Wednesday, April 30, 2008

ಇಂದಿನ ಇತಿಹಾಸ History Today ಏಪ್ರಿಲ್ 30

ಇಂದಿನ ಇತಿಹಾಸ

ಏಪ್ರಿಲ್ 30

ಜಗತ್ತಿನ ಅರ್ಧದಷ್ಟು ಭಾಗಕ್ಕೆ ಪೆಗಾಸಸ್ ಮೈನೈರ್ ಜಿಟಿ 450 ಮೈಕ್ರೋಲೈಟ್ ವಿಮಾನದ ಮೂಲಕ ಸುತ್ತು ಹಾಕುವ ಮೂಲಕ ವಿಶ್ವದಾಖಲೆ ನಿರ್ಮಿಸಿದ ಬ್ರಿಟನ್ನಿನ ಅಂಧ ವಿಮಾನಯಾನಿ ಮೈಲ್ಸ್ ಹಿಲ್ಟನ್ ಬಾರ್ಬರ್ ತನ್ನ ಸಹ ಚಾಲಕ ರಿಚರ್ಡ್ ಮೆರೆಡಿತ್ ಹಾರ್ಡಿ ಜೊತೆಗೆ ಸಿಡ್ನಿಯ ಬ್ಯಾಂಕ್ಸ್ ಟೌನ್ ವಿಮಾನ ನಿಲ್ದಾಣಕ್ಕೆ ವಾಪಸಾದರು. ಮಾರ್ಚ್ 7ರಂದು ಲಂಡನ್ ಸಮೀಪದ ಬ್ರಿಗ್ಗಿನ್ ಹಿಲ್ ಏರ್ ಫೀಲ್ಡ್ ನಿಂದ 55 ದಿನಗಳ ತಮ್ಮ ಯಾನ ಆರಂಭಿಸಿದ್ದ ಅವರು ವಿಶ್ವದ 21 ರಾಷ್ಟ್ರಗಳ ಮೇಲೆ ಹಾರಾಡಿದರು.

2007: ದೇಶದಲ್ಲಿ ಇದೇ ಪ್ರಪ್ರಥಮ ಬಾರಿಗೆ ಮಹಿಳಾ ನೌಕರರನ್ನು ರಾತ್ರಿ ವೇಳೆಯಲ್ಲಿ ದುಡಿಸಿಕೊಳ್ಳುವುದನ್ನು ನಿಷೇಧಿಸಲು ರಾಜ್ಯ ಸರ್ಕಾರವು ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ- 1961ಕ್ಕೆ ತಿದ್ದುಪಡಿ ಮಾಡಿತು. ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 2007ನ್ನು ರಾಜ್ಯಪಾಲರ ಒಪ್ಪಿಗೆ ಪಡೆದ ಬಳಿಕ ಈದಿನ ರಾಜ್ಯಪತ್ರದಲ್ಲಿ (ಗೆಜೆಟ್) ಇದನ್ನು ಪ್ರಕಟಿಸಲಾಯಿತು. ಕಾನೂನು 15 ದಿನಗಳಲ್ಲಿ ಜಾರಿಗೆ ಬರುವುದು. ರಾತ್ರಿ ವೇಳೆ ಮಹಿಳೆಯನ್ನು ದುಡಿಸಿಕೊಳ್ಳುವುದು ಅಪರಾಧ ಎಂಬ ಕಾನೂನು ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಪ್ರಥಮ ರಾಜ್ಯವಾಗಲಿದ್ದು, ಕಾಯ್ದೆ ಜಾರಿಯ ಬಳಿಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಯ ಅಡಿಯಲ್ಲಿ ಬರುವ ಅಂಗಡಿ, ವಾಣಿಜ್ಯ ಸಂಸ್ಥೆಗಳಲ್ಲಿ ಮಹಿಳಾ ನೌಕರರು ರಾತ್ರಿ 8 ಗಂಟೆಯ ಬಳಿಕ ದುಡಿಯವಂತಿಲ್ಲ. ಮುದ್ರಣ ಮಾಧ್ಯಮ, ಖಾಸಗಿ ಸಂಸ್ಥೆಗಳು, ಕಚೇರಿಗಳು, ಹೋಟೆಲುಗಳು ಮತ್ತು ಮನರಂಜನಾ ಸಂಸ್ಥೆಗಳಲ್ಲಿ ರಾತ್ರಿ 8 ಗಂಟೆ ಬಳಿಕ ಮಹಿಳೆಯರನ್ನು ದುಡಿಸಿಕೊಂಡರೆ ಅಪರಾಧವಾಗುತ್ತದೆ. ಕಾನೂನು ಉಲ್ಲಂಘನೆಗೆ 6 ತಿಂಗಳು ಶಿಕ್ಷೆ, 10ರಿಂದ 20ಸಾವಿರ ರೂ ದಂಡ ವಿಧಿಸಬಹುದಾಗಿದೆ. ಐಟಿ ಮತ್ತು ಬಿಟಿ ಕ್ಷೇತ್ರವು 2002ರಲ್ಲೇ ರಿಯಾಯ್ತಿ ಪಡೆದ ಕಾರಣ ಈ ಕ್ಷೇತ್ರವನ್ನು ಕಾಯ್ದೆಯಿಂದ ಹೊರಗಿಡಲಾಯಿತು.

2007: ಕರ್ನಾಟಕದ 10 ಜಿಲ್ಲೆಗಳ 68 ತಾಲ್ಲೂಕುಗಳ ಆಯ್ದ ಹೋಬಳಿಗಳಲ್ಲಿ ಹವಾಮಾನ ಅಧಾರಿತ ಕೃಷಿ ವಿಮೆ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿತು. ಕರ್ನಾಟಕವಲ್ಲದೆ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿಈ ಯೋಜನೆ ಪ್ರಾಯೋಗಿಕವಾಗಿ ಜಾರಿಗೊಳ್ಳುವುದು.

2007: ಜಗತ್ತಿನ ಅರ್ಧದಷ್ಟು ಭಾಗಕ್ಕೆ ಪೆಗಾಸಸ್ ಮೈನೈರ್ ಜಿಟಿ 450 ಮೈಕ್ರೋಲೈಟ್ ವಿಮಾನದ ಮೂಲಕ ಸುತ್ತು ಹಾಕುವ ಮೂಲಕ ವಿಶ್ವದಾಖಲೆ ನಿರ್ಮಿಸಿದ ಬ್ರಿಟನ್ನಿನ ಅಂಧ ವಿಮಾನಯಾನಿ ಮೈಲ್ಸ್ ಹಿಲ್ಟನ್ ಬಾರ್ಬರ್ ತನ್ನ ಸಹ ಚಾಲಕ ರಿಚರ್ಡ್ ಮೆರೆಡಿತ್ ಹಾರ್ಡಿ ಜೊತೆಗೆ ಸಿಡ್ನಿಯ ಬ್ಯಾಂಕ್ಸ್ ಟೌನ್ ವಿಮಾನ ನಿಲ್ದಾಣಕ್ಕೆ ವಾಪಸಾದರು. ಮಾರ್ಚ್ 7ರಂದು ಲಂಡನ್ ಸಮೀಪದ ಬ್ರಿಗ್ಗಿನ್ ಹಿಲ್ ಏರ್ ಫೀಲ್ಡ್ ನಿಂದ 55 ದಿನಗಳ ತಮ್ಮ ಯಾನ ಆರಂಭಿಸಿದ್ದ ಅವರು ವಿಶ್ವದ 21 ರಾಷ್ಟ್ರಗಳ ಮೇಲೆ ಹಾರಾಡಿದರು.

2006: ಆಫ್ಘಾನಿಸ್ಥಾನದ ತಾಲೀಬಾನ್ ಉಗ್ರರು ತಾವು ಅಪಹರಿಸಿ ಒತ್ತೆ ಇಟ್ಟುಕೊಂಡಿದ್ದ ಭಾರತದ ಹೈದರಾಬಾದ್ ಮೂಲದ ದೂರಸಂಪರ್ಕ ಎಂಜಿನಿಯರ್ ಕೆ. ಸೂರ್ಯನಾರಾಯಣ (41) ಅವರನ್ನು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬರ್ಬರವಾಗಿ ಕೊಂದುಹಾಕಿದರು. ಅಪಹರಣಗೊಂಡಿದ್ದ ಸ್ಥಳಕ್ಕೆ ಅತಿ ಸಮೀಪದಲ್ಲೇ ಈ ಕೃತ್ಯ ನಡೆಯಿತು. ಜಬುಲ್ ಪ್ರಾಂತ್ಯದ ಕ್ವಾಲತ್ ಹಾಗೂ ಘಜ್ನಿ ಮಧ್ಯೆ ಹಳ್ಳವೊಂದರಲ್ಲಿ ಸೂರ್ಯನಾರಾಯಣ ಅವರ ರುಂಡವಿಲ್ಲದ ದೇಹ ಬೆಳಿಗ್ಗೆ ಪತ್ತೆಯಾಗಿ ಅವರ ಹತ್ಯೆ ಘಟನೆ ಬೆಳಕಿಗೆ ಬಂತು. ಸೂರ್ಯನಾರಾಯಣ ಅವರು ಬಹರೇನ್ ಮೂಲದ ಅಲ್- ಮೊಯ್ಡ್ ಕಂಪನಿಗಾಗಿ ಕೆಲಸ ಮಾಡುತಿದ್ದು, ಈ ಕಂಪನಿ ಆಘ್ಘಾನಿಸ್ಥಾನದ ಟೆಲಿಕಾಂ ಕಂಪನಿಗಾಗಿ ಕೆಲಸ ಮಾಡುತ್ತಿತ್ತು. ಉಗ್ರರು ಮೇ 28ರಂದು ಸೂರ್ಯನಾರಾಯಣ ಅವರನ್ನು ಅಪಹರಿಸಿದ್ದರು.

