Tuesday, June 10, 2008

ಇಂದಿನ ಇತಿಹಾಸ History Today ಜೂನ್ 10

ಇಂದಿನ ಇತಿಹಾಸ

ಜೂನ್ 10

ಇಂಗ್ಲೆಂಡಿನ ಶೆಫಿಲ್ಡಿನಲ್ಲಿ ನಡೆದ ಅಂತಾರಾಷ್ಟ್ರೀಯ ಭಾರತೀಯ ಚಿತ್ರ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜೇಶ ಮೆಹ್ತಾ ನಿರ್ಮಾಣದ `ರಂಗ ದೆ ಬಸಂತಿ' ಉತ್ತಮ ಚಿತ್ರ ಪ್ರಶಸ್ತಿ ಸೇರಿದಂತೆ ಒಟ್ಟು 11 ಪ್ರಶಸ್ತಿಗಳನ್ನು ತನ್ನ ಬಗಲಿಗೆ ಏರಿಸಿಕೊಂಡಿತು.

2007: ಇಂಗ್ಲೆಂಡಿನ ಶೆಫಿಲ್ಡಿನಲ್ಲಿ ನಡೆದ ಅಂತಾರಾಷ್ಟ್ರೀಯ ಭಾರತೀಯ ಚಿತ್ರ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜೇಶ ಮೆಹ್ತಾ ನಿರ್ಮಾಣದ `ರಂಗ ದೆ ಬಸಂತಿ' ಉತ್ತಮ ಚಿತ್ರ ಪ್ರಶಸ್ತಿ ಸೇರಿದಂತೆ ಒಟ್ಟು 11 ಪ್ರಶಸ್ತಿಗಳನ್ನು ತನ್ನ ಬಗಲಿಗೆ ಏರಿಸಿಕೊಂಡಿತು. ರಾಣಿ ಮುಖರ್ಜಿ ಅತ್ಯುತ್ತಮ ನಟಿ (ಕಭಿ ಅಲ್ವಿದಾ ನಾ ಕೆಹನಾ), ಹೃತಿಕ್ ರೋಷನ್ ಅತ್ಯುತ್ತಮ ನಟ (ಕೃಷ್), ರಾಜಕುಮಾರ್ ಹೀರಾನಿ ಶ್ರೇಷ್ಠ ನಿರ್ದೇಶಕ ( ಲಗೇ ರಹೋ ಮುನ್ನಾ ಭಾಯಿ) ಪ್ರಶಸ್ತಿ ಗಳಿಸಿದರು.

2007: ಆಪ್ಘಾನಿಸ್ಥಾನದ ಅಧ್ಯಕ್ಷ ಹಮೀದ್ ಕರ್ಜೈ ಅವರನ್ನು ಗುರಿಯಾಗಿಟ್ಟುಕೊಂಡು ತಾಲಿಬಾನ್ ಉಗ್ರಗಾಮಿಗಳು ಕಾಬೂಲಿನಲ್ಲಿ ರಾಕೆಟ್ ದಾಳಿ ನಡೆಸಿದರು. ಆದರೆ ಕರ್ಜೈ ಅವರು ಅಪಾಯದಿಂದ ಪಾರಾದರು.

2007: ಸಂಚಾರ ನಿಯಮ ಉಲ್ಲಂಘಿಸಿ ವಾಹನ ಓಡಿಸಿದ್ದಕ್ಕಾಗಿ ಖ್ಯಾತ ಪಾಪ್ ಗಾಯಕ ಜಾರ್ಜ್ ಮೈಕೆಲ್ ಮತ್ತು ಅಮೆರಿಕದ ರಿಯಾಲಿಟಿ ಶೋ ತಾರೆ ಪ್ಯಾರಿಸ್ ಹಿಲ್ಟನ್ ಸೆರೆವಾಸದ ಶಿಕ್ಷೆಗೆ ಗುರಿಯಾದರು. ಮೈಕೆಲ್ ಗೆ ಲಂಡನ್ನಿನ ಬ್ರೆಂಟ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 100 ತಾಸು ಸಮಾಜ ಸೇವೆ ಕೈಗೊಳ್ಳುವಂತೆ ವಿಶೇಷ ಶಿಕ್ಷೆ ವಿಧಿಸಿತು. ಎರಡು ವರ್ಷಗಳ ಕಾಲ ವಾಹನ ಓಡಿಸದಂತೆ ಅವರ ಮೇಲೆ ನಿಷೇಧ ವಿಧಿಸಿತು. ಮದ್ಯಪಾನ ಮಾಡಿ ವಾಹನ ಓಡಿಸಿದ ಪ್ರಕರಣದ ಸಂಬಂಧ ಗೃಹ ಬಂಧನದಲ್ಲಿದ್ದ ಪ್ಯಾರಿಸ್ ಹಿಲ್ಟನಳನ್ನು (26) ನ್ಯಾಯಾಲಯದ ಆದೇಶದ ಮೇರೆಗೆ ಲಾಸ್ ಏಂಜೆಲಿಸ್ ನಲ್ಲಿ ಸೆರೆಮನೆಗೆ ಕಳುಹಿಸಲಾಯಿತು.

