Tuesday, April 29, 2008

ಡಿ.ಡಿ, ಬ್ಯಾಂಕರ್ಸ್ ಚೆಕ್ ಮಾನ್ಯವಾಗಲಿಲ್ಲ..! (ಗ್ರಾಹಕ ಜಾಗೃತಿ)

ಡಿ.ಡಿ, ಬ್ಯಾಂಕರ್ಸ್ ಚೆಕ್ ಮಾನ್ಯವಾಗಲಿಲ್ಲ..!

ಬ್ಯಾಂಕು ನೀಡಿದ ಎರಡು ಡಿಮ್ಯಾಂಡ್ ಡ್ರಾಫ್ಟ್ ಬ್ಯಾಂಕರ್ಸ್ ಚೆಕ್ಗಳೂ 'ಸಹಿ ಪೂರ್ಣವಿಲ್ಲ, ಪಂಚಿಂಗ್ ಅಪೂರ್ಣ, ಜಂಟಿ ಸಹಿ ಅಗತ್ಯ' ಷರಾಗಳೊಂದಿಗೆ ವಾಪಸಾದವು... ಕಂಪೆನಿ ಅಗತ್ಯ ಉಪಕರಣ ಕಳುಹಿಸಲು ನಿರಾಕರಿಸಿತು...ನೆತ್ರಕೆರೆ ಉದಯಶಂಕರ


ಇಂದಿನ ಪರಿಸ್ಥಿತಿಯಲ್ಲಿ ಯಾರಿಗಾದರೂ ಹಣ ಕಳುಹಿಸಬೇಕಾಗಿದ್ದರೆ ಸುಲಭದ ವಿಧಾನ ಬ್ಯಾಂಕುಗಳಲ್ಲಿ ಡಿಮ್ಯಾಂಡ್ ಡ್ರಾಫ್ಟ್ (ಡಿ.ಡಿ)/ ಬ್ಯಾಂಕರ್ಸ್ ಚೆಕ್ ಪಡೆದು ಕಳುಹಿಸುವುದು. ಹೀಗೆ ಡಿ.ಡಿ. ನೀಡಲು ಬ್ಯಾಂಕುಗಳು ಸೂಕ್ತ ಕಮಿಷನ್ ಪಡೆಯುತ್ತವೆ. ಬ್ಯಾಂಕುಗಳು ನೀಡಿದ ಇಂತಹ ಡಿ.ಡಿ.ಗಳು ಮಾನ್ಯವಾಗದೆ ವಾಪಸಾದರೆ?

ಗ್ರಾಹಕ ಸಂರಕ್ಷಣಾ ಕಾಯ್ದೆ ನಿಮ್ಮ ನೆರವಿಗೆ ಬರುತ್ತದೆ. ಬಾಗಲಕೋಟೆಯ ಜಿಲ್ಲಾ ಗ್ರಾಹಕ ನ್ಯಾಯಾಲಯ ಇಂತಹ ಪ್ರಕರಣವೊಂದರಲ್ಲಿ ಗ್ರಾಹಕರೊಬ್ಬರಿಗೆ ನ್ಯಾಯ ದೊರಕಿಸಿದೆ.

ಈ ಪ್ರಕರಣದ ಅರ್ಜಿದಾರರು: ಮುಧೋಳ ತಾಲ್ಲೂಕು ಲೋಕಾಪುರದ ನಿವಾಸಿ, ಛಾಯಾಗ್ರಾಹಕ ಬಿ.ಎ. ಹುಣಸಿಕಟ್ಟಿ. ಪ್ರತಿವಾದಿಗಳು: (1) ಬಾಗಲಕೋಟೆ ಜಿಲ್ಲಾ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ಆಡಳಿತ ನಿರ್ದೇಶಕರು, ಬಾಗಲಕೋಟೆ ಮತ್ತು (2) ಬಾಗಲಕೋಟೆ ಜಿಲ್ಲಾ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ಶಾಖಾ ಮ್ಯಾನೇಜರ್, ಲೋಕಾಪುರ, ಮುಧೋಳ ತಾಲ್ಲೂಕು.

