My Blog List

Monday, April 21, 2008

ಇಂದಿನ ಇತಿಹಾಸ History Today ಏಪ್ರಿಲ್ 21

ಇಂದಿನ ಇತಿಹಾಸ

ಏಪ್ರಿಲ್ 21

ಧರೆಯ ಮೇಲಿನ ಸಕಲ ಜೀವಿಗಳಿಗೂ ಲೇಸನ್ನೇ ಬಯಸುವ ಗೋವಿನ ತಳಿಗಳ ಸಂರಕ್ಷಣೆಗಾಗಿ ಶಿವಮೊಗ್ಗ ಜಿಲ್ಲೆ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಆವರಣದಲ್ಲಿ ಆರಂಭವಾದ ವೈಶಿಷ್ಟ್ಯಪೂರ್ಣವಾದ 10 ದಿನಗಳ ಸಡಗರದ ವಿಶ್ವ ಗೋ ಸಮ್ಮೇಳನವನ್ನು ಕರ್ನಾಟಕದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಉದ್ಘಾಟಿಸಿದರು.


2007: ಧರೆಯ ಮೇಲಿನ ಸಕಲ ಜೀವಿಗಳಿಗೂ ಲೇಸನ್ನೇ ಬಯಸುವ ಗೋವಿನ ತಳಿಗಳ ಸಂರಕ್ಷಣೆಗಾಗಿ ಶಿವಮೊಗ್ಗ ಜಿಲ್ಲೆ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಆವರಣದಲ್ಲಿ ಆರಂಭವಾದ ವೈಶಿಷ್ಟ್ಯಪೂರ್ಣವಾದ 10 ದಿನಗಳ ಸಡಗರದ ವಿಶ್ವ ಗೋ ಸಮ್ಮೇಳನವನ್ನು ಕರ್ನಾಟಕದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಉದ್ಘಾಟಿಸಿದರು. ದೇಸೀ ಜಾನುವಾರುಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು ಈ ನಿಟ್ಟಿನಲ್ಲಿ ಗೋ ಬ್ಯಾಂಕುಗಳನ್ನು ಸ್ಥಾಪಿಸುವ ಬಗ್ಗೆ ಆಲೋಚಿಸಲಾಗುವುದು ಎಂದು ಅವರು ನುಡಿದರು.

2007: ಬಿಜೆಪಿ ಸಂಸತ್ ಸದಸ್ಯ ಬಾಬುಭಾಯಿ ಕಟಾರ ಷಾಮೀಲಾಗಿರುವ ಮಾನವ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟಾರ ಅವರ ಆಪ್ತ ಸಹಾಯಕ ಮತ್ತು ಒಬ್ಬ ಮಹಿಳೆ ಸೇರಿದಂತೆ ಇನ್ನೂ ಮೂವರನ್ನು ಬಂಧಿಸಲಾಯಿತು.

2007: ಹ್ಯೂಸ್ಟನ್ನಿನ `ನಾಸಾ' ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ವಿಲಿಯಂ ಫಿಲಿಪ್ಸ್ ಎಂಬ ಎಂಜಿನಿಯರನೊಬ್ಬ ಸಿನಿಮೀಯ ರೀತಿಯಲ್ಲಿ ತನ್ನ ಸಹೋದ್ಯೋಗಿ ಡೇವಿಡ್ ಬೆವರ್ಲಿ ಅವರನ್ನು ಗುಂಡು ಹಾರಿಸಿ ಕೊಂದು ತಾನು ಸ್ವತಃ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ. `ನಾಸಾ'ಕ್ಕೆ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವ ಜಾಕೋಬ್ ಎಂಜಿನಿಯರಿಂಗಿನ ಉದ್ಯೋಗಿಯಾದ ವಿಲಿಯಂ ಫಿಲಿಪ್ಸ್ ಕಳೆದ 12-13 ವರ್ಷದಿಂದ ನಾಸಾಕ್ಕಾಗಿ ಕೆಲಸ ಮಾಡುತ್ತಿದ್ದ.

