My Blog List

Wednesday, June 17, 2020

ಲಡಾಖ್: ಮತ್ತೆ ಚೀನಾ ಸೇನೆ ಜೊತೆ ಘರ್ಷಣೆ, 20 ಯೋಧರು ಹುತಾತ್ಮ

ಲಡಾಖ್: ಮತ್ತೆ ಚೀನಾ ಸೇನೆ ಜೊತೆ ಘರ್ಷಣೆ

 ಭಾರತೀಯ ಅಧಿಕಾರಿ ಸಹಿತ 20 ಯೋಧರು ಹುತಾತ್ಮ

 ನವದೆಹಲಿ: ಪೂರ್ವ ಲಡಾಖ್ನ ಗಾಲ್ವನ್ ಕಣಿವೆಯಲ್ಲಿ  2020 ಜೂನ್ 15ರ ಸೋಮವಾರ ರಾತ್ರಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಜೊತೆಗಿನಹಿಂಸಾತ್ಮಕ ಘರ್ಷಣೆಯಲ್ಲಿ ಭಾರತೀಯ ಸೇನೆಯ ಒಬ್ಬ ಒಬ್ಬ ಅಧಿಕಾರಿ ಸೇರಿದಂತೆ  20 ಮಂದಿ ಯೋಧರು ಹುತಾತ್ಮರಾಗಿದ್ದು, ಉಭಯ ಕಡೆಗಳಲ್ಲ್ಲೂ ಅನೇಕ ಸಾವುನೋವುಗಳು ಸಂಭವಿಸಿವೆ ಎಂದು ಸೇನಾ ಮೂಲಗಳು  2020 ಜೂನ್ 16ರ ಮಂಗಳವಾರ ಹೇಳಿದವು.

೧೯೭೫ರಲ್ಲಿ ಅರುಣಾಚಲ ಪ್ರದೇಶದಲ್ಲಿ ಚೀನೀಪಡೆಗಳು ಗಸ್ತು ತಿರುಗುತ್ತಿದ್ದ ಭಾರತೀಯ ಪಡೆಗಳ ಜೊತೆ ನಡೆಸಿದ್ದ ಘರ್ಷಣೆಯ ಬಳಿಕ ಭಾರತೀಯ ಪಡೆಗಳು ಪಿಎಲ್ ಜೊತೆಗಿನ ಘರ್ಷಣೆಯಲ್ಲಿ ಸಾವುನೋವು ಸಂಭವಿಸಿದ  ಮೊದಲ ಪ್ರಕರಣ ಇದು ಎಂದು ಮೂಲಗಳು ತಿಳಿಸಿದವು.

ಭಾರತೀಯ ಕಡೆಯಲ್ಲಿ ಹುತಾತ್ಮರಾಗಿರುವ ಅಧಿಕಾರಿಗಳಲ್ಲಿ ಒಬ್ಬರು ಕಮಾಂಡಿಂಗ್ ಅಧಿಕಾರಿಯಾಗಿದ್ದಾರೆ. ಜೆಸಿಒ ಒಬ್ಬರಿಗೂ ಗಾಯಗಳಾಗಿವೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಗಾಲ್ವನ್ ಕಣಿವೆಯಲ್ಲಿ ಪ್ರಕ್ಷುಬ್ಧತೆಯನ್ನು ಶಮನಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿ ಇರುವ ವೇಳೆಯಲ್ಲೇ ಘರ್ಷಣೆ ಸಂಭವಿಸಿದೆ ಎಂದು ಸೇನಾ ಮೂಲಗಳು ಹೇಳಿವೆ.

ಉಭಯ ಕಡೆಗಳ ಹಿರಿಯ ಸೇನಾ ಅಧಿಕಾರಿಗಳು ಪರಿಸ್ಥಿತಿ ತಿಳಿಗೊಳಿಸಲು ಪ್ರಸ್ತುತ ಮಾತುಕತೆ ನಡೆಸುತ್ತಿದ್ದಾರೆ ಎಂದು ಸೇನೆ ತಿಳಿಸಿದೆ.

ಉಭಯ ಸೇನೆಗಳ ಸೇನಾ ಕಮಾಂಡರುಗಳಾದ ಮೇಜರ್ ಜನರಲ್ ಅಭಿಜಿತ್ ಬಾಪಟ್ (ಕರು ಮೂಲದ ಕೇಂದ್ರ ಕಚೇರಿ ಇನ್ ಫ್ಯಾಂಟ್ರಿ ವಿಭಾಗ) ಮತ್ತು ಚೀನಾದ ತತ್ಸಮಾನ ಅಧಿಕಾರಿಗಳು ಘರ್ಷಣೆ ಸಂಭವಿಸಿದ ಸ್ಥಳದಲ್ಲೇ ಶಮನ ಯತ್ನದ ಮಾತುಕತೆಯಲ್ಲಿ ತೊಡಗಿದ್ದಾರೆ ಮತ್ತು ಪ್ರಕ್ಷುಬ್ಧತೆ ಶಮನಕ್ಕೆ ಯತ್ನಿಸುತ್ತಿದ್ದಾರೆ ಎಂದು ಸುದ್ದಿ ಮೂಲಗಳು ಹೇಳಿವೆ.

