Friday, June 12, 2020

ಸಿಡಿಎಸ್ ಬಿಪಿನ್ ರಾವತ್ ಜೊತೆ ರಾಜನಾಥ್ ಸಿಂಗ್ ಸಮಾಲೋಚನೆ

  ಸಿಡಿಎಸ್ ಬಿಪಿನ್ ರಾವತ್ ಜೊತೆ ರಾಜನಾಥ್ ಸಿಂಗ್ ಸಮಾಲೋಚನೆ

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 2020 ಜೂನ್ 12ರ ಶುಕ್ರವಾರ ರಕ್ಷಣಾ ಸೇವಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥರೊಂದಿಗೆ ಲಡಾಖ್ ಪರಿಸ್ಥಿತಿ ಬಗ್ಗೆ ಪರಿಶೀಲನಾ ಸಭೆ ನಡೆಸಿದರು.

ಗಡಿ ಬಿಕ್ಕಟ್ಟನ್ನು ಶೀಘ್ರವಾಗಿ ಇತ್ಯರ್ಥ ಪಡಿಸಲು ರಾಜತಾಂತ್ರಿಕ ಮತ್ತು ಸೇನಾ ಅಧಿಕಾರಿಗಳನ್ನು ತೊಡಗಿಸುವ ಮೂಲಕ ಭಾರತ ಮತ್ತು ಚೀನಾ ಪುನರಾವರ್ತಿತ ಸಂಧಾನ ಸಭೆಗಳನ್ನು ನಡೆಸುತ್ತಿರುವುದರ ಬೆನ್ನಲ್ಲೇ ರಾಜನಾಥ್ ಸಿಂಗ್ ಅವರು ಸಿಡಿಎಸ್ ಮತ್ತು ಇತರ ಸೇನಾ ಅಧಿಕಾರಿಗಳ ಜೊತೆಗೆ ಲಡಾಖ್ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ವಿದೇಶಾಂಗ ವ್ಯಹಾರಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿದರು.

ಇದಕ್ಕೆ ಒಂದು ದಿನ ಮುಂಚಿತವಾಗಿ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳಿಗೂ ಚೀನೀ ಪಡೆಗಳ ಜಮಾವಣೆ ವಿಸ್ತರಣೆ ಆಗಿರುವುದನ್ನು ಮೂಲಗಳು ದೃಢ ಪಡಿಸಿದ್ದವು.

ವಾರಾರಂಭದಲ್ಲಿ ವಿವಾದಾತ್ಮಕ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ (ಎಲ್ಎಸಿ) ಗಾಲ್ವಾನ್ ಕಣಿವೆಯ ಮೂರು ಹಾಟ್ಸ್ಪಾಟ್ಗಳು ಮತ್ತು ಪಹರೆ ಪಾಯಿಂಟ್ ೧೫ ಹಾಗೂ ಪೂರ್ವ ಲಡಾಖ್ ಹಾಟ್ ಸ್ಪ್ರಿಂಗ್ ಪ್ರದೇಶಗಳಿಂದ ಉಭಯ ದೇಶಗಳ ಸೈನಿಕರೂ ಸೀಮಿತ ಪ್ರಮಾಣದಲ್ಲಿ ವಾಪಸಾಗಿದ್ದರೆ ಎಂದು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದರು. ಪೂರ್ವ ಲಡಾಖ್ ಹಾಟ್ ಸ್ಪ್ರಿಂಗ್ಗಳು ಉದ್ವಿಗ್ನತೆಯ ಕೇಂದ್ರ ಬಿಂದುಗಳಾಗಿದ್ದವು.

ಪೂರ್ವ ಲಡಾಖ್ ಮತ್ತು ಉತ್ತರ ಸಿಕ್ಕಿಂನಲ್ಲಿ ಭಾರತ ಮತ್ತು ಚೀನೀ ಸೈನಿಕರ ಮಧ್ಯೆ ಕಳೆದ ತಿಂಗಳು ಸಂಭವಿಸಿದ ಹಿಂಸಾತ್ಮಕ ಘರ್ಷಣೆಗಳು ಲಡಾಖ್ನಿಂದ ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದವರೆಗಿನ ಎಲ್ಎಸಿಯ ಉಭಯ ಕಡೆಗಳಲ್ಲೂ ಉಭಯ ದೇಶಗಳ ಸೇನಾ ಜಮಾವಣೆಗೆ ಕಾರಣವಾಗಿತ್ತು ಎಂದು ಹೆಸರು ಹೇಳಲು ಇಚ್ಛಿಸದ ಇಬ್ಬರು ಹಿರಿಯ ಅಧಿಕಾರಿಗಳು ಗುರುವಾರ ಹೇಳಿದ್ದರು.

No comments:

Advertisement