ಅರ್ಜಿದಾರ ಬಿ.ಎ. ಹುಣಸಿಕಟ್ಟಿ ಅವರು ಲೋಕಾಪುರದಲ್ಲಿ ಒಂದು ಗಣಕೀಕೃತ ಫೋಟೋ ಸ್ಟುಡಿಯೋ ಇಟ್ಟುಕೊಂಡಿದ್ದು, ಕೆಲವೊಂದು ಕಂಪ್ಯೂಟರ್ ಸಲಕರಣೆಗಳಿಗಾಗಿ ಮುಂಬೈಯ ರೊಲೆಕ್ಸ್ ಕಂಪ್ಯೂಟರ್ಸ್ ಸಂಸ್ಥೆಗೆ ಬೇಡಿಕೆ ಸಲ್ಲಿಸಿದರು. ಈ ಬೇಡಿಕೆ ಜೊತೆಗೆ ಎರಡನೇ ಪ್ರತಿವಾದಿಯಿಂದ 4150 ರೂಪಾಯಿಗಳ ಒಂದು ಡಿಮ್ಯಾಂಡ್ ಡ್ರಾಫ್ಟ್ ಬ್ಯಾಂಕರ್ಸ್ ಚೆಕ್ಕನ್ನು 7-6-2006ರಂದು ಪಡೆದು ಕಳುಹಿಸಿದ್ದರು. ಆದರೆ ರೊಲೆಕ್ಸ್ ಕಂಪ್ಯೂಟರ್ಸ್ ಸಂಸ್ಥೆಯು ಆ ಡಿ.ಡಿ.ಯನ್ನು ಬ್ಯಾಂಕಿಗೆ ಕಳುಹಿಸಿದಾಗ 'ಸಹಿ ಪೂರ್ಣವಿಲ್ಲ, ವ್ಯತ್ಯಾಸ ಇದೆ ಹಾಗೂ ಪಂಚಿಂಗ್ ಕೂಡಾ ಅಪೂರ್ಣ' ಎಂಬ ಷರಾದೊಂದಿಗೆ ವಾಪಸಾಯಿತು. ಹೀಗಾಗಿ ರೊಲೆಕ್ಸ್ ಸಂಸ್ಥೆಯು ಕಂಪ್ಯೂಟರ್ ಸಲಕರಣೆಗಳನ್ನು ಕಳುಹಿಸಿಕೊಡಲಿಲ್ಲ.

ಅರ್ಜಿದಾರರು ಈ ವಿಚಾರವನ್ನು ಎರಡನೇ ಪ್ರತಿವಾದಿಗೆ ತಿಳಿಸಿ, ಕಂಪ್ಯೂಟರ್ ಉಪಕರಣ ಬರದೇ ಇದ್ದುದರಿಂದ ತಮಗಾದ ನಷ್ಟದ ಬಗ್ಗೆ ವಿವರಿಸಿದರು. ಆಗ ಎರಡನೇ ಪ್ರತಿವಾದಿ ಇನ್ನೊಂದು ಬ್ಯಾಂಕರ್ಸ್ ಚೆಕ್ ಪಡೆದುಕೊಳ್ಳುವಂತೆ ಸಲಹೆ ಮಾಡಿದರು.

ಅರ್ಜಿದಾರರು 1-7-2006ರಂದು 4450 ರೂಪಾಯಿಗಳ ಇನ್ನೊಂದು ಬ್ಯಾಂಕರ್ಸ್ ಚೆಕ್ ಪಡೆದು ಮುಂಬೈಗೆ ಕಳುಹಿಸಿಕೊಟ್ಟರು. ಆದರೆ ಅದು ಕೂಡಾ 'ಜಂಟಿ ಸಹಿ ಬೇಕು' ಎಂಬ ಷರಾದೊಂದಿಗೆ ವಾಪಸಾಯಿತು.

ಈ ಎರಡು ಬ್ಯಾಂಕರ್ಸ್ ಚೆಕ್ಕುಗಳನ್ನು ನೀಡುವಾಗಲೂ ಎರಡನೇ ಪ್ರತಿವಾದಿ ಬ್ಯಾಂಕ್ ಅದಕ್ಕಾಗಿ ಕಮೀಷನ್ ಪಡೆದುಕೊಂಡಿತ್ತು. ಇದಲ್ಲದೇ ಎರಡು ಬಾರಿಯೂ ಬ್ಯಾಂಕರ್ಸ್ ಚೆಕ್ ನೀಡುವಾಗ ಬ್ಯಾಂಕ್ ವಹಿಸಿದ ನಿರ್ಲಕ್ಷ್ಯದ ಪರಿಣಾಮವಾಗಿ ಅದು ಅಮಾನ್ಯಗೊಂಡು ಅರ್ಜಿದಾರರು ವ್ಯವಹಾರದಲ್ಲಿ ತೀವ್ರ ನಷ್ಟ ಅನುಭವಿಸುವಂತಾಯಿತು.

