Thursday, November 26, 2026

ಹೀಟ್‌ ಬ್ಯಾಗಿನಿಂದ ಸಾವು: 17 ವರ್ಷದ ಬಳಿಕ ನ್ಯಾಯ

 ಹೀಟ್‌ ಬ್ಯಾಗಿನಿಂದ ಸಾವು: 17 ವರ್ಷದ ಬಳಿಕ ನ್ಯಾಯ

ಸೂರತ್‌ ಕೋರ್ಟ್‌ ಮಹತ್ವದ ತೀರ್ಪು

ಸಾಮಾನ್ಯ ಜ್ವರಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ಡಿನ ಖ್ಯಾತ ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ಅವರ ತಾಯಿ ಜೈತೂನ್ ಬೀಬಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೂರತ್ ನ್ಯಾಯಾಲಯ 2026 ನವೆಂಬರ್‌ 26ರ ಬುಧವಾರ ಮಹತ್ವದ ತೀರ್ಪು ನೀಡಿದೆ.

ಚಿಕಿತ್ಸೆಯಲ್ಲಿ ತೀವ್ರ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ವೈದ್ಯ ಡಾ. ಪರೇಶ್ ಭಜಿಯಾವಾಲಾ ಅವರನ್ನು ದೋಷಿ ಎಂದು ಪರಿಗಣಿಸಿರುವ ನ್ಯಾಯಾಲಯ, ಅವರಿಗೆ ಎರಡು ವರ್ಷಗಳ ಸೆರೆವಾಸದ ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಘಟನೆಯ ಹಿನ್ನೆಲೆ: 2009ರಲ್ಲಿ ಅಂದಿಗೆ 70 ವರ್ಷ ವಯಸ್ಸಾಗಿದ್ದ ಜೈತೂನ್ ಬೀಬಿ ಅವರು ಸಾಮಾನ್ಯ ಜ್ವರದ ಚಿಕಿತ್ಸೆಗಾಗಿ ಸೂರತ್ತಿನ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯ ಭಾಗವಾಗಿ ಅವರ ದೇಹದ ಮೇಲೆ ಹೀಟ್ ಬ್ಯಾಗ್ (ಶಾಖದ ಚೀಲ) ಇರಿಸಲಾಗಿತ್ತು. ವೈದ್ಯಕೀಯ ನಿಯಮಗಳ ಪ್ರಕಾರ ನಿಗದಿತ ಸಮಯದೊಳಗೆ ಆ ಹೀಟ್ ಬ್ಯಾಗನ್ನು ತೆಗೆಯಬೇಕಿತ್ತು. ಆದರೆ, ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರ ನಿರ್ಲಕ್ಷ್ಯದಿಂದಾಗಿ ಅದು ಇಡೀ ರಾತ್ರಿ ಅವರ ದೇಹದ ಮೇಲೆಯೇ ಉಳಿದುಕೊಂಡಿತ್ತು.

ದೀರ್ಘಕಾಲದವರೆಗೆ ಶಾಖ ತಗುಲಿದ್ದರಿಂದ ಜೈತೂನ್ ಬೀಬಿ ಅವರಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿದ್ದವು. ಪರಿಣಾಮವಾಗಿ, ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು.

17 ವರ್ಷಗಳ ಸುದೀರ್ಘ ಕಾನೂನು ಹೋರಾಟ: ತಮ್ಮ ತಾಯಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಇಸ್ಮಾಯಿಲ್ ದರ್ಬಾರ್ ಅವರ ಸಹೋದರಿ 2009ರಲ್ಲಿ ಸೂರತ್ತಿನ ಎಂಟನೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಳೆದ 17 ವರ್ಷಗಳಿಂದ ನ್ಯಾಯಾಲಯದಲ್ಲಿ ಸಾಕ್ಷ್ಯಗಳು ಮತ್ತು ಹೇಳಿಕೆಗಳ ಸುದೀರ್ಘ ವಿಚಾರಣೆ ನಡೆದಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ದೂರುದಾರರ ಪರ ವಕೀಲ ಕೇತನ್ ರೇಷಮ್ವಾಲಾ, "ಇದೊಂದು ಐತಿಹಾಸಿಕ ತೀರ್ಪು. ಸುದೀರ್ಘ ಕಾನೂನು ಹೋರಾಟಕ್ಕೆ ಇಂದು ನ್ಯಾಯ ಸಿಕ್ಕಿದೆ. ಚಿಕಿತ್ಸಾ ನಿಯಮಗಳನ್ನು ಉಲ್ಲಂಘಿಸಿ ನಿರ್ಲಕ್ಷ್ಯ ತೋರಿದ ವೈದ್ಯ ಡಾ. ಪರೇಶ್ ಭಜಿಯಾವಾಲಾ ಅವರಿಗೆ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ" ಎಂದು ತಿಳಿಸಿದ್ದಾರೆ.

No comments:

Advertisement