Monday, August 24, 2020

ಕಾಂಗ್ರೆಸ್ ಕಸರತ್ತು, ಸಿಬಲ್- ಸುರ್ಜೆವಾಲ ಟ್ವೀಟ್ ಸಮರ

 ಕಾಂಗ್ರೆಸ್  ಕಸರತ್ತು, ಸಿಬಲ್- ಸುರ್ಜೆವಾಲ ಟ್ವೀಟ್ ಸಮರ

ನವದೆಹಲಿ
: ಪೂರ್ಣಾವಧಿಯ ಮತ್ತು ಗೋಚರ ಅಧ್ಯಕ್ಷರನ್ನು ಕೋರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪಕ್ಷದ ಕೆಲವು ನಾಯಕರು ಬರೆದ ಪತ್ರದ ಹಿನ್ನೆಲೆಯಲ್ಲಿ 2020 ಆಗಸ್ಟ್ 24ರ ಸೋಮವಾರ ನಡೆದ ಕಾಂಗ್ರೆಸ್ ಕಾರ್‍ಯಕಾರಿ ಸಮಿತಿ ಸಭೆಯು ಅಂತಿಮವಾಗಿ ಸೋನಿಯಾ ಗಾಂಧಿ ಅವರನ್ನೇ ಹಂಗಾಮೀ ಅಧ್ಯಕ್ಷರಾಗಿ ಮುಂದುವರೆಸಲು ನಿರ್ಧರಿಸಿದರೂ ಅದಕ್ಕೂ ಮುನ್ನ ನಾಟಕೀಯ ವಿದ್ಯಮಾನಗಳು ನಡೆದವು ಎಂದು ವರದಿಗಳು ತಿಳಿಸಿವೆ.

ಕಾರ್‍ಯಕಾರಿಣಿ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್‍ಯದರ್ಶಿ ಕೆಸಿ ವೇಣುಗೋಪಾಲ್ ಅವರಿಗೆ ವಿಷಯಕ್ಕೆ ಸಂಬಂಧಿಸಿದಂತೆ ವಿಸ್ತೃತ ಉತ್ತರ ನೀಡಿದ್ದೇನೆ ಎಂದು ಹೇಳಿದ ಸೋನಿಯಾಗಾಂಧಿ ಅವರು ರಾಜೀನಾಮೆ ನೀಡಲು ಮುಂದಾಗಿ ಸೂಕ್ತ ವ್ಯಕ್ತಿಯನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವಂತೆ ಸೂಚಿಸಿದರು ಎಂದು ಮೂಲಗಳು ಹೇಳಿವೆ.

ಸೋನಿಯಾ ಗಾಂಧಿಯವರು ಮಾತು ಮುಗಿಸುತ್ತಿದ್ದಂತೆಯೇ ಮಾತನಾಡಿದ ಮಾಜಿ ಪ್ರಧಾನಿ ಮನಮೋಹನ್ ಸಇಂಗ್ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಸೋನಿಯಾ ಅವರನ್ನು ಒತ್ತಾಯಿಸಿದರು. ಬಳಿಕ, ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಕೂಡಾ ಸೋನಿಯಾ ಮುಂದುವರಿಕೆಗೆ ಆಗ್ರಹಿಸಿದರು.

ಕಾಂಗ್ರೆಸ್ ಕಾರ್‍ಯಕಾರಿ ಸಮಿತಿಯ (ಸಿqಬ್ಲ್ಯೂಸಿ) ಭಾಗವಾಗಿರುವ ಗುಲಾಂ ನಬಿ ಆಜಾದ್, ಆನಂದ ಶರ್ಮ, ಮುಕುಲ್ ವಾಸ್ನಿಕ್ ಸೇರಿದಂತೆ ಪಕ್ಷದ ಕೆಲವು ನಾಯಕರು ಬರೆದ ಪತ್ರವನ್ನು ಉಭಯ ನಾಯಕರೂ ಟೀಕಿಸಿದರು.

