Wednesday, July 8, 2020

ಇಡಿಯಿಂದ ನೀರವ್ ಮೋದಿ 350 ಕೋಟಿ ರೂ ಆಸ್ತಿಪಾಸ್ತಿ ಜಪ್ತಿ

ಇಡಿಯಿಂದ ನೀರವ್ ಮೋದಿ 350 ಕೋಟಿ ರೂ ಆಸ್ತಿಪಾಸ್ತಿ ಜಪ್ತಿ

ನವದೆಹಲಿ: ದೇಶಭ್ರಷ್ಟ ಆರ್ಥಿಕ ಅಪರಾಧ ಕಾಯ್ದೆಯ ಅಡಿಯಲ್ಲಿ ವಜ್ರ ವ್ಯಾಪಾರಿ ನೀರವ್  ಮೋದಿಗೆ ಸೇರಿದ ೩೨೯.೬೬ ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಯನ್ನು ತಾನು ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯವು (ಇಡಿ) 2020 ಜುಲೈ 8ರ ಬುಧವಾರ ತಿಳಿಸಿತು.

ಮುಂಬಯಿಯ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ನಡೆದ ೨೦೦ ಕೋಟಿ ( ಬಿಲಿಯನ್) ಅಮೆರಿಕನ್ ಡಾಲರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ಪ್ರಕರಣದ ಅಡಿಯಲ್ಲಿ ಜಾರಿ ನಿರ್ದೇಶನಾಲಯದ ತನಿಖೆಗೆ ಒಳಪಟ್ಟಿರುವವರಲ್ಲಿ ನೀರವ್ ಮೋದಿ ಮತ್ತು ಆತನ ಚಿಕ್ಕಪ್ಪ ಮೆಹುಲ್ ಚೊಕ್ಸಿ ಸೇರಿದ್ದಾರೆ.

ಜಪ್ತಿ ಮಾಡಲಾಗಿರುವ ಆಸ್ತಿಗಳಲ್ಲಿ ಮುಂಬೈಯ ವರ್ಲಿಯಲ್ಲಿರುವ ಸಮುದ್ರ ಮಹಲ್ ಐಕಾನಿಕ್ ಕಟ್ಟಡ, ಅಲಿಬಾಗ್ನಲ್ಲಿ ಇರುವ ಸಮುದ್ರ ತಡಿಯ ತೋಟದ ಮನೆ ಮತ್ತು ಜಾಗ, ಜೈಸಲ್ಮೇರಿನಲ್ಲಿರುವ ಗಾಳಿ ಗಿರಣಿ (ವಿಂಡ್ ಮಿಲ್), ಲಂಡನ್ನಿನಲ್ಲಿ ಇರುವ ಫ್ಲ್ಯಾಟ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ (ಯುಎಇ) ಇರುವ ವಸತಿ ಫ್ಲ್ಯಾಟ್ಗಳು, ಶೇರುಗಳು ಮತ್ತು ಬ್ಯಾಂಕ್ ಠೇವಣಿಗಳು ಸೇರಿವೆ ಎಂದು ಕೇಂದ್ರೀಯ ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಮುಂಬೈಯ ವಿಶೇಷ ನ್ಯಾಯಾಲಯವು ಜೂನ್ ೮ರಂದು ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ ಅಧಿಕಾರ ನೀಡಿತ್ತು.

ನೀರವ್ ಮೋದಿಯನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂಬುದಾಗಿ ಕಳೆದ ವರ್ಷ ಡಿಸೆಂಬರ್ ೫ರಂದು ಇದೇ ನ್ಯಾಯಾಲಯ ಘೋಷಣೆ ಮಾಡಿತ್ತು.

೨೦೧೮ರಲ್ಲಿ ಎಫ್ಇಒ ಕಾಯ್ದೆಯ  ಅಡಿಯಲ್ಲಿ ೩೨೯.೬೬ ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದು ಅದನ್ನು ಕೇಂದ್ರ ಸರ್ಕಾರ ವಶಪಡಿಸಿಕೊಂಡಿದೆ ಎಂದು ಇಡಿ ಹೇಳಿದೆ.

ಸಂಸ್ಥೆಯು ನೀರವ್ ಮೋದಿಗೆ ಸೇರಿದ ,೩೪೮ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹಣ ವರ್ಗಾವಣೆ ಕಾಯ್ದೆಯ ಅಡಿಯಲ್ಲಿ (ಪಿಎಂಎಲ್) ಈವರೆಗೆ ಮುಟ್ಟುಗೋಲು ಹಾಕಿಕೊಂಡಿದೆ.

ನೀರವ್ ಮೋದಿಯನ್ನು ೨೦೧೯ರಲ್ಲಿ ಮಾರ್ಚ್ನಲ್ಲಿ ಲಂಡನ್ನಲ್ಲಿ ಬಂಧಿಸಿದ ಬಳಿಕ ಇಂಗ್ಲೆಂಡಿನಲ್ಲಿ ಸೆರೆಮನೆಯಲ್ಲಿ ಇರಿಸಲಾಗಿದೆ. ನೀರವ್ ಮೋದಿಯನ್ನು ದೇಶಕ್ಕೆ ತರಲು ಕಾನೂನು ಸಮರ ನಡೆಯುತ್ತಿದೆ.

No comments:

Advertisement