Thursday, October 8, 2020

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ

 ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ

ನವದೆಹಲಿ: ಇತ್ತೀಚೆಗೆ ದೆಹಲಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ (1946-2020) ಅವರು 2020 ಅಕ್ಟೋಬರ್ 08ರ ಗುರುವಾರ ರಾತ್ರಿ ನಿಧನರಾದರು. ಅವರಿಗೆ ೭೪ ವರ್ಷ ವಯಸ್ಸಾಗಿತ್ತು.

ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಸಕ್ರಿಯ ರಾಜಕೀಯದಲ್ಲಿದ್ದ ಮತ್ತು ದೇಶದ ಅತ್ಯಂತ ಪ್ರಸಿದ್ಧ ದಲಿತ ನಾಯಕರಲ್ಲಿ ಒಬ್ಬರಾದ ಪಾಸ್ವಾನ್ (೭೪) ಕಳೆದ ಕೆಲವು ವಾರಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಮುಖ್ಯಸ್ಥ, ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಟ್ವೀಟ್ ಮೂಲಕ ತಮ್ಮ ತಂದೆಯ ನಿಧನದ ಸುದ್ದಿಯನ್ನು ತಿಳಿಸಿದರು.

"ಕಳೆದ ಹಲವು ದಿನಗಳಿಂದ ಅಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಸಂಜೆ ಕೆಲವು ಹಠಾತ್ ಬೆಳವಣಿಗೆಗಳಿಂದಾಗಿ, ಅವರ ಹೃದಯದ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು.  ಅಗತ್ಯವಿದ್ದಲ್ಲಿ, ಕೆಲವು ವಾರಗಳ ನಂತರ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಬೇಕಾಗಬಹುದು. ಸಮಯದಲ್ಲಿ ನನ್ನ ಮತ್ತು ನನ್ನ ಕುಟುಂಬದ ಜೊತೆಗೆ ಬೆಂಬಲವಾಗಿ ನಿಂತಿದ್ದ ಎಲ್ಲರಿಗೂ ಧನ್ಯವಾದಗಳು ಎಂದು ಚಿರಾಗ್ ಪಾಸ್ವಾನ್ ಕಳೆದವಾರ ಟ್ವೀಟ್ ಮಾಡಿದ್ದರು.

ಚಿರಾಗ್ ಚಿಕಿತ್ಸೆ ಪಡೆಯಬೇಕೆಂದು ಒತ್ತಾಯಿಸಿದ ನಂತರ ಅಂತಿಮವಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ರಾಮ್ ವಿಲಾಸ್ ಪಾಸ್ವಾನ್ ಕೂಡಾ ಇದಕ್ಕೆ ಮುನ್ನ ಹೇಳಿದ್ದರು.

ಆದಾಗ್ಯೂ, ಅನಾರೋಗ್ಯ ಏನು ಎಂದು ಅವರು ಬಹಿರಂಗಪಡಿಸಿರಲಿಲ್ಲ. ಕೆಲವು ಮಾಧ್ಯಮ ವರದಿಗಳು ಅವರು ಹೃದಯದ ಸಮಸ್ಯೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದವು. ಅವರು ಮೊದಲು ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

" ಸಮಯದಲ್ಲಿ ನನ್ನ ಮಗ ಚಿರಾಗ್ ನನ್ನೊಂದಿಗಿದ್ದಾನೆ ಮತ್ತು ಸಾಧ್ಯವಿರುವ ಎಲ್ಲ ಸೇವೆಯನ್ನು ಮಾಡುತ್ತಿದ್ದಾನೆ ಎಂದು ನನಗೆ ಸಂತೋಷವಾಗಿದೆ. ನನ್ನನ್ನು ನೋಡಿಕೊಳ್ಳುವುದರ ಜೊತೆಗೆ, ಅವರು ಪಕ್ಷದ ಬಗ್ಗೆ ತಮ್ಮ ಜವಾಬ್ದಾರಿಗಳನ್ನು ಸಹ ಪೂರೈಸುತ್ತೇವೆ ಎಂದು ಟ್ವೀಟ್ ಮಾಡಿದ್ದರು.

ವೈಯಕ್ತಿಕ ಆರೋಗ್ಯದ ಸುದ್ದಿಗಳ ಜೊತೆಗೆ, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಎಲ್ಜೆಪಿಯ ಮೈತ್ರಿ ವಿಚಾರಗಳಲ್ಲಿ ಪಾಸ್ವಾನ್ ಪುತ್ರನನ್ನು ಬೆಂಬಲಿಸಿದ್ದರು.

"ನಾನು ಅವರ ಪ್ರತಿಯೊಂದು ನಿರ್ಧಾರದೊಂದಿಗೆ ದೃಢವಾಗಿ ನಿಲ್ಲುತ್ತೇನೆ. ಅವರ ಯೌವ್ವನದ ಚಿಂತನೆಯಿಂದ, ಚಿರಾಗ್ ಪಕ್ಷ ಮತ್ತು ಬಿಹಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದು ಪಾಸ್ವಾನ್ ಹೇಳಿದ್ದರು.

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟದ ಮುಖವಾಗಿ ನಿತೀಶ್ ಕುಮಾರ್ ನಾಯಕತ್ವವನ್ನು ವಿರೋಧಿಸಿ ಎನ್ ಡಿಎಯಿಂದ ಎಲ್ಜೆಪಿ ಹೊರನಡೆದಿದೆ ಎಂದು ಚಿರಾಗ್ ತಿಳಿಸಿದ್ದಾರೆ.

No comments:

Advertisement