Wednesday, May 14, 2008

ಕಿವಿ ಹಿಂಡಿದರೆ ಗಂಡು ಹೆಣ್ಣಾಗುವುದಂತೆ...!

ಕಿವಿ ಹಿಂಡಿದರೆ ಗಂಡು

ಹೆಣ್ಣಾಗುವುದಂತೆ...!


ಹೌದು...! ಈ ವರ್ಷದ ಮಾತೆಯರ ದಿನದ ಸಂದರ್ಭದಲ್ಲಿ ಬಂದ ಒಂದು ರೋಚಕ ಸುದ್ದಿ ಇದು!

'ಡ್ಯಾಡ್' ಕಿವಿ ಹಿಂಡಿದರೆ 'ಡ್ಯಾಡಿ' ಆಗುವುದು 'ಮಮ್ಮಿ'..!



ನೆತ್ರಕೆರೆ ಉದಯಶಂಕರ

ಹೈದರಾಬಾದಿನ ಕೋಶ ಮತ್ತು ಅಣು ಜೀವಶಾಸ್ತ್ರ ಕೇಂದ್ರದ ವಿಜ್ಞಾನಿಗಳು ಈ ಸಾಧನೆ ಮಾಡಿದ್ದಾರಂತೆ. ಈ ವಿಜ್ಞಾನಿಗಳು ಹೇಳುವ ಪ್ರಕಾರ ಗಿಡಗಳ ವಂಶವಾಹಿಯೊಂದರ (ಜೀನ್) ಕಿವಿ ಹಿಂಡಿ ಅದರ ಲಿಂಗ ಪರಿವರ್ತಿಸಲು ಸಾಧ್ಯವಂತೆ. ಸುದ್ದಿಯ ವಿವರ ಇಲ್ಲುಂಟು:

ಹೈದರಾಬಾದಿನ ಕೋಶ ಮತ್ತು ಅಣು ಜೀವಶಾಸ್ತ್ರ ಕೇಂದ್ರದ ವಿಜ್ಞಾನಿಗಳು ಗಿಡಗಳ ವಂಶವಾಹಿಯೊಂದರ (ಜೀನ್) ಕಿವಿ ಹಿಂಡಿ ಅದರ ಲಿಂಗ ಪರಿವರ್ತಿಸಲು ಸಾಧ್ಯ ಎಂದು ಕಂಡು ಕೊಂಡಿದ್ದಾರೆ ಎಂಬುದಾಗಿ ಪಿಟಿಐ ನವದೆಹಲಿಯಿಂದ ವರದಿ ಮಾಡಿದೆ.

`ಡ್ಯಾಡ್' ಹೆಸರಿನ ಈ ವಂಶವಾಹಿಯನ್ನು ಗುರುತಿಸಿದವರು ಕೇಂದ್ರದ ಖ್ಯಾತ ಸಂಶೋಧಕ ಇಮ್ರಾನ್ ಸಿದ್ದಿಕಿ. ಅರಬಿಡೋಪ್ಸಿಸ್ ಎಂಬ ಗಿಡದಲ್ಲಿರುವ ವಂಶವಾಹಿಯೊಂದರಲ್ಲಿ ಈ ವಿಶೇಷ ಗುಣವನ್ನು ಅವರು ಪತ್ತೆ ಮಾಡಿದ್ದಾರೆ.

'ಈ ನಿರ್ದಿಷ್ಟ ವಂಶವಾಹಿ ಎಲ್ಲ ಗಿಡಮರಗಳಲ್ಲೂ ಇರುತ್ತದೆ ಎಂಬುದನ್ನು ನಾವು ಪತ್ತೆ ಹಚ್ಚಿದ್ದೇವೆ' ಎನ್ನತ್ತಾರೆ ಸಿದ್ದಿಕಿ.

ಆಸ್ಟ್ರೇಲಿಯಾ ಜೊತೆಗೆ ಮಾಡಿಕೊಳ್ಳಲಾಗಿರುವ ಒಪ್ಪಂದದ ಪ್ರಕಾರ ಅಲ್ಲಿನ ವಿಜ್ಞಾನಿಗಳ ನೆರವಿನೊಂದಿಗೆ ಈ ವಂಶವಾಹಿ ಬಗ್ಗೆ ತಮ್ಮ ಸಂಶೋಧನೆಯನ್ನು ಅವರು ಇನ್ನಷ್ಟು ಮುಂದಕ್ಕೆ ಒಯ್ಯಲಿದ್ದಾರೆ.

ಈ ಸಂಶೋಧನೆಯಿಂದ ಏನು ಉಪಯೋಗ?

ಸಿದ್ದಿಕಿ ಅವರು ಹೇಳುವ ಪ್ರಕಾರ 'ಈ ಸಂಶೋಧನೆ ಖಚಿತ ಹಂತಕ್ಕೆ ಬಂದರೆ ರೈತರು ಹೈಬ್ರಿಡ್ ಬೀಜಗಳನ್ನು ಖರೀದಿಸದೆಯೇ ಅತಿ ಹೆಚ್ಚು ಬೆಳೆ ಬೆಳೆಯುವ ಸಸಿಗಳನ್ನು ಬೆಳೆಸಿಕೊಳ್ಳಬಹುದು.'

ಆದರೆ ಈ ಸಂಶೋಧನೆ ಇನ್ನೂ ನಿರ್ಣಾಯಕ ಹಂತಕ್ಕೆ ಬಂದಿಲ್ಲ. ನಿರ್ಣಾಯಕ ಹಂತಕ್ಕೆ ಬರಲು ಅಂಡಾಣು ರಹಿತವಾಗಿ ಈ ಗಿಡದ ಭ್ರೂಣ ಬೆಳೆಸುವ ವಿಧಾನಗಳನ್ನು ಕಂಡು ಹಿಡಿಯಬೇಕಾಗಿದೆ. ಪ್ರಾಯೋಗಿಕವಾಗಿ ಈ ಸಂಶೋಧನೆಯನ್ನು ಅನ್ವಯಿಸುವ ಮುನ್ನ ಈ ಸಾಧನೆ ಅಗತ್ಯವಾಗಿದೆ ಎನ್ನುತ್ತಾರೆ ವಿಜ್ಞಾನಿಗಳು.

ಈ ಸಂಶೋಧನೆಯಿಂದ ಬೆಳೆಗಳ ಉತ್ಪಾದನೆ ಹೆಚ್ಚಳ ಸುಸ್ಥಿರಗೊಳ್ಳುವಂತೆ ಮಾಡಬಹುದು. ಇದು ಸಾಧ್ಯವಾದರೆ ಇನ್ನೊಂದು ಹಸಿರು ಕ್ರಾಂತಿಗೆ ದಾರಿ ಸುಗಮ ಎಂಬುದಾಗಿ ಈ ವಿಜ್ಞಾನಿಗಳು ಲೆಕ್ಕ ಹಾಕಿದ್ದಾರೆ.

ಆಹಾರದ ಕೊರತೆ, ಬೆಲೆ ಏರಿಕೆಯ ಬಿಸಿಯ ಮಧ್ಯೆ ಬಂದಿರುವ ಈ ಸುದ್ದಿ ಹೆಚ್ಚಿನ ಖುಷಿ ನೀಡುವುದೋ ಅಥವಾ ಮುಂದೇನಾದರೂ ಬೇರೆ 'ಗಂಡಾಂತರ'ಗಳಿಗೆ ದಾರಿ ಮಾಡಿ ಕೊಡುವುದೋ? ಕಾಲವೇ ಹೇಳಬೇಕಷ್ಟೆ.

No comments:

Advertisement