ಹೀಗಾಗಿ ಅರ್ಜಿದಾರರು ಬಾಗಲಕೋಟೆ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದರು. ಅಗತ್ಯ ಕಂಪ್ಯೂಟರ್ ಉಪಕರಣಗಳು ಸಕಾಲದಲ್ಲಿ ಬಾರದೇ ಇದ್ದುದರಿಂದ ತಮಗೆ ವ್ಯವಹಾರದಲ್ಲಿ ಸುಮಾರು 60,000 ರೂಪಾಯಿ ನಷ್ಟವಾದುದರ ಜೊತೆಗೆ, ಆ ಉಪಕರಣಗಳನ್ನು ಹುಬ್ಬಳ್ಳಿಗೆ ಹೋಗಿ ತರಲೂ ಹಣ ವೆಚ್ಚ ಮಾಡಬೇಕಾಯಿತು, ಸಮಯವೂ ಹಾಳಾಯಿತು. ಡಿ.ಡಿ. ನೀಡಲು ಕಮೀಷನ್ ಪಡೆದು ಅವುಗಳನ್ನು ಸಮರ್ಪಕವಾಗಿ ನೀಡದೇ ಇದ್ದುದರಿಂದ ಉಂಟಾದ ಸೇವಾಲೋಪವೇ ತಮ್ಮ ನಷ್ಟಕ್ಕೆ ಕಾರಣ ಎಂದು ದೂರಿದ ಅರ್ಜಿದಾರರು ತಮಗೆ 60,000 ರೂಪಾಯಿಗಳ ಪರಿಹಾರ ಕೊಡಿಸಬೇಕು ಎಂದು ಪ್ರಾರ್ಥಿಸಿದರು.

ಅಧ್ಯಕ್ಷ ಎ.ಎಂ. ಪತ್ತಾರ, ಸದಸ್ಯರಾದ ಗಿರಿಜಾ ಆರ್. ಅಡಕೆನ್ನವರ ಮತ್ತು ಡಾ. ಉದಯ ಎಸ್. ಹೆರೆಂಜಲ್ ಅವರನ್ನು ಒಳಗೊಂಡ ಪೀಠವು ಅರ್ಜಿದಾರರ ಪರ ವಕೀಲ ಎನ್. ಎಲ್. ಬಟಕುರ್ಕಿ, ಪ್ರತಿವಾದಿ ಪರ ವಕೀಲರಾದ ಎಂ. ಎಸ್. ಹುಯಿಲಗೋಳ ಅವರ ಅಹವಾಲುಗಳನ್ನು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.

ಅರ್ಜಿದಾರರು ಡಿ.ಡಿ. ಮಾನ್ಯವಾಗದೇ ವಾಪಸ್ ಬಂದದ್ದನ್ನು ತಮಗೆ ತಿಳಿಸಿರಲಿಲ್ಲ, ಎರಡನೇ ಪ್ರತಿವಾದಿಗೆ ಬರೆದ ಪತ್ರದಲ್ಲಿ ತಮಗೆ 600 ರೂಪಾಯಿ ವೆಚ್ಚವಾಗಿದೆ ಎಂದು ತಿಳಿಸಿದ್ದರು ಎಂದು ಪ್ರತಿಪಾದಿಸಿದ ಎರಡನೇ ಪ್ರತಿವಾದಿಯು, ಅರ್ಜಿದಾರರು ಕೋರಿರುವಷ್ಟು ಪರಿಹಾರ ನೀಡಲು ಸಾಧ್ಯವಿಲ್ಲ, ಡಿ.ಡಿ.ಗಳಿಗೆ ಎರಡು ಸಹಿಗಳ ಅಗತ್ಯ ಇಲ್ಲ, ಸಂಬಂಧಪಟ್ಟವರ ಸಹಿ ಮಾತ್ರ ಹಾಕಲಾಗುತ್ತದೆ. ಆದ್ದರಿಂದ ಅರ್ಜಿಯನ್ನು ವಜಾ ಮಾಡಬೇಕು ಎಂದು ಮನವಿ ಮಾಡಿದರು.

