Sunday, April 20, 2008

ಇಂದಿನ ಇತಿಹಾಸ History Today ಏಪ್ರಿಲ್ 20

ಇಂದಿನ ಇತಿಹಾಸ

ಏಪ್ರಿಲ್ 20

ಅಸಾಧಾರಣ ಸಾಹಿತ್ಯ ವ್ಯಕ್ತಿತ್ವ ಎಂದು ಗೌರವಿಸಿ ಕನ್ನಡದ ಖ್ಯಾತ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರಿಗೆ `ಎನ್. ಟಿ. ರಾಮರಾವ್ (ಎನ್ ಟಿ ಆರ್) ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ನೀಡಲು ಹೈದರಾಬಾದಿನ ಎನ್ ಟಿ ಆರ್ ವಿಜ್ಞಾನ ಟ್ರಸ್ಟ್ ತೀರ್ಮಾನಿಸಿತು. ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಟಿ. ರಾಮರಾವ್ ಅವರ ಪತ್ನಿ ಲಕ್ಷ್ಮಿ ಪಾರ್ವತಿ ಅಧ್ಯಕ್ಷತೆಯ ಈ ಟ್ರಸ್ಟಿನ ಈ ಚೊಚ್ಚಲ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದನ್ನು ಒಳಗೊಂಡಿದೆ.


2007: ಬಾಲಿವುಡ್ ನ ಜನಪ್ರಿಯ ತಾರೆಗಳಾದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರು ಈದಿನ ಸಂಜೆ ಮುಂಬೈಯಲ್ಲಿ ನಡೆದ ವರ್ಣರಂಜಿತ ಖಾಸಗಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಅಡಿ ಇಟ್ಟರು. ಇದರೊಂದಿಗೆ ಬಹು ನಿರೀಕ್ಷಿತ, ಭಾರಿ ಪ್ರಚಾರ ಗಿಟ್ಟಿಸಿಕೊಂಡ್ದಿದ ಬಾಲಿವುಡ್ ವಲಯದ `ಬಹುದೊಡ್ಡ ಮದುವೆ' ಸಡಗರದೊಂದಿಗೆ ಈಡೇರಿತು. ವರ್ಷದ ಮದುವೆ ಎಂದೇ ಬಿಂಬಿತವಾದ ಈ ಸಮಾರಂಭದಲ್ಲಿ ಅಭಿಷೇಕ್ (31) ಮತ್ತು ಐಶ್ವರ್ಯ (33) ಉತ್ತರ ಭಾರತದ ಸಂಪ್ರದಾಯದಂತೆ ಪರಸ್ಪರ ಹಾರ ಬದಲಾಯಿಸುವ ಮೂಲಕ ಸತಿ ಪತಿಯಾದರು. ಅಮಿತಾಭ್ ಮತ್ತು ಜಯಾ ಬಚ್ಚನ್ ಕುಟುಂಬದ ಮನೆ `ಪ್ರತೀಕ್ಷಾ'ದಲ್ಲಿ ಈ ಸಮಾರಂಭ ನೆರವೇರಿತು. ವಾರಣಾಸಿಯಿಂದ ಬಂದ ಅರ್ಚಕರು ವಿವಾಹ ವಿಧಿಗಳನ್ನು ನೆರವೇರಿಸಿದರು. ಏಪ್ರಿಲ್ 18ರ ರಾತ್ರಿ `ಸಂಗೀತ ಸಮಾರಂಭ'ದೊಂದಿಗೆ ಆರಂಭವಾಗಿ 19ರಂದು ಸಾಂಪ್ರದಾಯಿಕ `ಮೆಹಂದಿ' ಕಾರ್ಯಕ್ರಮದೊಂದಿಗೆ ಮುಂದುವರೆದ ಮದುವೆ ಸಡಗರಕ್ಕೆ `ಅಕ್ಷಯ ತೃತೀಯಾ'ದ ಪವಿತ್ರ ದಿನವಾದ ಈದಿನ ವಿವಾಹ ಸಮಾರಂಭದ ಕ್ಲೈಮಾಕ್ಸಿನೊಂದಿಗೆ, ತೆರೆ ಬಿದ್ದಿತು. (ನೆನಪಿಡಬೇಕಾದ ಸಂಗತಿ: ವರ್ಷದ ಹಿಂದೆ ಏಪ್ರಿಲ್ 19ರಂದು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಭೂತನಾಥ ದೇಗುಲದಲ್ಲಿ `ಗುರು' ಚಿತ್ರಕ್ಕಾಗಿ ಇವರಿಬ್ಬರ ಅದ್ಧೂರಿ ಮದುವೆ ನಡೆದಿತ್ತು!)

