My Blog List

Wednesday, September 28, 2022

ಭಾರತದಲ್ಲಿ ಪಿಎಫ್‌ಐ, ಅಂಗಸಂಸ್ಥೆಗಳಿಗೆ 5 ವರ್ಷ ನಿಷೇಧ

 ಭಾರತದಲ್ಲಿ ಪಿಎಫ್‌ಐ, ಅಂಗಸಂಸ್ಥೆಗಳಿಗೆ 5 ವರ್ಷ ನಿಷೇಧ

ನವದೆಹಲಿ:  ಪ್ರಮುಖ ಬೆಳವಣಿಗೆಯೊಂದರಲ್ಲಿ, ಕೇಂದ್ರ ಸರ್ಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು 2022 ಸೆಪ್ಟೆಂಬರ್‌ 28ರ ಬುಧವಾರ  ನಿಷೇಧಿಸಿತು. ಇದರ ಜೊತೆಗೇ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯ ಎಲ್ಲ ಸಹವರ್ತಿಗಳು, ಅಂಗಸಂಸ್ಥೆಗಳು ಸೇರಿದಂತೆ ಅದಕ್ಕೆ ಸಂಬಂಧಿಸಿದ ಎಲ್ಲ ಸಂಘಟನೆಗಳನ್ನೂ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಕಾನೂನುಬಾಹಿರ ಸಂಘಟನೆಗಳು ಎಂದು ಸರ್ಕಾರ ಘೋಷಿಸಿತು.

ಅಧಿಕೃತ ಆದೇಶದ ಪ್ರಕಾರ ಐದು ವರ್ಷಗಳ ಅವಧಿಗೆ ನಿಷೇಧವನ್ನು ಹೇರಲಾಗಿದೆ.

"ಕೇಂದ್ರ ಸರ್ಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮತ್ತು ಅದರ ಸಹವರ್ತಿಗಳು ಅಥವಾ ಅಂಗಸಂಸ್ಥೆಗಳು ಅಥವಾ ಇತರ ಸಂಬಂಧಿತ ಫ್ರಂಟ್‌ಗಳಾದ ರೆಹಬ್ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಸಂಸ್ಥೆ (NCHRO), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್, ಕೇರಳ ಸಂಘಟನೆಗಳನ್ನು ಈ ಮೂಲಕ ಕಾನೂನುಬಾಹಿರ ಸಂಘಟನೆಗಳು ಎಂಬುದಾಗಿ ಘೋಷಿಸುತ್ತದೆಎಂದು ಗೃಹ ಸಚಿವಾಲಯದ ಆದೇಶ ಘೋಷಿಸಿದೆ.

ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದೆ ಎಂಬ ಆರೋಪದ ಮೇಲೆ ಎನ್‌ಐಎ ನೇತೃತ್ವದ ಬಹು-ಏಜೆನ್ಸಿ ಕಾರ್ಯಾಚರಣೆಯಲ್ಲಿ ಎರಡು ಸುತ್ತಿನ ದಾಳಿಗಳ ನಂತರ ನಿಷೇಧವು ಬಂದಿದೆ. ಮೊದಲ ಸುತ್ತಿನ ದಾಳಿಗಳು ಸೆಪ್ಟೆಂಬರ್ 22 ರಂದು ನಡೆದವು, ಅದರ ಅನುಸರಣೆಯು ಸೆಪ್ಟೆಂಬರ್ 27 ರಂದು ಮಂಗಳವಾರ ಹಲವಾರು ರಾಜ್ಯಗಳಲ್ಲಿ ನಡೆಯಿತು. ಈ ದಾಳಿಗಳಲ್ಲಿ ಪಿಎಫ್‌ಐಗೆ ಸೇರಿದ  ಕನಿಷ್ಠ 250 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

No comments:

Advertisement