2007: ವಿಶ್ವಸುಂದರಿ, ಅಭಿನೇತ್ರಿ ಐಶ್ವರ್ಯ ರೈ ಬಚ್ಚನ್ ಅವರು ಬಚ್ಚನ್ ಪರಿವಾರ ಸೇರಿಕೊಳ್ಳುವ ಮುನ್ನ ವಿವಾಹದ ಬಳಿಕ ನಡೆಯುವ ಸಾಂಪ್ರದಾಯಿಕ ಬೀಳ್ಕೊಡುಗೆ `ಬಿದಾಯಿ' ಕಾರ್ಯಕ್ರಮದ ಸಂದರ್ಭದಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಬಿಕ್ಕಳಿಸಿ ಅಳುತ್ತಾ ತವರಿಗೆ ವಿದಾಯ ಹೇಳಿದರು. ನಂತರ ಸಾಂಪ್ರದಾಯಿಕ ದೊಲಿ (ಪಲುಂಕ್ವಿನ್) ಉಡುಪಿನಲ್ಲಿ ಹೊರಗೆ ಬಂದ ಐಶ್ ಅಲಂಕೃತ ಕಾರಿನಲ್ಲಿ ಅಭಿಷೇಕ್ ಜೊತೆ ಕುಳಿತು ಮಾಧ್ಯಮದವರಿಗೆ ಸಿಗದೆ ಗಂಡನ ಮನೆಗೆ ತೆರಳಿದರು.

2007: ನಕಲಿ ಛಾಪಾ ಕಾಗದ ಹಗರಣಕ್ಕೆ ಸಂಬಂಧಿಸಿದಂತೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ವಿಚಾರಣೆ ಪೂರೈಸಿದ ಬೆಂಗಳೂರಿನ ಪರಪ್ಪನ ಅಗ್ರಹಾರದ ವಿಶೇಷ ನ್ಯಾಯಾಲಯವು ಪ್ರಮುಖ ಆರೋಪಿ ಅಬ್ದುಲ್ ಕರೀಂ ತೆಲಗಿ ಸೇರಿದಂತೆ ಐವರನ್ನು ತಪ್ಪಿತಸ್ಥರು ಎಂದು ಘೋಷಿಸಿತು. ನೂರಕ್ಕೂ ಹೆಚ್ಚು ಪುಟಗಳ ತೀರ್ಪನ್ನು ನ್ಯಾಯಾಧೀಶ ವಿಶ್ವನಾಥ ವಿರೂಪಾಕ್ಷ ಅಂಗಡಿ ಅವರು 6 ಗಂಟೆಗಳ ಕಾಲ ಓದಿದರು. ಅನೀಸ್ ಖಾನ್, ಬದ್ರುದ್ದೀನ್, ಇಲಿಯಾಸ್ ಅಹಮದ್, ವಜೀರ್ ಅಹಮದ್ ಸಾಲಿಕ್ ಯಾನೆ ಎಂ.ಎಚ್. ಸಾಲಿಕ್ ಅಪರಾಧಿಗಳೆಂದು ಘೋಷಿತರಾದ ಇತರ ಆರೋಪಿಗಳು.

2007: ಐಎಎಸ್ ಅಧಿಕಾರಿಗಳಾದ ಕರ್ನಾಟಕ ಸರ್ಕಾರದ ಕಾರ್ಯದರ್ಶಿ ರಾಜೀವ ಚಾವ್ಲಾ ಮತ್ತು ಕೇಂದ್ರ ಉಕ್ಕು ಸಚಿವಾಲಯದ ಕಾರ್ಯದರ್ಶಿ ಆರ್. ಎಸ್. ಪಾಂಡೆ ಅವರಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ನವದೆಹಲಿಯಲ್ಲಿ ಅತ್ಯುತ್ತಮ ಸಾರ್ವಜನಿಕ ಆಡಳಿತ ಸೇವಾ ಪುರಸ್ಕಾರ ಪ್ರದಾನ ಮಾಡಿದರು.

2007: ಬಾಹ್ಯಾಕಾಶ ಪ್ರವಾಸಿ ಚಾರ್ಸ್ ಸಿಮೊನೀ ಅವರು ಎರಡು ವಾರಗಳ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ವಾಸ್ತವ್ಯದ ಬಳಿಕ ಭೂಮಿಗೆ ವಾಪಸ್ ಹೊರಟರು.

2006: ಅರಾಜಕತೆ ಹಾಗೂ ದೇಶವ್ಯಾಪಿ ಪ್ರತಿಭಟನೆಯಿಂದ ತತ್ತರಿಸಿದ್ದ ನೇಪಾಳದಲ್ಲಿ ದಿಢೀರ್ ಬೆಳವಣಿಗೆ ಸಂಭವಿಸಿ ರಾಜಕೀಯ ಅಧಿಕಾರವನ್ನು ಜನರಿಗೆ ಹಸ್ತಾಂತರಿಸಲು ದೊರೆ ಜ್ಞಾನೇಂದ್ರ ಸಮ್ಮತಿಸಿದರು. ಪ್ರಧಾನಿ ಸ್ಥಾನಕ್ಕೆ ಯಾರನ್ನಾದರೂ ಹೆಸರಿಸುವಂತೆ ಅವರು ಏಳು ಪಕ್ಷಗಳ ರಾಜಕೀಯ ಒಕ್ಕೂಟಕ್ಕೆ ಮನವಿ ಮಾಡಿದರು.

2006: ಸಾಂಸ್ಕತಿಕ ವಲಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ನೀಡಲಾಗುವ ವಾರ್ಷಿಕ ಪ್ರಶಸ್ತಿಗಳನ್ನು ಸರ್ಕಾರ ಪ್ರಕಟಿಸಿತು. 2005ರ ಸಾಲಿನ ಪ್ರತಿಷ್ಠಿತ ಟಿ.ಚೌಡಯ್ಯ ಪ್ರಶಸ್ತಿಗೆ ಹಿಂದೂಸ್ಥಾನಿ ತಬಲಾ ವಾದಕ ದತ್ತಾತ್ರೇಯ ಸದಾಶಿವ ಗರುಡ, ಕನಕ ಪುರಂದರ ಪ್ರಶಸ್ತಿಗೆ ಗಮಕ ಕ್ಷೇತ್ರದ ಬಿ. ಎಸ್. ಎಸ್. ಕೌಶಿಕ್, ದಾನಚಿಂತಾಮಣಿ ಪ್ರಶಸ್ತಿಗೆ ಲೇಖಕಿ ಡಾ. ವೀಣಾ ಶಾಂತೇಶ್ವರ, ಡಾ. ಗುಬ್ಬಿ ವೀರಣ್ಣ ಪ್ರಶಸ್ತಿಗೆ ವೃತ್ತಿ ರಂಗಭೂಮಿಯ ರೇಣುಕಮ್ಮ ಮುಳಗೋಡು, ಸಂತ ಶಿಶುನಾಳ ಷರೀಫ ಪ್ರಶಸ್ತಿಗೆ ಗಾಯಕ ಈಶ್ವರ ಮಿಣಚಿ, ಜಕಣಾಚಾರಿ ಪ್ರಶಸ್ತಿಗೆ ಸಿದ್ದಲಿಂಗಯ್ಯ, ಶಾಂತಲಾ ನಾಟ್ಯ ಪ್ರಶಸ್ತಿಗೆ ಲೀಲಾ ರಾಮನಾಥನ್ ಆಯ್ಕೆಯಾದರು.

2006: ಅಂಗವಿಕಲ ವ್ಯಕ್ತಿಗಳು ಸ್ವತಂತ್ರವಾಗಿ ಚಲಾಯಿಸಬಹುದಾದ ಕಾರಿನ ಮಾದರಿಯೊಂದನ್ನು ಅಭಿವೃದ್ಧಿ ಪಡಿಸಿರುವುದಾಗಿ ಬೆಳಗಾವಿಯ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಾದ ಡೇನಿಯಲ್ ಸುನಾಥ ಮತ್ತು ಪ್ರದೀಪ ಸರಪುರ ಬಹಿರಂಗ ಪಡಿಸಿದರು.

2006: ಮುಸ್ಲಿಂ ಸಮುದಾಯದಲ್ಲಿ ಪತಿ ಮೂರುಬಾರಿ ತಲಾಖ್ ಹೇಳಿದ ಮಾತ್ರಕ್ಕೆ ಗಂಡ- ಹೆಂಡತಿ ಬೇರೆ ಬೇರೆಯಾಗಿ ಬದುಕಬೇಕು ಎಂದು ಒತ್ತಾಯಿಸುವ ಹಕ್ಕು ಯಾರಿಗೂ ಇಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ಒರಿಸ್ಸಾದ ಮುಸ್ಲಿಂ ಸಮುದಾಯವು ಷರಿಯತ್ ಹೆಸರಿನಲ್ಲಿ ತಮ್ಮ ಪತಿಯ ಜೊತೆ ಬದುಕಲು ತಮಗೆ ಅನುಮತಿ ನಿರಾಕರಿಸಿದ ಸಂಬಂಧ ನಜ್ಮಾ ಬೀವಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ವಿಚಾರಣಾ ಪೀಠ ಈ ತೀರ್ಪು ನೀಡಿತು.