ಎಲ್ಲ ಸಾವುಗಳೂ ಕಲ್ಲೆಸೆತ ಮತ್ತು ಸೈನಿಕರು ಬಳಸಿದ ಕಬ್ಬಿಣದ ಸರಳುಗಳಿಂದಾಗಿ ಸಂಭವಿಸಿವೆ ಎಂದು ಹೆಸರು ಹೇಳಲು ಇಚ್ಛಿಸದ ಮೂಲವೊಂದು ತಿಳಿಸಿತು. ಸೇನೆಯು ಘಟನೆ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಉಭಯ ಸೇನೆಗಳು ಕಲ್ಲೆಸೆತ, ಕ್ಷಿಪಣಿ ಎಸೆತಗಳನ್ನು ನಡೆಸಿದ್ದು ಇದೇ ಮೊದಲೇನಲ್ಲ ಎಂದು ಮೂಲಗಳು ಹೇಳಿವೆ.

ಮಧ್ಯೆ, ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಸಂಭವಿಸಿದ ಘರ್ಷಣೆಯ ವರದಿ ಬರುತ್ತಿದ್ದಂತೆಯೇ ಹಾಲಿ ಕಾರ್ಯಾಚರಣಾ ಪರಿಸ್ಥಿತಿ ಬಗ್ಗೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಇತರ ಮೂರೂ ಪಡೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿ ಪರಿಸ್ಥಿತಿ ಬಗ್ಗೆ ಸಮಾಲೋಚಿಸಿದರು. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರೂ ಹಾಜರಿದ್ದರು. ಸೇನಾ ದಂಡನಾಯಕ ಮನೋಜ್ ಮುಕುಂದ ನರವಾಣೆ ಅವರು ಮಂಗಳವಾರ ತಮ್ಮ ಪಠಾಣ್ ಕೋಟ್ ಭೇಟಿಯ ನಿಯಮಿತ ಕಾರ್ಯಕ್ರಮವನ್ನು ರದ್ದು ಪಡಿಸಿದರು.

ಪೂರ್ವ ಲಡಾಖ್ನಲ್ಲಿ ವಿವಾದಾತ್ಮಕ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್ ಎಸಿ) ಘರ್ಷಣೆ ಸಂಭವಿಸಿದ್ದು, ಪ್ಯಾಗೊಂಗ್ ತ್ಸೊ ಸಮೀಪದ ಪಹರೆ ಸ್ಥಳಗಳಲ್ಲಿ ಮೇ -೬ರ ರಾತ್ರಿ ಘರ್ಷಿಸುವುದರೊಂದಿಗೆ ಬಿಕ್ಕಟ್ಟು ಶುರುವಾಗಿತ್ತು.

ಭಾರತೀಯ ಸೇನೆಯಲ್ಲಿ ಒಬ್ಬ ಕರ್ನಲ್ ಸೇರಿದಂತೆ ಮೂರು ಸಾವು ಸಂಭವಿಸಿದೆ ಎಂದು ಹೇಳಲಾಗಿದೆ. ಉಭಯ ಕಡೆಗಳಲ್ಲೂ ಸೋಮವಾರ ಮಾರಣಾಂತಿಕ ಸಾವು ನೋವು ಸಂಭವಿಸಿದೆ ಎಂದು ಇನ್ನೊಂದು ಸುದ್ದಿ ಮೂಲ ತಿಳಿಸಿದೆ. ಚೀನೀ ಕಡೆಯಲ್ಲಿ ಸಂಭವಿಸಿದ ಸಾವುನೋವುಗಳ ಬಗ್ಗೆ ತತ್ ಕ್ಷಣಕ್ಕೆ ಯಾವುದೇ ಮಾಹಿತಿ ಬಂದಿಲ್ಲ.

ಯಾವುದೇ ಕಡೆಯಲ್ಲಿ ಸಾವುನೋವು ಸಂಭವಿಸಿದ ಬಗ್ಗೆ ತನಗೆ ಗೊತ್ತಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯನ್ ಅವರು ಸೋಮವಾg ಸಂಜೆಯ ಹಿಂಸಾತ್ಮಕ ಘರ್ಷಣೆಗೆ ಭಾರತೀಯ ಯೋಧರನ್ನು ದೂರಿ, ಬಳಿಕ ಸೇನೆ ಮತ್ತು ರಾಜತಾಂತ್ರಿಕ ಮಾತುಕತೆಗಳ ಬಗ್ಗೆ ಮಾತನಾಡಿದರು.

