My Blog List

Wednesday, October 21, 2020

ಮಹಾರಾಷ್ಟ್ರ: ಎನ್‌ಸಿಪಿ ಸೇರಲು ಬಿಜೆಪಿ ತ್ಯಜಿಸಿದ ಏಕನಾಥ ಖಡ್ಸೆ

 ಮಹಾರಾಷ್ಟ್ರ: ಎನ್‌ಸಿಪಿ ಸೇರಲು ಬಿಜೆಪಿ ತ್ಯಜಿಸಿದ ಏಕನಾಥ ಖಡ್ಸೆ

ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಏಕನಾಥ್ ಖಡ್ಸೆ ಅವರು 2020 ಅಕ್ಟೋಬರ್ 21ರ ಬುಧವಾರ ಪಕ್ಷವನ್ನು ತೊರೆದಿದ್ದು,  ಅಕ್ಟೋಬರ್ 23ರ ಶುಕ್ರವಾರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ (ಎನ್‌ಸಿಪಿ) ಸೇರಲಿದ್ದಾರೆ. ರಾಜ್ಯ ಎನ್‌ಸಿಪಿ ಮುಖ್ಯಸ್ಥ ಜಯಂತ್ ಪಾಟೀಲ್ ಘೋಷಣೆ ಮಾಡಿದರು.

ಬಿಜೆಪಿಯನ್ನು ತೊರೆಯಲು ನಿರ್ಧರಿಸಿರುವುದಾಗಿ ಖಡ್ಸೆ ಅವರು ತಮಗೆ "ಸ್ವಲ್ಪ ಸಮಯದ ಹಿಂದೆ" ತಿಳಿಸಿರುವುದಾಗಿ ಪಾಟೀಲ್ ಪ್ರಕಟಿಸಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಹಿರಿಯ ಬಿಜೆಪಿ ನಾಯಕ ಏಕನಾಥ್ ಖಡ್ಸೆ ತಮ್ಮ ಪಕ್ಷವನ್ನು ತೊರೆಯಲು ನಿರ್ಧರಿಸಿದ್ದಾರೆ. ಸ್ವಲ್ಪ ಸಮಯದ ಹಿಂದೆ ಅವರು ತಮ್ಮ ನಿರ್ಧಾರದ ಬಗ್ಗೆ ನನಗೆ ಮಾಹಿತಿ ನೀಡಿದ್ದಾರೆ. ಇದು ಎನ್‌ಸಿಪಿಗೆ ಅವರ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿದೆ. ಶುಕ್ರವಾರ ಮಧ್ಯಾಹ್ನ ಖಡ್ಸೆ ಔಪಚಾರಿಕವಾಗಿ ಪಕ್ಷವನ್ನು ಸೇರುತ್ತಾರೆ ಎಂದು ಪಾಟೀಲ್ ಹೇಳಿದರು.

ಖಡ್ಸೆ ಅವರು ಬುಧವಾರ ರಾಜೀನಾಮೆ ನೀಡಿದ ನಂತರ, ತಮ್ಮ ಪಕ್ಷ ತೊರೆಯುವ ನಿರ್ಧಾರಕ್ಕೆ  ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರನ್ನು ಹೊಣೆಗಾರರನ್ನಾಗಿ ಮಾಡಿದರು.  ತಮ್ಮ ಸೊಸೆ ಮತ್ತು ಪಕ್ಷದ ಸಂಸದ ರಕ್ಷಾ ಖಡ್ಸೆ ಅವರು ಬಿಜೆಪಿಗೆ ಕೆಲಸ ಮಾಡುವುದನ್ನು ಮುಂದುವರೆಸಲಿದ್ದಾರೆ ಮತ್ತು ಬೇರೆ ಯಾವುದೇ ಪಕ್ಷದ ಶಾಸಕರು ಅಥವಾ ಸಂಸದರು ತಮ್ಮೊಂದಿಗೆ ಎನ್‌ಸಿಪಿ ಸೇರ್ಪಡೆ ಆಗುತ್ತಿಲ್ಲ ಎಂದೂ ಅವರು ನುಡಿದರು.

ಖಡ್ಸೆ ಅವರ ಆಪ್ತ ಸಹಾಯಕರ ಪ್ರಕಾರ, ಅವರು ರಾಜ್ಯಪಾಲರ ಕೋಟಾ ಮೂಲಕ ವಿಧಾನಪರಿಷತ್ ಸ್ಥಾನವನ್ನು ಪಡೆಯುವ ನಿರೀಕ್ಷೆಯಿದೆ. ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವು ವಿಧಾನ ಪರಿಷತ್ತಿನ ೧೨ ಸದಸ್ಯರ ನೇಮಕಕ್ಕೆ ರಾಜ್ಯಪಾಲ ಭಗತ್ ಸಿಂಗ್ ಕೊಶಾರಿ ಅವರಿಗೆ ಇನ್ನೂ ಹೆಸರುಗಳನ್ನು ಶಿಫಾರಸು ಮಾಡಿಲ್ಲ.

ಭ್ರಷ್ಟಾಚಾರದ ಆರೋಪ ಎದುರಿಸಿದ ನಂತರ ೨೦೧೬ ಜೂನ್‌ನಲ್ಲಿ ಕಂದಾಯ ಸಚಿವ ಸ್ಥಾನ ಮತ್ತು ಇತರ ೧೧ ಇಲಾಖೆಗಳಿಗೆ ರಾಜೀನಾಮೆ ನೀಡಿದ್ದ ಖಡ್ಸೆ, ನಾಲ್ಕು ದಶಕಗಳ ಕಾಲ ಪಕ್ಷದಲ್ಲಿ ಕೆಲಸ ಮಾಡಿದ ಬಳಿಕ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಅವರು ವಿಧಾನಸಭೆಯಲ್ಲಿ ಜಲಗಾಂವ್ ಜಿಲ್ಲೆಯ ಮುಖೈನಗರ ಕ್ಷೇತ್ರವನ್ನು ಹಲವಾರು ಬಾರಿ ಪ್ರತಿನಿಧಿಸಿದ್ದರು.

ಫಡ್ನವಿಸ್ ಹೊರತುಪಡಿಸಿ ಬೇರೆ ಯಾವುದೇ ಪಕ್ಷದ ಮುಖಂಡರೊಂದಿಗೆ ತಮಗೆ ಅಸಮಾಧಾನ ಇಲ್ಲ್ಲ ಎಂದು ಖಡ್ಸೆ ಜಲಗಾಂವ್‌ನಲ್ಲಿ ಹೇಳಿದರು.

ರಾಷ್ಟ್ರೀಯ ಅಥವಾ ರಾಜ್ಯ ನಾಯಕತ್ವದ ಬೇರೆ ಯಾವುದೇ ನಾಯಕರ ವಿರುದ್ಧ ನನಗೆ ಯಾವುದೇ ದೂರುಗಳಿಲ್ಲ. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಬಗ್ಗೆ ನನಗೆ ಬಗ್ಗೆ ಅಸಮಾಧಾನವಿದೆ, ಅವರು ಪೊಲೀಸರ ಮೂಲಕ ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದರು. ಆಗಿನ ಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿದ್ದ ಫಡ್ನವೀಸ್ ಅವರ ಆದೇಶದ ಮೇರೆಗೆ ಮಹಿಳೆಯೊಬ್ಬರ ಜೊತೆ ಅಸಭ್ಯತೆ ಪ್ರದರ್ಶಿಸಿದ ಪ್ರಕರಣ ನನ್ನ ವಿರುದ್ಧ ದಾಖಲಾಗಿದೆ. ಹಾಗೆಯೇ ಭೋಸ್ರಿ ಭೂ ವ್ಯವಹಾರದಲ್ಲಿನ ಭ್ರಷ್ಟಾಚಾರ ಪ್ರಕರಣಗಳು ನನ್ನ ವಿರುದ್ಧ ದಾಖಲಾಗಿವೆ, ಆದರೂ ಅವುಗಳಿಂದ ಯಾವುದೇ ಅಂಶವೂ ಹೊರಬಂದಿಲ್ಲ. ಶಿಕ್ಷೆಗೆ ಕಾರಣಗಳನ್ನು ನೀಡುವಂತೆ ನನ್ನ ಪಕ್ಷದ ನಾಯಕತ್ವ ಮತ್ತು ಫಡ್ನವೀಸ್ ಅವರನ್ನು ವಿವಿಧ ವೇದಿಕೆಗಳಲ್ಲಿ ಒತ್ತಾಯಿಸಿದ್ದೇನೆ, ಆದರೆ ನನಗೆ ಯಾವತ್ತೂ ಉತ್ತರ ಸಿಕ್ಕಿಲ್ಲ ಎಂದೂ ಅವರು ಹೇಳಿದರು.

ಕಳೆದ ವರ್ಷ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಖಡ್ಸೆ ಅವರಿಗೆ ಚುನಾವಣಾ ಟಿಕೆಟ್ ನಿರಾಕರಿಸಲಾಗಿತ್ತು.

No comments:

Advertisement