2007: ಅಸಾಧಾರಣ ಸಾಹಿತ್ಯ ವ್ಯಕ್ತಿತ್ವ ಎಂದು ಗೌರವಿಸಿ ಕನ್ನಡದ ಖ್ಯಾತ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರಿಗೆ `ಎನ್. ಟಿ. ರಾಮರಾವ್ (ಎನ್ ಟಿ ಆರ್) ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ನೀಡಲು ಹೈದರಾಬಾದಿನ ಎನ್ ಟಿ ಆರ್ ವಿಜ್ಞಾನ ಟ್ರಸ್ಟ್ ತೀರ್ಮಾನಿಸಿತು. ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಟಿ. ರಾಮರಾವ್ ಅವರ ಪತ್ನಿ ಲಕ್ಷ್ಮಿ ಪಾರ್ವತಿ ಅಧ್ಯಕ್ಷತೆಯ ಈ ಟ್ರಸ್ಟಿನ ಈ ಚೊಚ್ಚಲ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದನ್ನು ಒಳಗೊಂಡಿದೆ.

2007: ಶಿವಮೊಗ್ಗ ಜಿಲ್ಲೆ ಹೊಸನಗರದ ರಾಮಚಂದ್ರಾಪುರ ಮಠದ ವಿಶ್ವ ಗೋ ಸಮ್ಮೇಳನದ ಆವರಣದಲ್ಲಿ ಎತ್ತಿನಗಾಡಿ ಸವಾರಿ ಮಾಡುವ ಮೂಲಕ ಖ್ಯಾತ ಹಿಂದಿ ಚಿತ್ರನಟ ವಿವೇಕ್ ಒಬೆರಾಯ್ ಎತ್ತಿನಗಾಡಿ ಪರಿಕ್ರಮ ಪಥಕ್ಕೆ ಚಾಲನೆ ನೀಡಿದರು.

2006: ಭಾರತದ ಜಾರ್ಖಂಡಿನ ರಾಂಚಿಯ ಹುಡುಗ ಸ್ಫೋಟಕ ಹೊಡೆತಗಳ ಆಟಗಾರ ಮಹೇಂದ್ರ ಸಿಂಗ್ ದೋನಿ ರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಕೇವಲ 16 ತಿಂಗಳಿನಲ್ಲಿಯೇ ವಿಶ್ವದ ನಂಬರ್ ಒನ್ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂತರರಾಷ್ಟ್ರೀಯ ಕ್ರೆಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿದ ಹೊಸದಾದ ಏಕದಿನ ರ್ಯಾನ್ಕಿಂಗ್ ಪಟ್ಟಿಯಲ್ಲಿ ವಿಕೆಟ್ ಕೀಪರ್- ಬ್ಯಾಟ್ಸ್ ಮನ್ ದೋನಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಟಿಂಗ್ ಅವರನ್ನು ಹಿಂದಕ್ಕೆ ತಳ್ಳಿದರು.

2006: ದೆಹಲಿಯ ಮಾಜಿ ಮುಖ್ಯಮಂತ್ರಿ ಮದನ್ ಲಾಲ್ ಖುರಾನಾ ಬಿಜೆಪಿಗೆ ರಾಜೀನಾಮೆ ಕೊಡುವ ಮೂಲಕ ಆ ಪಕ್ಷದ ಜೊತೆಗಿನ ತಮ್ಮ ಬಾಂಧವ್ಯವನ್ನು ಕಡಿದುಕೊಂಡರು.

2006: ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ 2005ನೇ ಸಾಲಿನ ಗೌರವ ಪ್ರಶಸ್ತಿಗಳು ಪ್ರಕಟಗೊಂಡವು. ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ತುಳು ಸಾಹಿತ್ಯ ಮತ್ತು ಸಂಶೋಧನೆ, ವಿ.ಜಿ. ಪಾಲ್ ಅವರು ತುಳು ನಾಟಕ, ಚಲನಚಿತ್ರ, ಐತಪ್ಪ ಮೂರುಪಂಬದ ಅವರು ತುಳು ಜಾನಪದ ಪ್ರಶಸ್ತಿಗೆ ಆಯ್ಕೆಯಾದರು.

2006: ಸುಮಾರು ಒಂದು ದಶಕದಿಂದ ಕಾನೂನು ತೊಡಕುಗಳಲ್ಲಿ ಸಿಲುಕಿ ಕುಂಟುತ್ತಾ ಸಾಗಿದ್ದ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಕಾರಿಡಾರ್ ಯೋಜನೆಯ ಹಾದಿಯನ್ನು ಸುಪ್ರೀಂಕೋರ್ಟ್ ಸುಗಮಗೊಳಿಸಿತು. ಈ ಸಂಬಂಧ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನೇ ಎತ್ತಿ ಹಿಡಿದ ಸುಪ್ರೀಂಕೋರ್ಟ್ ನೈಸ್ ಕಂಪೆನಿಯ ವ್ಯಾಜ್ಯವೆಚ್ಚ ಐದು ಲಕ್ಷ ರೂಪಾಯಿಗಳನ್ನು ಭರಿಸಿಕೊಡುವಂತೆಯೂ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿತು.

