Saturday, June 28, 2025

ಇಪಿಎಫ್‌ಒ ಹೆಚ್ಚಿನ ಪಿಂಚಣಿ ಸಮಸ್ಯೆ: ಸಚಿವೆ ಶೋಭಾ ಕರಂದ್ಲಾಜೆ ಭರವಸೆ

 ಇಪಿಎಫ್‌ಒ ಹೆಚ್ಚಿನ ಪಿಂಚಣಿ ಸಮಸ್ಯೆ: ಸಚಿವೆ ಶೋಭಾ ಕರಂದ್ಲಾಜೆ ಭರವಸೆ

ಬೆಂಗಳೂರು: ಹಿರಿಯ ಪತ್ರಕರ್ತರು ಹಾಗೂ ಇತರರಿಗೆ ಸಂಬಂಧಿಸಿದಂತೆ ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆಯ (ಇಪಿಎಫ್‌ ಒ) ಹೆಚ್ಚಿನ ಪಿಂಚಣಿ ಯೋಜನೆಯಲ್ಲಿ (Higher Pension Scheme) ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶೀಘ್ರವೇ ಸಂಬಂಧಪಟ್ಟವರ ಜೊತೆಗೆ ಚರ್ಚಿಸುವುದಾಗಿ ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು 2025 ಜೂನ್‌ 28ರ ಶುಕ್ರವಾರ ಇಲ್ಲಿ ಭರವಸೆ ನೀಡಿದರು.

ತಮ್ಮನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಹಿರಿಯ ಪತ್ರಕರ್ತರ ನಿಯೋಗದ ಜೊತೆ ಅವರು ಮಾತನಾಡುತ್ತಿದ್ದರು.

2022ರಲ್ಲಿ ನೀಡಿದ ತೀರ್ಪಿನಲ್ಲಿ ವಿನಾಯಿತಿ ಪಡೆದ ಟ್ರಸ್ಟ್ಗಳ (Exempted Trusts) ನೌಕರರು ಇತರ ಸಂಸ್ಥೆಗಳ ಉದ್ಯೋಗಿಗಳಂತೆಯೇ ಹೆಚ್ಚಿನ ಪಿಂಚಣಿಗೆ ಅರ್ಹರು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದ್ದರೂ, ಇಪಿಎಫ್‌ಒ ಅದನ್ನು ಜಾರಿಗೆ ತರುವಲ್ಲಿ ಸಹಕರಿಸುತ್ತಿಲ್ಲ. ಕೆಲವರಿಂದ ಹೆಚ್ಚಿನ ಪಿಂಚಣಿಗಾಗಿ ಹೆಚ್ಚಿನ ಹಣ ಕಟ್ಟಿಸಿಕೊಂಡಿದ್ದರೂ ಅವರಿಗೆ ಹೆಚ್ಚಿನ ಪಿಂಚಣಿ ಮಂಜೂರು ಮಾಡುತ್ತಿಲ್ಲ ಎಂದು ನಿಯೋಗ ಸಚಿವರಿಗೆ ವಿವರಿಸಿತು.

ಸುಪ್ರೀಂಕೋರ್ಟಿನ ತೀರ್ಪಿನಲ್ಲಿ ವಿನಾಯಿತಿ ಪಡೆದ ಟ್ರಸ್ಟ್‌ ಗಳ ನಿಯಮಾವಳಿಗಳ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದೇ ಇದ್ದರೂ ಇಪಿಎಫ್‌ಒ ಟ್ರಸ್ಟ್‌ ನಿಯಮಾವಳಿಗಳನ್ನು ಮುಂದಿಟ್ಟು ಹೆಚ್ಚಿನ ಪಿಂಚಣಿಗಾಗಿ ನೌಕರರು ಮತ್ತು ಉದ್ಯೋಗದಾತರು ಸಲ್ಲಿಸಿದ ಜಂಟಿ ಅರ್ಜಿಗಳನ್ನು ತಿರಸ್ಕರಿಸಿದೆ. ಇಪಿಎಫ್‌ಒದ ಈ ಕ್ರಮದಿಂದಾಗಿ ಲಕ್ಷಾಂತರ ಮಂದಿಗೆ ಅನಾನುಕೂಲವಾಗಿದೆ ಎಂದು ಸಚಿವರಿಗೆ ವಿವರಿಸಲಾಯಿತು.

ಹೆಚ್ಚಿನ ಪಿಂಚಣಿ ಯೋಜನೆಯ ಜಾರಿಯಿಂದ ಸರ್ಕಾರದ ಮೇಲೆ ಯಾವುದೇ ಹೊರೆಯೂ ಬೀಳುವುದಿಲ್ಲ. ನೌಕರರು ಸ್ವತಃ ಅದಕ್ಕಾಗಿ ಭರಿಸಬೇಕಾದ ಹೆಚ್ಚುವರಿ ಹಣ ಭರಿಸುತ್ತಾರೆ. ಅದರಿಂದಲೇ ಪಿಂಚಣಿಯನ್ನು ನೀಡಲಾಗುತ್ತದೆ ಎಂಬುದನ್ನೂ ಸಚಿವರ ಗಮನಕ್ಕೆ ನಿಯೋಗ ತಂದಿತು.

ಹೆಚ್ಚಿನ ಪಿಂಚಣಿ ಯೋಜನೆ ಜಾರಿಯಲ್ಲಿ ಉಂಟಾಗಿರುವ ಅಡಚಣೆಗಳ ನಿವಾರಣೆಗೆ ಸರ್ಕಾರದ ಮಟ್ಟದಲ್ಲಿ ನೀತಿ ವಿಚಾರವಾಗಿ ಚರ್ಚಿಸಬೇಕಾಗಿದ್ದು, ಶೀಘ್ರವೇ ಈ ವಿಚಾರದಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಲಾಗುವುದು. ವಿವಿಧ ಸಂಘ ಸಂಸ್ಥೆಗಳಿಂದಲೂ ಈ ಕುರಿತು ಮನವಿಗಳು ಬಂದಿವೆ. ಕೆಲವು ಸಂಸ್ಥೆಗಳ ಸಮಸ್ಯೆ ನಿವಾರಿಸಲಾಗಿದ್ದು, ಉಳಿದವರ ಸಮಸ್ಯೆಗಳನ್ನೂ ನಿವಾರಿಸಲಾಗುವುದು ಎಂದು ಸಚಿವರು ಹೇಳಿದರು.

ಅರ್ಜಿ ಸಮಯದಲ್ಲಿ ಕೋರಲಾಗಿದ್ದ ದಾಖಲೆಗಳನ್ನು ನೀಡಿದ್ದರೂ ನಂತರ ಪದೇ ಪದೇ ದಾಖಲೆಗಳನ್ನು ಅಧಿಕಾರಿಗಳು ಕೇಳುತ್ತಿರುವ ಬಗೆಗೂ ಸಚಿವರ ಗಮನಕ್ಕೆ ತರಲಾಯಿತು. ʼಎಲ್ಲ ದಾಖಲೆಗಳೂ ಸಂಸ್ಥೆಯಲ್ಲಿ ಇರುತ್ತವೆ. ಆದರೆ ಅವುಗಳ ಡಿಜಿಟಲೀಕರಣವಾಗದೇ ಇರುವುದೇ ಸಮಸ್ಯೆ. ಈಗ ನಾವು ಆ ಕೆಲಸ ಮಾಡುತ್ತಿದ್ದೇವೆʼ ಎಂದು ಕರಂದ್ಲಾಜೆ ತಿಳಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ, ನೆತ್ರಕೆರೆ ಉದಯಶಂಕ, ನಾಗರಾಜ್, ಶ್ರೀವತ್ಸ ನಾಡಿಗ್, ಬಿ ಎನ್ ರಾಘವೇಂದ್ರ, ವಾದಿರಾಜ ದೇಸಾಯಿ, ಚಂದ್ರಶೇಖರ ಮತ್ತು ಹನುಮೇಶ್ ಕೆ ಯಾವಗಲ್ ಈ ನಿಯೋಗದಲ್ಲಿ ಇದ್ದರು.

ಈ ಕೆಳಗಿನದ್ದನ್ನೂ ಕ್ಲಿಕ್‌ ಮಾಡಿ ನೋಡಿ:


No comments:

Advertisement