My Blog List

Monday, July 27, 2020

ರಾಜಸ್ಥಾನ ರಾಜ್ಯಪಾಲರಿಂದ ಅಧಿವೇಶನಕ್ಕೆ ಶರತ್ತಿನ ಒಪ್ಪಿಗೆ

ರಾಜಸ್ಥಾನ ರಾಜ್ಯಪಾಲರಿಂದ ಅಧಿವೇಶನಕ್ಕೆ ಶರತ್ತಿನ ಒಪ್ಪಿಗೆ

ನವದೆಹಲಿ/ ಜೈಪುರ: ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರ ಪುನರಪಿ ಮನವಿಗಳ ಬಳಿಕ ರಾಜಸ್ಥಾನದ ರಾಜ್ಯಪಾಲ ಕಲರಾಜ್ ಮಿಶ್ರ ಅವರು ರಾಜ್ಯ ವಿಧಾನಸಭೆಯ ಅಧಿವೇಶನ ಕರೆಯಲು 2020 ಜುಲೈ 27ರ ಸೋಮವಾರ ಒಪ್ಪಿಗೆ ನೀಡಿದ್ದಾರೆ. ಆದರೆ ಸರ್ಕಾರದಿಂದ ೨೧ ದಿನಗಳ ನೋಟಿಸ್ ಸಹಿತವಾಗಿ ಮೂರು ಶರತ್ತುಗಳನ್ನು ವಿಧಿಸಿದ್ದಾರೆ.

ಇದೇ ವೇಳೆಗೆ ರಾಜಸ್ಥಾನ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟಿಗೆ ಸಲ್ಲಿಸಲಾಗಿದ್ದ ತಮ್ಮ ವಿಶೇಷ ಅರ್ಜಿಯನ್ನು ರಾಜಸ್ಥಾನ ವಿಧಾನಸಭಾಧ್ಯಕ್ಷ ಸಿ.ಪಿ. ಜೋಶಿ ಅವರು ಸೋಮವಾರ ಹಿಂಪಡೆದಿದ್ದಾರೆ.

ವಿಧಾನಸಭಾ ಅಧಿವೇಶನ ಕರೆಯುವಂತೆ ಸಚಿವ ಸಂಪುಟದ ಶಿಫಾರಸು ಸಹಿತವಾಗಿ ಗೆಹ್ಲೋಟ್ ಅವರು  ಸಲ್ಲಿಸಿದ್ದ ಪರಿಷ್ಕೃತ ಮನವಿಯನ್ನು ಹಿಂದಿರುಗಿಸುತ್ತಾ ರಾಜ್ಯಪಾಲರು ಅಧಿವೇಶನ ಕರೆಯುವ ಸಂಬಂಧ ವಿಧಿಸಲಾದ ಶರತ್ತುಗಳನ್ನೂ ತಿಳಿಸಿದ್ದಾರೆ.

ಪ್ರಕಟಣೆಯೊಂದನ್ನು ಸೋಮವಾರ ನೀಡಿರುವ ಮಿಶ್ರ, ರಾಜ್ಯಪಾಲರು ಮೇಲಿನ ಒತ್ತಡದ ಒಳಗಾಗಿದ್ದಾರೆ ಎಂಬ ಮುಖ್ಯಮಂತ್ರಿಯ ಆರೋಪದ ಮಧ್ಯೆ ಸದನದ ಅಧಿವೇಶನ ಕರೆಯುವುದನ್ನು ತಾನು ವಿಳಂಬಿಸುತ್ತಿರುವುದಾಗಿ ಮಾಡಲಾದ ಆಪಾದನೆಯನ್ನು ತಳ್ಳಿಹಾಕಿದರು.

ರಾಜಸ್ಥಾನದ ಅಧಿಕಾರದ ಜಗಳದ ಮಧ್ಯೆ ವಿಧಾನಸಭಾ ಅಧಿವೇಶನ ಕರೆಯುಂತೆ ಸಚಿವ ಸಂಪುಟ ಮಾಡಿದ ಶಿಫಾರಸನ್ನು ರಾಜ್ಯಪಾಲ ಮಿಶ್ರ ಅವರು ಹಿಂದಿರುಗಿಸಿದ್ದು ಇದು ಎರಡನೇ ಬಾರಿ.

ರಾಜ್ಯ ಸರ್ಕಾರವು ಸದನದಲ್ಲಿ ಬಲಾಬಲ ಪರೀಕ್ಷೆ ನಡೆದರೆ ಕಲಾಪವನ್ನು  ನೇರ ಪ್ರಸಾರ ಮಾಡಬೇಕು ಎಂದೂ ರಾಜ್ಯಪಾಲರು ಸೂಚಿಸಿದ್ದಾರೆ. ವಿಧಾನಸಭಾ ಅಧಿವೇಶನ ಕರೆಯಬಾರದೆಂಬ ಇರಾದೆ ತಮಗಿಲ್ಲ ಎಂದು ಮಿಶ್ರ ತಿಳಿಸಿದ್ದಾರೆ.

ವಿಧಾನಸಭಾ ಅಧಿವೇಶನಕ್ಕಾಗಿ ಒತ್ತಾಯಿಸುತ್ತಿರುವ ಮುಖ್ಯಮಂತ್ರಿ ಗೆಹ್ಲೋಟ್ ಅವರು ಸಚಿನ್ ಪೈಲಟ್ ಬಂಡಾಯದ ಬಳಿಕ ಸೃಷ್ಟಿಯಾಗಿರುವ ರಾಜಕೀಯ ಬಿಕ್ಕಟ್ಟನ್ನು ಕೊನೆಗೊಳಿಸಲು ಸದನದಲ್ಲಿ ಬಹುಮತ ಸಾಬೀತು ಪಡಿಸಲು ಬಯಸಿದ್ದಾರೆ. ಬಂಡಾಯವೆದ್ದ ಬಳಿಕ ಉಪ ಮುಖ್ಯಮಂತ್ರಿ ಸ್ಥಾನ ಮತ್ತು ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಪೈಲಟ್ ಅವರನ್ನು ವಜಾಗೊಳಿಸಲಾಗಿದೆ.

ಪ್ರಸ್ತಾಪಿತ ವಿಧಾನಸಭಾ ಅಧಿವೇಶನದಲ್ಲಿ ಕೊರೋನಾವೈರಸ್ ಸೋಂಕು ಹರಡದಂತೆ ಮುಂಜಾಗರೂಕತಾ ಕ್ರಮಗಳನ್ನು ಖಾತರಿ ಪಡಿಸಬೇಕು ಎಂದೂ ರಾಜ್ಯಪಾಲರ ಟಿಪ್ಪಣಿ ಹೇಳಿದೆ. ಹೇಗೆ ಸಾಮಾಜಿಕ ಅಂತರ ಪಾಲನೆಯ ವ್ಯವಸ್ಥೆ ಮಾಡುತ್ತೀರಿ ಎಂದೂ ರಾಜ್ಯಪಾಲರು ಪ್ರಶ್ನಿಸಿದ್ದಾರೆ.

೨೦೦ ಮಂದಿ ಶಾಸಕರು ಮತ್ತು ೧೦೦೦ ಮಂದಿ ಅಧಿಕೃತ ಸಿಬ್ಬಂದಿಯನ್ನು ಒಟ್ಟಾಗಿ ಸಮಾವೇಶಗೊಳಿಸುವಾಗ ಸಾಮಾಜಿಕ ಅಂತರ ಪಾಲಿಸುವುದು ಹೇಗೆ ಎಂಬ ಬಗ್ಗೆ ಯಾವುದೇ ಮಾರ್ಗ ಸೂಚಿ ಇಲ್ಲ, ಹೀಗಾಗಿ ಕೋವಿಡ್-೧೯ ಸೋಂಕು ಹರಡುವ ಸಾಧ್ಯತೆ ಇದೆ ಎಂದು ರಾಜ್ಯಪಾಲರು ಹೇಳಿದ್ದಾರೆ.

ಕೊರೋನಾವೈರಸ್ ಪರಿಸ್ಥಿತಿಯನ್ನು ಉಲ್ಲೇಖಿಸಿದ ರಾಜ್ಯಪಾಲರು ಅಲ್ಪಾವಧಿಯ ನೋಟಿಸ್ ಮೂಲಕ ಎಲ್ಲ ಸದಸ್ಯರನ್ನು ಕರೆಯುವುದು ಕಷ್ಟ ಎಂದು ಮೊದಲು ತಿಳಿಸಿದ್ದರು.

ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಲು ಬಯಸಿದ್ದೀರಾ ಎಂಬುದಾಗಿ ರಾಜ್ಯಪಾಲರು ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರನ್ನು ಪ್ರಶ್ನಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ವಿಶ್ವಾಸಮತ ಗೊತ್ತುವಳಿ ಮಂಡಿಸಲು ನೀವು ಬಯಸಿದ್ದೀರಾ? ನಿಮ್ಮ ಪ್ರಸ್ತಾಪದಲ್ಲಿ ಇದನ್ನು ಉಲ್ಲೇಖಿಸಲಾಗಿಲ್ಲ. ಆದರೆ ನೀವು ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದೀರಿ ಎಂದೂ ರಾಜ್ಯಪಾಲರು ಕೇಳಿದ್ದಾರೆ ಎಂದು ವರದಿ ಹೇಳಿದೆ.

ರಾಜ್ಯಪಾಲರು ಇದಕ್ಕೆ ಮುನ್ನ ಸರ್ಕಾರವು ಈಗಾಗಲೇ ಬಹುಮತ ಹೊಂದಿರುವಾಗ ಮತ್ತು ಅನರ್ಹತೆಯ ವಿಷಯ ಸುಪ್ರೀಂಕೋರ್ಟಿನಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವಾಗ ಅಧಿವೇಶನ ಕರೆಯುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದ್ದರು.

ಸಿಪಿ ಜೋಶಿ ಅರ್ಜಿ ವಾಪಸ್: ಮಧ್ಯೆ ಇನ್ನೊಂದು ಬೆಳವಣಿಗೆಯಲ್ಲಿ ವಿಧಾನಸಭಾಧ್ಯಕ್ಷ ಸಿಪಿ ಜೋಶಿ ಅವರು ಸಚಿನ್ ಪೈಲಟ್ ಮತ್ತು ೧೮ ಕಾಂಗ್ರೆಸ್ ಬೆಂಬಲಿಗ ಶಾಸಕರ ವಿರುದ್ಧದ ಅನರ್ಹತೆ ಪ್ರಕ್ರಿಯೆಯನ್ನು ಮುಂದೂಡುವಂತೆ ತಮಗೆ ನಿರ್ದೇಶಿಸಿದ ರಾಜ್ಯ ಹೈಕೋರ್ಟಿನ ಜುಲೈ ೨೧ರ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದಾರೆ.

ರಾಷ್ಟ್ರಪತಿಗೆ ಮನವಿ, ಹಸ್ತಕ್ಷೇಪಕ್ಕೆ ಕೋರಿಕೆ: ಏತನ್ಮಧ್ಯೆ, ರಾಜಸ್ಥಾನ ಕಾಂಗ್ರೆಸ್ ಪಕ್ಷವು ರಾಷ್ಟ್ರಪತಿಯವರಿಗೆ ಮನವಿ ಪತ್ರವೊಂದನ್ನು ಕಳುಹಿಸಿ, ಹಾಲಿ ರಾಜಕೀಯ ಬಿಕ್ಕಟ್ಟು ಇತ್ಯರ್ಥಕ್ಕಾಗಿ ಮಧ್ಯಪ್ರವೇಶ ಮಾಡುವಂತೆ ಕೋರಿದೆ.

ಬಿಜೆಪಿಯು ಕುದುರೆ ವ್ಯಾಪಾರ ತಂತ್ರದ ಮೂಲಕ ರಾಜ್ಯ ಸರ್ಕಾರವನ್ನು ಉರುಳಿಸಲು ಸಂಚು ಹೂಡಿದೆ. ತಮ್ಮ ಹುದ್ದೆಯ ಘನತೆಯ ಬಗ್ಗೆ ಚಿಂತಿಸದಿರುವ ರಾಜ್ಯಪಾಲ ಕಲರಾಜ್ ಮಿಶ್ರ ಅವರು ಕೇಂದ್ರದ ಆಡಳಿತ ಪಕ್ಷದ ಪ್ರಚೋದನೆಯಿಂದ ಸಂವಿಧಾನವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮನವಿಯಲ್ಲಿ ಆಪಾದಿಸಿದೆ.

ಇದೇ ವೇಳೆಯಲ್ಲಿ ಬಿಎಸ್‌ಪಿ ಶಾಸಕರನ್ನು ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸಿದ್ದನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಮದಮ್ ದಿಲಾವರ್ ಸಲ್ಲಿಸಿದ ಅರ್ಜಿಯೊಂದನ್ನು ರಾಜಸ್ಥಾನ ಹೈಕೋರ್ಟ್ ತಳ್ಳಿಹಾಕಿತು.

ಮಧ್ಯೆ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಅವರು ಹರಿಯಾಣದಲ್ಲಿ ಕುಳಿತಿರುವ ೧೯ ಶಾಸಕರ ಪೈಕಿ ಶಾಸಕರು ೪೮ ಗಂಟೆಗಳ ಒಳಗಾಗಿ ಹಿಂದಿರುಗಲಿದ್ದಾರೆ ಎಂದು ಸೋಮವಾರ ಹೇಳಿದರು.

No comments:

Advertisement