1993: ಮಹಿಳಾ ಟೆನಿಸ್ ಪಟು ಮೋನಿಕಾ ಸೆಲೆಸ್ ಗೆ ಜರ್ಮನಿಯ ಹ್ಯಾಂಬರ್ಗಿನಲ್ಲಿ ಟೆನಿಸ್ ಪಂದ್ಯ ನಡೆಯುತ್ತಿದ್ದಾಗ ವ್ಯಕ್ತಿಯೊಬ್ಬ ಹಿಂದಿನಿಂದ ಚೂರಿ ಹಾಕಿದ. ಮೋನಿಕಾ ವಿರುದ್ಧ ಸೆಣಸುತ್ತಿದ್ದ ಸ್ಟೆಫಿ ಗ್ರಾಫ್ ಅಭಿಮಾನಿ ತಾನೆಂದು ಹೇಳಿಕೊಂಡ ಆ ವ್ಯಕ್ತಿಯನ್ನು ನಂತರ ದಂಡನೆಗೆ ಗುರಿಪಡಿಸಲಾಯಿತು.

1945: ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಮತ್ತು ಆತನ ಪತ್ನಿ ಇವಾ ಬ್ರೌನ್ ಬರ್ಲಿನ್ನಿನ ಚಾನ್ಸಲರಿ ಕಟ್ಟಡದ ತಳಭಾಗದ ಬಂಕರಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು.

1944: ಖ್ಯಾತ ನೃತ್ಯಪಟು ಸೋನಾಲ್ ಮಾನ್ ಸಿಂಗ್ ಹುಟ್ಟಿದ ದಿನ. ಇವರು ಭರತನಾಟ್ಯ, ಕೂಚಿಪುಡಿ ಮತ್ತು ಒಡಿಸ್ಸಿ ನೃತ್ಯಗಳಲ್ಲಿ ಪ್ರಾವೀಣ್ಯ ಪಡೆದಿರುವ ವ್ಯಕ್ತಿ.

1927: ಎಂ. ಫಾತಿಮಾ ಬೀವಿ ಜನ್ಮದಿನ. ಇವರು ಭಾರತದ ಸುಪ್ರೀಂಕೋರ್ಟ್ ನ್ಯಾಯಾಧೀಶಕ್ಕೆ ಸ್ಥಾನಕ್ಕೆ ಏರಿದ ಮೊತ್ತ ಮೊದಲ ಭಾರತೀಯ ಮಹಿಳೆ.

1870: ಚಲನಚಿತ್ರ ನಿರ್ದೇಶಕ ಧುಂಡಿರಾಜ್ ಗೋವಿಂದ್ `ದಾದಾಸಾಹೇಬ್' ಫಾಲ್ಕೆ (1870-1944) ಜನ್ಮದಿನ. ಭಾರತೀಯ ಚಿತ್ರೋದ್ಯಮದ ಜನಕ ಎಂದೇ ಖ್ಯಾತರಾದ ಇವರು ಭಾರತದ ಮೊತ್ತ ಮೊದಲ ಮೂಕಿ ಚಿತ್ರ `ರಾಜಾ ಹರಿಶ್ಚಂದ್ರ'ವನ್ನು ನಿರ್ಮಿಸಿದರು.

1789: ಜಾರ್ಜ್ ವಾಷಿಂಗ್ಟನ್ ಅವರು ಅಮೆರಿಕದ ಪ್ರಪ್ರಥಮ ಅಧ್ಯಕ್ಷರಾದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement