My Blog List

Tuesday, June 30, 2020

ಭಾರತ ವಿರೋಧಿ ನಿಲುವು: ನೇಪಾಳ ಪ್ರಧಾನಿ ಒಲಿಗೆ ತಿರುಗುಬಾಣ

ಭಾರತ ವಿರೋಧಿ ನಿಲುವು: ನೇಪಾಳ ಪ್ರಧಾನಿ ಒಲಿಗೆ ತಿರುಗುಬಾಣ

ತತ್ ಕ್ಷಣ ರಾಜೀನಾಮೆ ಕಮ್ಯೂನಿಸ್ಟ್ ಪಕ್ಷ ನಾಯಕರ ಆಗ್ರಹ

ಕಠ್ಮಂಡು: ಹೆಚ್ಚುತ್ತಿರುವ ತಮ್ಮ ಸಮಸ್ಯೆಗಳಿಗೆ ಕಳೆದ ವಾರ ಭಾರತವನ್ನು ದೂಷಿಸಿದ ನೇಪಾಳದ ಪ್ರಧಾನಿ ಕೆಪಿ ಶರ್ಮ ಒಲಿ ಅವರಿಗೆ ಭಾರತ ವಿರೋಧಿ ನಿಲುವು ತಿರುಗುಬಾಣವಾಗಿ ಪರಿಣಮಿಸಿದೆ.  2020 ಜೂನ್ 30ರ ಮಂಗಳವಾರ ನಡೆದ ಆಡಳಿತಾರೂಢ ನೇಪಾಳ ಕಮ್ಯೂನಿಸ್ಟ್ ಪಕ್ಷದ ಉನ್ನತ ಸಭೆಯಲ್ಲಿ ಭಾರತ ವಿರೋಧಿ ನಿಲುವಿಗಾಗಿ ತೀವ್ರ ಟೀಕೆಗೆ ಗುರಿಯಾದ ಒಲಿ, ಪಕ್ಷದ ನಾಯಕರಿಂದಲೇ ಪದತ್ಯಾಗದ ಒತ್ತಡಕ್ಕೆ ಒಳಗಾದರು.

ಪಕ್ಷದ ಸಭೆಯಲ್ಲಿ ಉನ್ನತ ನಾಯಕರು ಭಾರತ ವಿರೋಧಿ ನಿಲುವಿಗಾಗಿ ಒಲಿ ಅವರನ್ನು ತರಾಟೆಗೆ ತೆಗೆದುಕೊಂಡದ್ದಷ್ಟೇ ಅಲ್ಲ, ತತ್ ಕ್ಷಣ ಪ್ರಧಾನಿ ಪದದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದರು ಎಂದು ಸುದ್ದಿ ಸಂಸ್ಥೆ ವರದಿಯೊಂದು ತಿಳಿಸಿತು.

ಒಲಿ ಅವರು ಕಳೆದ ವಾರ ಭಾರತವು ತಮ್ಮ ಪದಚ್ಯುತಿಗಾಗಿ ಯತ್ನಿಸುತ್ತಿದೆ ಎಂದು ಆಪಾದಿಸಿದ್ದರು. ಪಕ್ಷದ ಸಹ ಅಧ್ಯಕ್ಷರೂ ಆದ ಪುಷ್ಪ ಕಮಲ್ ದಹಲ್ ನೇತೃತ್ವದ ಪ್ರತಿಸ್ಪರ್ಧಿ ಬಣವನ್ನು ಭಾರತ ತಮ್ಮ ವಿರುದ್ಧ ಎತ್ತಿ ಕಟ್ಟುತ್ತಿದೆ ಎಂದು ಒಲಿ ಭಾನುವಾರ ಸಮಾರಂಭ ಒಂದರಲ್ಲಿ ದೂರಿದ್ದರು.

ತಾವು ಪ್ರಕಟಿಸಿರುವ ನೂತನ ರಾಜಕೀಯ ನಕ್ಷೆಯು ನೇಪಾಳದ ದೈತ್ಯ ನೆರೆಯ ದೇಶವನ್ನು ಭ್ರಮನಿರಸನಗೊಳಿಸಿದೆ ಎಂಬ ಕಾರಣಕ್ಕಾಗಿ ತಮ್ಮ ಪ್ರತಿಸ್ಪರ್ಧಿಗಳು ತಮ್ಮ ಕಾಲಕೆಳಗಿನ ಚಾಪೆ ಎಳೆಯಲು ಯತ್ನಿಸುತ್ತಿದ್ದಾರೆ ಎಂದೂ ಒಲಿ ಆಪಾದಿಸಿದ್ದರು. ಆದರೆ ಅವರ ಯತ್ನ ಮಂಗಳವಾರ ಅವರಿಗೇ ತಿರುಗುಬಾಣವಾಯಿತು.

ಮಂಗಳವಾರ ನಡೆದ ಪಕ್ಷದ ೪೪ ಸದಸ್ಯ ಸ್ಥಾಯೀ ಸಮಿತಿಯಲ್ಲಿ, ಪುಷ್ಪ ಕಮಲ್ ದಹಲ್, ಮಾಧವ ನೇಪಾಳ, ಝಲಾ ನಾಥ್ ಖನಲ್ ಮತ್ತು ಬಾಮದೇವ ಗೌತಮ್ ಮತ್ತಿತರ ನಾಯಕರು ಒಲಿ ವಿರುದ್ಧ ಮುಗಿಬಿದ್ದು, ಅವರ ಪದತ್ಯಾಗಕ್ಕೆ ಆಗ್ರಹಿಸಿದರು ಎಂದು ವರದಿ ಹೇಳಿದೆ.

ಒಲಿ ಸರ್ಕಾರವು ಮೂಲಭೂತ ಆಡಳಿತದ ವಿಷಯಗಳಲ್ಲಿ ವಿಫಲವಾಗಿದೆ ಮತ್ತು ಗಮನ ಬೇರೆಡೆ ಸೆಳೆಯಲು ವಿನಾಕಾರಣ ಭಾರತವನ್ನು ದೂರುತ್ತಿದೆ ಎಂದು ನಾಯಕರು ವಾದಿಸಿದರು ಎಂದು ಹಿಮಾಲಯನ್ ಟೈಮ್ಸ್  ಪತ್ರಿಕೆಯ ವೆಬ್ ಸೈಟ್ ವರದಿ ತಿಳಿಸಿದೆ.

ಸಭೆಯಲ್ಲಿ ಬಿರುಸಿನ ವಾಗ್ವಾದಗಳು ನಡೆದು, ಪಕ್ಷದ ಸಹ ಅಧ್ಯಕ್ಷ ಪುಷ್ಪ ಕಮಲ್ ದಹಲ್ ಅವರು ಸರ್ಕಾರದ ಸರ್ವ ವೈಫಲ್ಯ, ಅದಕ್ಷತೆಗಾಗಿ ತತ್ ಕ್ಷಣ ರಾಜೀನಾಮೆ ನೀಡುವಂತೆ ಪ್ರಧಾನಿ ಒಲಿ ಅವರನ್ನು ಒತ್ತಾಯಿಸಿದರು ಎಂದು ದಹಲ್ ಅವರ ನಿಕಟವರ್ತಿ ಮೂಲಗಳು ತಿಳಿಸಿವೆ.

ಇತರ ಹಲವು ಎನ್ ಸಿಪಿ ನಾಯಕರೂ ಆಡಳಿತ ವೈಫಲ್ಯಕ್ಕಾಗಿ ಒಲಿ ಅವರನ್ನು ಟೀಕಿಸಿ ಟೀಕೆ ಮೂಲಕ ಗಮನ ಬೇರೆಡೆ ಸೆಳೆಯುವ ತಂತ್ರಗಳನ್ನು ಖಂಡಿಸಿದರು ಎಂದು ವೆಬ್ ಸೈಟ್ ವರದಿ ತಿಳಿಸಿದೆ.

No comments:

Advertisement