Wednesday, December 9, 2020

ಕೇಂದ್ರ ಪ್ರಸ್ತಾವನೆಗೆ ರೈತರ ತಿರಸ್ಕಾರ, ಡಿ.14ಕ್ಕೆ ರಾಷ್ಟ್ರವ್ಯಾಪಿ ಪ್ರತಿಭಟನೆ

 ಕೇಂದ್ರ ಪ್ರಸ್ತಾವನೆಗೆ ರೈತರ ತಿರಸ್ಕಾರ, ಡಿ.14ಕ್ಕೆ ರಾಷ್ಟ್ರವ್ಯಾಪಿ ಪ್ರತಿಭಟನೆ

ನವದೆಹಲಿ: ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದು ಪಡಿಸುವಂತೆ ಒತ್ತಾಯಿಸಿ ರಾಜಧಾನಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಕನಿಷ್ಠ ಬೆಂಬಲ ಬೆಲೆ ಬಗ್ಗೆ ಲಿಖಿತ ಭರವಸೆ ಹಾಗೂ ಇತರ ವಿಚಾರಗಳಿಗೆ ಸಂಬಂಧಿಸಿದಂತೆ ತಿದ್ದುಪಡಿಯನ್ನು ಪ್ರಸ್ತಾಪಿಸಿ ಮುಂದಿಟ್ಟ ಕರಡು ಪ್ರಸ್ತಾವನೆಯನ್ನು  2020 ಡಿಸೆಂಬರ್ 09ರ ಬುಧವಾರ ತಿರಸ್ಕರಿಸಿದರು.

ಸರ್ಕಾರದ ಪ್ರಸ್ತಾಪ ರೈತರಿಗೆ ಅವಮಾನ ಎಂದು ತಿಳಿಸಿದ ರೈತ ಮುಖಂಡರು "ಡಿಸೆಂಬರ್ ೧೪ ರಂದು ನಮ್ಮ ಪ್ರತಿಭಟನೆ ರಾಷ್ಟ್ರವ್ಯಾಪಿ ಪ್ರತಿಭಟನೆಯಾಗಲಿದೆ" ಎಂದು ಘೋಷಿಸಿದ್ದಾರೆ.

ಡಿಸೆಂಬರ್ "೧೪ ರಂದು ದಿಲ್ಲಿ ಚಲೋ ಮೆರವಣಿಗೆಗಾಗಿ ಎಲ್ಲಾ ಉತ್ತರ ಭಾರತದ ರೈತರಿಗೆ ದೆಹಲಿಗೆ ಬರಲು ಕರೆ ನೀಡಲಾಗಿದೆ. ದಕ್ಷಿಣ ಭಾರತ ಮತ್ತು ಇತರ ದೂರದ ರಾಜ್ಯಗಳ ರೈತರು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಮತ್ತು ಅನಿರ್ದಿಷ್ಟ ಪ್ರತಿಭಟನಾ ಸ್ಥಳಗಳನ್ನು ಪ್ರಾರಂಭಿಸಲಾಗುವುದು. ಜಿಯೋ ಸೇವೆಗಳನ್ನು ಮತ್ತು ಅದಾನಿ / ಅಂಬಾನಿ ಮಾಲ್ಗಳು, ಉತ್ಪನ್ನ ಇತ್ಯಾದಿಗಳನ್ನು ಬಹಿಷ್ಕರಿಸಲೂ ಕರೆ ನೀಡಲಾಗುತ್ತಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಸರ್ಕಾರ ನಮಗೆ ಕಳುಹಿಸಿದ ಹೊಸ ಪ್ರಸ್ತಾಪವನ್ನು ನಾವು ಓದಿದ್ದೇವೆ ಮತ್ತು ಅದನ್ನು ನಾವು ತಿರಸ್ಕರಿಸಿದ್ದೇವೆ. ಕಾನೂನುಗಳನ್ನು ರದ್ದುಗೊಳಿಸದಿದ್ದರೆ ನಾವು ನಮ್ಮ ಪ್ರತಿಭಟನೆಗಳನ್ನು ತೀವ್ರಗೊಳಿಸುತ್ತೇವೆ. ಡಿಸೆಂಬರ್ ೧೪ ರಂದು ಹೊಸ ಧರಣಿ ನಡೆಯಲಿದೆ. ಜೈಪುರ- ದೆಹಲಿ ಹೆದ್ದಾರಿಯನ್ನು ಡಿಸೆಂಬರ್ ೧೨ ರಂದು ನಿರ್ಬಂಧಿಸಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ.

ಸರ್ಕಾರದ ಪ್ರಸ್ತಾಪಗಳಲ್ಲಿ ಹೊಸತೇನೂ ಇಲ್ಲ. ಮೂರು ಕೃಷಿ ಮಾರುಕಟ್ಟೆ ಕಾಯ್ದೆಗಳ ವಿರುದ್ಧ ನಮ್ಮ ಪ್ರತಿಭಟನೆಯನ್ನು ನಾವು ಮುಂದುವರೆಸುತ್ತೇವೆ ಎಂದು ರೈತ ನಾಯಕ ಪ್ರಹ್ಲಾದ ಸಿಂಗ್ ಬರುಖೇಡ ಹೇಳಿದರು.

ಕೇಂದ್ರ ಸರ್ಕಾರದ ಹೊಸ ಪ್ರಸ್ತಾಪವು ಅಪ್ರಾಮಾಣಿಕ ಹಾಗೂ ಸೊಕ್ಕಿನದಾಗಿದೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್ಸಿಸಿ) ಖಂಡಿಸಿದೆ.

ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಸಾವಿರಾರು ರೈತರು ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ಮುಂದುವರಿಸುತ್ತಿದ್ದಂತೆ, ಅವರ ಒಕ್ಕೂಟಗಳ ಪ್ರತಿನಿಧಿ ಗುಂಪು ಪ್ರತಿಭಟನಾಕಾರರು ಎತ್ತಿದ ಕೆಲವು ಪ್ರಮುಖ ವಿಷಯಗಳ ಕುರಿತು ಸರ್ಕಾರ ಕರಡು ಪ್ರಸ್ತಾವನೆಯನ್ನು ಸ್ವೀಕರಿಸಿತ್ತು.

ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು- ಏಕ್ತಾ ಉಗ್ರಾಹಾನ್) ನಾಯಕ ಜೋಗಿಂದರ್ ಸಿಂಗ್ ಉಗ್ರಹಾನ್ ಸೇರಿದಂತೆ ೧೩ ರೈತ ಸಂಘಗಳ ನಾಯಕರಿಗೆ ಕೇಂದ್ರ ಸರ್ಕಾರವು ಕರಡು ಪ್ರಸ್ತಾವನೆಯನ್ನು ಕಳುಹಿಸಿತ್ತು.

"ರೈತ ಸಂಘಗಳು ಸರ್ಕಾರದಿಂದ ಕರಡು ಪ್ರಸ್ತಾವನೆಯನ್ನು ಸ್ವೀಕರಿಸಿದೆ" ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಇದಕ್ಕೆ ಮುನ್ನ ಹೇಳಿದ್ದರು.

೧೩ ಕೃಷಿ ಸಂಘಗಳ ನಾಯಕರೊಂದಿಗೆ ಮಂಗಳವಾರ ರಾತ್ರಿ ನಡೆದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಮೂರು ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ರೈತರು ಎತ್ತುವ ಪ್ರಮುಖ ವಿಷಯಗಳ ಕುರಿತು ಕರಡು ಪ್ರಸ್ತಾವನೆಯನ್ನು ಸರ್ಕಾರ ಕಳುಹಿಸಲಿದೆ ಎಂದು ಹೇಳಿದ್ದರು.

ಕಾನೂನುಗಳನ್ನು ರದ್ದುಗೊಳಿಸುವಂತೆ ರೈತ ಸಂಘಟನೆಗಳು ಒತ್ತಾಯಿಸುತಿವೆ.

No comments:

Advertisement