ಸೋನಿಯಾ ಗಾಂಧಿಯವರು ತಮ್ಮ ಸಂಕ್ಷಿಪ್ತ ಭಾಷಣದಲ್ಲಿ ಆಜಾದ್ ಮತ್ತು ಇತರರನ್ನು ಎರಡು ಬಾರಿ ಉಲ್ಲೇಖಿಸಿ ಅವರು ಪ್ರಸ್ತಾಪಿಸಿದ ವಿಷಯದ ಬಗೆಗೂ ಮಾತನಾಡಿದರು ಎಂದು ಮೂಲಗಳು ಹೇಳಿವೆ.

ತಮ್ಮ ವಿಸ್ತೃತ ಉತ್ತರವನ್ನು ಸೋನಿಯಾ ಗಾಂಧಿ ವೇಣುಗೋಪಾಲ್ ಅವರಿಗೆ ಹಸ್ತಾಂತರಿಸಿದರು. ಪತ್ರದ ವಿವರಗಳನ್ನು ವೇಣುಗೋಪಾಲ್ ಅವರು ಓದಿ ಹೇಳಿದರು. ಪತ್ರದಲ್ಲಿ ಸೋನಿಯಾ ಅವರು ತಮ್ಮನ್ನು ಹುದ್ದೆಯಿಂದ ಬಿಡುಗಡೆ ಮಾಡುವಂತೆ ಕೋರಿದ್ದರು ಎಂದು ಮೂಲಗಳು ತಿಳಿಸಿವೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿಯವರು ಕೂಡಾ ಪತ್ರ ಬರೆದ ಸಮಯವನ್ನು ಪ್ರಶ್ನಿಸಿದರು ಎಂದು ಮೂಲಗಳು ಹೇಳಿವೆ. ಸೋನಿಯಾ ಗಾಂಧಿಯವರು ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಪತ್ರವನ್ನು ಕಳುಹಿಸಿದ್ದೇಕೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು ಎನ್ನಲಾಗಿದೆ.

ನಮ್ಮ ಚಿಂತನೆಗಳನ್ನು ಚರ್ಚಿಸಲು ಇರುವ ವೇದಿಕೆ ಕಾಂಗ್ರೆಸ್ ಕಾರ್‍ಯಕಾರಿ ಸಮಿತಿ, ಮಾಧ್ಯಮವಲ್ಲ ಎಂದೂ ರಾಹುಲ್ ಗಾಂಧಿ ಖಾರವಾಗಿ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಮಧ್ಯೆ ದೇಶಾದ್ಯಂತ ಪಕ್ಷ ನಾಯಕರು ಮತ್ತು ಕಾರ್‍ಯಕರ್ತರು ಸೋನಿಯಾ ಅವರನ್ನು ಪಕ್ಷದ ಮುಖ್ಯಸ್ಥರಾಗಿ ಮುಂದುವರೆಸುವಂತೆ ಅಥವಾ ರಾಹುಲ್ ಗಾಂಧಿಯವರನ್ನು ಮುಖ್ಯಸ್ಥರಾಗಿ ನೇಮಿಸುವಂತೆ ಆಗ್ರಹಿಸಿದರು.

ಟ್ವಿಟ್ಟರ್ ಕದ

ಕಾಂಗ್ರೆಸ್ ಕಾರ್‍ಯಕಾರಿ ಸಮಿತಿ ಸಭೆಯಲ್ಲಿ ನಾಯಕತ್ವದ ವಿಚಾರವಾಗಿ ಚರ್ಚೆ ನಡೆಯುತ್ತಿದ್ದುದರ ಮಧ್ಯಯೇ ಪಕ್ಷದ ನಾಯಕರು ಮತ್ತು ರಾಹುಲ್ ಗಾಂಧಿ ತಂಡ ಟ್ವಿಟ್ಟರ್ ನಲ್ಲಿ ಬಹಿರಂಗವಾಗಿ ಘರ್ಷಿಸಿದ ಘಟನೆಯೂ ನಡೆಯಿತು.

ಪಕ್ಷದ ಸಂವಹನ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೆವಾಲ ಅವರು ಕೆಲವು ನಾಯಕರು ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಜೊತೆ ಶಾಮೀಲಾಗಿದ್ದಾರೆ ಎಂಬುದಾಗಿ ನಿರ್ಣಾಯಕ ಸಭೆಯಲ್ಲಿ ರಾಹುಲ್ ಗಾಂಧಿಯವರು ಆಪಾದಿಸಿದ್ದಾರೆ ಎಂಬುದಾಗಿ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಅವರು ಮಾಡಿದ ಆಪಾದನೆಯನ್ನು ತಿರಸ್ಕರಿಸಿ ಟ್ವೀಟ್ ಮಾಡಿದರು.

ರಾಹುಲ್ ಗಾಂಧಿಯವರು ಇಂತಹ ಒಂದೇ ಒಂದು ಪದವನ್ನೂ ಉಸುರಿಲ್ಲ. ದಯವಿಟ್ಟು ಮಾಧ್ಯಮಗಳ ತಪ್ಪು ಮಾಹಿತಿಯಿಂದ ದಾರಿತಪ್ಪಬೇಡಿ ಎಂದು ಸುರ್ಜೆವಾಲ ಅವರು ಸಿಬಲ್ ಅವರಿಗೆ ಕಾರ್‍ಯಕಾರಿ ಸಮಿತಿ ಸಭೆ ನಡೆಯುತ್ತಿದಾಗಲೇ ಟ್ವೀಟ್ ಮೂಲಕ ಉತ್ತರಿಸಿದರು.

ರಾಹುಲ್ ಗಾಂಧಿಯವರು ಸಭೆಯಲ್ಲಿ ಹಿರಿಯರು ಬಿಜೆಪಿ ಜೊತೆ ಶಾಮೀಲಾಗಿದ್ದಾರೆ ಎಂದು ಆಪಾದಿಸಿದ್ದಾರೆ ಎಂದು ವರದಿಯಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖ್ಯ ಕಾನೂನು ತಜ್ಞರಲ್ಲಿ ಒಬ್ಬರಾಗಿರುವ ಸಿಬಲ್ ಅದಕ್ಕೂ ಮುನ್ನ ಟ್ವೀಟ್ ಮಾಡಿದ್ದರು.

ರಾಹುಲ್ ಗಾಂಧಿಯವರು ಅಂತಹ ಆರೋಪ ಮಾಡಿಲ್ಲ ಅಥವಾ ಅಂತಹ ಸುಳಿವು ಕೂಡಾ ನೀಡಿಲ್ಲ ಎಂದು ಪಕ್ಷ ನಾಯಕರು ಹೇಳಿದರು.

ಸುರ್ಜೆವಾಲ ಟ್ವೀಟ್ ಪ್ರಕಟವಾಗುತ್ತಿದ್ದಂತೆಯೇ ಸಿಬಲ್ ಅವರೂ ಅಷ್ಟೇ ತ್ವರಿತವಾಗಿ ತಮ್ಮ ಹೇಳಿಕೆಯನ್ನು ಹಿಂಪಡೆದರು. ತಾವು ಹೇಳಿದ್ದೆನ್ನಲಾಗಿರುವ ವಿಚಾರವನ್ನು ತಾವು ಎಂದೂ ಹೇಳಿಲ್ಲ ಎಂಬುದಾಗಿ ಸ್ವತಃ ರಾಹುಲ್ ಅವರೇ ನನಗೆ ತಿಳಿಸಿದ್ದಾರೆ. ಆದ್ದರಿಂದ ನಾನು ನನ್ನ ಟ್ವೀಟನ್ನು ಹಿಂಪಡೆಯುತ್ತಿದ್ದೇನೆ ಎಂದು ಸಿಬಲ್ ತಮ್ಮ ಹಿಂದಿನ ಸಿಟ್ಟಿನ ಟ್ವೀಟ್‌ಗೆ ಟಿಪ್ಪಣಿ ಬರೆದು ಟ್ವೀಟ್ ಮಾಡಿದರು.

ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿದ ತಮ್ಮ ಹಿಂದಿನ ಟ್ವೀಟಿನಲ್ಲಿ ಸಿಬಲ್ ಅವರು ಕಾಂಗ್ರೆಸ್ ಪಕ್ಷಕ್ಕೆ ತಾವು ಸಲ್ಲಿಸಿದ ೩೦ ವರ್ಷಗಳ ಸೇವೆಯನ್ನು ಪಟ್ಟಿಮಾಡಿದ್ದಲ್ಲದೆ, ತಾವೆಂದೂ ಯಾವುದೇ ವಿಷಯದಲ್ಲಿ ಬಿಜೆಪಿಯ ಪರವಾಗಿ ಹೇಳಿಕೆ ನೀಡಿಲ್ಲ ಎಂದು ಬರೆದಿದ್ದರು.

ರಾಜಸ್ತಾನ ಹೈಕೋರ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸಮರ್ಥಿಸುವಲ್ಲಿ ತಾನು ಹೇಗೆ ಸಫಲನಾಗಿದ್ದೆ ಮತ್ತು ಮಣಿಪುರದಲ್ಲಿ ಬಿಜೆಪಿ ಸರ್ಕಾರವನ್ನು ಕೆಳಗಿಳಿಸಿದ್ದನ್ನು ಸಮರ್ಥಿಸುವಲ್ಲಿ ಹೇಗೆ ಯಸ್ಸು ಗಳಿಸಿದೆ ಎಂದೂ ಸಿಬಲ್ ಬರೆದಿದ್ದರು.

ಪರಿಸ್ಥಿತಿಯನ್ನು ಶಮನಗೊಳಿಸಲು ಮುಂದಾದ ರಾಹುಲ್, ಸೋನಿಯಾ ಗಾಂಧಿಯವರಿಗೆ ಪತ್ರ ಬರೆದ ನಾಯಕರ ವಿರುದ್ಧ ತಾವು ಅಂತಹ ಯಾವುದೇ ಆಪಾದನೆ ಮಾಡಿಲ್ಲ ಎಂಬುದಾಗಿ ಸಿಬಲ್‌ಗೆ ಸ್ಪಷ್ಟ ಪಡಿಸಿದರು ಎಂದು ಮೂಲಗಳು ಹೇಳಿವೆ.

ಬಿಜೆಪಿ ವಿರುದ್ಧದ ಹೋರಾಟದಲ್ಲಿ ಒಂದಾಗಿ ನಿಲ್ಲುವಂತೆ ಸಿಬಲ್ ಅವರನ್ನು ಸುರ್ಜೆವಾಲ ಅವರು ತಮ್ಮ ಟ್ವೀಟಿನಲ್ಲಿ ಆಗ್ರಹಿಸಿದರು. (ನರೇಂದ್ರ) ಮೋದಿ ಕರಾಳ ಆಡಳಿತದ ವಿರುದ್ಧ ನಾವೆಲ್ಲ ಒಂದಾಗಿ ಹೋರಾಡಬೇಕಾಗಿದೆ. ನಮ್ಮ ನಮ್ಮೊಳಗೆ ಮತ್ತು ಕಾಂಗ್ರೆಸ್ ವಿರುದ್ಧ ಹೋರಾಡುವುದಲ್ಲ ಎಂದೂ ಸುರ್ಜೆವಾಲ ಅವರು ಸಿಬಲ್‌ಗೆ ಟ್ವೀಟ್ ಮಾಡಿದ್ದರು.

ಕಾರ್‍ಯಕಾರಿಣಿ ಸಭೆಯಲ್ಲಿ ಎಐಸಿಸಿ ಕಾರ್‍ಯದರ್ಶಿ ವೇಣುಗೋಪಾಲ್ ಅವರು ಪತ್ರ ಬರೆದ ನಾಯಕರನ್ನು ಕಟುವಾಗಿ ಟೀಕಿಸಿ, ಪತ್ರವನ್ನು ಸೋರಿಕೆ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದರು.

No comments:

Advertisement