೆತ್ತವರ ಆಸೆಯಾಗಿತ್ತು. ಹಾಗಾಗಿ  ದೆಹಲಿ ಎಂಜಿನಿಯರಿಂಗ್ ಕಾಲೇಜಿಗೆ ಸೇರಿಸಲಾಗಿತ್ತು.

ಸುಶಾಂತ್ ಅವರು ಶಾರುಖ್ ಖಾನ್ ಅವರ ಅಭಿಮಾನಿ. ಮಾತು ಕಡಿಮೆ, ಕಾಲೇಜಿನಲ್ಲಿಯೂ ತನ್ನ ಪಾಡಿಗೆ ಇರುತ್ತಿದ್ದ ಸುಶಾಂತ್ ಗೆ ಸ್ಟಾನ್ಫೋರ್ಡ್ ಯುನಿವರ್ಸಿಟಿಯಲ್ಲಿ ಶಿಷ್ಯವೇತನ ಕೂಡಾ ಸಿಕ್ಕಿತ್ತು. ಆಮೇಲೆ ಶೈಮಾಕ್ ಧಾವರ್ ಅವರ ನೃತ್ಯ ಅಕಾಡೆಮಿಗೆ ಸೇರಿದ ಇವರು ಮುಂಬೈಗೆ ಬಂದರು. ಬಾಲಿವುಡ್ಡಿನಲ್ಲಿ ಅವಕಾಶ ಸಿಕ್ಕಾಗ ಇಂಜಿನಿಯರ್ ಕಲಿಕೆಗೆ ಸಮಯ ಸಾಕಾಗುತ್ತಿರಲಿಲ್ಲ. ಹಾಗಾಗಿ ಅರ್ಧಕ್ಕೆ ಶಿಕ್ಷಣ ಕೈಬಿಡಬೇಕಾಗಿ ಬಂದಿತ್ತು.

ನಟಿಸಿದ ಸಿನಿಮಾಗಳು

 ಕೈ ಪೋ ಚೇ,  ಶುದ್ಧ್ ದೇಸೀ ರೊಮ್ಯಾನ್ಸ್, ಡಿಟೆಕ್ಟಿವ್ ಬ್ಯೋಮ್ಕೇಶ್ ಭಕ್ಷಿ, ಪಿಕೆ, ಎಂ.ಎಸ್ ಧೋನಿ: ದಿ ಅನ್ಟೋಲ್ಡ್  ಸ್ಟೋರಿ, ರಾಬ್ತಾ, ವೆಲ್ಕಂ ಟು ನ್ಯೂಯಾರ್ಕ್,  ಕೇದಾರ್ನಾಥ್, ಸೊನ್ಚಿರಿಯಾ, ಚಿಚೋರೆ, ಡ್ರೈವ್.

No comments:

Advertisement