Saturday, October 3, 2020

ರಾಹುಲ್ ಹತ್ರಾಸ್ ಭೇಟಿ ರಾಜಕೀಯ: ಸ್ಮೃತಿ ಇರಾನಿ ಟೀಕೆ

 ರಾಹುಲ್ ಹತ್ರಾಸ್  ಭೇಟಿ ರಾಜಕೀಯ: ಸ್ಮೃತಿ ಇರಾನಿ ಟೀಕೆ

ನವದೆಹಲಿ: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹತ್ರಾಸ್ ಭೇಟಿ ರಾಜಕೀಯ ಪ್ರೇರಿತ. ಸಂತ್ರಸ್ತೆಯ ಕುಟುಂಬದವರಿಗೆ ನ್ಯಾಯ ಒದಗಿಸಿಕೊಡುವ ಉದ್ದೇಶದಿಂದ ಕೂಡಿದ್ದಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ 2020 ಅಕ್ಟೋಬರ್ 03ರ ಶನಿವಾರ ಟೀಕಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ಸಿನ ತಂತ್ರಗಳ ಬಗ್ಗೆ ಜನರಿಗೆ ತಿಳಿದಿದೆ. ಅದಕ್ಕಾಗಿಯೇ ೨೦೧೯ರಲ್ಲಿ ಬಿಜೆಪಿಗೆ ಐತಿಹಾಸಿಕ ಜಯ ಒದಗಿಸಿಕೊಟ್ಟಿದ್ದಾರೆ. ಅವರು (ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ) ಹತ್ರಾಸ್‌ಗೆ ಭೇಟಿ ನೀಡಿರುವುದು ರಾಜಕೀಯಕ್ಕಾಗಿ ವಿನಃ ಸಂತ್ರಸ್ತೆಗೆ ನ್ಯಾಯ ಒದಗಿಸುವುದಕ್ಕಲ್ಲ ಎಂದು ನುಡಿದರು.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಗುರುವಾರ ಹತ್ರಾಸ್‌ಗೆ ತೆರಳಿ ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರನ್ನು ಭೇಟಿಯಾಗಲು ಮುಂದಾಗಿದ್ದರು. ಅವರನ್ನು ಉತ್ತರ ಪ್ರದೇಶ ಪೊಲೀಸರು ಮಾರ್ಗ ಮಧ್ಯದಲ್ಲೇ ತಡೆದಿದ್ದರು. ರಾಹುಲ್, ಪ್ರಿಯಾಂಕಾ ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದರು. ಕೊರೊನಾ ವೈರಸ್ ಸಾಂಕ್ರಾಮಿಕದ ಸಂದರ್ಭ ಸಾರ್ವಜನಿಕರ ಓಡಾಟದ ಮೇಲಿನ ನಿರ್ಬಂಧ ಉಲ್ಲಂಘಿಸಿದ್ದಕ್ಕಾಗಿ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ಹತ್ರಾಸ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯು ಸೆಪ್ಟೆಂಬರ್ ೨೯ರಂದು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಮೃತರಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

No comments:

Advertisement