My Blog List

Tuesday, July 28, 2020

ರಾಜಸ್ಥಾನ: ಅಧಿವೇಶನಕ್ಕಾಗಿ ಮತ್ತೆ ಪ್ರಸ್ತಾವ

ರಾಜಸ್ಥಾನ: ಅಧಿವೇಶನಕ್ಕಾಗಿ ಮತ್ತೆ ಪ್ರಸ್ತಾವ

ಜೈಪುರ: ರಾಜಕೀಯ ಮೇಲಾಟಗಳ ಮಧ್ಯೆರಾಜ್ಯಪಾಲರು ಕುಟುಂಬದ ಮುಖ್ಯಸ್ಥರಾಗಿದ್ದು, ತಾವು ಘರ್ಷಣೆ ಬಯಸುವುದಿಲ್ಲಎಂದು ರಾಜಸ್ಥಾನ ಸರ್ಕಾರ 2020 ಜುಲೈ 28ರ ಮಂಗಳವಾರ ತಿಳಿಸಿದ್ದು, ಜುಲೈ ೩೧ರಂದು ವಿಧಾನಸಭೆ ಅಧಿವೇಶನ ಕರೆಯುವಂತೆ ಕೋರಿ ಮತ್ತೆ ಪರಿಷ್ಕೃತ ಪ್ರಸ್ತಾಪವನ್ನು ಕಳಿಸಿದೆ.

ರಾಜಸ್ಥಾನ ಸಚಿವ ಸಂಪುಟದ ಸಭೆಯ ಬಳಿಕ ಸಾರಿಗೆ ಸಚಿವ ಪ್ರತಾಪ್ ಸಿಂಗ್ ಅವರು ವಿಷಯ ತಿಳಿಸಿದ್ದಾರೆ. ಸಚಿವ ಸಂಪುಟವು ರಾಜ್ಯಪಾಲ ಕಲರಾಜ್ ಮಿಶ್ರ ಅವರು ವಿಧಾನಸಭೆಯ ಅಧಿವೇಶನ ಕರೆಯಲು ಹಾಕಿದ ಮೂರು ಷರತ್ತುಗಳ ಬಗ್ಗೆ ಚರ್ಚಿಸಿತು.

ನಾವ ರಾಜ್ಯಪಾಲರ ಜೊತೆ ಯಾವುದೇ ಷರ್ಷಣೆ ಬಯಸುವುದಿಲ್ಲ. ಅವರು ಕುಟುಂಬದ ಮುಖ್ಯಸ್ಥರು. ರಾಜ್ಯಪಾಲರು ಸಚಿವ ಸಂಪುಟದ ಪ್ರಸ್ತಾಪವನ್ನ ನಿರಾಕರಿಸುವಂತಿಲ್ಲ ಎಂದು ಸಂವಿಧಾನ ಹೇಳುತ್ತದೆ. ಸಂವಿಧಾನವನ್ನು ಗೌರವಿಸಿ ರಾಜ್ಯಪಾಲರು ಜುಲೈ ೩೧ರಿಂದ ಅಧಿವೇಶನ ಆರಂಭಿಸುವ ಪ್ರಸ್ತಾಪಕ್ಕೆ ಅನುಮೋದನೆ ನೀಡುತ್ತಾರೆ ಎಂದು ನಾವು ಹಾರೈಸಿದ್ದೇವೆ. ಅಧಿವೇಶನ ನಮ್ಮ ಹಕ್ಕುಎಂದು ಸಿಂಗ್ ಹೇಳಿದರು.

ರಾಜ್ಯಪಾಲ ಕಲರಾಜ್ ಮಿಶ್ರ ಅವರು ಎತ್ತಿದ ಎಲ್ಲ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಉತ್ತರ ನೀಡಿದೆ ಮತ್ತು ಪ್ರಸ್ತಾಪವನ್ನು ಪುನಃ ಅವರಿಗೆ ಕಳುಹಿಸಿದೆ ಎಂದೂ ಸಚಿವರು ನುಡಿದರು.

ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರ ಜೈಪುರದಲ್ಲಿನ ನಿವಾಸದಲ್ಲಿ ಸಚಿವ ಸಂಪುಟದ ಸಭೆ ನಡೆಯಿತು.

ಗೆಹ್ಲೋಟ್ ಮತ್ತು ಅವರ ಸಂಪುಟದ ಹಿಂದಿನ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಮಧ್ಯೆ ಒಳಗೊಳಗೇ ಕುದಿಯುತ್ತಿದ್ದ ಭಿನ್ನಾಭಿಪ್ರಾಯ ಬಹಿರಂಗಕ್ಕೆ ಬಂದ ಬಳಿಕ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಬಿಕ್ಕಟ್ಟಿಗೆ ಸಿಲುಕಿದೆ.

ಗೆಹ್ಲೋಟ್ ಸರ್ಕಾರವನ್ನ ಪತನಗೊಳಿಸಲು ಬಿಜೆಪಿಯು ಕುದುರೆವ್ಯಾಪಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ಆಪಾದಿಸಿದೆ. ವಿಧಾನಸಭೆ ಅಧಿವೇಶವನ್ನು ವಿಳಂಬಗೊಳಿಸಲು ಬಿಜೆಪಿಯು ರಾಜ್ಯಪಾಲರ ಮೇಲೆ ಒತ್ತಡ ಹಾಕುತ್ತಿದೆ ಎಂದೂ ಪಕ್ಷವು ದೂರಿದೆ.