ಡಿ.ಡಿ.ಗಳನ್ನು ಪರಿಶೀಲಿಸಿದಾಗ ಎರಡರಲ್ಲೂ ಇಬ್ಬರ ಸಹಿ ಇಲ್ಲದೇ ಇರುವುದು, ಸರಿಯಾಗಿ ಪಂಚ್ ಮಾಡದೇ ಇರುವುದು ಸ್ಪಷ್ಟವಾಗುತ್ತದೆ. ಸಂಬಂಧಪಟ್ಟವರ ಸಹಿಯಷ್ಟೇ ಸಾಕು ಎಂಬ ವಾದ ಮುಂದಿಟ್ಟ ಪ್ರತಿವಾದಿಗಳು ಅದನ್ನು ಸಾಬೀತು ಪಡಿಸುವ ದಾಖಲೆ ಸಲ್ಲಿಸಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿತು.

ಎರಡೂ ಡಿ.ಡಿ.ಗಳು ವಾಪಸ್ ಬಂದದ್ದು ಎರಡನೇ ಪ್ರತಿವಾದಿಯ ತಪ್ಪಿನಿಂದ ಹೊರತು ಅರ್ಜಿದಾರರ ಲೋಪದಿಂದ ಅಲ್ಲ., ಡಿ.ಡಿ. ವಾಪಸ್ ಬಂದ ಬಗ್ಗೆ ವಕೀಲರ ಮುಖಾಂತರ ನೀಡಲಾದ ನೋಟಿಸಿನಲ್ಲಿ ಗಮನ ಸೆಳೆದುದನ್ನು ಋಜುವಾತುಪಡಿಸುವ ಅಂಚೆ ದಾಖಲೆಗಳನ್ನು ಅರ್ಜಿದಾರರು ಹಾಜರು ಪಡಿಸಿದ್ದನ್ನೂ ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು. ಡಿ.ಡಿ.ಗಳು ಅಮಾನ್ಯಗೊಂಡ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ ಎಂದು ವಾದಿಸಿದ ಪ್ರತಿವಾದಿಗಳು ಅದನ್ನು ಸಾಬೀತು ಪಡಿಸುವ ದಾಖಲೆ ಸಲ್ಲಿಸಿಲ್ಲ ಎಂದೂ ನ್ಯಾಯಾಲಯ ಹೇಳಿತು.

ತಮಗೆ 60,000 ರೂಪಾಯಿ ನಷ್ಟವಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದರೂ ಅದನ್ನು ಸಾಬೀತು ಪಡಿಸುವ ದಾಖಲೆಗಳನ್ನು ಅರ್ಜಿದಾರರೂ ಸಲ್ಲಿಸಿಲ್ಲ. ಆದರೂ ಎರಡನೇ ಪ್ರತಿವಾದಿ ಎರಡು ಬಾರಿ ವಹಿಸಿದ ನಿರ್ಲಕ್ಷ್ಯದಿಂದ ಆರ್ಥಿಕ ನಷ್ಟ ಹಾಗೂ ಮಾನಸಿಕ ನೋವು ಅನುಭವಿಸಿರುವುದು ದಿಟ ಎಂದು ಎಂದು ಹೇಳಿದ ನ್ಯಾಯಾಲಯ, ಅರ್ಜಿದಾರರು ಪರಿಹಾರಕ್ಕೆ ಅರ್ಹರು ಎಂದು ಅಭಿಪ್ರಾಯ ವ್ಯಕ್ತ ಪಡಿಸಿತು.

ಈ ಹಿನ್ನೆಲೆಯಲ್ಲಿ ಅರ್ಜಿದಾರರ ದೂರನ್ನು ಭಾಗಶಃ ಅಂಗೀಕರಿಸಿದ ನ್ಯಾಯಾಲಯ ಅಮಾನ್ಯಗೊಂಡ ಎರಡೂ ಡಿ.ಡಿ.ಗಳನ್ನು ವಾಪಸ್ ಪಡೆದು 8600 ರೂಪಾಯಿಗಳನ್ನು 5000 ರೂಪಾಯಿಗಳ ಪರಿಹಾರ ಮತ್ತು 2000 ರೂಪಾಯಿಗಳ ಖಟ್ಲೆ ವೆಚ್ಚ ಸಹಿತವಾಗಿ ಅರ್ಜಿದಾರರಿಗೆ ಮರುಪಾವತಿ ಮಾಡಬೇಕು ಎಂದು ಎರಡನೇ ಪ್ರತಿವಾದಿಗೆ ಆದೇಶ ನೀಡಿತು.

No comments:

Advertisement