My Blog List

Tuesday, August 11, 2020

ಮುಂದಿನ ಸೂಚನೆವರೆಗೆ ರೈಲ್ವೇ ಸೇವೆ ಸ್ಥಗಿತ ವಿಸ್ತರಣೆ

 ಮುಂದಿನ ಸೂಚನೆವರೆಗೆ ರೈಲ್ವೇ ಸೇವೆ ಸ್ಥಗಿತ ವಿಸ್ತರಣೆ

ನವದೆಹಲಿ: ಕೊರೋನವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸಾಮೂಹಿಕ ಸಾರಿಗೆ ವ್ಯವಸ್ಥೆಗೆ ಸರ್ಕಾರ ವಿಧಿಸಿರುವ ನಿರ್ಬಂಧಗಳನ್ನು ಉಲ್ಲೇಖಿಸಿ ಉಪನಗರ ಸೇವೆಗಳು ಸೇರಿದಂತೆ ನಿಯಮಿತ ರೈಲ್ವೆ ಸೇವೆಗಳನ್ನು ಮುಂದಿನ ಸೂಚನೆ ಬರುವವರೆಗೂ ಸ್ಥಗಿತಗೊಳಿಸಲಾಗುವುದು ಎಂದು ರೈಲ್ವೆ ಸಚಿವಾಲಯ 2020 ಆಗಸ್ಟ್ 11ರ ಮಂಗಳವಾರ ಪ್ರಕಟಿಸಿತು. ಸರ್ಕಾರದ ಕೊನೆಯ ಆದೇಶದ ಪ್ರಕಾರ, ರೈಲ್ವೇ ಸೇವೆಗಳ ಅಮಾತನ್ನು ಆಗಸ್ಟ್ ೧೨ ರವರೆಗೆ ವಿಸ್ತರಿಸಲಾಗಿತ್ತು.

ರಾಜ್ಯ ಸರ್ಕಾರಗಳ ವಿನಂತಿ ಮೇರೆಗೆ, ಆಯ್ದ ತಾಣಗಳ ನಡುವೆ ಪ್ರಸ್ತುತ ಚಲಿಸುತ್ತಿರುವ ೨೩೦ ವಿಶೇಷ ರೈಲುಗಳು ಮುಂಬೈನ ಸ್ಥಳೀಯ ರೈಲುಗಳ ಜೊತೆಗೆ ಕಾರ್ಯನಿರ್ವಹಿಸುವುದನ್ನು ಮುಂದುವರೆಸಲಿವೆ ಎಂದು ಸಚಿವಾಲಯವು ಸೂಚಿಸಿದೆ. ಪ್ರಸ್ತುತ ಅಗತ್ಯ ಸೇವೆಗಳೊಂದಿಗೆ ಕೆಲಸ ಮಾಡುವ ಸಿಬ್ಬಂದಿಯನ್ನು ಮಾತ್ರ ಇದಕ್ಕಾಗಿ ಬಳಸಲಾಗುತ್ತಿದೆ.

ವಿಶೇಷ ರೈಲುಗಳ ಬೋಗಿಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ಅವಶ್ಯಕತೆಯ ಆಧಾರದ ಮೇಲೆ ಹೆಚ್ಚುವರಿ ವಿಶೇಷ ರೈಲುಗಳನ್ನು ಓಡಿಸಬಹುದು ಎಂದು ಸಚಿವಾಲಯ ತಿಳಿಸಿತು.

"ಆದಾಗ್ಯೂ, ದಿಗ್ಬಂಧನಕ್ಕೆ ಮುಂಚಿತವಾಗಿ ಚಲಿಸುತ್ತಿದ್ದ ಎಲ್ಲ್ಲ ಇತರ ಸಾಮಾನ್ಯ ರೈಲುಗಳು ಮತ್ತು ಉಪನಗರ ರೈಲುಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿತು.

ವರ್ಷದ ಆರಂಭದಲ್ಲಿ ಮಾರ್ಚ್ ೨೫ ರಿಂದ ಕೇಂದ್ರವು ರಾಷ್ಟ್ರವ್ಯಾಪಿ ದಿಗ್ಬಂಧನ ಜಾರಿಗೊಳಿಸುವ ಮುನ್ನ ನಿಯಮಿತ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ಸಚಿವಾಲಯವು ಶ್ರಮಿಕ್ ವಿಶೇಷ ಯೋಜನೆಯಡಿ ವಲಸೆ ಕಾರ್ಮಿಕರನ್ನು ಮನೆಗೆ ಕರೆದೊಯ್ಯಲು ವಿಶೇಷ ರೈಲುಗಳನ್ನು ಓಡಿಸಲು ಪ್ರಾರಂಭಿಸಿತ್ತು. ದೇಶದ ಆಯ್ದ ತಾಣಗಳ ನಡುವೆ ಸೀಮಿತ ಪ್ರೀಮಿಯಂ ರೈಲು ಸೇವೆಗಳನ್ನು ಒದಗಿಸಲಾಗಿತ್ತು.

ಎರಡು ತಿಂಗಳ ಕಠಿಣ ದಿಗ್ಬಂಧನದ ಬಳಿಕ ಹಂತ ಹಂತವಾಗಿ ಆರ್ಥಿಕತೆಯನ್ನು ಪುನಾರಂಭಿಸುವ ಸಲುವಾಗಿ ಜಾರಿಗೊಳಿಸಲಾಗಿರುವ ಅನ್ಲಾಕ್ ಸಲುವಾಗಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಅಡಿಯಲ್ಲಿ ರೈಲ್ವೆ ಸೇವೆಗಳು, ಮೆಟ್ರೋ ಸೇವೆಗಳು, ಚಿತ್ರಮಂದಿರಗಳು, ಧಾರ್ಮಿಕ, ಸಾಮಾಜಿಕ ಮುಂತಾದ ಸಾಮೂಹಿಕ ಗುಂಪುಗಳಿಗೆ ಅವಕಾಶ ನೀಡುವ ಚಟುವಟಿಕೆಗಳನ್ನು ಪುನರಾರಂಭಿಸಲು ಅನುಮತಿ ನೀಡಲಾಗಿಲ್ಲ.

ಅಧಿಸೂಚನೆಯ ಪ್ರಕಾರ ರಾಜಕೀಯ ಸಭೆಗಳು, ಮನರಂಜನಾ ಉದ್ಯಾನಗಳು. ಪ್ರವಾಸೋದ್ಯಮ ಸೇರಿದಂತೆ ಹಲವಾರು ಚಟುವಟಿಕೆಗಳು ಸಂಪೂರ್ಣವಾಗಿ ಮೊಟಕುಗೊಂಡಿವೆ.

No comments:

Advertisement