ಬಿಜೆಪಿ ಮತ್ತು ರಾಜ್ಯಪಾಲ ಕಲರಾಜ್ ಮಿಶ್ರ ಎಲ್ಲ ಆರೋಪಗಳನ್ನೂ ತಳ್ಳಿಹಾಕಿದ್ದಾರೆ.

ತಮಗೆ ಬಹುಮತ ಸಾಬೀತು ಪಡಿಸಲು ಸಾಧ್ಯವಾಗುವಂತೆ ವಿಧಾನಸಭೆ ಅಧಿವೇಶನ ಕರೆಯಬೇಕು ಎಂದು ಗೆಹ್ಲೋಟ್ ಬಯಸಿದ್ದಾರೆ. ರಾಜ್ಯ ವಿಧಾನಸಭಾ ಅಧಿವೇಶನ ಕರೆಯಬೇಕು ಎಂಬ ಪ್ರಸ್ತಾಪದೊಂದಿಗೆ ಅವರು ರಾಜ್ಯಪಾಲರನ್ನು ಭೇಟಿ ಮಾಡಿದ್ದರು.

ಮಿಶ್ರ ಅವರು ವಿಧಾನಸಭೆ ಅಧಿವೇಶನ ಕರೆಯಲು ಸೋಮವಾರ ಒಪ್ಪಿದ್ದರು. ಆದರೆ ಮೂರು ಷರತ್ತುಗಳನ್ನು ಹಾಕಿದ್ದರು. ಸದನ ಸಮಾವೇಶಗೊಳ್ಳಲು ೨೧ ದಿನಗಳ ಪೂರ್ವಭಾವಿ ನೋಟಿಸ್, ಸದನದಲ್ಲಿ ಬಲಾಬಲ ಪರೀಕ್ಷೆ ಕಲಾಪದ ನೇರ ಪ್ರಸಾರ ಮತ್ತು ಕೋವಿಡ್-೧೯ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಪಾಲನೆಯ ಖಾತರಿ ಮೂರು ಷರತ್ತುಗಳನ್ನು ಪಾಲಿಸಬೇಕು ಎಂಬ ಷರತ್ತುಗಳನ್ನು ರಾಜ್ಯಪಾಲರು ಸೂಚಿಸಿದ್ದರು.

ಸರ್ಕಾರವು ವಿಶ್ವಾಸಮತ ಗೆಲ್ಲಬಯಸಿದರೆ, ಅಲ್ಪಾವಧಿಯಲ್ಲಿ ಅಧಿವೇಶನ ಸಮಾವೇಶಗೊಳಿಸಲು ಅದು ನ್ಯಾಯೋಚಿತ ನೆಲೆಯಾಗುತ್ತದೆ, ಆದರೆ ಅದನ್ನು ಹೇಳಬೇಕುಎಂದು ರಾಜಭವನದ ಹೇಳಿಕೆ ಸೋಮವಾರ ತಿಳಿಸಿತ್ತು.

೨೧ ದಿನಗಳ ಪೂರ್ವಭಾವಿ ನೋಟಿಸ್ ಅಗತ್ಯವಿಲ್ಲ ಎಂದು ಪ್ರತಿಪಾದಿಸಿರುವ ಕಾಂಗ್ರೆಸ್ ನಾಯಕರು, ೨೦೧೪ರಲ್ಲಿ ೧೪ನೇ ರಾಜಸ್ಥಾನ ವಿಧಾನಸಭೆಯ ೩ನೇ ಅಧಿವೇಶನ ಸಮಾವೇಶಗೊಂಡಿದ್ದುದರತ್ತ ಬೊಟ್ಟು ಮಾಡಿದರು. ಅಧಿವೇಶನವನ್ನು ಸೆಪ್ಟೆಂಬರ್ ೭ರಂದು ಕರೆಯಲಾಗಿತ್ತು ಮತ್ತು ಸೆಪ್ಟೆಂಬರ್ ೧೫ರಂದು ಸದನ ಕಲಾಪ ಆರಂಭವಾಗಿತ್ತು. ಅತ್ಯಂತ ಕಡಿಮೆ ಅವಧಿಯ ನೋಟಿಸ್ ನೀಡಿ ಅಧಿವೇಶನ ಸಮಾವೇಶಗೊಳಿಸಿದ ಬೇಕಾದಷ್ಟು ನಿದರ್ಶನಗಳಿವೆ ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಹೇಳಿದರು.

ಸರ್ಕಾರವು ಈಗಾಗಲೇ ಬಹುಮತ ಹೊಂದಿರುವಾಗ ಸದನ ಸಮಾವೇಶ ಕರೆಯುವ ಅಗತ್ಯವೇನಿದೆ ಎಂದು ರಾಜ್ಯಪಾಲರು ಇದಕ್ಕೆ ಮುನ್ನ ಪ್ರಶ್ನಿಸಿದ್ದರು. ಅಲ್ಲದೆ ಅನರ್ಹತೆಯ ವಿಚಾರ ಸುಪ್ರೀಂಕೋರ್ಟಿನಲ್ಲಿ ಇತ್ಯರ್ಥಕ್ಕಾಗಿ ಬಾಕಿ ಉಳಿದಿದೆ ಎಂದು ಅವರು ಹೇಳಿದ್ದರು.

No comments:

Advertisement