1961: ಕಲಾವಿದ ಮುರಳಿ ವಿ. ಜನನ.

1960: ಏರ್ ಇಂಡಿಯಾ ಸಂಸ್ಥೆಯು ಜೆಟ್ ಯುಗವನ್ನು ಪ್ರವೇಶಿಸಿತು. ಸಂಸ್ಥೆಯ `ಗೌರಿಶಂಕರ' ಬೋಯಿಂಗ್ 707ರ ಸೇವೆಯನ್ನು ಲಂಡನ್ನಿನಲ್ಲಿ ಮೊತ್ತ ಮೊದಲ ಬಾರಿಗೆ ಆರಂಭಿಸಲಾಯಿತು.

1950: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜನ್ಮದಿನ.

1947: ಕಲಾವಿದೆ ವಸಂತ ಮಾಧವಿ ಜನನ.

1942: ರಂಗಭೂಮಿ, ಕಿರುತೆರೆ, ದಕ್ಷಿಣ ಭಾರತದ ಹಿರಿತೆರೆಗಳಲ್ಲಿ ತಮ್ಮ ನಟನೆಯಿಂದ ಪ್ರಖ್ಯಾತರಾಗಿರುವ ಎಚ್. ಜಿ. ದತ್ತಾತ್ರೇಯ `ದತ್ತಣ್ಣ' ಅವರು ಹರಿಹರ ಗುಂಡೂರಾಯರು- ವೆಂಕಮ್ಮ ದಂಪತಿಯ ಮಗನಾಗಿ ಚಿತ್ರದುರ್ಗದಲ್ಲಿ ಜನಿಸಿದರು.

1942: ಕಲಾವಿದ ಪುಂಚಿತ್ತಾಯ ಪಿ.ಎಸ್. ಜನನ.

1940: ಕಲಾವಿದ ವಿ. ಕೃಷ್ಣಮೂರ್ತಿ ಜನನ.

1924: ಕಲಾವಿದ ರಾಮಸ್ವಾಮಿ ಎಚ್. ಟಿ. ಜನನ.

1889: ಅಡಾಲ್ಫ್ ಹಿಟ್ಲರ್ ಜನ್ಮದಿನ. ಜರ್ಮನಿಯ ನಾತ್ಸಿ ಸರ್ವಾಧಿಕಾರಿಯಾದ ಈತ ಆಸ್ಟ್ರಿಯಾ- ಹಂಗೆರಿಯ ಬ್ರೌನವು- ಆಮ್- ಇನ್ ಎಂಬ ಸ್ಥಳದಲ್ಲಿ ಹುಟ್ಟಿದ. ಲಕ್ಷಾಂತರ ಯಹೂದಿಗಳ ಕಗ್ಗೊಲೆಗೆ ಕಾರಣನಾದ. ತನ್ನ ರಾಷ್ಟ್ರವನ್ನು ಎರಡನೇ ಜಾಗತಿಕ ಸಮರದತ್ತ ಮುನ್ನಡೆಸಿದ.

1862: ಲೂಯಿ ಪ್ಯಾಶ್ಚರ್ ಮತ್ತು ಕ್ಲಾರ್ಡ್ ಬರ್ನಾರ್ಡ್ ಪ್ಯಾಶ್ಚರೀಕರಣದ ಮೊದಲ ಪರೀಕ್ಷೆಯನ್ನು ಪೂರ್ಣಗೊಳಿಸಿದರು. 48 ದಿನಗಳ ಕಾಲ ಮುಚ್ಚಿಡಲಾಗಿದ್ದ ಬಾಟಲಿಗಳನ್ನು ಫ್ರೆಂಚ್ ವಿಜ್ಞಾನ ಅಕಾಡೆಮಿಯ ಸಭೆಯೊಂದರ್ಲಲಿ ತೆರೆಯಲಾಯಿತು. ಆ ಬಾಟಲಿಗಳಲ್ಲಿ ನಾಯಿಯ ರಕ್ತ ಹಾಗೂ ಮೂತ್ರವನ್ನು ತುಂಬಿಸಿ 30 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿ ಇಡಲಾಗಿತ್ತು. ಈ ಅವಧಿಯಲ್ಲಿ ಅವು ಕೆಟ್ಟಿರಲಿಲ್ಲ. ಇದರಿಂದ ಸೂಕ್ಷ್ಮಜೀವಿಗಳು ಸಾಯುವಷ್ಟು ಉಷ್ಣತೆಯಲ್ಲಿ ಆಹಾರವನ್ನು ಇರಿಸಿ ಕೆಡದಂತೆ ರಕ್ಷಿಸಿ ಇಡುವ ಸಾಧ್ಯತೆ ಪತ್ತೆಯಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement