Monday, June 30, 2025

ಕರ್ನಾಟಕದಲ್ಲಿ ಪತ್ರಿಕಾ ದಿನ: ಇತಿಹಾಸ ಗೊತ್ತಾ?

 ಕರ್ನಾಟಕದಲ್ಲಿ ಪತ್ರಿಕಾ ದಿ: ಇತಿಹಾಸ ಗೊತ್ತಾ?

ಇದು ಸುವರ್ಣ ನೋಟ

ಪ್ರತಿ ವರ್ಷ ಜುಲೈ 1 ರಂದು ಕರ್ನಾಟಕದಲ್ಲಿ 'ಪತ್ರಿಕಾ ದಿನ'ವನ್ನು ಆಚರಿಸಲಾಗುತ್ತದೆ. ಈ ದಿನಕ್ಕೆ ವಿಶೇಷ ಮಹತ್ವವಿದೆ, ಏಕೆಂದರೆ ಇದು ಕನ್ನಡದ ಮೊಟ್ಟಮೊದಲ ಪತ್ರಿಕೆ 'ಮಂಗಳೂರು ಸಮಾಚಾರ' ಪ್ರಕಟಗೊಂಡ ದಿನ. 1843ರ ಜುಲೈ 1 ರಂದು ಮಂಗಳೂರಿನಲ್ಲಿ ಬಾಸೆಲ್ ಮಿಷನ್‌ನ ಮುದ್ರಣಾಲಯದಿಂದ ಈ ಪತ್ರಿಕೆ ಹೊರಬಂದಿತು.

ಕನ್ನಡ ಪತ್ರಿಕೋದ್ಯಮದ ಪಿತಾಮಹ: ರೆವರೆಂಡ್ ಹರ್ಮನ್ ಮೋಗ್ಲಿಂಗ್

'ಮಂಗಳೂರು ಸಮಾಚಾರ'ದ ಸಂಪಾದಕರು ರೆವರೆಂಡ್ ಹರ್ಮನ್ ಮೋಗ್ಲಿಂಗ್. ಜರ್ಮನ್‌ನ ಮತ ಪ್ರಚಾರಕರಾದ ಇವರನ್ನು ಕನ್ನಡ ಪತ್ರಿಕೋದ್ಯಮದ ಮೂಲಪುರುಷ ಅಥವಾ ಪಿತಾಮಹ ಎಂದು ಕರೆಯಲಾಗುತ್ತದೆ. ಯುರೋಪಿಯನ್ ಪತ್ರಿಕೆಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಮೋಗ್ಲಿಂಗ್, 1840ರಲ್ಲಿ ಮಂಗಳೂರಿಗೆ ಬಂದ ನಂತರ ತುಳು, ಕೊಂಕಣಿ, ಕನ್ನಡ ಭಾಷೆಗಳನ್ನು ಕಲಿತರು. ಮಿಷನರಿಯಾಗಿದ್ದರೂ, ಸ್ಥಳೀಯ ಸಾಹಿತ್ಯ ಮತ್ತು ಶಿಕ್ಷಣದಲ್ಲಿ ಅವರು ತೀವ್ರ ಆಸಕ್ತಿ ತೋರಿಸಿದರು.

'ಮಂಗಳೂರು ಸಮಾಚಾರ'ದ ಪ್ರಕಟಣೆ ಮತ್ತು ಪ್ರಭಾವ

'ಮಂಗಳೂರು ಸಮಾಚಾರ'ವು ಆರಂಭದಲ್ಲಿ 8 ತಿಂಗಳ ಕಾಲ ಪಾಕ್ಷಿಕವಾಗಿ ಪ್ರಕಟವಾಯಿತು. ಇದು ಕಲ್ಲಚ್ಚಿನಲ್ಲಿ ಪ್ರಕಟವಾಗುತ್ತಿತ್ತು ಮತ್ತು ನಾಲ್ಕು ಪುಟಗಳನ್ನು ಒಳಗೊಂಡಿತ್ತು, ಅದರ ಬೆಲೆ ಕೇವಲ ಒಂದು ಪೈಸೆ. ಮೋಗ್ಲಿಂಗ್ ಅವರೇ ಸುದ್ದಿಗಳನ್ನು ಆಯ್ಕೆ ಮಾಡುತ್ತಿದ್ದರು. ಸ್ಥಳೀಯ, ಸರ್ಕಾರಿ ಅಧಿಸೂಚನೆಗಳು, ಕಾನೂನು ವಿಷಯಗಳು, ಹಾಡುಗಳು, ಕಥೆಗಳು, ಅಂತರರಾಜ್ಯ ವರ್ತಮಾನಗಳು, ಮತ್ತು ಓದುಗರ ವಾಣಿಗಳಂತಹ ವೈವಿಧ್ಯಮಯ ವಿಷಯಗಳನ್ನು ಈ ಪತ್ರಿಕೆ ಪ್ರಕಟಿಸುತ್ತಿತ್ತು. ಜನರಿಗೆ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಕೋರ್ಟ್ ಪ್ರಕರಣಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಹೆಚ್ಚಾಗಿ ಪ್ರಕಟಿಸಲಾಗುತ್ತಿತ್ತು. ನಂತರ, ಈ ಪತ್ರಿಕೆಯ ಹೆಸರನ್ನು 'ಕನ್ನಡ ಸಮಾಚಾರ' ಎಂದು ಬದಲಾಯಿಸಿ ಬಳ್ಳಾರಿಯಿಂದ ಪ್ರಕಟಿಸಲು ಪ್ರಾರಂಭಿಸಲಾಯಿತು.

ಮೋಗ್ಲಿಂಗ್‌ಗೆ ಗೌರವ ಡಾಕ್ಟರೇಟ್

ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ಮೋಗ್ಲಿಂಗ್ ನೀಡಿದ ಅನನ್ಯ ಕೊಡುಗೆಗಾಗಿ, ಟ್ಯೂಬಿಂಗೆನ್‌ನ ಎಬರ್‍ಹಾರ್ಡ್ ಕಾರ್ಲ್ಸ್ ವಿಶ್ವವಿದ್ಯಾನಿಲಯವು 1858ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಿತು. ಕನ್ನಡಕ್ಕಾಗಿ ಇಂತಹ ಗೌರವ ಪಡೆದ ಮೊದಲ ವ್ಯಕ್ತಿ ಇವರಾಗಿದ್ದರು.

ಆಧುನಿಕ ಪತ್ರಿಕೋದ್ಯಮದ ಬೆಳವಣಿಗೆ

'ಮಂಗಳೂರು ಸಮಾಚಾರ'ದೊಂದಿಗೆ ಆರಂಭವಾದ ಕನ್ನಡ ಪತ್ರಿಕಾರಂಗವು ಇಂದು ಆಧುನಿಕ ತಂತ್ರಜ್ಞಾನದೊಂದಿಗೆ ಅಗಾಧವಾಗಿ ಬೆಳೆದಿದೆ. ಈಗ ಅನೇಕ ಪತ್ರಿಕೆಗಳು, ಸ್ಯಾಟಲೈಟ್ ಚಾನೆಲ್‌ಗಳು, ಬಹುಭಾಷಾ ಪ್ರಾದೇಶಿಕ ಚಾನೆಲ್‌ಗಳು, ಆನ್‌ಲೈನ್ ಆವೃತ್ತಿಗಳು, ವೆಬ್‌ಸೈಟ್‌ಗಳು, ವೆಬ್ ಪತ್ರಿಕೆಗಳು, ಸಾಮಾಜಿಕ ಮಾಧ್ಯಮ (ಫೇಸ್‌ಬುಕ್, ವಾಟ್ಸಪ್), ಮತ್ತು ನೇರ ಪ್ರಸಾರ ನೀಡುವ ಸುದ್ದಿವಾಹಿನಿಗಳ ಮೂಲಕ ಮಾಧ್ಯಮವು ಕ್ಷಣಕ್ಷಣದ ಸುದ್ದಿಗಳನ್ನು ಜನರಿಗೆ ತಲುಪಿಸುತ್ತಿದೆ.

ಛಾಯಾಗ್ರಹಣ ಮತ್ತು ವ್ಯಂಗ್ಯಚಿತ್ರ

ಇಂದಿನ ದಿನಗಳಲ್ಲಿ ಪತ್ರಿಕೆಗಳು ಜೀವಂತಿಕೆಯನ್ನು ತಳೆಯುವುದು ಛಾಯಾಚಿತ್ರಗಳು ಮತ್ತು ವ್ಯಂಗ್ಯ ಚಿತ್ರಗಳ ಮೂಲಕ. ಸಾವಿರ ಪದಗಳಲ್ಲಿ ಹೇಳಬಹುದಾದ ವಿಷಯವನ್ನು ಒಂದು ಛಾಯಾಚಿತ್ರ ಪ್ರಭಾವಶಾಲಿಯಾಗಿ ಹೇಳಬಲ್ಲುದು.

ಹಾಗೆಯೇ ವ್ಯಂಗ್ಯಚಿತ್ರ ಕೂಡಾ ಅತ್ಯಂತ ಪರಿಣಾಮಕಾರಿಯಾಗಿ ರಾಜಕೀಯ, ಜನರ ಬದುಕು, ವರ್ತನೆ, ಮಾತುಗಳನ್ನು ಮೊನಚಾಗಿ ತಿವಿಯಬಲ್ಲುದು.

ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ತಮ್ಮ ಛಾಯಾಚಿತ್ರಗಳ ಮೂಲಕ ಬಹುರೂಪೀ ವಿದ್ಯಮಾನಗಳನ್ನು ದಾಖಲಿಸಿದ್ದಾರೆ. ವಿಧಾನಸಭಾ ಕಲಾಪ, ಪೊಲೀಸ್‌ ಗೋಲೀಬಾರ್‌, ವಾಹನಗಳಿಗೆ ಬೆಂಕಿ, ಜನರ ಅಭಿವ್ಯಕ್ತಿಗಳು – ಹೀಗೆ ಹತ್ತಾರು ಸಂದರ್ಭಗಳು ಅವರ ಕ್ಯಾಮರಾದಲ್ಲಿ ಸೆರೆಯಾಗಿದೆ. ಅವುಗಳ ಸುಂದರ ಕಂತು ಇಲ್ಲಿದೆ.

ಜುಲೈ 01ರ ಪತ್ರಿಕಾ ದಿನಕ್ಕಾಗಿ ವಿಶ್ವನಾಥ ಸುವರ್ಣ ಅವರು ಈ ಚಿತ್ರಗಳನ್ನು ಇಲ್ಲಿ ಒದಗಿಸಿದ್ದಾರೆ. ಸಮೀಪ ನೋಟಕ್ಕಾಗಿ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.










-ನೆತ್ರಕೆರೆ ಉದಯಶಂಕರ
 ಹಿಂದಿನ ಸುವರ್ಣ ನೋಟಗಳಿಗಾಗಿ
                                                            ಇಲ್ಲಿ ಕ್ಲಿಕ್‌ ಮಾಡಿರಿ   👉👉👉


No comments:

Advertisement