ನಮ್ಮ  ಗಡಿ ಪಡೆಗಳು ಉನ್ನತ ಮಟ್ಟದ ಸಭೆ ನಡೆಸುತ್ತಿದ್ದು ಗಡಿ ಬಿಕ್ಕಟ್ಟು ಶಮನಗೊಳಿಸುವ ನಿಟ್ಟಿನಲ್ಲಿ ಮಹತ್ವದ ಸಹಮತ ಸಾಧಿಸಿವೆ. ಆದರೆ ಅಚ್ಚರಿದಾಯಕವಾಗಿ ಜೂನ್ ೧೫ರಂದು ಭಾರತೀಯ ಪಡೆಗಳು ಸಹಮತವನ್ನು ಗಂಭೀರವಾಗಿ ಉಲ್ಲಂಘಿಸಿದವು. ಮತ್ತು ಅಕ್ರಮ ಚಟುವಟಿಕೆಗಳಿಗಾಗಿ ಎರಡು ಬಾರಿ ಗಡಿರೇಖೆಯನ್ನು ದಾಟುವ ಮೂಲಕ ಚೀನೀ ಸಿಬ್ಬಂದಿಯನ್ನು ಪ್ರಚೋದಿಸಿದವು. ಇದು ಉಭಯ ಕಡೆಗಳ ಮಧ್ಯೆ ಗಂಭೀರ ಘರ್ಷಣೆಗೆ ಕಾರಣವಾಯಿತುಎಂದು ಝಾವೋ ಹೇಳಿದರು.

ಚೀನೀ ಕಮ್ಯೂನಿಸ್ಟ್ ಪಕ್ಷದ ಮುಖವಾಣಿಯಾಗಿರುವ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಮುಖ್ಯ ಸಂಪಾದಕ ಹು ಕ್ಷಿಜಿನ್ ಅವರು ಚೀನಾ ಕಡೆಯಲ್ಲಿ ಸಾವು ನೋವುಗಳಾಗಿರುವ ವರ್ತಮಾನ ತಮಗೆ ಬಂದಿದ್ದು, ಪಿಎಲ್ ಸಂಯಮವನ್ನು  ದೌರ್ಬಲ್ಯ ಎಂಬುದಾಗಿ ಭಾರತವು ತಪ್ಪರ್ಥ ಮಾಡಿಕೊಳ್ಳಬಾರದು ಎಂದು ಟ್ವೀಟ್ ಮಾಡಿದರು.

ಗಡಿ ಬಿಕ್ಕಟ್ಟಿನ ಶೀಘ್ರ ಇತ್ಯರ್ಥಕ್ಕಾಗಿ ಭಾರತ ಮತ್ತು ಚೀನಾವು ಸೇನಾ ಮತ್ತು ರಾಜತಾಂತ್ರಿಕ ಮಾತುಕತೆಗಳಲ್ಲಿ ತೊಡಗಿರುವಾಗಲೇ ಘಟನೆ ಘಟಿಸಿರುವುದು ಚಿಂತೆಗೆ ಕಾರಣವಾಗಿದೆ.

ಬಿಕ್ಕಟ್ಟು ನಿವಾರಣೆಗಾಗಿ ಉಭಯ ರಾಷ್ಟ್ರಗಳ ಸೇನಾ ನಿಯೋಗಗಳು ಸಂಭಾಷಣೆಯ ಮಾರ್ಗ ಹಿಡಿದಿದ್ದರೂ, ಗಡಿ ಬಿಕ್ಕಟ್ಟು ಇನ್ನಷ್ಟು ತೀವ್ರಗೊಳ್ಳಲು ಘಟನೆ ಕಾರಣವಾದಂತಾಗಿದೆ.

ಎಲ್ಎಸಿಯಲ್ಲಿ ಉಂಟಾಗಿರುವ ತೀವ್ರವಾದ ಉದ್ವಿಗ್ನತೆಯು ಪ್ರಕ್ಷುಬ್ಧತೆ ಹೆಚ್ಚಿರುವುದನ್ನು ಪ್ರತಿಫಲಿಸುತ್ತಿದೆ. ರಾಜತಾಂತ್ರಿಕ ಮಧ್ಯಪ್ರವೇಶದ ಅಗತ್ಯವನ್ನು ಇದು ಸೂಚಿಸುತ್ತದೆ ಎಂದು ಉತ್ತರ ಸೇನಾ ಮಾಜಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡಿಎಸ್ ಹೂಡಾ (ನಿವೃತ್ತ) ಹೇಳಿದರು.

ಎಲ್ಎಸಿಯಲ್ಲಿ ಎರಡು ಕಡೆಗಳಲ್ಲಿ ಮಾತುಕತೆಗಳು ನಡೆದಿವೆ. ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿಗಳು ಗಾಲ್ವಾನ್ ಪ್ರದೇಶದಲ್ಲಿ ಮತ್ತು ಕರ್ನಲ್ ಶ್ರೇಣಿಯ ಅಧಿಕಾರಿಗಳ ಹಾಟ್ ಸ್ಪ್ರಿಂಗ್ಸ್ನಲ್ಲಿ ಬಿಕ್ಕಟ್ಟು ಶಮನಕ್ಕಾಗಿ ಮಾತುಕತೆ ನಡೆಸುತ್ತಿದ್ದಾರೆ.

ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಹಂತ ಹಂತವಾಗಿ ಭಾರತ ಮತ್ತು ಚೀನೀ ಪಡೆಗಳು ಹಿಂದಕ್ಕೆ ತೆರಳುತ್ತಿದ್ದು, ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ನರವಾಣಿ ಕಳೆದ ವಾರ ಹೇಳಿದ್ದರು.

No comments:

Advertisement