2007: ಕಕ್ಷೆಗೆ ಏರಿದ ಅತಿ ಹೆಚ್ಚು ಭಾರದ ಗಗನ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅಟ್ಲಾಂಟಿಸ್ ಗಗನನೌಕೆಯು ಬಾಹ್ಯಾಕಾಶದಲ್ಲಿ ಇರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದೊಂದಿಗೆ ಸಂಪರ್ಕ ಸಾಧಿಸಿತು.

2007: ಉಡುಪಿ ಶಿರೂರು ಮಠದ ಯತಿ ಲಕ್ಷ್ಮೀವರ ತೀರ್ಥ ಶ್ರೀಪಾದರು ಕುಂದಾಪುರದ ಖಾರ್ವಿಕೇರಿ ಹೊಳೆಯಲ್ಲಿ ಸುಮಾರು ಮುಕ್ಕಾಲು ಗಂಟೆ ಕಾಲ ವಿವಿಧ ಭಂಗಿಗಳಲ್ಲಿ ಈಜುವ ಮೂಲಕ ದಾಖಲೆ ನಿರ್ಮಿಸಿದರು. ಗಂಗೊಳ್ಳಿ ಸಮುದ್ರ ಕಿನಾರೆಯಿಂದ ಕುಂದಾಪುರ ಸಂಗಮ್ ಪರಿಸರದ ಖಾರ್ವಿಕೇರಿ ಹೊಳೆಯವರೆಗೆ ಸುಮಾರು 25 ಕಿ.ಮೀ. ದೂರವನ್ನು ಕೈಕಾಲುಗಳಿಗೆ ಸಂಕೋಲೆ ತೊಟ್ಟು ಈಜಿ ಶಹಬ್ಬಾಸ್ ಇಂಡಿಯಾ ಬುಕ್ ಆಫ್ ರೆಕಾರ್ಡಿನಲ್ಲಿ ದಾಖಲಾದ ಖಾರ್ವಿಕೇರಿಯ ಬಾಲಕ ಮಾಸ್ಟರ್ ಹರ್ಷಿತ್ ಜೊತೆ ಸ್ವಾಮೀಜಿ ಈ ಸಾಹಸ ಮಾಡಿದರು.

2006: ಹಳೆಯ ಪಠ್ಯಪುಸ್ತಕಗಳಲ್ಲಿದ್ದ ಪ್ರಾಚೀನ ಭಾರತದ ಗೋಮಾಂಸ ಭಕ್ಷಣೆ ಹವ್ಯಾಸಗಳಿಗೆ ಸಂಬಂಧಿಸಿದ ಉಲ್ಲೇಖಗಳನ್ನು ಶಿಕ್ಷಣ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿಯು (ಎನ್ಸಿಇಆರ್ಟಿ) ಹೊಸದಾಗಿ ಪ್ರಕಟಿಸಿರುವ ಪಠ್ಯಪುಸ್ತಕಗಳಿಂದ ಕೈಬಿಟ್ಟಿತು. 6 ಮತ್ತು 11ನೇ ತರಗತಿಗಳ ಇತಿಹಾಸ ಪಠ್ಯಗಳಲ್ಲಿ ಈ ಉಲ್ಲೇಖಗಳಿದ್ದವು.

2006: ತಮ್ಮ ಬೇಡಿಕೆ ಈಡೇರಿಸಲಿಲ್ಲ ಎಂಬ ಕಾರಣಕ್ಕಾಗಿ ನೈಸ್ ಕಂಪೆನಿ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ಥರು ಬೆಂಗಳೂರಿನ ಕನಕಪುರ- ಕೆಂಗೇರಿ ಮಾರ್ಗದ ಹೆಮ್ಮಿಗೆಪುರದ ಬಳಿ ರಸ್ತೆ ಅಗೆದು ಬಿಎಂಐಸಿ ಯೋಜನೆ ಕಾಮಗಾರಿಯನ್ನು ನಿಲ್ಲಿಸಿದರು.

1961: ಕಲಾವಿದ ಡಿ.ಎಸ್. ಚೌಗಲೆ ಜನನ.

1961: ಕಲಾವಿದೆ ಮಂಜುಳಾ ಗುರುರಾಜ್ ಜನನ.

1956: ಭಾರತದ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಜನ್ಮದಿನ. 1980ರಲ್ಲಿಇವರು ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ಗ್ದೆದುಕೊಂಡ ಪ್ರಥಮ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾದರು.

1955: ಕಲಾವಿದ ಫಕೀರೇಶ ಕಣವಿ ಜನನ.

