My Blog List

Wednesday, August 24, 2022

ಭಾರತೀಯ ಸೇನೆ ಮೇಲೆ ದಾಳಿಗೆ ಪಾಕ್‌ ಕರ್ನಲ್‌ ನಿಂದ ರೂ. 30,000 ರೂಪಾಯಿ

 ಭಾರತೀಯ ಸೇನೆ ಮೇಲೆ ದಾಳಿಗೆ ಪಾಕ್‌ ಕಾಸು
ಕರ್ನಲ್‌ ನಿಂದ ರೂ. 30,000 ರೂಪಾಯಿ

ನವದೆಹಲಿ:  ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರಿನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಆಗಸ್ಟ್ 21 ರಂದು ಭಾರತೀಯ ಸೇನೆ ಸೆರೆ ಹಿಡಿದ ಪಾಕ್‌ ಆಕ್ರಮಿತ ಕಾಶ್ಮೀರದ (ಪಿಒಕೆ) 'ಫಿದಾಯೀನ್' (ಆತ್ಮಹತ್ಯಾ) ದಾಳಿಕೋರ, ಪಾಕ್‌ ಕರ್ನಲ್‌ ಸೂಚನೆ ಮೇರೆಗೆ ತಾನು ಭಾರತೀಯ ಸೇನೆ ಮೇಲೆ ದಾಳಿ ನಡೆಸುವ ಕೃತ್ಯಕ್ಕೆ ಇಳಿದುದಾಗಿ 2022 ಆಗಸ್ಟ್‌ 24ರ ಬುಧವಾರ ಒಪ್ಪಿಕೊಂಡಿದ್ದಾನೆ.

ಭಾರತೀಯ ಸೈನಿಕರ ಮೇಲೆ ದಾಳಿ ಮಾಡುವ ಯೋಜನೆ ಕಾರ್ಯಗತಗೊಳಿಸಲು ಪಾಕಿಸ್ತಾನಿ ಸೇನೆಯ ಪಾಕಿಸ್ತಾನಿ ಕರ್ನಲ್ ಯೂನಸ್ ಚೌಧರಿ ತನಗೆ ಸುಮಾರು 30,000 ರೂ. ನೀಡಿರುವುದಾಗಿ ತಬಾರಕ್ ಹುಸೇನ್ ಎಂಬುದಾಗಿ ಗುರುತಿಸಲಾಗಿರುವ ದ ಭಯೋತ್ಪಾದಕ ಹೇಳಿದ್ದಾನೆ.

ಒಳನುಸುಳುವಿಕೆ ಪ್ರಯತ್ನದ ಸಮಯದಲ್ಲಿ ಗಾಯಗೊಂಡು ಕಾಶ್ಮೀರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹುಸೇನ್ ಎಎನ್‌ ಐ ಸುದ್ದಿ ಸಂಸ್ಥೆ ಜೊತೆಗೆ ಮಾತನಾಡುತ್ತಾ ತಾನು ನಾಲ್ಕೈದು ಮಂದಿಯೊಂದಿಗೆ ಭಾರತೀಯ ಪ್ರದೇಶಕ್ಕೆ ನುಸುಳಲು ಯತ್ನಿಸಿದ್ದಾಗಿ ಹೇಳಿದ್ದಾನೆ.

ಎಎನ್‌ ಐ ಸುದ್ದಿ ಸಂಸ್ಥೆಯು ಟ್ವಿಟ್ಟರಿನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹುಸೇನ್, ಇತರ ಭಯೋತ್ಪಾದಕರ ಜೊತೆಗೆ ಸೂಕ್ತ ಸಮಯದಲ್ಲಿ ಭಾರತೀಯ ಸೈನಿಕರನ್ನು ಗುರಿಯಾಗಿಸಿ ದಾಳಿ ನಡೆಸುವ ಉದ್ದೇಶದಿಂದ ಭಾರತದ ಮುಂಚೂಣಿ ಗಡಿ ಠಾಣೆಗಳ ಮೇಲೆ ಆತ್ಮಾಹುತಿ ದಾಳಿ ನಡೆಸಲು ಎರಡು-ಮೂರು ಬಾರಿ ಯತ್ನಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಹುಸೇನ್ ಪಾಕ್ ಆಕ್ರಮಿತ ಕಾಶ್ಮೀರದ ಕೋಟಿಯ ಸಬ್‌ಕೋಟ್ ಗ್ರಾಮದ ನಿವಾಸಿಯಾಗಿದ್ದಾನೆ.

ಹುಸೇನ್ ಭಯೋತ್ಪಾದಕರೊಂದಿಗೆ ಒಳನುಸುಳಲು ಪ್ರಯತ್ನಿಸುತ್ತಿದ್ದಾಗ ಭಾರತೀಯ ಸೇನೆಯು ಆತನನ್ನು ವಶಕ್ಕೆ ತೆಗೆದುಕೊಂಡಿತು. “ನಾನು ಇತರ ನಾಲ್ಕೈದು ಜನರೊಂದಿಗೆ ಆತ್ಮಹತ್ಯಾ ಕಾರ್ಯಾಚರಣೆಗಾಗಿ ಇಲ್ಲಿಗೆ ಬಂದಿದ್ದೆ. ನಮ್ಮನ್ನು ಪಾಕಿಸ್ತಾನ ಸೇನೆಯ ಕರ್ನಲ್ ಯೂನಸ್ ಕಳುಹಿಸಿದ್ದು, ಅವರು ಭಾರತೀಯ ಸೇನೆಯನ್ನು ಗುರಿಯಾಗಿಸಲು 30,000 ರೂ. ನೀಡಿದ್ದರು” ಎಂದು ಭಯೋತ್ಪಾದಕ ಹೇಳಿದ.

ಇದಕ್ಕೆ ಮುನ್ನ, ಜಮ್ಮು ಪ್ರದೇಶದಲ್ಲಿ 48 ಗಂಟೆಗಳ ಅವಧಿಯಲ್ಲಿ ನೌಶೇರಾ ಸೆಕ್ಟರ್‌ನ ಎಲ್‌ಒಸಿ ಉದ್ದಕ್ಕೂ ಭಯೋತ್ಪಾದಕರು ನಡೆಸಿದ ಎರಡು ಒಳನುಸುಳುವಿಕೆ ಪ್ರಯತ್ನಗಳನ್ನು ಯಶಸ್ವಿಯಾಗಿ ನಿಗ್ರಹಿಸುವ ಮೂಲಕ ಶಾಂತಿ ಕದಡುವ ಪಾಕಿಸ್ತಾನದ "ಕೆಟ್ಟ ಪ್ರಯತ್ನ" ವನ್ನು ವಿಫಲಗೊಳಿಸಲಾಗಿದೆ ಎಂದು ಭಾರತೀಯ ಸೇನೆ ಹೇಳಿತ್ತು.

ಆಗಸ್ಟ್ 21 ಮತ್ತು 22 ರಂದು ಝಂಗಾರ್ ಮತ್ತು ಲ್ಯಾಮ್ ಪ್ರದೇಶಗಳಲ್ಲಿ ಒಳನುಸುಳುವಿಕೆ ಯತ್ನಗಳು, ಇಬ್ಬರು ಭಯೋತ್ಪಾದಕರ ಸಾವಿಗೆ ಕಾರಣವಾದವು ಮತ್ತು ಕುಖ್ಯಾತ ಭಯೋತ್ಪಾದಕ ಮಾರ್ಗದರ್ಶಿಯನ್ನು ಬಂಧಿಸಲಾಯಿತು, ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಭಾರತದ ಕಡೆಗೆ ಒಂದು ಗುಂಪನ್ನು ನುಗ್ಗಿಸುವ ಕಾರ್ಯಾಚರಣೆಗೆ ಇಳಿದಿದ್ದರು. ಅವರಿಂದ ಸೇನಾ ಪೋಸ್ಟ್ ಮೇಲೆ ದಾಳಿ ನಡೆದಿದೆ ಎಂದು ಸೇನೆಯ 80 ಪದಾತಿ ದಳದ ಕಮಾಂಡರ್ ಬ್ರಿಗೇಡಿಯರ್ ಕಪಿಲ್ ರಾಣಾ ತಿಳಿಸಿದ್ದರು.

ಎಎನ್‌ ಐ ಸುದ್ದಿ ಸಂಸ್ಥೆಯು ಟ್ವಿಟ್ಟರಿನಲ್ಲಿ ಪ್ರಕಟಿಸಿದ ಫಿದಾಯೀನ್‌ ದಾಳಿಕೋರನ ತಪ್ಪೊಪ್ಪಿಗೆಯ ವಿಡಿಯೋ ಕೆಳಗಿದೆ:


No comments:

Advertisement