Monday, November 16, 2020

ವಿಶ್ವದ ಅತಿ ದೊಡ್ಡ ಮುಕ್ತ ವ್ಯಾಪಾರ ಒಪ್ಪಂದಕ್ಕೆ ೧೫ ರಾಷ್ಟ್ರಗಳ ಸಹಿ

 ವಿಶ್ವದ ಅತಿ ದೊಡ್ಡ ಮುಕ್ತ ವ್ಯಾಪಾರ ಒಪ್ಪಂದಕ್ಕೆ ೧೫ ರಾಷ್ಟ್ರಗಳ ಸಹಿ

ಹನೊಯಿ: ಏಷ್ಯಾ ಪೆಸಿಫಿಕ್ನ  ೧೫ ರಾಷ್ಟ್ರಗಳು 2020 ನವೆಂಬರ್ 11ರ ಭಾನುವಾರ ವಿಶ್ವದಲ್ಲೇ  ಅತ್ಯಂತ ದೊಡ್ಡದು ಎನ್ನಲಾಗಿರುವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ. 

ಜಗತ್ತಿನ ಒಟ್ಟು ಆರ್ಥಿಕ ಚಟುವಟಿಕೆಯ ಮೂರನೇ ಒಂದು ಭಾಗದಷ್ಟು ವಹಿವಾಟು ಇದಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಕೊರೊನಾ ಸಾಂಕ್ರಾಮಿಕದಿಂದ ಆರ್ಥಿಕವಾಗಿ ನಲುಗಿರುವ ರಾಷ್ಟ್ರಗಳಿಗೂ ಇದು ನೆರವಾಗಲಿದೆ.

ಒಪ್ಪಂದವನ್ನುಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್ ಸಿಇಪಿ) ಎಂದು ಕರೆಯಲಾಗಿದ್ದು, ಚೀನಾ ಮತ್ತು ಇತರ ೧೪ ರಾಷ್ಟ್ರಗಳು  ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ ಶೃಂಗಸಭೆಯ ಸಂದರ್ಭದಲ್ಲಿ ವರ್ಚುವಲ್ ವ್ಯವಸ್ಥೆಯ ಮೂಲಕ  ಒಪ್ಪಂದಕ್ಕೆ ಸಹಿ ಹಾಕಿದವು.

೨೦೧೨ರಲ್ಲಿ ಬಗ್ಗೆ ಪ್ರಸ್ತಾವ ಮಂಡಿಸಲಾಗಿತ್ತು. ಆದರೆ, ಒಪ್ಪಂದದ ಕುರಿತ ಇದ್ದ ಗೊಂದಲಗಳನ್ನು ನಿವಾರಿಸುವ ಕುರಿತು ವ್ಯಾಪಕ ಚರ್ಚೆ ನಡೆಸಿ ಅಂತಿಮ ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು.

ಎಂಟು ವರ್ಷಗಳ ಕಾಲ ಸತತ ಸಂಧಾನ, ಚರ್ಚೆಗಳನ್ನು ನಡೆಸಿದ್ದೇವೆ. ಇದಕ್ಕಾಗಿ ಅಪಾರ ಪರಿಶ್ರಮಪಟ್ಟಿದ್ದೇವೆ. ಅಂತಿಮವಾಗಿ ಆರ್ ಸಿಇಪಿ ಒಪ್ಪಂದ ಮಾಡಿಕೊಂಡಿದ್ದೇವೆಎಂದು ಮಲೇಷ್ಯಾದ ವಾಣಿಜ್ಯ ಸಚಿವ ಮೊಹಮ್ಮದ್ ಅಜ್ಮಿನ್ ಅಲಿ ತಿಳಿಸಿದರು.

ಆರ್ ಸಿಇಪಿ ಜಗತ್ತಿನಲ್ಲೇ ಅತಿ ದೊಡ್ಡ ಮುಕ್ತ ವ್ಯಾಪಾರ ಒಪ್ಪಂದವಾಗಿದೆ. ಪ್ರಾದೇಶಿಕ ವ್ಯಾಪಾರ ವಹಿವಾಟಿಗೆ ಹೊಸ ವ್ಯವಸ್ಥೆಯನ್ನು ಇದು ರೂಪಿಸಲಿದೆ. ಸುಸ್ಥಿರ ವ್ಯಾಪಾರಕ್ಕೂ ಇದು ಆಧಾರವಾಗಲಿದೆ. ಕೋವಿಡ್-೧೯ನಿಂದ ಅಸ್ತವ್ಯಸ್ತಗೊಂಡಿರುವ ವಿತರಣಾ ಸರಪಳಿಗೆ ಇದು ಪುನಶ್ಚೇತನ ನೀಡಲಿದೆಎಂದು ವಿಯಟ್ನಾಂ ಪ್ರಧಾನಿ ಗ್ಯುಯೇನ್ ಕ್ಸುಆನ್ ಫುಕ್ ವಿವರಿಸಿದರು.

ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ ೧೦ ಸದಸ್ಯ ರಾಷ್ಟ್ರಗಳ ಜತೆಗೆ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಆರ್ ಸಿಇಪಿ ಒಪ್ಪಂದಕ್ಕೆ ಸಹಿ ಹಾಕಿವೆ. ಆದರೆ, ಅಮೆರಿಕವನ್ನು ಹೊರಗಿಟ್ಟು ಒಪ್ಪಂದ ಮಾಡಿಕೊಂಡಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಅಮೆರಿಕ ಮೊದಲುಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬಳಿಕ ಆರ್ ಸಿಇಪಿ ಒಪ್ಪಂದವನ್ನು ಅಂತಿಮಗೊಳಿಸುವ ವಿಷಯ ಮಹತ್ವ ಪಡೆದಿತ್ತು.

ದೇಶದಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಭಾರತ ಒಪ್ಪಂದದಿಂದ ದೂರ ಉಳಿಯಿತು. ಆದರೂ, ಒಪ್ಪಂದವು ಭಾರತಕ್ಕೂ ಬಾಗಿಲು ತೆರೆಯಲಿದೆ. ಭವಿಷ್ಯದಲ್ಲಿ ಸೇರ್ಪಡೆಯಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮುಕ್ತ ಮತ್ತು ನ್ಯಾಯ ಸಮ್ಮತ ಆರ್ಥಿಕ ವಲಯವನ್ನು ವಿಸ್ತರಿಸಲು ನಮ್ಮ ಸರ್ಕಾರ ಬೆಂಬಲ ನೀಡುತ್ತದೆ. ಭವಿಷ್ಯದಲ್ಲಿ ಭಾರತ ಒಪ್ಪಂದದಲ್ಲಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಜತೆಗೆ, ಇತರ ರಾಷ್ಟ್ರಗಳ ಬೆಂಬಲವೂ ಒಪ್ಪಂದಕ್ಕೆ ದೊರೆಯುವ ವಿಶ್ವಾಸವಿದೆಎಂದು ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ತಿಳಿಸಿದ್ದಾರೆ.

ಈಗ ಅಮೆರಿಕದ ಅಧ್ಯಕ್ಷರಾಗಿ ಜೋ ಬಿಡೆನ್ ಆಯ್ಕೆಯಾಗಿರುವುದರಿಂದ ಕೆಲವು ವಾಣಿಜ್ಯ ನೀತಿಗಳು ಬದಲಾಗಬಹುದು. ಹೀಗಾಗಿ, ಒಪ್ಪಂದವು ಸಹ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಜೊತೆಗೆ, ಚೀನಾದ ಮೇಲೆ ವಿಧಿಸಿರುವ ಹಲವು ವ್ಯಾಪಾರ ನಿರ್ಬಂಧಗಳನ್ನು ಬಿಡೆನ್ ತೆಗೆದುಹಾಕಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

No comments:

Advertisement