My Blog List

Tuesday, October 13, 2020

ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಮಾನ್ಯತೆ ಇಲ್ಲ, ಸೇತುವೆಗಳಿಗೆ ವಿರೋಧ: ಚೀನಾ

 ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಮಾನ್ಯತೆ ಇಲ್ಲ, ಸೇತುವೆಗಳಿಗೆ ವಿರೋಧ: ಚೀನಾ  

ಬೀಜಿಂಗ್: ಭಾರತವು ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ರಚಿಸಿದ್ದು ಅಕ್ರಮವಾಗಿದ್ದು ತಾನು ಅದನ್ನು ಮಾನ್ಯ ಮಾಡುವುದಿಲ್ಲ ಎಂದು 2020 ಅಕ್ಟೋಬರ್ 13ರ ಮಂಗಳವಾರ ಪುನರುಚ್ಚರಿಸಿರುವ ಚೀನಾ, ಭಾರತವು ಗಡಿ ಪ್ರದೇಶದಲ್ಲಿ ೪೪ ಪ್ರಮುಖ ಸೇತುವೆಗಳ ನಿರ್ಮಾಣವನ್ನೂ ವಿರೋಧಿಸಿತು.

ಕಾರ್ಯತಂತ್ರದ ಪ್ರಾಮುಖ್ಯತೆಯ ಪ್ರದೇಶಗಳಲ್ಲಿ ನಿರ್ಮಿಸಲಾದ ೪೪ ಪ್ರಮುಖ ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉದ್ಘಾಟಿಸಿದ ಮರುದಿನ ಇದನ್ನು ವಿರೋಧಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಅವರು ಪರಿಸ್ಥಿತಿಯನ್ನು ಸಂಕೀರ್ಣಗೊಳಿಸುವಂತಹ ಕ್ರಮಗಳನ್ನು ಉಭಯ ಕಡೆಯವರೂ ಕೈಗೊಳ್ಳಬಾರದು ಎಂದು ಹೇಳಿದರು.

ಭಾರತ ಮತ್ತು ಚೀನಾ ಏಳನೇ ಸುತ್ತಿನ ಸೇನಾ ಮಾತುಕತೆ ನಡೆಸಿದ ಒಂದು ದಿನದ ನಂತರ ಲಿಜಿಯಾನ್ ಹೇಳಿಕೆ ನೀಡಿದ್ದಾರೆ.

ಜೂನ್ ತಿಂಗಳಲ್ಲಿ ಲಡಾಖ್ ಗಾಲ್ವಾನ್ ಕಣಿವೆಯಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್) ಜೊತೆಗಿನ ಘರ್ಷಣೆಯಲ್ಲಿ ೨೦ ಭಾರತೀಯ ಸೈನಿಕರು ಹುತಾತ್ಮರಾದ ಬಳಿಕ ವರ್ಷದ ಆರಂಭದಿಂದ ಭಾರತ ಮತ್ತು ಚೀನಾ ಮಧ್ಯೆ ಗಡಿ ಬಿಕ್ಕಟ್ಟು ತೀವ್ರಗೊಂಡಿದೆ.

"ಭಾರತವು ಅಕ್ರಮವಾಗಿ ಲಡಾಖ್ ಕೇಂದ್ರಾಡಳಿತ ಪ್ರದೇಶ ಮತ್ತು ಅರುಣಾಚಲ ಪ್ರದೇಶವನ್ನು ಸ್ಥಾಪಿಸಿದ್ದು, ಚೀನಾವು ಅದನ್ನು ಮಾನ್ಯ ಮಾಡುವುದಿಲ್ಲ ಎಂದು ಝಾವೋ ಅವರನ್ನು ಉಲ್ಲೇಖಿಸಿ ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

"ವಿವಾದಿತ ಗಡಿ ಪ್ರದೇಶಗಳಲ್ಲಿ ಸೇನಾ ಕಣ್ಗಾವಲು ಉದ್ದೇಶಕ್ಕಾಗಿ ಮೂಲಸೌಕರ್ಯ ನಿರ್ಮಾಣ ಮಾಡುವುದನ್ನೂ ನಾವು ವಿರೋಧಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಉಭಯ ಪಕ್ಷಗಳ ನಡುವೆ ಇತ್ತೀಚೆಗೆ ರೂಪಿಸಲಾದ ಒಮ್ಮತದ ಪ್ರಕಾರ, ಚೀನಾ ಅಥವಾ ಭಾರತವು "ವಿವಾದವನ್ನು ಸಂಕೀರ್ಣಗೊಳಿಸುವ" ಗಡಿ ಪ್ರದೇಶಗಳಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಮತ್ತು "ಪರಿಸ್ಥಿತಿಯನ್ನು ಉಲ್ಬಣಗೊಳಿಸದಂತೆ ಉಭಯ ರಾಷ್ಟ್ರಗಳು ಮಾಡುವ ಪ್ರಯತ್ನಗಳನ್ನು ಹಾಳು ಮಾಡಬಾರದು ಎಂದು ಝಾವೋ ಹೇಳಿದರು.

ಗಡಿಯುದ್ದಕ್ಕೂ ಉದ್ವಿಗ್ನತೆಗೆ ಭಾರತವೇ ಮೂಲ ಕಾರಣ ಎಂದು ಝಾವೋ ಆಪಾದಿಸಿದರು. "ಭಾರತವು ಒಂದು ಕಾಲಘಟ್ಟದಲ್ಲಿ ವಿವಾದಿತ ಪ್ರದೇಶಗಳಲ್ಲಿ ಮೂಲಸೌಕರ್ಯ ನಿರ್ಮಾಣ ಮತ್ತು ಸೈನ್ಯದ ನಿಯೋಜನೆಯನ್ನು ಹೆಚ್ಚಿಸುತಿರುವುದು ಇದಕ್ಕೆ ಕಾರಣ. ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಗಾಗಿ ಭಾರತವು "ಪ್ರಾಯೋಗಿಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಭಾರvವು ಉದ್ಘಾಟಿಸಿದ ೪೪ ಸೇತುವೆಗಳನ್ನು ಲಡಾಖ್, ಅರುಣಾಚಲ ಪ್ರದೇಶ, ಸಿಕ್ಕಿಂ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ಆಯಕಟ್ಟಿನ ಪ್ರಮುಖ ಪ್ರದೇಶಗಳಲ್ಲಿ ನಿರ್ಮಿಸಲಾಗಿದೆ.

ಸೇತುವೆಗಳಲ್ಲಿ ಹೆಚ್ಚಿನವು ಲಡಾಖ್, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ವಲಯಗಳಲ್ಲಿ ಚೀನಾದ ಗಡಿಯಲ್ಲಿರುವ ಪ್ರದೇಶಗಳಲ್ಲಿ ಸೈನ್ಯದ ಚಲನೆಯನ್ನು ಗಮನಾರ್ಹವಾಗಿ ಸುಧಾರಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

ಗಡಿ ಬಿಕ್ಕಟ್ಟನ್ನು ಪರಿಹರಿಸಲು ಭಾರತ ಮತ್ತು ಚೀನಾ ರಾಜತಾಂತ್ರಿಕ ಮತ್ತು ಸೇನಾ ಮಾತುಕತೆಗಳನ್ನು ನಡೆಸಿವೆ, ಆದಾಗ್ಯೂ, ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸಲಾಗಿಲ್ಲ.

"ನಮ್ಮ ಸಶಸ್ತ್ರ ಪಡೆಗಳ ಸಿಬ್ಬಂದಿಯನ್ನು ವರ್ಷವಿಡೀ ಸಾರಿಗೆ ಲಭ್ಯವಿಲ್ಲದ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

ಗಡಿ ಮೂಲಸೌಕರ್ಯಗಳ ಸುಧಾರಣೆಯು ಸಶಸ್ತ್ರ ಪಡೆಗಳಿಗೆ ಗಮನಾರ್ಹವಾಗಿ ಸಹಾಯ ಮಾಡುತ್ತದೆ. ರಸ್ತೆಗಳು ಕಾರ್ಯತಂತ್ರದ ಅಗತ್ಯಗಳಿಗಾಗಿ ಮಾತ್ರವಲ್ಲ, ರಾಷ್ಟ್ರದ ಅಭಿವೃದ್ಧಿಯಲ್ಲಿ ಎಲ್ಲಾ ಪಾಲುದಾರರ ಸಮಾನ ಭಾಗವಹಿಸುವಿಕೆಯನ್ನು ಸಹ ಪ್ರತಿಬಿಂಬಿಸುತ್ತವೆ ಎಂದು ಉದ್ಘಾಟನೆಯ ನಂತರ ರಾಜನಾಥ್ ಸಿಂಗ್ ಹೇಳಿದ್ದರು.

ಗಡಿ ಬಿಕ್ಕಟ್ಟಿನ ಮಧ್ಯೆ, ಹಿಮಾಚಲ ಪ್ರದೇಶದ ಡಾರ್ಚಾವನ್ನು ಲಡಾಖ್ನೊಂದಿಗೆ ಸಂಪರ್ಕಿಸುವ ಕಾರ್ಯತಂತ್ರದ ರಸ್ತೆ ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳ ಕಾರ್ಯವನ್ನು ಭಾರತವು ಚುರುಕುಗೊಳಿಸುತ್ತಿದೆ, ಇವು  ಎತ್ತರ ಪ್ರದೇಶದ ಹಿಮಪಾತದಿಂದ ಮುಚ್ಚಿ ಹೋಗುವ ಹಲವಾರು ಕಣಿವೆಗಳ ಮೂಲಕ ಹಾದು ಹೋಗುತ್ತವೆ. ಸುಮಾರು ೨೯೦ ಕಿ.ಮೀ ಉದ್ದದ ರಸ್ತೆ ಲಡಾಖ್ ಪ್ರದೇಶದ ಗಡಿನಾಡುಗಳಲ್ಲಿ ಸೇನೆ ಮತ್ತು ಭಾರೀ ಶಸ್ತ್ರಾಸ್ತ್ರಗಳ ಚಲನೆಗೆ ನಿರ್ಣಾಯಕವಾಗಲಿದೆ ಮತ್ತು ಕಾರ್ಗಿಲ್ ಪ್ರದೇಶಕ್ಕೆ ನಿರ್ಣಾಯಕ ಸಂಪರ್ಕವನ್ನು ಒದಗಿಸುತ್ತದೆ.

No comments:

Advertisement