1946: ಭಾರತದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಎಸ್. ವೆಂಕಟರಾಘವನ್ ಜನ್ಮದಿನ. ಇವರು ಜಗತ್ತಿನ ಅತ್ಯುತ್ತಮ ಕ್ರಿಕೆಟ್ ಅಂಪೈರ್ ಗಳಲ್ಲಿ ಒಬ್ಬರು ಎಂಬ ಖ್ಯಾತಿ ಪಡೆದವರು.

1926: ಇಂಗ್ಲೆಂಡಿನ ರಾಣಿ 2ನೇ ಎಲಿಜಬೆತ್ ಜನ್ಮದಿನ.

1920: ಪತ್ರಿಕಾರಂಗ, ಸಾಹಿತ್ಯ, ಸ್ವಾತಂತ್ರ್ಯ ಚಳವಳಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿ ಪಡೆದಿದ್ದ ತ.ರಾ. ಸುಬ್ಬರಾಯ (ತ.ರಾ.ಸು) (21-4-1920 ರಿಂದ 10-4-1984) ಹುಟ್ಟಿದ ದಿನ. ಹರಿಹರ ತ್ಲಾಲೂಕಿನ ಮಲೆಬೆನ್ನೂರಿನ್ಲಲಿ ರಾಮಸ್ವಾಮಯ್ಯ- ಸೀತಮ್ಮ ದಂಪತಿಯ ಪುತ್ರರಾಗಿ ತ.ರಾ.ಸು. ಜನಿಸಿದರು.

1920: ಸುಗಮ ಸಂಗೀತ ಕ್ಷೇತ್ರದ ಹರಿಕಾರ ಎ.ವಿ. ಕೃಷ್ಣಮಾಚಾರ್ಯ (ಪದ್ಮಚರಣ್) (21-4-1920ರಿಂದ 22-7-2002) ಅವರು ಅಸೂರಿ ವೀರ ರಾಘವಾಚಾರ್ಯ- ಜಾನಕಮ್ಮ ದಂಪತಿಯ ಮಗನಾಗಿ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲ್ಲೂಕಿನ ಬಡಿಕಾಯಲಪಲ್ಲೆ ಗ್ರಾಮದ `ಗುತ್ತಿ' ಎಂಬಲ್ಲಿ ಜನಿಸಿದರು.

1910: ಮಾರ್ಕ್ ಟ್ವೇನ್ ಎಂದೇ ಖ್ಯಾತನಾಗಿದ್ದ ಬರಹಗಾರ ಸ್ಯಾಮುಯೆಲ್ ಲಾಂಗ್ಹೋರ್ಮ್ ಕ್ಲೆಮೆನ್ಸ್ 74ನೇ ವಯಸ್ಸಿನಲ್ಲಿ ಮೃತನಾದ. 1835ರಲ್ಲಿ ಹುಟ್ಟ್ದದ ಆತನ ಬದುಕಿನಲ್ಲಿ 76 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುವ ಹ್ಯಾಲಿ ಧೂಮಕೇತು ಭಾರೀ ಪರಿಣಾಮ ಬೀರಿತ್ತು. `ಹ್ಯಾಲಿಯನ್ನು ಕಾಣದೆ ಸತ್ತರೆ ನನಗೆ ಭ್ರಮನಿರಸನವಾಗುತ್ತದೆ' ಎಂದು ಆತ ಬರೆದಿದ್ದ. ಆತನಿಗೆ ಭ್ರಮನಿರಸನವಾಗಲಿಲ್ಲ.. ಹ್ಯಾಲಿ ಕಾಣಿಸಿದ ನಂತರ ಆತ ಮೃತನಾದ.

1619: ಡಚ್ ಸರ್ಜನ್ ಜಾನ್ ವ್ಯಾನ್ ರೀಬೀಕ್ ಜನ್ಮದಿನ. ಈತ 1652ರಲ್ಲಿ ಕೇಪ್ ಟೌನನ್ನು ಸ್ಥಾಪಿಸಿದ.

1526: ಮೊದಲನೆಯ ಪಾಣಿಪತ್ ಯುದ್ಧದಲ್ಲಿ ಮೊಘಲ್ ದೊರೆ ಬಾಬರ್, ಲೋದಿಯ ಆಡಳಿತಗಾರ ಇಬ್ರಾಹಿಂ ಲೋದಿಯನ್ನು ಸೋಲಿಸಿ ಕೊಲೆಗೈದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement