Tuesday, August 4, 2020

ಧಾರಾಕಾರ ಮಳೆ: ಮುಂಬೈಯಲ್ಲಿ ೩ ಮಂದಿ ಚರಂಡಿಪಾಲು

ಧಾರಾಕಾರ ಮಳೆ: ಮುಂಬೈಯಲ್ಲಿ ಮಂದಿ ಚರಂಡಿಪಾಲು

ಮುಂಬೈ: ಮುಂಬೈ, ಪುಣೆ ಸೇರಿದಂತೆ ಮಹಾರಾಷ್ಟ್ರದ ಹಲವಡೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಸಾಂತಾಕ್ರೂಜ್ ಪೂರ್ವ ಭಾಗದಲ್ಲಿ ಭಾರೀ ಮಳೆಗೆ ಮನೆಯೊಂದು 2020 ಆಗಸ್ಟ್ 04ರ ಮಂಗಳವಾರ ತೆರೆದ ಚರಂಡಿಗೆ ಕುಸಿದು ಅದರಲ್ಲಿದ್ದ ಒಬ್ಬ ಮಹಿಳೆ ಮತ್ತು ಇಬ್ಬರು ಬಾಲಕಿಯರು ಚರಂಡಿ ನೀರಿನಲ್ಲಿ ಕಣ್ಮರೆಯಾದರು.

ಗುಂಪು ಮನೆಗಳ (ಚಾಲ್) ಒಂದು ಭಾಗ ಕುಸಿದಾಗ ಒಟ್ಟು ನಾಲ್ವರು ಚರಂಡಿಗೆ ಬಿದ್ದರು. ಅವರ ಪೈಕಿ ಒಬ್ಬ ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದು, ಆಕೆಯನ್ನು ವಿಎನ್ ದೇಸಾಯಿ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಒಬ್ಬ ಮಹಿಳೆ ಮತ್ತು ಇಬ್ಬರು ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದರು.

ಬೆಳಗ್ಗೆ ೧೧.೩೩ ಸುಮಾರಿಗೆ ಮನೆಗಳು ಕುಸಿದಿದ್ದು, ಸಾಂತಕ್ರೂಜ್ ಪೂರ್ವದ ವಕೋಲಾ ನಾಲೆಯಲ್ಲಿ ಮಹಿಳೆ ಮತ್ತು ಇಬ್ಬರು ಬಾಲಕಿಯರಿಗಾಗಿ ಶೋಧ ಕಾರ್ಯಗಳು ಮುಂದುವರೆದಿವೆ.

ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ಚರಂಡಿಗೆ ಹೊಂದಿಕೊಂಡ ಎರಡು ಮನೆಗಳು ಕುಸಿದ ನಂತರ ಮಹಿಳೆ ಮತ್ತು ಮೂವರು ಬಾಲಕಿಯರು ಚರಂಡಿಗೆ ಬಿದ್ದರು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

"ಒಬ್ಬ ಹುಡುಗಿಯನ್ನು ಮುಂಬೈ ಪೊಲೀಸರು ರಕ್ಷಿಸಿ ವಿಎನ್ ದೇಸಾಯಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ, ಆದರೆ ಒಬ್ಬ ಮಹಿಳೆ ಮತ್ತು ಇಬ್ಬರು ಬಾಲಕಿಯರು ಇನ್ನೂ ಕಾಣೆಯಾಗಿದ್ದಾರೆ" ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರಭಾತ್ ರಹಂಗ್ಡೇಲ್ ಹೇಳಿದರು.

ಎರಡು ಅಗ್ನಿಶಾಮಕ ಯಂತ್ರಗಳು ಮತ್ತು ಆಂಬುಲೆನ್ಸ್ ಸ್ಥಳಕ್ಕೆ ಧಾವಿಸಿದ್ದು, ಅಗ್ನಿಶಾಮಕ ದಳವು ಶೋಧ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಸಹಾಯವನ್ನು ಕೋರಿದೆ.

ಮುಂಬೈ ಮತ್ತು ನೆರೆಯ ಥಾಣೆ ಜಿಲ್ಲೆಯಲ್ಲಿ ರಾತ್ರಿಯಿಡೀ ಭಾರಿ ಮಳೆಯಾಗಿದ್ದು, ಹಲವಾರು ಸ್ಥಳಗಳಿಗೆ ನೀರು ನುಗ್ಗಿತು ಮತ್ತು ಸ್ಥಳೀಯ ರೈಲು ಸೇವೆಗಳು ಮತ್ತು ರಸ್ತೆ ಸಂಚಾರ ಸಂಚಾರ ಅಸ್ತವ್ಯಸ್ತಗೊಂಡಿತು.

ಮುಂದಿನ ೪೮ ಗಂಟೆಗಳ ಕಾಲ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನಿವಾಸಿಗಳಿಗೆ ಮನೆಯಲ್ಲಿಯೇ ಇರಬೇಕೆಂದು ಮನವಿ ಮಾಡಿದೆ ಮತ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಎಲ್ಲ ವಾಣಿಜ್ಯ ಸಂಸ್ಥೆಗಳನ್ನು ಮಂಗಳವಾರ ಮುಚ್ಚುವಂತೆ ಸೂಚಿಸಿದೆ.

ರೈಲು ಹಳಿಗಳಲ್ಲಿ ನೀರು ಹರಿಯುವುತ್ತಿರುವುದರಿಂದ ಬಂದರು ಮಾರ್ಗದಲ್ಲಿ ಉಪನಗರ ರೈಲು ಸೇವೆಗಳನ್ನು ಬೆಳಿಗ್ಗೆ ನಿಲ್ಲಿಸಲಾಗಿದ್ದು, ಪಶ್ಚಿಮ ಮತ್ತು ಮಧ್ಯ ಮಾರ್ಗಗಳಲ್ಲಿನ ಸೇವೆಗಳೂ ಸಹ ಅಸ್ತವ್ಯಸ್ತಗೊಂಡಿವೆ ಎಂದು ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದರು.

ಕೊರೋನವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮುಂಬೈ ಮತ್ತು ಉಪನಗರಗಳಲ್ಲಿನ ಸ್ಥಳೀಯ ರೈಲುಗಳನ್ನು ಪ್ರಸ್ತುತ ಅಗತ್ಯ ಸೇವೆಗಳಲ್ಲಿ ತೊಡಗಿಸಿಕೊಂಡವರ ಸಲುವಾಗಿ ಮಾತ್ರ ಚಾಲನೆ ಮಾಡಲಾಗುತ್ತಿದೆ.

ಮುಂಬೈ ನಗರ ಮತ್ತು ಉಪನಗರಗಳಲ್ಲಿ ಕನಿಷ್ಠ ಮಾರ್ಗಗಳಲ್ಲಿ ಬೆಸ್ಟ್ ಬಸ್ ಸೇವೆಗಳನ್ನು ಬೇರೆ ಮಾರ್ಗಗಳಿಗೆ ತಿರುಗಿಸಲಾಗಿದೆ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ತಿಳಿಸಿತು.

ಪಶ್ಚಿಮ ಮತ್ತು ಕೇಂದ್ರದ ಮಾರ್ಗಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಮತ್ತು ಕುರ್ಲಾ ಹಾಗೂ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ (ಸಿಎಸ್‌ಎಂಟಿ) ನಡುವಣ ಬಂದರು ಮಾರ್ಗವನ್ನು ನಿಲ್ಲಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ,

ಕೇಂದ್ರ ಮಾರ್ಗವು ಮಂದಗತಿಯಲ್ಲಿ ಚಲಿಸುತ್ತಿದೆ. ನಗರದಲ್ಲಿ ನಿರಂತರ ಮಳೆಯಾದ ನಂತರ ಮುಂಬಯಿಯ ವಿವಿಧ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಬಿಎಂಸಿ ಪ್ರಕಾರ, ಮುಂಬೈ ನಗರದಲ್ಲಿ ಕಳೆದ ೧೦ ಗಂಟೆಗಳಲ್ಲಿ ೨೩೦ ಮಿ.ಮೀ ಗಿಂತ ಹೆಚ್ಚು ಮಳೆಯಾಗಿದೆ.

No comments:

Advertisement