1948: ಸಾಹಿತಿ ದೇವನೂರು ಮಹಾದೇವ ಜನನ.

1944: ನಾಟ್ಸಿಗಳು ಫ್ರಾನ್ಸಿನ ಒರಾಡೌರ್-ಸುರ್-ಗ್ಲೇನ್ ಎಂಬ ಗ್ರಾಮವನ್ನು ಧ್ವಂಸ ಮಾಡಿದರು. ಲಿಮೋಜಿಸ್ ಗೆ ಸಮೀಪದ ಈ ಗ್ರಾಮದ ಎಲ್ಲ 652 ಜನರನ್ನು ಕೊಠಡಿಯೊಂದರ ಒಳಗೆ ಕೂಡಿಹಾಕಿ ಬೆಂಕಿ ಹಚ್ಚಲಾಯಿತು. ಬದುಕಿ ಉಳಿದವರನ್ನು ಮೆಷಿನ್ ಗನ್ನಿನಿಂದ ಗುಂಡು ಹಾರಿಸಿ ಕೊಲ್ಲಲಾಯಿತು.

1942: ತಮ್ಮ ನಾಯಕ ರಿನ್ಹಾರ್ಡ್ ಹೀಡ್ರಿಚ್ ಹತ್ಯೆಯ ಸೇಡು ತೀರಿಸಲು ನಾಟ್ಸಿಗಳು ಜೆಕಾಸ್ಲಾವಕಿಯಾದ ಲಿಡೀಸ್ ಗ್ರಾಮವನ್ನು ಧ್ವಂಸ ಮಾಡಿದರು. ಜನರ ಕಗ್ಗೊಲೆಗೈದು ನಂತರ ಗ್ರಾಮಕ್ಕೆ ಬೆಂಕಿ ಹಚ್ಚಿ ಅಳಿದು ಉಳಿದುದರ ನಾಶಕ್ಕಾಗಿ ಡೈನಮೈಟ್ ಇಡಲಾಯಿತು. 1947ರಲ್ಲಿ ಇದರ ಸಮೀಪ ಹೊಸ ಗ್ರಾಮ ನಿರ್ಮಿಸಿ ಮೂಲ ಗ್ರಾಮದ ನೆನಪಿಗಾಗಿ ಒಂದು ಮ್ಯೂಸಿಯಂ, ಸ್ಮಾರಕ ಮತ್ತು ಗುಲಾಬಿ ತೋಟವನ್ನು ನಿರ್ಮಿಸಲಾಯಿತು.

1938: ಭಾರತೀಯ ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ಜನ್ಮದಿನ.

1937: ಕವಿ, ನಾಟಕಕಾರ, ವಾಗ್ಮಿ `ಜೀವಿ' ಎಂದೇ ಖ್ಯಾತರಾಗಿದ್ದ ಗುರುನಾಥ ವಿಠ್ಠಲ ರಾವ್ ಕುಲಕರ್ಣಿ ಅವರು ವಿಠ್ಠಲರಾವ್ ರಾಮಚಂದ್ರರಾವ್ ಕುಲಕರ್ಣಿ- ರುಕ್ಮಿಣಿ ಬಾಯಿ ದಂಪತಿಯ ಪುತ್ರನಾಗಿ ವಿಜಾಪುರದ ಡೊಮ್ನಾಳದಲ್ಲಿ ಜನಿಸಿದರು.

1937: ಸಾಹಿತಿ ವೇಣುಗೋಪಾಲ ಸೊರಬ ಜನನ.

1922: ಗಾಯಕ, ಸಂಗೀತಜ್ಞ, ವಾಗ್ಗೇಯಕಾರ ಎಂ.ಆರ್. ಶಂಕರಮೂರ್ತಿ ಅವರು ರಾಮಕೃಷ್ಣಯ್ಯ- ನಂಜಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆ ಮುದಲಾಪುರದಲ್ಲಿ ಜನಿಸಿದರು.

1920: ಸಾಹಿತಿ ಎನ್. ಪ್ರಹ್ಲಾದರಾವ್ ಜನನ.

1832: ಸರ್ ಎಡ್ವಿನ್ ಅರ್ನಾಲ್ಡ್ ಜನ್ಮದಿನ. ಪೂನಾದ (ಈಗಿನ ಪುಣೆ) ಬ್ರಿಟಿಷ್ ಸರ್ಕಾರಿ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಇವರು ಕವಿ ಹಾಗೂ ವಿದ್ವಾಸರು. ಗೌತಮ ಬುದ್ಧನ ಬದುಕು ಹಾಗೂ ಬೋಧನೆಗಳನ್ನು ವಿವರಿಸುವ `ದಿ ಲೈಟ್ ಆಫ್ ಏಷ್ಯ' ಕೃತಿ ಇವರ ಪ್ರಮುಖ ಗ್ರಂಥ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement